120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ
ದಾವಣಗೆರೆ, ಜನವರಿ 18: ನಷ್ಟದಲ್ಲಿರುವ ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳನ್ನು ಲಾಭದಾಯಕವಾಗಿ ಬೆಳೆಸಲು ನನ್ನದೇ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ತಿಳಿಸಿದರು.
ದಾವಣಗೆರೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿಂದು ನಡೆದ 120 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ 2 ಸಾವಿರ ಕೋಟಿ ನಷ್ಟ ಸೇರಿದಂತೆ ಸುಮಾರು 4 ಸಾವಿರ ಕೋಟಿ ನಷ್ಟದಿಂದ ಸಾರಿಗೆ ಇಲಾಖೆ ಸೊರಗಿ ಹೋಗಿದೆ. ಹಾಗಂತ ನೌಕರರು ಆತಂಕಪಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಕೆ.ಎಸ್.ಆರ್.ಟಿ.ಸಿ ನೌಕರರನ್ನು ಬೀದಿಗೆ ಬೀಳಲು ನಾನು ಬಿಡುವುದಿಲ್ಲ. ಈಗ ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ಬೆಳೆಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಚಾಲಕ, ನಿರ್ವಾಹಕರೇ ನಮ್ಮ ಬಸ್ಸುಗಳಿಗೆ ಕಲ್ಲು ಎಸೆದಿದ್ದು
ನಮ್ಮ ಚಾಲಕ ಹಾಗೂ ನಿರ್ವಾಹಕರೇ ನಮ್ಮ ಬಸ್ಸುಗಳಿಗೆ ಕಲ್ಲು ಎಸೆದಿದ್ದು, ನನಗೆ ತೀವ್ರ ಬೇಸರ ತಂದಿದೆ. ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪಲ್ಲ. ಆದರೆ ಪ್ರತಿಭಟನೆ ನಡೆಸಿದ ಸಂದರ್ಭ ಸರಿಯಲ್ಲ. ನಿಮಗೆ ಅನ್ನ ನೀಡಿದ ಬಸ್ಸುಗಳಿಗೆ ಕಲ್ಲು ಎಸೆದು, ನಿಮ್ಮ ಬದುಕಿಗೆ ಕಲ್ಲು ಹಾಕಿಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು ಸರಿಯಲ್ಲ. ನೀವು ಮುಂದೆಯು ಇಂತಹ ವರ್ತನೆಯನ್ನು ಮುಂದುವರೆಸಿದರೆ ನಿಮ್ಮ ಜೀವನವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಧಾರವಾಡ ಅಪಘಾತ; ಮೃತಪಟ್ಟವರ ಕುಟುಂಬದ ಆಕ್ರೋಶಕ್ಕೆ ಕಾರಣವೇನು?

ಚಾಲಕರಿಗೆ ರಾಜ್ಯದ ನಾಲ್ಕು ಕಡೆಗಳಲ್ಲಿ ತರಬೇತಿ
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ 300 ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಲಾಗುವುದು. ಒಂದು ಎಲೆಕ್ಟ್ರಿಕಲ್ ಬಸ್ ಬೆಲೆ 2 ಕೋಟಿ ಇದ್ದು, ಇದನ್ನು ಖರೀದಿಸುವ ಕಂಪನಿಗೆ ಕೇಂದ್ರ ಸರ್ಕಾರ 50 ಲಕ್ಷ ರೂ. ಸಹಾಯಧನ ನೀಡಲಿದೆ. ಬಸ್ ಖರೀದಿಸಿ ಕೆ.ಎಸ್.ಆರ್.ಟಿ.ಸಿ ನೀಡುವ ಕಂಪನಿಗೆ ಕಿ.ಮೀಗೆ ಇಂತಿಷ್ಟು ದರ ನಿಗದಿ ಮಾಡಲಾಗುವುದು. ಅಲ್ಲದೆ, ಈ ಬಸ್ ಗಳ ಚಾಲನೆ ಮಾಡಲು ಚಾಲಕರಿಗೆ ರಾಜ್ಯದ ನಾಲ್ಕು ಕಡೆಗಳಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಂಕಷ್ಟದ ಹಿನ್ನೆಲೆ ಈಗ 20 ಸಾವಿರ ಬಸ್ಸುಗಳ ಓಡಾಟ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮಾತನಾಡಿ, ಯಾರದೋ ಮಾತು ಕೇಳಿ ಹೋರಾಟ ಮಾಡಿ, ಕೆ.