ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಗುಡುಗು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಸತಿ ಸಚಿವ ವಿ. ಸೋಮಣ್ಣ, "ಸಿದ್ದರಾಮಯ್ಯ ಸಿಎಂ ಆಗಿದ್ದವರು, ಐದು ವರ್ಷ ಆಡಳಿತ ನಡೆಸಿದವರು, ಎಲ್ಲಾ ವಿಚಾರವೂ ಅವರಿಗೆ ಗೊತ್ತಿದೆ. ಎಲ್ಲೋ ಕುಳಿತು ಏನೋ‌ ಮಾತನಾಡಿದರೆ ಆಗದು. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಟೇಕಾಫ್ ಆಗಿದ್ದು, ಇದರಲ್ಲಿ ಎರಡು ಮಾತಿಲ್ಲ," ಎಂದು ಹೇಳಿದ್ದಾರೆ.

ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಸಿದ್ದರಾಮಯ್ಯ ಜಿಂದಾಲ್‌ನ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿಗೆ ಹೋಗಿ ಬಂದ ಬಳಿಕ ಆದರೂ ಸರಿಯಾಗಿ ಮಾತನಾಡಲಿ," ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

"ಇನ್ನು ಕೊರೊನಾ, ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಸಿಎಂ ಬೊಮ್ಮಾಯಿ ಉತ್ತಮವಾಗಿ ಕೆಲಸ‌ ಮಾಡುತ್ತಿದ್ದು, ಇಂಥ ವೇಳೆಯಲ್ಲಿ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಉತ್ತಮ ಆಡಳಿತ ನೀಡಿದ್ದರು. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿದ್ದರು. ಬೊಮ್ಮಾಯಿ ಕೂಡ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡ್ತೇವೆ. ಉಳಿದದ್ದು ಜನರು ತೀರ್ಮಾನ ಮಾಡ್ತಾರೆ," ಎಂದು ಹೇಳಿದರು.

Davanagere: Housing Minister V Somanna Outrage Against Former CM Siddaramaiah Statement

"ಮೀಸಲಾತಿ ವಿಚಾರ ಅತ್ಯಂತ ಸೂಕ್ಷ್ಮವಾದ ವಿಚಾರ. ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ಮೀರಬಾರದು ಎಂದು ಕೋರ್ಟ್ ಹೇಳಿದೆ. ತಜ್ಞರು, ಪರಿಣಿತರು, ಬುದ್ಧಿಜೀವಿಗಳ ಜೊತೆ ಸಿಎಂ ಬೊಮ್ಮಾಯಿ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ," ಎಂದು ಹೇಳಿದರು.

"ಮುಂದಿನ ದಿನಗಳಲ್ಲಿ ಬರುವ ಜನಾದೇಶಕ್ಕೆ ನಾವು ಬದ್ಧರಿದ್ದೇವೆ. ಎಲ್ಲೋ ಕುಳಿತು ಏನೇನೋ ಮಾತನಾಡುವುದು ಸರಿಯಲ್ಲ. ಯಾರು ಬರುತ್ತಾರೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ನನ್ನ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಕೇಳಿದರೆ ನಾನು ಕೊಡುತ್ತೇನೆ, ಚರ್ಚೆ ನಡೆಸಲೂ ಸಿದ್ಧನಿದ್ದೇನೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದವರು. ಅವರಿಗೆ ಎಲ್ಲಾ ವಿಚಾರ ತಿಳಿದಿದೆ‌. ಸರ್ಕಾರ ನಿಂತ ನೀರಲ್ಲ. ಹರಿಯುವ ನೀರು ಇದ್ದಂತೆ. ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ," ಎಂದು ಹೇಳಿದರು.

"ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಮೊದಲು ಸಭೆ ನಡೆಸಿದ್ದೇ ವಸತಿ ಇಲಾಖೆಯದ್ದು. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರಾಜ್ಯದಲ್ಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ ಮಾಡಲಾಗುವುದು. ಪಾರದರ್ಶಕವಾಗಿ, ಅವಶ್ಯಕತೆ ಇರುವವರಿಗೆ ದೊರಕುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಾ ಅಕ್ರಮ ನಿಲ್ಲಿಸಿದ್ದೇನೆ ಎಂದು ಹೇಳಲ್ಲ. ಆದರೆ ಕಡಿವಾಣ ಅಂತೂ ಹಾಕಲಾಗುತ್ತಿದೆ ಎಂದು ತಿಳಿಸಿದರಲ್ಲದೇ, ಆಗಸ್ಟ್ 23ರಿಂದ ಶಾಲೆಗಳನ್ನು ಆರಂಭಿಸಲಾಗಿತ್ತಿದ್ದು, ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ," ಎಂದು ಮಾಹಿತಿ ನೀಡಿದರು.

Davanagere: Housing Minister V Somanna Outrage Against Former CM Siddaramaiah Statement

ಸ್ಲಂ ಬೋರ್ಡ್ ಅಧಿಕಾರಿ ವಿರುದ್ಧ ಸೋಮಣ್ಣ ಕೆಂಡ!
"ಏಯ್ ಯಾರೋ ಅವ್ನು, ಬಾ ಇಲ್ಲಿ. ಕೊರೊನಾಕ್ಕೆ ಸ್ವಲ್ಪ ಉದಾಸೀನ ಮಾಡಿದ್ದಕ್ಕೆ ಎಂತೆಂತವರು ಹೋದರು‌. ನೀವು ಬುದ್ದಿವಂತರು. ಉಳಿದುಕೊಂಡು ಬಿಟ್ರಿ. ದೇವರು ನಿಮಗೆ ಒಳ್ಳೆಯದು ಮಾಡಿದ್ದಾನೆ. ಈಗಲಾದರೂ ಬಡವರ ಪರ ಕೆಲಸ ಮಾಡ್ರಪ್ಪಾ. ನಿಂದೇನು ಕೆಲಸ, ನಿನಗೆ ಗೂಟದ ಕಾರು, ಎಲ್ಲಾ ವ್ಯವಸ್ಥೆ ಬೇಕು. ಇನೋವಾ ಕಾರು ಕೊಟ್ಟಿರೋದು ಅಲ್ವಾ. ಐಎಎಸ್ ಅಧಿಕಾರಿಗೆ ಕೊಡುವ ಕಾರು ಅದು.‌ ಏನ್ ಕೆಲಸ ಮಾಡ್ತೀಯಾ ನೀನು?."

ಇದು ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ ಕಪಿಲ ಗೌಡರನ್ನು ಹಿಗ್ಗಾಮುಗ್ಗವಾಗಿ ವಸತಿ ಸಚಿವ ವಿ. ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡ ಪರಿ ಇದು.

ವಸತಿ ಇಲಾಖೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಸೋಮಣ್ಣ, ಸ್ಲಂ ಬೋರ್ಡ್‌ನ ಕಾರ್ಯಪಾಲಕ ಅಭಿಯಂತರ ಕಪಿಲ ಗೌಡ ಬೇಜವಾಬ್ದಾರಿ ಕೆಲಸದ ಬಗ್ಗೆ ದೂರು ಬಂದ ಕಾರಣ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ಈ ಅಧಿಕಾರಿಯ ಇನೋವಾ ಕಾರಿಗೆ ಜಿಪಿಎಸ್ ಅಳವಡಿಸಿ. ರಾತ್ರಿ ಎಲ್ಲೆಲ್ಲೋ ಹೋಗಬಹುದೇನೋ. ಕೆಲಸ ಬಿಟ್ಟು ಬೇರೆ ಎಲ್ಲಾ‌ ಮಾಡ್ತಾನೇನೋ ಎಂದು ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.

