ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರುಣನ ಆರ್ಭಟಕ್ಕೆ ದಾವಣಗೆರೆ ಜಿಲ್ಲೆ ಜನ ತತ್ತರ: ಸಾವಿರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 12: ದಾವಣಗೆರೆ ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆ ಆಗಿಲ್ಲ. ಬೆಳಿಗ್ಗೆ ಕಡಿಮೆಯಾಗುವ ಮಳೆ ರಾತ್ರಿ ಧೋ ಅಂತಾ ಸುರಿಯುತ್ತಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೊಳಗಾಗಿದ್ದು, ಮೆಕ್ಕೆಜೋಳ, ಭತ್ತ ಸೇರಿದಂತೆ ಬೇರೆ ಬೇರೆ ಬೆಳೆ ಬೆಳೆದ ರೈತರು ಆತಂಕಕ್ಕೊಳಗಾಗಿದ್ದಾರೆ.

ಕಷ್ಟಪಟ್ಟು ಬೆಳೆದ ಬೆಳೆ ಮಳೆ ಪಾಲಾಗುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇದು ಜನರ ಸಮಸ್ಯೆ ಮತ್ತಷ್ಟು ಹೆಚ್ಚಿಸಿದೆ.

ಹರಿಹರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು‌ ನುಗ್ಗಿದೆ. 20ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದರೆ, ಮತ್ತೆ ಕೆಲವೆಡೆ ಜಮೀನು ನೀರಿನಿಂದ ಜಲಾವೃತವಾಗಿದೆ. ಸೋಮವಾರ ರಾತ್ರಿ 7 ಗಂಟೆಗೆ ಶುರುವಾದ ಮಳೆ ರಾತ್ರಿ 11 ಗಂಟೆಯವರೆಗೂ ಎಡೆಬಿಡದೇ ಸುರಿದಿದೆ.

 ಯಲವಟ್ಟಿ ತಾಂಡ ಸಂಪೂರ್ಣ ಜಲಮಯ

ಯಲವಟ್ಟಿ ತಾಂಡ ಸಂಪೂರ್ಣ ಜಲಮಯ

ಭಾರೀ ಮಳೆ ಸುರಿದ ಪರಿಣಾಮ ಹರಿಹರ ತಾಲೂಕಿನ ಯಲವಟ್ಟಿ ತಾಂಡ ಸಂಪೂರ್ಣ ಜಲಮಯವಾಗಿತ್ತು. ಒಂದು ಹಸು ಮೃತಪಟ್ಟಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರನ್ನು ಸ್ಥಳಾಂತರಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ನಡೆಯಿತು. ಸುಮಾರು 300ಕ್ಕೂ ಹೆಚ್ಚು ಮಂದಿಯನ್ನು ಸಮುದಾಯ ಭವನ, ದೇವಸ್ಥಾನಗಳಿಗೆ ರಾತ್ರೋರಾತ್ರಿ ಸ್ಥಳಾಂತರ ಮಾಡಲಾಯಿತು.

ತಹಶೀಲ್ದಾರ ರಾಮಚಂದ್ರಪ್ಪ, ಆರ್ಐ ಆನಂದ್ ರಾತ್ರಿಪೂರ್ತಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಿದರು. ಕಮಲಾಪುರ ಗ್ರಾಮದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಇರಲಿಲ್ಲ. ಇಲ್ಲಿಯೂ ಮಳೆಯ ರೌದ್ರನರ್ತನಕ್ಕೆ ಜನರು ಕಂಗೆಟ್ಟಿದ್ದರು. ನೂರಕ್ಕೂ ಅಧಿಕ‌ ಮನೆಗಳಿಗೆ ‌ನೀರು ನುಗ್ಗಿ 5 ಮನೆಗಳ ಗೋಡೆ ಬಿದ್ದಿವೆ. ಇಡೀ ರಾತ್ರಿ ಗ್ರಾಮಸ್ಥರು ನೀರು ಹೊರಹಾಕಲು ಹರಸಾಹಸಪಟ್ಟರು. ಮನೆಯಲ್ಲಿದ್ದ ತರಕಾರಿ, ದಿನಸಿ, ದವಸ ಧಾನ್ಯಗಳು ನೀರಿನಿಂದ ಆವೃತವಾದವು. ಇದರಿಂದ ಮನೆಯಲ್ಲಿ ದಾಸ್ತಾನು ಮಾಡಿದ್ದ ಬೆಳೆಯೂ ನೀರಿನಲ್ಲಿ ನೆನೆದು ಹಾಳಾಗಿದೆ.

