ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಜಿಲ್ಲೆಯಲ್ಲಿ ಮಳೆ ನಿಂತರೂ, ನಿಲ್ಲದ ರೈತರ ಕಣ್ಣೀರು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 20: ದಾವಣಗೆರೆ ಜಿಲ್ಲೆಯಲ್ಲಿ ಶನಿವಾರ ಮಳೆರಾಯ ಕೊಂಚ ವಿರಾಮ ಕೊಟ್ಟಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಗೆ ದಾವಣಗೆರೆ ಜಿಲ್ಲೆಯಾದ್ಯಂತ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಇನ್ನು ಹಲವೆಡೆ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.

ಹವಾಮಾನ ವೈಪರೀತ್ಯದಿಂದ ಆರ್ಭಟಿಸಿದ ವರುಣ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ. ಚನ್ನಗಿರಿ ತಾಲೂಕಿನಲ್ಲಿನ ಹಲವಾರು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಬಸವಾಪಟ್ಟಣ ಹೋಬಳಿಯ ಹಲವು ಗ್ರಾಮಗಳಲ್ಲಿ ಭತ್ತದ ಗದ್ದೆಗಳಲ್ಲಿ ನೀರು ನಿಂತಿರುವ ಕಾರಣದಿಂದ ಭತ್ತದ ಬೆಳೆ ನೆಲಕಚ್ಚಿದೆ. ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳವೂ ನೀರು ಪಾಲಾಗಿದೆ.

ಬೀರೂರು- ಸಮ್ಮರಗಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ರಾಜಗೊಂಡನಹಳ್ಳಿ ಗ್ರಾಮದ ಸಮೀಪದ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುದಿಗೆರೆ ಗ್ರಾಮದ ಕೆರೆಯು ತುಂಬಿ ಹರಿಯುತ್ತಿದ್ದು, ಹಳ್ಳದ ಮೇಲೆ 2 ಅಡಿ ನೀರು ಬಂದಿದೆ. ಮಾತ್ರವಲ್ಲ, ಕೆರೆ ಮೈದುಂಬಿ ಕೋಡಿ ಬಿದ್ದ ಪರಿಣಾಮ ಅಪಾಯಮಟ್ಟದಲ್ಲಿ ನೀರು ಹರಿದು ಹೋಗುತ್ತಿದೆ.

ಬಸವಾಪಟ್ಟಣದ ಕೆರೆಯ ಹಿಂಭಾಗದಲ್ಲಿರುವ ಮನೆಗಳ ಜನರು ಓಡಾಡಲು ಕಷ್ಟವಾಗಿತ್ತು. ಕೆರೆ ಅಕ್ಕಪಕ್ಕದಲ್ಲಿನ ಮನೆಗಳಿಗೂ ನೀರು ನುಗ್ಗಿತ್ತು. ಹರಿದ್ರಾವತಿ ಹಳ್ಳ ಸಹ ಮೈದುಂಬಿ ಹರಿಯುತ್ತಿದ್ದು, ಹೊರವಲಯದ ನವನಗರ ಬಡಾವಣೆಯಲ್ಲಿ ನೀರು ತುಂಬಿಕೊಂಡು ಎಲ್ಲಿ ನೋಡಿದರೂ ನೀರೋ ನೀರು ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಮಳೆ ಸುರಿದ ಕಾರಣ ಶನಿವಾರವೂ ಶಾಲೆಗೆ ರಜೆ ಘೋಷಿಸಲಾಗಿದೆ.

