ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿ ಅಡಿಕೆ, ತೆಂಗು ಬೆಳೆಗಾರರ ಬದುಕು- ಬವಣೆ

By ರಮೇಶ್ ಎಚ್.ಕೆ., ಡಾ. ಎಂ. ಬಿ. ರಾಮಮೂರ್ತಿ
|
Google Oneindia Kannada News

ಕರ್ನಾಟಕದಲ್ಲಿ ಕೃಷಿಕರ ಸ್ಥಿತಿ ಹಾಗೂ ಕೃಷಿಯ ಸ್ಥಿತಿ ಹೇಗಿದೆ ಎಂಬುದನ್ನು ತೆರೆದಿಡುವ ಲೇಖನ ಹಾಗೂ ಸಂದರ್ಶನ ಇಲ್ಲಿದೆ. ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿಯ ರೈತರ ಪರಿಸ್ಥಿತಿ ಮಾತ್ರ ಹೀಗಿದೆ ಎಂದು ಅಂದುಕೊಳ್ಳುವಂತಿಲ್ಲ. "ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ" ಎಂಬ ಮಾತು ಹಳಸಲಾಗಿದೆ. ಸರಿ, ರೈತರು ಸಂತೋಷವಾಗಿದ್ದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆ ಪ್ರಶ್ನೆಯ ಹಿನ್ನೆಲೆಯಲ್ಲಿ ಈ ಲೇಖನ- ಸಂದರ್ಶನದ ವ್ಯಾಪ್ತಿ- ಹರಿವು ವಿಶಾಲವಾಗಿದೆ ಹಾಗೂ ಸಾಂದರ್ಭಿಕವಾಗಿದೆ. -ಸಂಪಾದಕ

ಕರಾವಳಿಯಲ್ಲೂ ಖರ್ಜೂರ ಬೆಳೆದ ಸಾದಿಕ್
***
ಕರ್ನಾಟಕವು ಮತ್ತೊಮ್ಮೆ ಅನಿಶ್ಚಿತತೆಯ ಮುಂಗಾರಿನ ಸಂಕಷ್ಟಕ್ಕೆ ಸಿಲುಕಿದ್ದು, ಕನಿಷ್ಠ 33 ಪರ್ಸೆಂಟ್ ನಷ್ಟು ಬೀಳಬೇಕಾಗಿದ್ದ ಮಳೆಯು ಕೇವಲ 17 ಪರ್ಸೆಂಟ್ ಗೆ ಕುಸಿದಿದೆ. ಮತ್ತೊಮ್ಮೆ ಬರಗಾಲ ಸಮಸ್ಯೆಯನ್ನು ರಾಜ್ಯವು ಎದುರಿಸುತ್ತಿದೆ.

Challenges facing by Davangere district Mayakonda hobli farmers

ಈಗ ಬಿದ್ದಿರುವ ಮಳೆಯು ಮಳೆ ಆಧಾರಿತವಲ್ಲದ ಮತ್ತು ನೀರಾವರಿ ಅನುಕೂಲವಿರುವ ಪ್ರದೇಶಗಳಿಗೆ ಕೃಷಿಗಾಗಿ ಒಂದಷ್ಟು ನೀರನ್ನು ಒದಗಿಸುವ ವ್ಯವಸ್ಥೆಯನ್ನು ಹೊಂದಿದ್ದು, ಕೃಷಿಗೆ ಮಳೆಯನ್ನೇ ನಂಬಿಕೊಂಡಿರುವ ಮಳೆಯಾಧಾರಿತ ಪ್ರದೇಶಗಳಲ್ಲಿ ಈಗಾಗಲೇ ಬಹು ಕನಸಿಟ್ಟುಕೊಂಡು ಬೆಳೆದವರು ತಮ್ಮ ತೋಟವನ್ನೇ ಕಳೆದುಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ.

ಈ ಪೈಕಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯನ್ನು ನೋಡುವಾಗ ಅಲ್ಲಿನ ಪ್ರದೇಶದ ಬೆಳೆಗಾರರು ಸಂಪೂರ್ಣವಾಗಿ ತಮ್ಮ ತೋಟಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಸಿಲುಕಿದ್ದಾರೆ. ಈಗಾಗಲೇ ಒಂದಾದ ಮೇಲೊಂದರಂತೆ ತೋಟಗಳು ಒಣಗಿ ಹೋಗುತ್ತಿದ್ದು, ಭೂಮಿಯನ್ನು ನಂಬಿ ಬದುಕುತ್ತಿರುವ ಅಡಿಕೆ ಬೆಳೆಗಾರರ ಬದುಕಿನಲ್ಲಿ ಆತಂಕ ಮನೆ ಮಾಡುತ್ತಿದೆ.

ಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳುಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳು

ಹೀಗಾಗಿಯೇ ಅಲ್ಲಿನ ರೈತರು ಭೂಮಿಯನ್ನು ನಂಬಿ ಬದುಕಲಾರದ ಸ್ಥಿತಿಗೆ ನಿಧಾನವಾಗಿ ತಲುಪುತ್ತಿದ್ದು, ಇರುವ ಭೂಮಿಯನ್ನು ಮಾರಿಕೊಂಡು ಪಟ್ಟಣಕ್ಕೆ ವಲಸೆ ಬರುವ ಆಲೋಚನೆ ಬರಲು ಆರಂಭವಾಗಿದೆ.

Challenges facing by Davangere district Mayakonda hobli farmers

ಅಡಿಕೆ ತೋಟಗಳ ವಾಸ್ತವ ಸ್ಥಿತಿ
ದಾವಣಗೆರೆಯಿಂದ ಸುಮಾರು 25 ಕಿಲೋಮೀಟರ್ ಮುಂದೆ ಬಂದರೆ ಅಲ್ಲಿ ಎದುರಾಗುವ ಆನಗೋಡು ಪ್ರದೇಶದಿಂದ ಬಹುತೇಕ ಹೊಳಲ್ಕೆರೆವರೆಗೂ ಇರುವ ಊರುಗಳಲ್ಲಿ ಅಡಿಕೆ ಬೆಳೆದ ರೈತರು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ನೀರಿನ ಸಮಸ್ಯೆಯಿಂದ ತಮ್ಮ ತೋಟಗಳನ್ನು ಕಳೆದುಕೊಂಡವರು ಕೈಚೆಲ್ಲಿ ಕೂತಿದ್ದರೆ, ಉಳಿದವರು ತಮ್ಮ ಕಣ್ಣೆದುರೇ ನಶಿಸುತ್ತಿರುವ ತೋಟವನ್ನು ನೋಡಲಾರದೆ ಅಸಹಾಯಕತೆಯಿಂದ ಕೂತಿದ್ದು, ಮಳೆರಾಯನಿಗಾಗಿ ಕಾದಿದ್ದಾರೆ.

ತೋಟಗಳ ಪರಿಸ್ಥಿತಿಯು ಹೀಗಾದರೆ, ಭತ್ತ, ರಾಗಿ ಹಾಗೂ ಮೆಕ್ಕೆಜೋಳವನ್ನು ಬೆಳೆಯುವವರ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಅವರೂ ಕಷ್ಟಪಟ್ಟು ಬೆಳೆಗಳನ್ನು ಬೆಳೆದು, ಸೂಕ್ತ ಬೆಲೆ ಸಿಗದೇ, ಉತ್ತಮ ಬೆಲೆಗಳು ಬರುವವರೆಗೂ ಕಾಯಲೂ ಆಗದೇ ಸಿಕ್ಕ ಬೆಲೆಗೆ ಮಾರಾಟ ಮಾಡುವ ಸಾಂಪ್ರದಾಯಿಕ ಸ್ಥಿತಿಯಲ್ಲೇ ಬದುಕು ನಡೆಸಿದ್ದಾರೆ.

Challenges facing by Davangere district Mayakonda hobli farmers

ಬತ್ತಿದ ಮಾಯಕೊಂಡ ಕೆರೆ, ಕಾಣೆಯಾದ ಬೋರ್ ವೆಲ್ ನೀರು
ಭದ್ರಾ ಅಣೆಕಟ್ಟಿನಿಂದ ಹರಿಯುವ ನೀರಿನ ಮೂಲದಿಂದ ಸದಾ ತುಂಬುತ್ತಿದ್ದ ಮಾಯಕೊಂಡದ ಕೆರೆಯು ಸಂಪೂರ್ಣ ಬತ್ತಿಹೋಗಿದ್ದು, ಬಿರುಕು ಬಿಟ್ಟ ಸ್ಥಿತಿಯಲ್ಲಿದೆ. ಇದರ ಪರಿಣಾಮದಿಂದಾಗಿ ಇಂದು ಮಾಯಕೊಂಡ ಸುತ್ತಲ ಗ್ರಾಮಗಳಾದ ಹೆದ್ನೆ, ಆಲೂರು, ಬಸವಾಪುರ, ಆನಗೋಡು, ಅಣಬೇರು, ಬಾಡ ಹಾಗೂ ಸುತ್ತಮುತ್ತಲ ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ.