"ಸ್ಲಂ ಬೋರ್ಡ್‌ನ ಅಧಿಕಾರಿಯಾಗಿ ಹೊಟ್ಟೆ ಬರಿಸಿಕೊಂಡರೆ ಸಾಲದು. ಬಡವರ ಕೆಲಸ ಮಾಡಿಕೊಡ್ರಪ್ಪಾ.‌ ಕೊಳಚೆಯಲ್ಲಿಯೇ ಜನರು ವಾಸ ಮಾಡ್ತಿದ್ದಾರೆ. ಅವ್ರಿಗೆಲ್ಲಾ ಮನೆ ಕಟ್ಟಿಕೊಡ್ರಿ. ಆರು ವಿಧಾನಸಭಾ ಕ್ಷೇತ್ರಗಳಿಗೆ ಯಾವಾಗಾದರೂ ಹೋಗಿದ್ದೀರಾ. ಕೊರೊನಾ ಬಂದು ಎಂತೆಂತವರೋ ಹೋದರು. ಬುದ್ದಿವಂತರು ನೀವು ಉಳಿದುಕೊಂಡಿದ್ದೀರಾ. ಪುಣ್ಯ ಮಾಡಿದ್ದೀರಾ. ಈಗಲಾದರೂ ಜನರ ಪರ ಕೆಲಸ ಮಾಡಿರಿ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ, ನಾನು ಹರಿಹರಕ್ಕೆ ಹೋದಾಗ ಬರೋಕೆ ಈತ ತಯಾರಿರಲಿಲ್ಲ. ನಾನೇ ಮೈಸೂರಿನಿಂದ ದಾವಣಗೆರೆಗೆ ವರ್ಗಾವಣೆ ಮಾಡಿದ್ದೆ," ಎಂದು ಮನಸ್ಸೋ ಇಚ್ಚೆ ಸೋಮಣ್ಣ ಬೈದರು.

ಈ ವೇಳೆ‌ ಮಧ್ಯ ಪ್ರವೇಶಿಸಿದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಈ ಅಧಿಕಾರಿ ಕೇವಲ ಆಕ್ಷೇಪಣೆ ಮಾಡ್ತಾರೆ. ಅದು ಸರಿ ಇಲ್ಲ, ಇದು ಸರಿಯಿಲ್ಲ ಎಂಬ ಸಬೂಬು ನೀಡುತ್ತಾರೆ. ಸ್ಲಂ ಬೋರ್ಡ್‌ನಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ನೀವೇ ಬುದ್ದಿ ಹೇಳಿ ಎಂದರು.

ಈ ವೇಳೆ ಮತ್ತಷ್ಟು ಸಿಟ್ಟಿಗೆದ್ದ ಸಚಿವ ಸೋಮಣ್ಣ, "ವೆಂಕಟೇಶ್ ಅವರೇ ಪದ್ಮನಾಭ ತಿಮಿಂಗಲ ಇದ್ದಂತೆ. ನ್ಯಾಷನಲ್ ಅಲ್ಲ, ಇಂಟರ್ ನ್ಯಾಷನಲ್ ಅವನು. ದೇವರಾಜ್ ಅರಸು ಸ್ಲಂ ಬೋರ್ಡ್ ಮಾಡಿದ್ದು ಬಡವರ ನೆರವಿಗಾಗಿ. ಆರು ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರನ್ನು ಭೇಟಿ‌ ಮಾಡು. ಅಲ್ಲಿ ಏನಾಗಿದೆ ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಬೇಕು," ಎಂದು ತಾಕೀತು ಮಾಡಿದರು.

"ಹೇ ಕಂಪನಿಗೌಡ, ನಿನ್ನ ಮೈಸೂರಿಂದ ದಾವಣಗೆರೆ ಟ್ರಾನ್ಸಫರ್ ಮಾಡಿದರೂ ಹೊಟ್ಟೆ ಮಾತ್ರ ಕರಗಿಲ್ಲ. ಆರು ವಿಧಾನಸಭಾ ಶಾಸಕರ ಮಾತು ಕೇಳಿ ಕೆಲಸ ಮಾಡ್ರೋ ತಿಂದಿದ್ದು ಸಾಕು. ಪುಣ್ಯಾತ್ಮ ದೇವರಾಜ ಅರಸು ಸ್ಲಂ ಜನರಿಗೆ ಅಂತ ಸ್ಲಂ ಬೋರ್ಡ್ ಮಾಡಿದರೆ ಆ ಸ್ಲಂ ಬೋರ್ಡೇ ತಿಂದಿದ್ದೀರಿ," ಎಂದು ವಾಗ್ದಾಳಿ ನಡೆಸಿದರು.