 ಆರು ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ

ಆರು ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ

ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ನೀರು ಹೊರಹೋಗುತ್ತಿದೆ. ಆರು ವರ್ಷಗಳ ಹಿಂದೆ ತುಂಬಿದ್ದ ಕೆರೆಯು ಎಂಥ ಮಳೆ ಬಂದರೂ ತುಂಬಿರಲಿಲ್ಲ. ಆದರೆ ಕಳೆದ ಎರಡರಿಂದ ಮೂರು ದಿನಗಳಲ್ಲಿ ಸುರಿದ ವರುಣನ ಆರ್ಭಟಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಭದ್ರಾ ಡ್ಯಾಂನಿಂದ ನೀರು ಬಿಟ್ಟರೂ ಕೆರೆ ಮಾತ್ರ ಪೂರ್ಣಮಟ್ಟದಲ್ಲಿ ತುಂಬಿರಲಿಲ್ಲ. ಕೋಡಿ ಬಿದ್ದ ನೀರು ಜಲಪಾತದಂತೆ ಕಾಣುತ್ತಿದ್ದು, ಈ ವೈಭವ ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಇನ್ನು ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹತ್ತಿರಕ್ಕೆ ಹೋಗದಂತೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿರುವ ದೃಶ್ಯವೂ ಕಂಡು ಬರುತ್ತಿದೆ. ಇನ್ನು ಈ ಮಳೆ ಭಾರೀ ಪ್ರಮಾಣದ ಬೆಳೆ ನಷ್ಟ ಮಾಡಿದ್ದು, ರೈತರಿಗೆ ಒಂದೆಡೆ ಬೇಸರ ತರಿಸಿದರೆ, ಮತ್ತೊಂದೆಡೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂಬ ಸಂತಸಕ್ಕೂ ಕಾರಣವಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಬರೋಬ್ಬರಿ 40 ಲಕ್ಷ ರೂಪಾಯಿಗೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಮ್ಮನಗುಡ್ಡಕ್ಕೂ ನೀರು ನುಗ್ಗಿದ್ದು, ದೇವಸ್ಥಾನಕ್ಕೆ ತೆರಳಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

 ರಮಣೀಯ ದೃಶ್ಯ

ರಮಣೀಯ ದೃಶ್ಯ

ದಾವಣಗೆರೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿದ್ದು, ಎಲ್ಲೆಡೆ ರಮಣೀಯ ದೃಶ್ಯ ಸೃಷ್ಟಿಯಾಗಿದೆ. ಕೋಡಿ ಬಿದ್ದು ಹೊರ ಹೋಗುತ್ತಿರುವ ನೀರು ಹರಿಯುವುದನ್ನು ನೋಡುವುದೇ ಚೆಂದ. ಹಾಗಾಗಿ ಜನರಿಗೂ ಇದು ಮುದ ನೀಡುತ್ತಿದೆ. ಪ್ರತಿಯೊಬ್ಬರೂ ಈ ಸೌಂದರ್ಯ ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ರಭಸವಾಗಿ ಹರಿಯುವ ನೀರು ಸೃಷ್ಟಿಸುವ ಸೊಬಗು ಟೂರಿಸ್ಟ್ ಸ್ಪಾಟ್ ಆಗಿ ಕೋಡಿ ಬಿದ್ದ ಕೆರೆಗಳು ಆಗಿವೆ.

 ನ್ಯಾಮತಿಯಲ್ಲಿ ಕುಸಿದು ಬಿದ್ದ 15ಕ್ಕೂ ಹೆಚ್ಚು ಮನೆಗಳು

ನ್ಯಾಮತಿಯಲ್ಲಿ ಕುಸಿದು ಬಿದ್ದ 15ಕ್ಕೂ ಹೆಚ್ಚು ಮನೆಗಳು

ನ್ಯಾಮತಿ ತಾಲೂಕಿನಲ್ಲಿಯೂ ಹದಿನೈದಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಎರಡು ದನದ ಕೊಟ್ಟಿಗೆಗಳಿಗೂ ಹಾನಿಯಾಗಿದೆ. ಹಲವೆಡೆ ಕಟಾವಿಗೆ ಬಂದಿದ್ದ ಬೆಳೆಗಳು ನೀರಿನಿಂದ ಆವೃತಗೊಂಡಿವೆ. ಯರಗನಾಳು, ಸುರಹೊನ್ನೆ, ಮಾಚಗೊಂಡನಹಳ್ಳಿ, ಕೆಂಚಿಕೊಪ್ಪ, ಮಾದಾಪುರ, ಗೋವಿನಕೋವಿ, ಬಸವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ತಾಲೂಕಿನಾದ್ಯಂತ ಸುಮಾರು 114 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಫಸಲು ಹಾಳಾಗಿದೆ.

