ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯಸನಮುಕ್ತ ರಾಜ್ಯವನ್ನಾಗಿ ಮಾಡುವಂತೆ ಹಿರಿಯೂರು ಯುವತಿಯಿಂದ ಪಾದಯಾತ್ರೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 21: ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವಂತೆ ಆಗ್ರಹಿಸಿ ಪ್ರಥಮ ಬಿ.ಎಸ್ಸಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಹಿರಿಯೂರಿನಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಸುಮಾರು 40 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾಳೆ.

ಹಿರಿಯೂರು ತಾಲ್ಲೂಕಿನ ಹೇಮದಳ ಗ್ರಾಮದ ಬಿ.ಎಸ್ಸಿ ಪದವಿ ವಿದ್ಯಾರ್ಥಿನಿ ಎಚ್.ಸಿ. ಲಾವಣ್ಯ ಹಿರಿಯೂರು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಕೈಗೊಂಡರು.

'ವ್ಯಸನದ ದಾಸನಾಗುವ ಬದಲು ಶಿಕ್ಷಣದ ದಾಸನಾಗು ಎಂಬ ಧ್ಯೇಯ ವಾಕ್ಯದೊಂದಿಗೆ' ವಿದ್ಯಾರ್ಥಿನಿ ಈ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ಹಿಂದೊಮ್ಮೆ ಈಕೆ 2016ರಲ್ಲಿ ಹೇಮದಳ ಗ್ರಾಮದಲ್ಲಿ "ಚಿತ್ರದುರ್ಗ ಜಿಲ್ಲೆಯಾದ್ಯಂತ ಬಯಲು ಶೌಚಾಲಯದಿಂದ ಮುಕ್ತಗೊಳಿಸಿ, ಗ್ರಾಮಗಳ ಪ್ರತಿಯೊಂದು ಮನೆಗಳಲ್ಲಿ ಗೃಹ ಶೌಚಾಲಯ ನಿರ್ಮಿಸಬೇಕು' ಎಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.

 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಡಿಸಿ

ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಡಿಸಿ

ಅಂದಿನ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಿನ ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ವಿದ್ಯಾರ್ಥಿನಿಯನ್ನು ಮನವೊಲಿಸಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದರು.

ಇನ್ನು ಪಾದಯಾತ್ರೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಎಚ್.ಸಿ. ಲಾವಣ್ಯ, "ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡಲು ಇಂದು ಹಿರಿಯೂರು ನಗರದಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಸುಮಾರು 40 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದೇನೆ.''

 ಮದ್ಯ ವ್ಯಸನಿಗಳಿಂದ ಕುಟುಂಬದಲ್ಲಿ ಕಲಹ

ಮದ್ಯ ವ್ಯಸನಿಗಳಿಂದ ಕುಟುಂಬದಲ್ಲಿ ಕಲಹ

"ರಾಜ್ಯದ ಅನೇಕ ಕುಟುಂಬಗಳಲ್ಲಿ ಮದ್ಯ ವ್ಯಸನಿಗಳಿಂದ ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದು, ಇಂತಹ ಮಾನವ ಬಲಿಯಿಂದ ಸರ್ಕಾರ ನಡೆಸುವ ಅವಶ್ಯಕತೆ ಇದೆಯಾ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಮಾನವನಿಗೆ ಮಾರಕವಾಗುವ ವಸ್ತುಗಳನ್ನು ನಿಷೇಧ ಮಾಡಿ, ಪೂರಕವಾಗುವ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುವಂತೆ ಸರ್ಕಾರ ಚಿಂತನೆ ನಡೆಸಬೇಕು," ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ಅಕ್ಕಪಕ್ಕದ ರಾಜ್ಯಗಳಲ್ಲಿ ವ್ಯಸನಗಳಿಗೆ ಬಳಕೆಯಾಗುವ ವಸ್ತುಗಳನ್ನು ನಿಷೇಧ ಮಾಡಿ ಸರ್ಕಾರ ನಡೆಸುತ್ತಿಲ್ಲವೆ? ಎಂದು ಪ್ರಶ್ನಿಸಿದ ವಿದ್ಯಾರ್ಥಿನಿ ಲಾವಣ್ಯ, ನಮ್ಮ ರಾಜ್ಯದಲ್ಲಿ ಅನೇಕ ಹೆಣ್ಣುಮಕ್ಕಳು ಶಾಲೆಗಳನ್ನು ತೊರೆದು ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಕೊಲೆ, ಅತ್ಯಾಚಾರಗಳಂತಹ ಹೀನ ಕೃತ್ಯಗಳನ್ನು ನೋಡುತ್ತಲೇ ಬಂದಿದ್ದೇವೆ," ಎಂದು ತಿಳಿಸಿದರು.

