ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.8, 9ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ: ಸಚಿವ ಶ್ರೀರಾಮುಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 1: ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಇದೇ ತಿಂಗಳ 8 ಮತ್ತು 9ರಂದು ಎರಡು ದಿನಗಳ ರಾಜ್ಯಮಟ್ಟದ ಬುಡಕಟ್ಟು ಉತ್ಸವನ್ನು ಆಚರಿಸಲಾಗುತ್ತದೆ ಎಂದು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಬುಡಕಟ್ಟು ಇತಿಹಾಸ, ಕಲೆ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಗೂ ಕಲೆ ಶ್ರೀಮಂತಗೊಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಬುಡಕಟ್ಟು ಉತ್ಸವ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ ಬುಡಕಟ್ಟು ಜನರು ತಯಾರಿಸಿದ ಕರಕುಶಲ ವಸ್ತುಗಳು, ನಾಟಿ ಔಷಧಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಆಹಾರ ಮೇಳ ನಡೆಯಲಿದೆ," ಎಂದರು.

"ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಖಾದ್ಯಗಳ ಪರಿಚಯ ಮಾಡಲು ಚಿಂತಿಸಲಾಗಿದ್ದು, ವಿಶೇಷವಾಗಿ ಬಂಬೂ ಬಿರಿಯಾನಿಯು ಚಿತ್ರದುರ್ಗ ಬುಡಕಟ್ಟು ಉತ್ಸವದಲ್ಲಿ ಆಕರ್ಷಣೆಯ ಖಾದ್ಯವಾಗಲಿದೆ. ಇದರೊಂದಿಗೆ ಕಾಡು ಜೇನುತುಪ್ಪ- ಕಾಡು ಗೆಣಸುಗಳಿಂದ ತಯಾರಿಸಲಾದ ತರಾವರಿ ಖಾದ್ಯಗಳು ಆಹಾರ ಮೇಳದಲ್ಲಿ ತಮ್ಮದೇ ಸ್ಥಾನ ಪಡೆಯಲಿವೆ. ಬುಡಕಟ್ಟು ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಔಷಧಿಗಳು, ವೈದ್ಯ ಚಿಕಿತ್ಸಾ ಪದ್ಧತಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವೈವಿಧ್ಯಮಯ ಬುಡಕಟ್ಟು ಆಹಾರಗಳನ್ನು ಪರಿಚಯಿಸಲಾಗುವುದು," ಎಂದು ಹೇಳಿದರು.

State Level Tribal Festival At Chitradurga On November 8th And 9th: Minister B. Sriramulu

"ಈ ಬುಡಕಟ್ಟು ಉತ್ಸವದ ಸಂಜೆಯ ಕಾರ್ಯಕ್ರಮಗಳಲ್ಲಿ ವಿವಿಧ ಬುಡಕಟ್ಟು ಕಲಾ ತಂಡಗಳಿಂದ ನೃತ್ಯ, ಕುಣಿತ, ಬುಡಕಟ್ಟು ಹಬ್ಬಗಳ ಆಚರಣೆ ಮುಂತಾದ ಸಾಂಸ್ಕಂತಿಕ ಕಲಾ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಬುಡಕಟ್ಟು ಸಮುದಾಯಗಳ ಜೀವನಶೈಲಿ ಕುರಿತಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ನಿರ್ಮಿಸಲಾಗಿರುವ ಸಾಕ್ಷ್ಯಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಬುಡಕಟ್ಟು ಸಮುದಾಯಗಳಿಗೆ ಶಕ್ತಿಯನ್ನು ತುಂಬುವುದರ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ," ಎಂದರು.