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ, ಬಸವಾಪಟ್ಟಣದಲ್ಲಿಯೂ ಸತತವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಬೆಳೆದಿದ್ದ ಬೆಳೆಗಳೂ ನೀರುಪಾಲಾಗಿವೆ. ಚಿಕ್ಕಬಾಸೂರು, ಹುರಳಹಳ್ಳಿ, ಹನಗವಾಡಿ, ಬೀರಗೊಂಡನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಬೆಳೆದಿದ್ದ ಭತ್ತ ಹಾಳಾಗಿದೆ. ಬಸವಾಪಟ್ಟಣದ ದಾಗಿನಕಟ್ಟೆ, ಕಂಚುಗಾರನಹಳ್ಳಿಯ ಸೇರಿದಂತೆ ಹಲವೆಡೆ ಕೆರೆಗಳು ಕೋಡಿ ಬಿದ್ದಿದ್ದು, ಜಲರಾಶಿಗಳು ಕೊಚ್ಚಿ ಹೋಗಿವೆ.

 ದಾವಣಗೆರೆಯಲ್ಲಿ ಮಳೆ ನಷ್ಟ ಎಷ್ಟು?

ದಾವಣಗೆರೆಯಲ್ಲಿ ಮಳೆ ನಷ್ಟ ಎಷ್ಟು?

ಜಿಲ್ಲೆಯಲ್ಲಿ ನ.18ರಂದು 13.0 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟು 137.335 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 14.0 ಮಿ.ಮೀ, ದಾವಣಗೆರೆ 10.0 ಮಿ.ಮೀ, ಹರಿಹರ 8.0 ಮಿ.ಮೀ, ಹೊನ್ನಾಳಿ 10.0 ಮಿ.ಮೀ, ಜಗಳೂರು ತಾಲ್ಲೂಕಿನಲ್ಲಿ 17.0 ಮಿ.ಮೀ, ನ್ಯಾಮತಿ 10.0 ಮೀ.ಮಿ ವಾಸ್ತವ ಮಳೆಯಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 10 ಕಚ್ಚಾಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 3.50 ಲಕ್ಷ ರೂ., 302 ಎಕರೆ ಭತ್ತ, 27 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು, 25.00 ಲಕ್ಷ ಸೇರಿ ಒಟ್ಟು 28.50 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿ 2 ಲಕ್ಷ ರೂ., 3 ಪಕ್ಕಾ ಮನೆ ಭಾಗಶಃ ಹಾನಿಯಾಗಿ 41.73 ಲಕ್ಷ ರೂ. ಸೇರಿ ಒಟ್ಟು 46.135 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1.80 ಲಕ್ಷ ಮತ್ತು 86 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.2.50ಲಕ್ಷ ಸೇರಿ ಒಟ್ಟು 4.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

 ನೀರಿನ ಸೊಬಗು ನೋಡಿ ಸಂತಸ ಪಡುತ್ತಿರುವ ಜನ

ನೀರಿನ ಸೊಬಗು ನೋಡಿ ಸಂತಸ ಪಡುತ್ತಿರುವ ಜನ

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.4 ಲಕ್ಷ, 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1 ಲಕ್ಷ ಮತ್ತು 3 ಕಚ್ಚಾ ಮನೆ ತೀವ್ರಹಾನಿಯಾಗಿದ್ದು, ರೂ. 4 ಲಕ್ಷ, ಹಾಗೂ 4 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 2.00 ಲಕ್ಷ 86.20 ಎಕರೆ ಭತ್ತ ಮತ್ತು 4 ಎಕರೆ ಅಡಿಕೆ ಬೆಳೆ ಹಾನಿಯಾಗಿದ್ದು, 25.00 ಲಕ್ಷ ರೂ. ಸೇರಿ ಒಟ್ಟು 36.00 ಲಕ್ಷ ರೂ. ಅಂದಾಜು ನಷ್ಟವಾಗಿದೆ.

ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತ ಒಂದೆಡೆಯಾದರೆ ಮತ್ತೊಂದೆಡೆ ಜನರು ಸಹ ನೀರಿನ ಸೊಬಗು ನೋಡಿ ಸಂತಸ ಪಡುತ್ತಿದ್ದಾರೆ. ಮಳೆ ನಿಂತರೂ ರೈತರ ಕಣ್ಣೀರು ಮಾತ್ರ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ.

Recommended Video

Karnataka ತಂಡದ ವಿರುದ್ಧ ರೋಚಕವಾಗಿ ಗೆದ್ದು ಚಾಂಪಿಯನ್ ಆದ Tamil nadu | Oneindia Kannada

English summary
The crop which has grown on thousands of acres, has been completely ruined by the torrential rains that have been pouring in the Davanagere district for the past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X