ಎಸ್.ಆರ್.ಟಿ.ಸಿ ಮತ್ತು ಜನರಿಗೆ ತೊಂದರೆ ಕೊಟ್ಟ ನೌಕರರ ಕ್ರಮ ಸರಿಯಲ್ಲ. ಕೋವಿಡ್ ಸಂಕಷ್ಟದಿಂದ ಸಾರಿಗೆ ಸಂಸ್ಥೆ ಸಂಕಷ್ಟದಲ್ಲಿದೆ. ಡೀಸೆಲ್ ಖರ್ಚು ಸಹ ನಮಗೆ ಬರುತ್ತಿಲ್ಲ. ನಮ್ಮ ಸಂಸ್ಥೆಯಲ್ಲಿ 30 ಸಾವಿರ ಬಸ್ಸುಗಳಿವೆ. ಸಂಕಷ್ಟದ ಹಿನ್ನೆಲೆ ಈಗ 20 ಸಾವಿರ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಇನ್ನೂ ಹತ್ತು ಸಾವಿರ ಬಸ್ ಗಳು ಗ್ಯಾರೇಜ್ಗಳಲ್ಲಿ ಹಾಗೆಯೇ ನಿಂತಿವೆ ಎಂದರು.

ನೀರು ನಿಂತು ಅವ್ಯವಸ್ತೆಯ ಆಗರವಾಗುತ್ತಿತ್ತು
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಇಲ್ಲಿ ಅತ್ಯುತ್ತಮ ಬಸ್ ನಿಲ್ದಾಣ ಆರಂಭವಾಗಬೇಕು. ಚಾಲಕರು ಜಾಗರೂಕತೆಯಿಂದ ಬಸ್ ಓಡಿಸಿ ಕೆ.ಎಸ್.ಆರ್.ಟಿ.ಸಿಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು. ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಮಳೆ ಬಂದರೆ ಈ ಬಸ್ ನಿಲ್ದಾಣದಲ್ಲಿ ನೀರು ನಿಂತು ಅವ್ಯವಸ್ತೆಯ ಆಗರವಾಗುತ್ತಿತ್ತು. ಹೀಗಾಗಿ ಇಲ್ಲಿ ಸ್ಮಾರ್ಟ್ ಸಿಟಿಯಿಂದ 90 ಕೋಟಿ ರೂ. ಮತ್ತು ಕೆ.ಎಸ್.ಆರ್.ಟಿ.ಸಿಯಿಂದ 30 ಕೋಟಿ ರೂ. ಸೇರಿಸಿ ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು, ಕಳಪೆ ಕಾಮಗಾರಿ ನಡೆಯದಂತೆ ಗುತ್ತಿಗೆದಾರರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿವೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಬಸ್ ನಿಲ್ದಾಣ ಕಿತ್ತು ಹಾಕಿದರೆ, ಇತ್ತ ಕಡೆ ಸ್ಮಾರ್ಟ್ ಸಿಟಿಯವರು 9 ತಿಂಗಳು ತಿರುಗಿ ನೋಡುವುದಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿದ್ದು, ಇಲ್ಲೂ ವಿಳಂಬ ಮಾಡಬಾರದು. ನಿಗದಿತ 2 ವರ್ಷದ ಅವಧಿಯಲ್ಲಿ ಈ ಬಸ್ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಿದರೆ, ಅಧಿಕಾರಿಗೆ ಒಂದು ತೊಲ ಬಂಗಾರ ನೀಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ 27 ಜನ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕ ಎನ್.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾ ನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಎಸ್ಪಿ ಎಂ.ರಾಜೀವ್, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಸ್ಮಾರ್ಟ್ ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ ಮತ್ತಿತರರು ಉಪಸ್ಥಿತರಿದ್ದರು.