ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಹಾಸ್ಟೆಲ್ ವಿದ್ಯಾರ್ಥಿ, ಸಿಬ್ಬಂದಿಗೆ ಕಡ್ಡಾಯ ಕೋವಿಡ್ ಪರೀಕ್ಷೆಗೆ ಸೂಚನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ: ಜಿಲ್ಲೆಯಲ್ಲಿಯೂ ಕಳೆದ ಹತ್ತು ದಿನಗಳಿಂದೀಚೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಏರು ಗತಿಯಲ್ಲಿ ಸಾಗಿದ್ದು, ಜಿಲ್ಲೆಯ ಎಲ್ಲ ಹಾಸ್ಟೆಲ್‍ಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಎರಡು ದಿನಗಳ ಒಳಗಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋವಿಡ್ ನಿರ್ವಹಣೆ ಕುರಿತ ತುರ್ತು ಸಭೆ ಹಾಗೂ ವೈದ್ಯಕೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ಶೇ.0.06 ಇದ್ದ ಪ್ರಮಾಣ, ಐದು ದಿನಗಳ ಬಳಿಕ 0.09 ಹಾಗೂ ಡಿ. 06 ರ ವೇಳೆಗೆ 0.13 ಗೆ ಏರಿಕೆ ಕಂಡಿದೆ. ಹೀಗಾಗಿ ಇದು ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಕೋವಿಡ್‍ನ ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿ ಅನುಭವವಿರುವ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಇದ್ದು, ಎಂತಹದೇ ಪರಿಸ್ಥಿತಿ ಬಂದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಕೋವಿಡ್‍ನ 3ನೇ ಅಲೆ ಸಮರ್ಥವಾಗಿ ಎದುರಿಸಲು ನಾವು ಈಗಿನಿಂದಲೇ ಸನ್ನದ್ಧರಾಗಬೇಕಿದೆ ಎಂದು ಹೇಳಿದರು.

Davanagere: Covid test compulsory for hostel student and staff

ಪ್ರತಿನಿತ್ಯ 1500 ರಿಂದ 2000 ಟೆಸ್ಟ್ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರು 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದ್ದು, ದಾವಣಗೆರೆ ಜಿಲ್ಲೆಯನ್ನು ರಿಸ್ಕ್‍ಗೆ ಒಳಪಡಿಸಲು ನಾವು ಸಿದ್ಧವಿಲ್ಲ. ಹೀಗಾಗಿ ದಾವಣಗೆರೆ ಮತ್ತು ಹರಿಹರದ ರೈಲ್ವೆ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಜಿಲ್ಲೆಯೊಳಗೆ ಪ್ರವೇಶಿಸುವ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಹಾಕಿ, ಪರಿಶೀಲಿಸುವಂತೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಹಾಸ್ಟೆಲ್ ವಿದ್ಯಾರ್ಥಿ, ಸಿಬ್ಬಂದಿಗೆ ಟೆಸ್ಟ್ ಕಡ್ಡಾಯ:

ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಾಸ್ಟೆಲ್‍ಗಳು ಅಲ್ಲದೆ, ಖಾಸಗಿ ವಸತಿಯುತ ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ, ಅಡುಗೆಯವರು. ನರ್ಸಿಂಗ್, ಪ್ಯಾರಾಮೆಡಿಕಲ್, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಂಗನವಾಡಿ ಸಹಾಯಕಿ ಮತ್ತು ಮೇಲ್ವಿಚಾರಕರು ಎಲ್ಲರಿಗೂ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಎರಡು- ಮೂರು ದಿನಗಳ ಒಳಗಾಗಿ ಕೈಗೊಳ್ಳಲೇಬೇಕು.

ಇದರ ಜೊತೆಗೆ ಆರೋಗ್ಯ ಇಲಾಖೆಯು ಹೆಚ್ಚು ರಿಸ್ಕ್ ವಲಯದಲ್ಲಿ ಬರುವ ಡ್ರೈವರ್, ಕಂಡಕ್ಟರ್, ಹೋಟೆಲ್, ರೆಸ್ಟೋರೆಂಟ್, ಹೆಚ್ಚು ಜನಸಂದಣಿ ಇರುವೆಡೆ ಕೆಲಸ ಮಾಡುವ ಹಮಾಲರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಮಾಡಬೇಕು. ಇದು ಜಿಲ್ಲೆಯ ಎಲ್ಲ ತಾಲ್ಲೂಕು ಮಟ್ಟದಲ್ಲೂ ಕೂಡ ಪರೀಕ್ಷೆ ನಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಎಲ್ಲ ಖಾಸಗಿ ವಸತಿಯುತ ಶಾಲೆಗಳಿಗೆ ಕೂಡಲೆ ಭೇಟಿ ನೀಡಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರು, ಸಿಬ್ಬಂದಿ ಆರೋಗ್ಯ ವಿವರವನ್ನು ಖುದ್ದು ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಹೋಂ ಐಸೋಲೇಷನ್ ಇಲ್ಲ:

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ ಸೋಂಕಿತರಿಗೆ ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ನಲ್ಲಿರಲು ಯಾರಿಗೂ ಅವಕಾಶ ಇರುವುದಿಲ್ಲ. ರೋಗ ಲಕ್ಷಣ ಇರಲಿ, ಇಲ್ಲದಿರಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಮೊದಲ ಮತ್ತು ಎರಡನೆ ಅಲೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದಿಲ್ಲ. ಸೋಂಕಿತರು ಎಷ್ಟೇ ಪ್ರಭಾವಿಗಳಾಗಿದ್ದರೂ, ಎಲ್ಲರನ್ನೂ ತಪ್ಪದೆ ಆಸ್ಪತ್ರೆಗೆ ದಾಖಲಿಸಿಯೇ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.

ದಾವಣಗೆರೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಿಯಮಾನುಸಾರ, ಆರ್‍ಟಿಪಿಸಿಆರ್‍ಗೆ ಸಂಗ್ರಹಿಸಿದ ಮಾದರಿಯನ್ನು ಹಾಸನಕ್ಕೆ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಕಳುಹಿಸಿಕೊಡುವಂತೆ ಡಿಸಿ ಸೂಚನೆ ನೀಡಿದರು.

ವೈದ್ಯಕೀಯ ವ್ಯವಸ್ಥೆ ಸಿದ್ಧತೆಯಲ್ಲಿರಲಿ:

ಕೋವಿಡ್ ಮೊದಲ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಸಾಕಷ್ಟು ದಾನಿಗಳು ಹಲವಾರು ಬೆಡ್, ವೈದ್ಯಕೀಯ ಉಪಕರಣಗಳು, ವೆಂಟಿಲೇಟರ್ ಮುಂತಾದ ಉಪಕರಣಗಳನ್ನು ಆಸ್ಪತ್ರೆಗಳಿಗೆ ದಾನ ಮಾಡಿದ್ದು, ಅವೆಲ್ಲವೂ ಸುಸ್ಥಿತಿಯಲ್ಲಿರುವಂತೆ ಸಂಬಂಧಪಟ್ಟ ಆಸ್ಪತ್ರೆಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಡಿಹೆಚ್‍ಒ ಅವರು ಇದರ ಸಮಗ್ರ ವರದಿ ಸಲ್ಲಿಸಬೇಕು. ತಾಲ್ಲೂಕುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ, ಉಪಕರಣಗಳ ದಾಸ್ತಾನು ವಹಿ ಪರಿಶೀಲಿಸಲಾಗುವುದು. ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿರುವ ಆಕ್ಸಿಜನ್ ಪ್ಲಾಂಟ್‍ಗಳು ಸುಸ್ಥಿತಿಯಲ್ಲಿದ್ದು, ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.

ಡಿಎಚ್‌ಒ ಹೇಳಿಕೆ:

'ರಾಜ್ಯದಲ್ಲಿ ಸದ್ಯ ಹೆಚ್ಚು ಕೇಳಿಬರುತ್ತಿರುವ ಕೋವಿಡ್‍ನ ಒಮಿಕ್ರಾನ್ ತಳಿಯ ಸೋಂಕು ಅತ್ಯಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಸದ್ಯ ಕೋವಿಡ್ ತಡೆಗಾಗಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು, ಒಮಿಕ್ರಾನ್ ತಳಿಯ ಕೋವಿಡ್ ಸೋಂಕು ತಡೆಗಟ್ಟಲು ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಇದುವರೆಗೂ ಮೊದಲ ಮತ್ತು ಎರಡನೆ ಡೋಸ್ ಲಸಿಕೆ ಪಡೆಯದೇ ಇರುವವರು, ಕೂಡಲೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮನವಿ ಮಾಡಿದರು.

ಮಾಸ್ಕ್ ಧರಿಸದವರಿಗೆ ದಂಡ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಸೂಚನೆಯಂತೆ ಮಹಾನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು, ನಗರಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರೆ ಪ್ರದೇಶಗಳಲ್ಲಿ ರೂ.100 ದಂಡವನ್ನು ವಿಧಿಸುವಂತೆ ಸೂಚನೆ ನೀಡಿದ್ದು, ಇದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ತಕ್ಷಣದಿಂದಲೇ ಇದನ್ನು ಜಾರಿಗೊಳಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಕೋವಿಡ್ ತಡೆಗಟ್ಟಲು ಸಂಪೂರ್ಣವಾಗಿ ಸಹಕರಿಸಬೇಕು. ದಂಡ ವಿಧಿಸಲು ಅವಕಾಶ ನೀಡದೆ, ಪ್ರತಿಯೊಬ್ಬರೂ ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಹೇಳಿದರು.

Recommended Video

NASA ಮುಂದಿನ ಯಾತ್ರೆಗಳಿಗೆ ತೆರಳಲಿದ್ದಾರೆ ಭಾರತೀಯ | Oneindia Kannada

English summary
In Davanagere district last ten days, the number of positives has increased. government has instructed to the health department officials to conduct the RTPCR examination within two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X