ಯುವತಿ ಅಪಹರಣ ಆರೋಪ: ಯುವಕರನ್ನು ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ
ಚಿತ್ರದುರ್ಗ, ನವೆಂಬರ್ 20: ಯುವಕರ ಗುಂಪೊಂದು ಹುಡುಗಿಯ ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿ ದಾಂಧಲೆ ನಡೆಸಿ, ಹುಡುಗಿಯನ್ನು ಅಪಹರಿಸಲು ಪ್ರಯತ್ನ ನಡೆಸಿದ ಯುವಕರನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಸಮುಚ್ಚುಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಪ್ರತಾಪ್ ಹಾಗೂ ಆತನ ಸ್ನೇಹಿತರು ಹೊಸಮುಚ್ಚುಕುಂಟೆ ಗ್ರಾಮದ ಯುವತಿಯನ್ನು ಪ್ರೀತಿಯ ನೆಪದಲ್ಲಿ ಅಪಹರಿಸಲು ಬಂದಿದ್ದರು ಎಂದು ತಿಳಿದುಬಂದಿದೆ.
ಚಿತ್ರದುರ್ಗದಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು
ಈ ಹಿಂದೆ ಹುಡುಗಿ ಕಾಣೆಯಾಗಿದ್ದಾಳೆಂದು ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನಂತರ ಹುಡುಗಿ ಪತ್ತೆಯಾದಾಗ ಪ್ರತಾಪನು ಹುಡುಗಿಯನ್ನು ಕರೆದುಕೊಂಡು ಹೋಗಿದ್ದನು ಎಂದು ತಿಳಿದಿದ್ದು, ಇವರಿಬ್ಬರ ಮಧ್ಯೆ ರಾಜಿ ಸಂಧಾನ ಮೂಲಕ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು.
ಆದರೆ ಇವರಿಬ್ಬರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ನವೆಂಬರ್ 16, 2020 ರಂದು ಹುಡುಗಿ ಪ್ರಿಯಕರನನ್ನು ದೂರವಾಣಿ ಮೂಲಕ ತನ್ನ ಊರಿಗೆ ಕರೆಸಿಕೊಂಡು ಊರಿನಲ್ಲಿ ಇಬ್ಬರು ಮಾತಾನಾಡುವಾಗ, ಹುಡುಗಿಯ ತಂದೆ ತಾಯಿ ಇವರಿಬ್ಬರ ಮಾತನಾಡುವುದನ್ನು ಗಮನಿಸಿದ್ದಾರೆ.
ಹುಡುಗಿಯ ತಂದೆ-ತಾಯಿಗಳು ಅವರ ಸಂಬಂಧಿಕರಿಗೆ, ಗ್ರಾಮಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ. ಆಗ ಪ್ರತಾಪ್ ಮತ್ತು ಆತನ ಸ್ನೇಹಿತರಿಗೆ ಹಿಗ್ಗಾಮುಗ್ಗಾ ಥಳಿಸಿ, ಕಂಬಕ್ಕೆ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಾಪನು ನಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು ಎನ್ನುವ ಭಯದಿಂದ ಹುಡುಗಿಯ ತಾಯಿ ಯಶೋಧ ಅವರು ನೀಡಿದ ದೂರಿನ ಮೇರೆಗೆ ಪ್ರತಾಪ್ ಹಾಗೂ ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತಾಪನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.