ಮಧ್ಯರಾತ್ರಿವರೆಗೆ ಸಂಸದರು ಲೋಕಸಭೆಯಲ್ಲಿ ಚರ್ಚಿಸಿದ ವಿಷಯವೇನು?ಮಧ್ಯರಾತ್ರಿವರೆಗೆ ಸಂಸದರು ಲೋಕಸಭೆಯಲ್ಲಿ ಚರ್ಚಿಸಿದ ವಿಷಯವೇನು?

ಸಾವಿರಾರು ರುಪಾಯಿಗಳನ್ನು ಬೋರ್ ವೆಲ್ ಗಳಿಗಾಗಿಯೇ ಖರ್ಚು ಮಾಡಿದ್ದಾರೆ. ಕೆರೆ ನೀರು ಸಂಪೂರ್ಣವಾಗಿ ಬತ್ತಿ ಹೋದ ಪರಿಣಾಮದಿಂದ ಅವುಗಳು ಸಹ ವಿಫಲಗೊಂಡಿವೆ. ಮುಂದೆ ತೆಗೆಸುವ ಬೋರ್ ಬೆಲ್ ಗಳಲ್ಲಿಯೂ ನೀರು ಬರುವುದೆಂಬ ಯಾವುದೇ ಭರವಸೆ ಇಲ್ಲದ ಕಾರಣದಿಂದಾಗಿ ಅಲ್ಲಿನ ಅಡಿಕೆ ಮತ್ತು ತೆಂಗು ಬೆಳೆಗಾರರು ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುತ್ತಿಲ್ಲ.

ನಾಶವಾದ ನೂರಾರು ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳು
ಮಳೆ ಕೊರತೆ ಹಾಗೂ ಸೂಕ್ತವಾದ ನೀರಿನ ಪೂರೈಕೆಯಿಲ್ಲದ ಕಾರಣದಿಂದಾಗಿ ಇಲ್ಲಿನ ಸುಮಾರು 800- 900 ಎಕರೆಗೂ ಹೆಚ್ಚಿನ ಅಡಿಕೆ ತೋಟವು ಒಣಗಿ ಹೋಗಿದ್ದು, ಕೆಲ ರೈತರು ಎರಡು- ಮೂರು ಬಾರಿ ತೋಟವನ್ನು ಕಳೆದುಕೊಂಡು, ಮರು ನಿರ್ಮಿಸಿ ಕೈ ಸುಟ್ಟು ಕೊಂಡಿದ್ದಾರೆ. ಮಾಯಕೊಂಡದ ಸುತ್ತ ಮುತ್ತಲ ಗ್ರಾಮಗಳ ಜೊತೆ ಹೊಳಲ್ಕೆರೆಯ ಮಾರ್ಗದಲ್ಲಿರುವ ಅಡಿಕೆ ಹಾಗೂ ತೆಂಗಿನ ತೋಟಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ರೈತರ ಬದುಕಿನ ಮೇಲೆ ಕರಾಳ ನೆರಳು ಬೀರುವಂತೆ ಮಾಡಿದೆ.

Challenges facing by Davangere district Mayakonda hobli farmers

ಭದ್ರಾ ಯೋಜನೆಯ ನೆರವಿಗೆ ಕಾದಿರುವ ರೈತರು
ಅಣಬೇರು ಮಾರ್ಗವಾಗಿ ತರಲು ಯೋಜಿಸಲಾಗಿರುವ ಭದ್ರಾ ನದಿ ನೀರು ಪೂರೈಕೆ ಯೋಜನೆ ಏನಾದರೂ ಯಶಸ್ವಿಯಾಗಿ ಜಾರಿಗೊಂಡರೆ ತಮಗೆ ನಿಜಕ್ಕೂ ಅನುಕೂಲವಾಗಲಿದೆ ಎಂಬುದನ್ನು ಈ ಭಾಗದ ಜನರು ಹೇಳುತ್ತಿದ್ದು, ಈ ಬಗ್ಗೆ ಸರಕಾರದಿಂದ ಹೆಚ್ಚಿನ ಸ್ಪಂದನೆಯನ್ನು ನಿರೀಕ್ಷಿಸುತ್ತಿದ್ದಾರೆ.

ಹೀಗಾಗಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಆಲೋಚನೆಯನ್ನು ಮಾಡುತ್ತಿರುವ ಸರಕಾರಗಳು ರೈತರ ಇಂತಹ ಮೂಲಭೂತ ಅಗತ್ಯಗಳ ಕಡೆಗೂ ಗಮನ ಹರಿಸಬೇಕಾದ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

Challenges facing by Davangere district Mayakonda hobli farmers

ಕೃಷಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ
ಬೆಳೆ- ಭೂಮಿಯನ್ನು ಕಳೆದುಕೊಂಡು ರೈತರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನೀರನ್ನು ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಕೃಷಿ ಅಧಿಕಾರಿಗಳಾಗಲೀ ಅಥವಾ ದಾವಣಗೆರೆ ಜಿಲ್ಲಾಡಳಿತವಾಗಲೀ ಸೂಕ್ತವಾಗಿ ಸ್ಪಂದಿಸದೇ ನಿರ್ಲಕ್ಷ್ಯ ತೋರಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಕನಿಷ್ಠ ಪಕ್ಷ ಕೆರೆ ಸಂಜೀವಿನಿಯಂತಹ ಯೋಜನೆಗಳನ್ನು ಬಳಸಿಕೊಂಡು ಸ್ಥಳೀಯ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದರೆ ರೈತರ ಕೃಷಿ ಭೂಮಿ ಹಾಗೂ ಅಲ್ಲಿನ ಬೋರ್ ವೆಲ್ ಗಳಿಗೆ ಹೆಚ್ಚಿನ ಜೀವ ಬರುತ್ತದೆ.

ರೈತ ವಿಜಯ್ ಕುಮಾರ್ ಸಂದರ್ಶನ
ಸಂದರ್ಶಕರು: ಸರ್, ತಮ್ಮ ಪರಿಚಯವನ್ನು ಹೇಳಿ.
ವಿಜಯ್ ಕುಮಾರ್ : ನಮಸ್ಕಾರ ಸರ್, ನಾನು ವಿಜಯ್ ಕುಮಾರ್. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ, ಹೆದ್ನೆ ಗ್ರಾಮದ ಒಬ್ಬ ರೈತ. ಈ ದಿನ ತಮ್ಮ ಜೊತೆ ನಾನೊಬ್ಬ ರೈತನಾಗಿ, ನಮ್ಮ ಸುತ್ತಲ ರೈತರ ಪರಿಸ್ಥಿತಿ ಹಾಗೂ ಅಲ್ಲಿನ ಬೆಳೆಗಳ ಪರಿಸ್ಥಿತಿಯ ಬಗ್ಗೆ ಮಾತನಾಡ್ತೀನಿ.

ಸಂದರ್ಶಕರು: ಯಾವ ರೀತಿಯ ಕೃಷಿ ಸಮಸ್ಯೆಯು ಇಲ್ಲಿನ ರೈತರನ್ನು ಬಾಧಿಸುತ್ತಿದೆ ?
ವಿಜಯ್ ಕುಮಾರ್: ಈ ಭಾಗದಲ್ಲಿ ಏನಾಗಿದೆ ಅಂದರೆ ನಮ್ಮದು ಮಳೆಯಾಶ್ರಿತವಾಗಿ ಬೆಳೆಯುತ್ತಾ ಇರುವಂಥ ಭೂಮಿಗಳು. ಆದರೆ ನಾಲ್ಕು ವರ್ಷಗಳಿಂದ ಸರಿಯಾದ ಮಳೆಯಿಲ್ಲ. ಹೀಗಾಗಿಯೇ ನಾವು ಕಷ್ಟ ಪಟ್ಟು ಬೆಳೆಸುತ್ತಿರುವ ತೋಟ ಹಾಗೂ ಬೆಳೆಗಳು ಒಣಗಿ ಹೋಗುತ್ತಾ ಇವೆ. ಈ ಒಣಗುವ ತೋಟಗಳನ್ನು ನೋಡುತ್ತಾ ಇರುವ ನಮ್ಮ ರೈತರು ತೀರಾ ಸಂಕಟದಲ್ಲಿ ಇದ್ದಾರೆ.