 ಕಮಲಾಪುರ ಗ್ರಾಮದ ಶಾಲೆಯಲ್ಲಿ ಗಂಜಿ‌ಕೇಂದ್ರ ಆರಂಭ

ಕಮಲಾಪುರ ಗ್ರಾಮದ ಶಾಲೆಯಲ್ಲಿ ಗಂಜಿ‌ಕೇಂದ್ರ ಆರಂಭ

ಇನ್ನೂ ಹೆಚ್ಚಿನ‌ ಅನಾಹುತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಮಲಾಪುರ ಗ್ರಾಮದ ಶಾಲೆಯಲ್ಲಿ ಗಂಜಿ‌ಕೇಂದ್ರ ಆರಂಭಿಸಲಾಗಿದೆ. ಮಳೆ ಲೆಕ್ಕಿಸದೇ ಸುತ್ತಿದ ತಹಶೀಲ್ದಾರ ರಾಮಚಂದ್ರಪ್ಪ ಹಾಗೂ ಆರ್ಐ ಆನಂದ್, ನೆಲಕಚ್ಚಿದ, ನೀರು‌ ನುಗ್ಗಿದ ಮನೆಗಳಿಗೆ ‌ಭೇಟಿ ಕೊಟ್ಟು ಪರಿಶೀಲಿಸಿದರು. ಮನೆ ಬಿದ್ದು ಸಂಕಷ್ಟದಲ್ಲಿದ್ದ ಮನೆ ಮಾಲೀಕರಿಗೆ ಸಾಂತ್ವನ ಹೇಳಿ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲಿಸಿ ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರರಾದರು. ಈ ಸಂದರ್ಭದಲ್ಲಿ ಯಲವಟ್ಟಿ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯ ರಮೇಶ್‌ ಮತ್ತಿತರರಿದ್ದರು.

 ಚನ್ನಗಿರಿಯಲ್ಲೂ ವರುಣಾರ್ಭಟ

ಚನ್ನಗಿರಿಯಲ್ಲೂ ವರುಣಾರ್ಭಟ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಹೊನ್ನೇಮರದಹಳ್ಳಿ ಹರಿದ್ರಾವತಿ ಹಳ್ಳ ತುಂಬಿ ಹರಿಯುತ್ತಿದೆ. ಇದನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹಳ್ಳ- ಕೊಳ್ಳಗಳು ಮೈದುಂಬಿದ್ದು, ಒಂದೆಡೆ ಜಮೀನುಗಳಿಗೆ ನೀರು ನುಗ್ಗಿ ರೈತರು ಸಂಕಷ್ಟಕ್ಕೊಳಗಾಗಿದ್ದರೆ, ಮತ್ತೊಂದೆಡೆ ತುಂಬಿಹರಿಯುವ ಹಳ್ಳಗಳ ಸೊಬಗು ವೀಕ್ಷಿಸಲು ಜನರು ಮುಗಿಬೀಳುತ್ತಿದ್ದಾರೆ.

ಚನ್ನಗಿರಿ ತಾಲೂಕಿನ ಮಹಾರುದ್ರಸ್ವಾಮಿ ದೇವಸ್ಥಾನ ಇರುವ ಐತಿಹಾಸಿಕ ಸುಕ್ಷೇತ್ರ ಮಾವಿನಹೊಳೆ ಗ್ರಾಮದಲ್ಲಿರುವ ಪುರಾತನ ಕೆರೆ ಕೋಡಿ ಬಿದ್ದಿದೆ. ಕೆರೆಗೆ ಕುಕ್ಕುವಾಡೇಶ್ವರಿ ರಕ್ಷಿತಾ ಅರಣ್ಯದಲ್ಲಿರುವ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತಿವೆ. ಈ ಭಾಗದ ರೈತರಿಗೆ ಕೆರೆ ಜೀವನಾಡಿಯಾಗಿದೆ. ಕೆರೆ ತುಂಬಿರುವುದರಿಂದ ಈ ಭಾಗದ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.

 ಮಲೆಬೆನ್ನೂರಿನಲ್ಲಿಯೂ ಮನೆಗಳು ಜಲಾವೃತ

ಮಲೆಬೆನ್ನೂರಿನಲ್ಲಿಯೂ ಮನೆಗಳು ಜಲಾವೃತ

ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿಯೂ ಭಾರೀ ಮಳೆ ಆಗಿದೆ. ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಭತ್ತದ ಗದ್ದೆ ಜಲಾವೃತವಾಗಿದೆ. ಸಮೀಪದ ಭಾನುವಳ್ಳಿ, ಕಮಲಾಪುರ ಗ್ರಾಮದಲ್ಲಿ ಮೋರಿ ಉಕ್ಕಿ ಹರಿದ ಪರಿಣಾಮ ಮನೆಯೊಳಗೆ ನೀರು ನುಗ್ಗಿ ಧಾನ್ಯ ಮೂಟೆಗಳು ಹಾಳಾಗಿವೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ ಅಂದುಕೊಂಡರೂ ರಾತ್ರಿ ಸುರಿಯುವ ಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ.

Recommended Video

ಚೀನಾ ಮತ್ತು ಭಾರತದ ನಡುವೆ ಯುದ್ಧವಾದ್ರೆ ಭಾರತ ಸೋಲೋದು ಗ್ಯಾರಂಟಿ!! | Oneindia Kannada

English summary
Heavy rains in Davanagere district have destroyed hundreds of acres of crops in Harihara Taluk and damaged thousands of homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X