"ಇನ್ನು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಬಸವನಗೌಡ ಮಾತನಾಡಿ, ಪ್ರತಿವರ್ಷವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಬುಡಕಟ್ಟು ಉತ್ಸವ ಆಚರಣೆ ಮಾಡಲಾಗುತ್ತಿದೆ. ಬುಡಕಟ್ಟು ಸಮುದಾಯದವರ ಸಂಸ್ಕೃತಿ, ಆಚಾರ-ವಿಚಾರ, ಕಲೆಯನ್ನು ನಾಗರಿಕ ಸಮಾಜಕ್ಕೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಬಾರಿ ಚಿತ್ರದುರ್ಗದಲ್ಲಿ ಬುಡಕಟ್ಟು ಉತ್ಸವ ಆಚರಿಸಲಾಗುತ್ತಿದೆ," ಎಂದು ತಿಳಿಸಿದರು.

State Level Tribal Festival At Chitradurga On November 8th And 9th: Minister B. Sriramulu

"ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಆರು ಬುಡಕಟ್ಟು ಉತ್ಸವಗಳನ್ನು ಆಚರಿಸಲಾಗಿದೆ. ಬುಡಕಟ್ಟು ಸಮುದಾಯಗಳಲ್ಲಿ ನಾಗರಿಕ ಸಮಾಜದ ಅರಿವೇ ಇಲ್ಲ. ರಾಜ್ಯದಲ್ಲಿ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರಿದ್ದು, ಅವರದೇ ಆದ ಭಾಷೆ, ಸಂಸ್ಕೃತಿಯನ್ನು ಹೊಂದಿರುತ್ತಾರೆ. ಈ ಎಲ್ಲಾ 50 ವಿವಿಧ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಒಟ್ಟುಗೂಡಿಸುವುದು, ಅವರ ಭಾಷೆ, ಕಲೆ, ಸಂಸ್ಕಂತಿ, ಆಚಾರ- ವಿಚಾರ, ಉಡುಗೆ- ತೊಡುಗೆ ಹಾಗೂ ಈ ಸಮುದಾಯದವರ ಆಹಾರ ವೈವಿಧ್ಯತೆಯನ್ನು ಪರಸ್ಪರ ಪರಿಚಯಿಸುವುದು ಹಾಗೂ ನಾಗರಿಕ ಸಮಾಜದಲ್ಲಿ ಅವು ಬೆಳಕಿಗೆ ಬರುವಂತೆ ಮಾಡುವುದು ಬುಡಕಟ್ಟು ಉತ್ಸವದ ಮುಖ್ಯ ಉದ್ದೇಶವಾಗಿದೆ," ಎಂದು ಹೇಳಿದರು.

ಜನಸ್ನೇಹಿ ಸೇವೆಯೆಡೆಗೆ ಸಾರಿಗೆ ಇಲಾಖೆ:
"ಉತ್ತಮ ಉದ್ದೇಶದೊಂದಿಗೆ ಸಾರಿಗೆ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆಯೊಂದಿಗೆ ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಸೇವೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ," ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

"ವಾಹನ ಮಾರಾಟಗಾರರ ಹಂತದಲ್ಲಿ ನೋಂದಣಿ ಪ್ರಕ್ರಿಯೆ, ನೋಂದಣಿ, ರಹದಾರಿ ಹಾಗೂ ಚಾಲನಾ ಅನುಜ್ಞಾ ಪತ್ರ ಮತ್ತು ಇನ್ನಿತರೆ ಸಾರಥಿ ಸೇವೆಗಳು ಹಾಗೂ ವಾಹನ ಸೇವೆಗಳ ಒಟ್ಟು 30 ಸೇವೆಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಂಪರ್ಕ ರಹಿತವಾಗಿ ಆರ್‍ಟಿಒ ಕಚೇರಿಗಳಿಗೆ ಭೇಟಿ ನೀಡದೆಯೇ ಸೇವೆಗಳನ್ನು ಪಡೆಯಬಹುದಾಗಿದೆ," ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸೇರಿದಂತೆ ಇತರರು ಇದ್ದರು.

English summary
The two-days State Tribal Festival will be held in Chitradurga city on the 8th and 9th of November month, Transport Minister B Sriramulu said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X