ಇಲ್ಲಿ ನೀರಾವರಿಯಂತೂ ಮೊದಲೇ ಇಲ್ಲ. ಬೋರ್ ವೆಲ್ ಅನ್ನು 100 ರಿಂದ 1000 ಅಡಿಯವರೆಗೆ ಕೊರೆಸಿದರೂ ನೀರು ಬರುತ್ತಾ ಇಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಅಂತರ್ಜಲ ಕಡಿಮೆ ಆಗಿದೆ. ಇಲ್ಲಿ ಚಾನಲ್, ವ್ಯವಸ್ಥೆಯಿಲ್ಲ, ಕೆರೆಯಲ್ಲಂತೂ ಮೊದಲೇ ನೀರಿಲ್ಲ. ಹೀಗಾಗಿ ಇಲ್ಲಿನ ರೈತರು ಕಂಗಾಲಾಗಿ ತಮ್ಮ ತೋಟಗಳನ್ನು ಕಡಿದು ಹಾಕುವ ಪರಿಸ್ಥಿತಿಗೆ ಬಂದಿದ್ದಾರೆ.

ನಮ್ಮಲ್ಲಿ ಒಣಗಿದ, ಫಸಲಿಲ್ಲದ ತೋಟಗಳು ಈಗ ಇದ್ದು, ಕೃಷಿಯನ್ನೇ ನಂಬಿ ಬದುಕು ಮಾಡುವ ರೈತನಿಗೆ ಯಾವುದೇ ಆದಾಯ ಇಲ್ಲದಂತಾಗಿದೆ. ಸಾಲ ಮಾಡಿಕೊಂಡು, ಅದನ್ನು ತೀರಿಸಲಾರದೇ ಜೀವ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಸರಕಾರ ಆಗಲೀ ಅಧಿಕಾರಿಗಳಾಗಲೀ ಯಾರೂ ಗಮನ ಹರಿಸುತ್ತಾ ಇಲ್ಲ.

ರೈತರ ಪರಿಸ್ಥಿತಿ ಏನಾಗಿದೆ, ಬಿತ್ತನೆ ಬೀಜ- ಗೊಬ್ಬರದ ಬೆಲೆ ಏನಿದೆ, ಬೆಳೆದಿರುವ ಬೆಳೆಗೆ ಬೆಲೆ ಸಿಗುತ್ತಾ ಇದೆಯೋ ಇಲ್ಲವೋ ಎಂಬ ಬಗ್ಗೆ ಯಾರಿಗೂ ಗಮನವಿಲ್ಲ. ಹೀಗಾಗಿ ಪರಿಹಾರ ನೀಡುವುದು ಒತ್ತಟ್ಟಿಗಿರಲಿ, ನಮ್ಮ ಮಾತನ್ನು ಸಹ ಯಾರೂ ಕೇಳಿಸಿಕೊಳ್ಳದ ಸ್ಥಿತಿಗೆ ಬಂದಿದ್ದು, ಅವರದೇ ರಾಜಕೀಯ ಮೇಲಾಟದಲ್ಲಿ ಮುಳುಗಿದ್ದಾರೆ.

ಸಂದರ್ಶಕರು: ಸರಕಾರದಿಂದ ನಿಮ್ಮ ನಿರೀಕ್ಷೆಗಳು ಏನು ?
ವಿಜಯ್ ಕುಮಾರ್: ಅದನ್ನು ಈಗ ಮಾತನಾಡಲು ಹೋದರೆ ತಪ್ಪಾಗುತ್ತದೆ. ಏಕೆಂದರೆ, 10 ವರ್ಷಗಳ ಹಿಂದೆ ಸರಿಯಾಗಿ ಕೆರೆಗಳನ್ನು ತುಂಬುವ ಮತ್ತು ನೀರಾವರಿ ಸೌಲಭ್ಯಗಳನ್ನು ಮಾಡಿಕೊಟ್ಟು, ಅದನ್ನು ಸರಿಯಾಗಿ ನಿರ್ವಹಿಸಿದ್ದರೆ ನಿಜಕ್ಕೂ ಈ ಗತಿ ಬರುತ್ತಾ ಇರಲಿಲ್ಲ.