4 ಲಕ್ಷ ಮನೆಗಳ ಮಂಜೂರು
"ಪ್ರಸಕ್ತ ವರ್ಷ ಬಸವ ವಸತಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಟ 50 ಮನೆಗಳನ್ನು ಮಂಜೂರು ಮಾಡಲಾಗುವುದು, ಜಾತಿ, ಬೇಧವಿಲ್ಲದೆ ಅರ್ಹರಿಗೆ ಮಾತ್ರ ಮನೆ ಮಂಜೂರಾತಿಗೆ ಫಲಾನುಭವಿಗಳನ್ನು ಗುರುತಿಸುವಂತೆ," ಸೂಚಿಸಿದರು.

ಸ್ಲಂ ಪ್ರದೇಶದ 9000 ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ
"ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರ, ಚನ್ನಗಿರಿ, ಹೊನ್ನಾಳಿ, ಜಗಳೂರು ಹಾಗೂ ಹರಿಹರ ಸೇರಿದಂತೆ ಒಟ್ಟು 6 ನಗರ, ಪಟ್ಟಣ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 68 ಘೋಷಿತ ಕೊಳಚೆ ಪ್ರದೇಶಗಳಿದ್ದು, 11,546 ಕುಟುಂಬಗಳು ವಾಸವಾಗಿವೆ. ಕೊಳಗೇರಿ ಪ್ರದೇಶದ ನಿವಾಸಿಗಳ ಪೈಕಿ ಈ ವರ್ಷ 9000 ಕುಟುಂಬಗಳಿಗೆ ಒಟ್ಟು 170 ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಒದಗಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರೆಯಿಸಿ, ಈ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು," ಎಂದು ತಿಳಿಸಿದರು.

"ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ 1303 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 3376 ಮನೆಗಳು ವಿವಿಧ ಹಂತಗಳಲ್ಲಿವೆ. ಈ ವರ್ಷ ರಾಜ್ಯದಲ್ಲಿ ಘೋಷಿತ ಕೊಳಗೇರಿ ಪ್ರದೇಶಗಳ ಕುಟುಂಬಗಳಿಗೆ ಇನ್ನೂ 50 ಸಾವಿರ ಮನೆಗಳನ್ನು ನೀಡುತ್ತೇವೆ. ಮೂಲ ಸೌಕರ್ಯಕ್ಕಾಗಿ 500 ಕೋಟಿ ರೂ. ಅನುದಾನ ಒದಗಿಸಿದ್ದೇವೆ. ಅಲೆಮಾರಿ, ಅರೆ ಅಲೆಮಾರಿ, ಸುಡುಗಾಡು ಸಿದ್ಧರು, ಕಾಡುಗೊಲ್ಲರು, ಬುಡಬುಡಿಕೆ ಸಮುದಾಯದವರು ತಮ್ಮ ಜೀವನದಲ್ಲಿ ಸಾಕಷ್ಟು ಅಲೆದಾಡಿದ್ದು, ಅವರ ನೆಮ್ಮದಿಯ ಬದುಕಿಗಾಗಿ, ಇಂತಹ ಸಮುದಾಯದವರಿಗೂ ಮನೆಗಳನ್ನು ನಿರ್ಮಿಸಿಕೊಡಲು ಇಲಾಖೆ ಮುಂದಾಗಿದೆ," ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

English summary
: Housing Minister V Somanna Expressed Outrage Against Former CM Siddaramaiah Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X