ಕೊರೊನಾ ಸೋಂಕಿಗೆ ದಾವಣಗೆರೆ ವಿವಿ ಪ್ರಾಧ್ಯಾಪಕ ಮುರುಗಯ್ಯ ಸಾವು
ದಾವಣಗೆರೆ, ಏಪ್ರಿಲ್ 28: ಕೊರೊನಾ ಸೋಂಕಿಗೆ ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಮುರುಗಯ್ಯ ಸಾವನ್ನಪ್ಪಿದ್ದಾರೆ. ಜೂ.30ಕ್ಕೆ ನಿವೃತ್ತಿಯಾಗಬೇಕಿದ್ದ ಮುರುಗಯ್ಯ ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಹಿರಿಯ ಹಾಗೂ ಕ್ರಿಯಾಶೀಲ ಪ್ರಾಧ್ಯಾಪಕ ಪ್ರೊ.ಮುರುಗಯ್ಯ ಅವರಿಗೆ 62 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವಾರದ ಹಿಂದೆ ಮುರುಗಯ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ತೀವ್ರ ಉಸಿರಾಟದ ತೊಂದರೆಯಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಮುರುಗಯ್ಯ ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದ ಪ್ರೊ.ಮುರುಗಯ್ಯ ಅವರು, ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಜೂನ್ 30ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದರು.
ಸರಳ, ಸೌಮ್ಯ ಸ್ವಭಾವದ ಪ್ರೊ.ಮುರುಗಯ್ಯ ಅವರು ವ್ಯವಹಾರ ನಿರ್ವಹಣೆಯ ಅಧ್ಯಯನ, ಶಿಕ್ಷಣ, ಸಂಶೋಧನೆಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರು.
ಸಂತಾಪ
ಮುರುಗಯ್ಯರ ನಿಧನದಿಂದ ವಿಶ್ವವಿದ್ಯಾನಿಲಯಕ್ಕೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ಹಲಸೆ ಸಂತಾಪ ಸೂಚಿಸಿದ್ದಾರೆ.