ಸಂದರ್ಶಕರು: ಕಳೆದ ಸರಕಾರದ ಕೆರೆ ಸಂಜೀವಿನಿ ಯೋಜನೆಯು ನಿಮ್ಮ ಭಾಗದಲ್ಲಿ ಅಳವಡಿಕೆ ಆಗಿಲ್ಲವಾ?
ವಿಜಯ್ ಕುಮಾರ್: ಆಗಿದೆ. ಆದರೆ ಇಲ್ಲಿ ಕಳಪೆ ಕಾಮಗಾರಿಯ ಸಮಸ್ಯೆಯಿಂದಾಗಿ, ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಹಾಗೂ ಇನ್ನಿತರೆ ಸರಬರಾಜು ವ್ಯವಸ್ಥೆಗಳನ್ನು ನದಿ ತುಂಬಿದಾಗ ಯೋಜಿತವಾಗಿ ಮಾಡದೇ ಈಗ ಮಾಡಲು ಹೊರಟಿರುವ ಪರಿಣಾಮ ಕೆರೆಗಳಿಗೆ ಸೂಕ್ತವಾಗಿ ನೀರು ಬರುತ್ತಾ ಇಲ್ಲ.

ಮಳೆಗಾಲದಲ್ಲಿ ಎಷ್ಟೊಂದು ನದಿ ನೀರು ಪೋಲಾಗುತ್ತಲೇ ಇದೆ. ನನಗೆ ತಿಳಿದಂತೆ ಇಲ್ಲಿಯವರೆಗೂ ಆ ನೀರನ್ನು ಸಂಗ್ರಹಿಸಿ ಈ ಭಾಗದ ರೈತರಿಗೆ ಒದಗಿಸುವ ಕೆಲಸ ಆಗಿಲ್ಲ. ದಕ್ಷರಲ್ಲದ ಮತ್ತು ದೂರದೃಷ್ಟಿಯಿಲ್ಲದ ಗುತ್ತಿಗೆದಾರರಿಗೆ ಈ ನೀರಾವರಿ ವ್ಯವಸ್ಥೆಯ ನಿರ್ಮಾಣ ಮಾಡುವ ಜವಾಬ್ದಾರಿ ವಹಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ನಮಗೆ ನೀರನ್ನು ಒದಗಿಸುವ ಯೋಜನೆಯ ಪ್ರಸ್ತಾಪವಿದೆ. ಹೀಗಾಗಿ ಸರಕಾರವು ಬೇಗನೇ ಎಚ್ಚೆತ್ತು, ಈ ಯೋಜನೆಯನ್ನು ನಮಗೆ ತಲುಪಿಸುವ ಜವಾಬ್ದಾರಿಯನ್ನು ತೋರಬೇಕಿದೆ.

ಸಂದರ್ಶಕರು: ನಿಮ್ಮ ಕ್ಷೇತ್ರದ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿದ್ದೀರಾ, ಸಲ್ಲಿಕೆ ಮಾಡಿದ್ದರೆ ಅವರ ಪ್ರತಿಕ್ರಿಯೆ ಏನು?
ವಿಜಯ್ ಕುಮಾರ್: ಹಲವು ಬಾರಿ ಹೇಳಿಕೊಂಡಿದ್ದೇವೆ. ಆದರೆ ನಮ್ಮ ಮಾಯಕೊಂಡ ಕ್ಷೇತ್ರದ ಶಾಸಕ ಬಿಜೆಪಿ ಪಕ್ಷದ ಲಿಂಗಣ್ಣನವರು ಆಗಿದ್ದು, ಇದುವರೆಗೂ ಯಾವ ಹಳ್ಳಿಗೂ ಬಂದಿಲ್ಲ. ನಿಮ್ಮ ಹಳ್ಳಿಯ ಪರಿಸ್ಥಿತಿ ಏನಾಗಿದೆ ಅಂತ ಕೇಳಿಲ್ಲ. ರಸ್ತೆ ಸರಿ ಮಾಡಿಸುವುದಾಗಲೀ ಅಥವಾ ಪೂರಕವಾಗಿ ವ್ಯವಸ್ಥೆಗಳನ್ನು ಕಲ್ಪಿಸುವುದಾಗಲೀ ಯಾವ ಕೆಲಸವನ್ನೂ ಮಾಡುತ್ತಾ ಇಲ್ಲ. ಹೀಗಾಗಿ ಇಂಥವರ ಮೇಲೆ ಬೇಸತ್ತು, ಎಂತಹ ನಾಯಕರನ್ನು ಆರಿಸಬೇಕು ಎಂದು ನಾವು ಕಾಯುತ್ತಾ ಇದ್ದೇವೆ.