 ಕಾನೂನಿನ ಭಯವಿಲ್ಲದೆ ಮದ್ಯಪಾನ ಮಾರಾಟ

ಕಾನೂನಿನ ಭಯವಿಲ್ಲದೆ ಮದ್ಯಪಾನ ಮಾರಾಟ

"ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಮದ್ಯಪಾನ ಮಾರಾಟ ಮಾಡುತ್ತಿದ್ದು, ಮದ್ಯಪಾನ ಕುಡಿತಕ್ಕೆ ಬಲಿಯಾದ ವ್ಯಕ್ತಿಗಳು ಎರಡು ವರ್ಷದ ಹೆಣ್ಣು ಮಗುವಿನಿಂದ ಹಿಡಿದು 60ರಿಂದ 70 ವರ್ಷದ ವೃದ್ಧೆಯಂತವರ ಮೇಲೆ ಅತ್ಯಾಚಾರ ಹಾಗೂ ಕೊಲೆಗಳಂತಹ ಹೀನ ಕೃತ್ಯಗಳನ್ನು ಮಾಡುತ್ತಲೇ ಬಂದಿದ್ದೇವೆ."

"ನಮ್ಮ ಮನೆಯ ಮುಂದೆಯೇ ಮದ್ಯಪಾನ ಮಾರುತ್ತಿದ್ದು, ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಕೊಡುತ್ತಿದ್ದರು. ನಮ್ಮ ಹಳ್ಳಿಯಲ್ಲಿ ಹೀಗೆ ಆದರೆ, ರಾಜ್ಯದಲ್ಲಿ ಎಷ್ಟು ಜನ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಚಿಂತನೆ ನಡೆಸಿ, ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಬೇಕು," ಎಂದು ಸರ್ಕಾರಕ್ಕೆ ಮನವಿ ಮಾಡಿದರು.

 ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡಿಲ್ಲ

ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡಿಲ್ಲ

"ನಾನು ಕೇವಲ ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡಿಲ್ಲ, ನನ್ನ ಹೆಸರಿನ ಉಸಿರು ಇರುವವರೆಗೂ ಹೋರಾಟ ಸದಾ, ಸಮಾಜದ ಸೇವೆಗಾಗಿ, ಹೆಣ್ಣುಮಕ್ಕಳ ಶಿಕ್ಷಣ, ಮಾನ, ಪ್ರಾಣ ಉಳಿಸುವುದಕ್ಕಾಗಿ ಈ ಹೋರಾಟವನ್ನು ಕೊನೆಯತನಕ ಮುಂದುವರೆಸಿಕೊಂಡು ಹೋಗುತ್ತೇನೆಂದು," ಮಾಧ್ಯಮಗಳಿಗೆ ಉತ್ತರಿಸಿದರು.

ಈ ಪಾದಯಾತ್ರೆಗೆ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ, ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಎಬಿವಿಪಿ ಮುಖಂಡ ಯೋಗೇಶ್, ಶ್ರೀನಿವಾಸ್ ಮಸ್ಕಲ್, ದಾದಾಪೀರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಪಾದಯಾತ್ರೆಗೆ ತಂದೆ ಚನ್ನಕೇಶವಪ್ಪ, ಲಾವಣ್ಯ ಸಹೋದರರು ಸಾಥ್ ನೀಡಿದರು.

Recommended Video

ಪಾಕಿಸ್ತಾನದ ಈ ಆಟಗಾರರ ಮೇಲೆ ಒಂದು ಕಣ್ಣಿಡಿ | Oneindia Kannada

English summary
First B.Sc Student to do 40-kilometer Padayatra from Hiriyur to Chitradurga District Administrative office for demanding that Karnataka be made a state of addiction-free state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X