ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ನಿಲ್ಲದ ಮಳೆ: ರೈತರ ಮೊಗದಲ್ಲಿಲ್ಲ ಹರ್ಷದ ಕಳೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 19: ಬೆಣ್ಣೆನಗರಿಯಲ್ಲಿ ಮಳೆ ನಿಲ್ಲದಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಮಳೆ ಆಗುತ್ತಿರುವ ಕಾರಣ ದಾವಣಗೆರೆ ಜಿಲ್ಲೆಯಲ್ಲಿ ಬೆಳೆದಿರುವ ಭತ್ತ ಸಂಪೂರ್ಣವಾಗಿ ನಾಶವಾಗುವ ಆತಂಕ ಎದುರಾಗಿದೆ.

ಕಳೆದ ರಾತ್ರಿ ಮತ್ತು ಇಂದು ಬೆಳಗ್ಗೆಯೂ ವರುಣನ ಆರ್ಭಟ ಜೋರಾಗಿದೆ. ಭತ್ತ ಹಾಗೂ ಮೆಕ್ಕೆಜೋಳ ಹಾಳಾಗಿ ನಷ್ಟ ಅನುಭವಿಸುವಂತಾಗಿರುವ ರೈತರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಕೊರೊನಾ ಹೊಡೆತಕ್ಕೆ ಸಿಲುಕಿ ಎರಡು ವರ್ಷಗಳಿಂದಲೂ ಆದಾಯ ಕಾಣದ ಅನ್ನದಾತರು ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ. ಇನ್ನು ಶಾಲಾ- ಕಾಲೇಜುಗಳು ಆರಂಭವಾಗಿದ್ದು, ಮಕ್ಕಳ ಶುಲ್ಕ, ಬಟ್ಟೆ, ಪಠ್ಯಪುಸ್ತಕ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಕಾಲಿಕ ಮಳೆಯಿಂದಾಗಿ ಹರಿಹರ ತಾಲೂಕಿನ ಮಲೇಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ಬರೋಬ್ಬರಿ ಎರಡು ಸಾವಿರಕ್ಕೂ ಅಧಿಕ ಎಕರೆಯಲ್ಲಿ ಫಸಲಿಗೆ ಬಂದಿದ್ದ ಭತ್ತ ನೆಲಕಚ್ಚಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

 ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ

ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ

ಭಾಸ್ಕರ ರಾವ್ ಕ್ಯಾಂಪ್, ನಿಟ್ಟೂರು, ಕುಂಬಳೂರು, ಆದಾಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಬೆಳೆದಿದ್ದ ಭತ್ತ ಉತ್ತಮವಾಗಿಯೇ ಬಂದಿತ್ತು. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕವಾಗಿ ಸುರಿದ ಮಳೆ ತಣ್ಣೀರೆರಚಿದೆ. ಇಡೀ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಜಗಳೂರು ತಾಲೂಕಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವೂ ಹಾಳಾಗಿ ಹೋಗಿದೆ.

ಕುಂಬಳೂರಿನಲ್ಲಿ ರೈತ ಕೋಣನತಂಬಗಿ ಕರಿಯಪ್ಪ ಹತ್ತು ಎಕರೆಯಲ್ಲಿ ಲವಣಿ ಅಂದರೆ ಗುತ್ತಿಗೆ ಆಧಾರದಲ್ಲಿ ಪಡೆದು ಭತ್ತ ಬೆಳೆದಿದ್ದರು. ಅಕಾಲಿಕ ಮಳೆ ಸುರಿದ ಕಾರಣ ಸಂಪೂರ್ಣವಾಗಿ ಬೆಳೆ ನೆಲಕಚ್ಚಿದೆ. ನಾಗೋಳ್ ಧನಂಜಯ್ 11 ಎಕರೆ, ಕೆ. ಆಂಜನೇಯ 10 ಎಕರೆ, ಲೋಕಾಪುರದ ಆಂಜನೇಯ 10 ಎಕರೆ, ವಿನಾಯಕನಗರ ಕ್ಯಾಂಪಿನ ಹಲಗೇರಿ ಕರಿಬಸಪ್ಪ ಏಳು ಎಕರೆಯಲ್ಲಿ ಬೆಳೆದಿದ್ದ ಭತ್ತವೂ ಹಾಳಾಗಿದೆ.

 ಡಿಸಿ ಭೇಟಿ, ಪರಿಶೀಲನೆ

ಡಿಸಿ ಭೇಟಿ, ಪರಿಶೀಲನೆ

ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಾನಿಗೀಡಾದ ಹರಿಹರ ತಾಲೂಕಿನ ಹಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್‌. ಬೀಳಗಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ರೈತರು ಬೆಳೆ ಹಾನಿ ಆಗಿರುವುದನ್ನು ತೋರಿಸಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು‌.

ಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಬೆಳೆ, ಮನೆಗಳು ಕಳೆದುಕೊಂಡ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ವೀಕ್ಷಿಸಿದರು. ಹರಿಹರ ತಾಲ್ಲೂಕಿನ ಹೊಳೆಸಿರಿಗೇರಿ, ಜಿಗಳಿ, ಹುಲಿಗಿನಹೊಳೆ, ಎಳೆಹೊಳೆ, ಧೂಳೆಹೊಳೆ ಇನ್ನೂ ಇತರೆ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದರು.

ಯಾವ ಯಾವ ಗ್ರಾಮಗಳಲ್ಲಿ ಬೆಳೆ ಹಾನಿ ಆಗಿರುವುದರ ಬಗ್ಗೆ ಕೂಡಲೇ ಸಂಬಂಧಿಸಿದ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ವರದಿಯನ್ನು ತಯಾರಿಸಿ ಕೂಡಲೇ ರೈತರಿಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸವನ್ನು ಮಾಡಬೇಕೆಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಗ್ರೇಡ್ 2 ತಹಶೀಲ್ದಾರ್ ಶಶಿಧರ್, ರಾಜಸ್ವ ನಿರೀಕ್ಷಕ ಆನಂದ್, ಉಪ ತಹಶೀಲ್ದಾರ್ ರವಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

 ಹರಿಹರ ಶಾಸಕ ರಾಮಪ್ಪ ಒತ್ತಾಯ

ಹರಿಹರ ಶಾಸಕ ರಾಮಪ್ಪ ಒತ್ತಾಯ

ಮಳೆಯಿಂದ ತಾಲೂಕಿನಲ್ಲಿ ಆಗಿರುವ ಕುರಿತಂತೆ ಆದಷ್ಟು ಬೇಗ ವರದಿ ತರಿಸಿಕೊಂಡು ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಬೇಕೆಂದು ಹರಿಹರ ಶಾಸಕ ಎಸ್. ರಾಮಪ್ಪ ಒತ್ತಾಯಿಸಿದ್ದಾರೆ.

ಬನ್ನಿಕೋಡು, ಕೆ. ಬೇವಿನಹಳ್ಳಿ, ಕಡ್ಲೆಗೊಂದಿ, ದೇವರಬೆಳಕೆರೆ, ಕುಂಬಳೂರು, ಜಿಗಳಿ, ಹರಳಹಳ್ಳಿ, ಲಕ್ಕಶೆಟ್ಟಿಹಳ್ಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಕಟಾವಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ನಿಂತಿರುವ ನೀರಿನಲ್ಲಿ ಭತ್ತದ ಗೊನೆ ಮುಳುಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ರೈತರು ತುಂಬಾ ನಷ್ಟ ಅನುಭವಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದರು.

ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 135 ಎಕರೆ ಭತ್ತ, 2 ಎಕರೆ ಬಾಳೆ ಮತ್ತು 10 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು ರೂ. 6.50 ಲಕ್ಷ, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 787 ಎಕರೆ ಭತ್ತ, 2 ಎಕರೆ ರಾಗಿ ಬೆಳೆ ಹಾನಿಯಾಗಿದ್ದು, ರೂ. 48.33 ಲಕ್ಷ, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಿಂದ ರೂ. 3 ಲಕ್ಷ ಮತ್ತು 2 ಪಕ್ಕಾ ಮನೆ ಭಾಗಶಃ ಹಾನಿಯಿಂದ ರೂ. 1.30 ಲಕ್ಷ ಸೇರಿ ಒಟ್ಟು ರೂ. 4.30 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ತಿಳಿಸಿದ್ದಾರೆ.

 ನಷ್ಟದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ನಷ್ಟದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.1 ಲಕ್ಷ ಮತ್ತು 6 ಪಕ್ಕಾ ಮನೆ ಭಾಗಶಃ ಹಾನಿಯಗಿದ್ದು, ರೂ. 3 ಲಕ್ಷ, 7 ಎಕರೆ ಭತ್ತದ ಬೆಳೆ ಹಾನಿ ಆಗಿದ್ದು, ರೂ.3 ಲಕ್ಷ ಸೇರಿ ಒಟ್ಟು ರೂ.7.15 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ. 3 ಲಕ್ಷ, 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 1.20 ಲಕ್ಷ ಮತ್ತು 2 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ರೂ. 3.00 ಲಕ್ಷ, ಒಟ್ಟು 7.20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಗುರುವಾರ ಹಾಗೂ ಇಂದು‌ ಸುರಿದ ಮಳೆಯಿಂದ ಮತ್ತಷ್ಟು ಹಾನಿಯಾಗಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ದಾವಣಗೆರೆ ಜಿಲ್ಲಾಧಿಕಾರಿ ನೀಡಿದ್ದಾರೆ.

English summary
Rainfall in the Davanagere district has been crop lost due to continuous rainfall for the past four days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X