ಸಂದರ್ಶಕರು: ನೀವೊಬ್ಬ ಕೃಷಿಕರಾಗಿ ಈ ಸಂದರ್ಭಕ್ಕೆ ಎಂತಹ ನೀರಾವರಿ ಸೌಲಭ್ಯ ಅಗತ್ಯವಿದೆ ಎಂದು ಭಾವಿಸುತ್ತೀರಾ?
ವಿಜಯ್ ಕುಮಾರ್: ಈಗ ಏನಾಗಿದೆ ಅಂದರೆ ನಮ್ಮೂರಿಗೆ 7 ಕಿ.ಮೀ. ದೂರದಲ್ಲಿ ಭದ್ರಾ ಡ್ಯಾಂ ನ ಚಾನಲ್ ವ್ಯವಸ್ಥೆ ಇದ್ದು, ಅದು ಅಣಬೇರುವಿನ ಬಳಿ ಇದೆ. ಅಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಹರಿದು ಹೋಗಿ ವ್ಯರ್ಥ ಅಗುವ ನೀರನ್ನು ನಮ್ಮ ಭಾಗಕ್ಕೆ ನೀಡಬಹುದು. ಹೀಗಾಗಿ ಸರಕಾರವು ಇಲ್ಲಿ ತೂಬೆತ್ತದೆ, ಹೆಚ್ಚಾಗಿ ಹರಿಯುವ ನೀರನ್ನು ಇತ್ತ ಕಡೆ ತಿರುಗಿಸಿ, ನಮ್ಮ ಕೆರೆಗಳನ್ನು ತುಂಬಿಸಿದರೆ ಅನುಕೂಲವಾಗುತ್ತದೆ ಮತ್ತು ಈ ಭಾಗದ ಬೆದ್ದಲು ಭೂಮಿಯ ರೈತರು ಬದುಕಲು ಸಾಧ್ಯವಿದೆ.

ಸಂದರ್ಶಕರು: ನಿಮ್ಮೂರಲ್ಲಿ ಹೊಸದಾಗಿ ಉಗ್ರಾಣಗಳನ್ನು ನಿರ್ಮಿಸಿದ್ದಾರೆ. ಇವು ರೈತರಿಗೆ ಅನುಕೂಲವಾಗುತ್ತಿದೆಯೇ?
ವಿಜಯ್ ಕುಮಾರ್: ನಮ್ಮ ಭಾಗದ ರೈತರು ಉಗ್ರಾಣದಲ್ಲಿ ತಮ್ಮ ಬೆಳೆಗಳನ್ನು ಇಟ್ಟುಕೊಂಡು, ಮಾರುವಷ್ಟು ಸಮಯವನ್ನು ಹೊಂದಿಲ್ಲ. ಏಕೆಂದರೆ ಜೀವನ ನಡೆಸಲೇ ಬೇಕಾದ ತೊಂದರೆಗೆ ಸಿಲುಕಿರುತ್ತಾರೆ. ಹಾಗಾಗಿ ಆರು ತಿಂಗಳುಗಟ್ಟಲೆ ಕಾಯುವಷ್ಟು ಸಾಮರ್ಥ್ಯ ಇಲ್ಲ.

ಸಂದರ್ಶಕರು: ಸರಕಾರದ ಸಾಲಮನ್ನಾ ಯೋಜನೆಯಿಂದ ನಿಮಗೆ ಅನುಕೂಲ ಆಗಿಲ್ಲವಾ ?
ವಿಜಯ್ ಕುಮಾರ್: ಸಾಲಮನ್ನಾದಿಂದ ನಿರೀಕ್ಷಿತವಾಗಿ ಅನುಕೂಲ ಆಗಿಲ್ಲ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ನಮ್ಮದು ಆಗಿದೆ ಎಂದು ಹೇಳುವ ಸಂದರ್ಭವಿದೆ. ಇನ್ನು ಬಹಳ ಜನರ ಬಾಯಲ್ಲಿ "ನಮ್ಮ ಸಾಲ ಮನ್ನಾ ಆಗಿಲ್ಲ" ಎಂಬ ಮಾತುಗಳು ಬರುತ್ತಾ ಇವೆ.

English summary
Karnataka farmers facing various problems. Here is the sample picking from Davanagere district, Mayakonda hobli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X