ಹಿರಿಯೂರಿನಲ್ಲಿ 25 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ; ವಿಶೇಷತೆ ಏನು?
ಚಿತ್ರದುರ್ಗ, ಜನವರಿ 19: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆದಿವಾಲದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಕೊರೊನಾ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲೇ ಭಾರತ ಅತಿಹೆಚ್ಚು ಲಸಿಕೆ ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲೇ ಲಸಿಕೆ ಕಂಡುಹಿಡಿದು ಬೇರೆ ದೇಶಗಳಿಗೆ ಲಸಿಕೆ ನೀಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಲಸಿಕೆ ಹಾಕಿಸಿಕೊಂಡವರಿಗೆ ಕೋವಿಡ್ ಬಂದರೂ ಸಾವು ಬರುವುದಿಲ್ಲ, ಅದನ್ನು ತಡೆಯುವ ಶಕ್ತಿ ಲಸಿಕೆಗೆ ಇದೆ. ಒಂದು ಮಹಿಳೆಯನ್ನು ಶಾಸಕಿಯಾಗಿ ಆಯ್ಕೆ ಮಾಡಿದ್ದಕ್ಕೆ ಹಿರಿಯೂರು ತಾಲ್ಲೂಕಿಗೆ ಇಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಂದಿದೆ. ಶಾಸಕಿಯ ಕಾರ್ಯವೈಖರಿ ನೋಡಿದರೆ ತಂದೆಗೆ ತಕ್ಕ ಮಗಳು ಕೆ. ಪೂರ್ಣಿಮಾ ಎಂದು ಶಾಸಕಿಯನ್ನು ಆರೋಗ್ಯ ಸಚಿವರು ಹೊಗಳಿದರು.
ಎನ್ಎಚ್ಐ ಅಡಿಯಲ್ಲಿ ಹಿರಿಯೂರಿನಲ್ಲಿ 25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಮೂರನೇ ಅಲೆಯ ಮಧ್ಯದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನಿಸಿದೆ ಎಂದರು.
ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆ ಘೋಷಣೆ ಮಾಡಿ ಎಂದು ಹೇಳಿದ್ದರು. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳಲ್ಲಿ 700-750 ಹಾಸಿಗೆಯುಳ್ಳ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನು ರಾಜ್ಯದಲ್ಲಿ 250 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹಿರಿಯೂರು ತಾಲ್ಲೂಕಿನಲ್ಲಿ ಸುಸಜ್ಜಿತವಾದ ಪ್ರಾಥಮಿಕ ಕೇಂದ್ರವನ್ನು ಸ್ಥಾಪಿಸುವಂತೆ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಕೊಡಲಾಗುತ್ತದೆ. ಜಿಲ್ಲೆಯಲ್ಲಿ 81 ಜಿಡಿಎಂ ವೈದ್ಯರಲ್ಲಿ 78 ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಇದೇ ವೇಳೆ 15-18 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಕೊಳ್ಳುವಂತೆ ಸಚಿವರು ಮನವಿ ಮಾಡಿದರು. ಓಮಿಕ್ರಾನ್ ವಿಶ್ವದಲ್ಲಿ ಅತಿ ವೇಗವಾಗಿ ಹರಡುತ್ತಿದೆ. ಯಾರು ಕೂಡ ಮೈಮರೆಯಬಾರದು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಕೋವಿಡ್ ತೊಡೆದುಹಾಕಲು ಕೈಜೋಡಿಸಿ ಎಂದರು.

ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ
ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಮುಖ್ಯಮಂತ್ರಿಗಳು ರಾಜ್ಯದ ಜನರ ಆರೋಗ್ಯದ ಹಿತ ಕಾಯಲು ತೀರ್ಮಾನ ತೆಗೆದುಕೊಳ್ಳುತ್ತಾರೆ. ಜನರ ಆರೋಗ್ಯ ನನಗೆ ತುಂಬಾ ಮುಖ್ಯ, ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ. ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ಕೊಡಲ್ಲ ಎಂದು ಸುಧಾಕರ್ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಕೊವೀಡ್ ಟೆಸ್ಟ್ ವಿಚಾರದಲ್ಲಿ ಗೋಲ್ಮಾಲ್
ವಿಮಾನ ನಿಲ್ದಾಣದಲ್ಲಿ ಕೊವೀಡ್ ಟೆಸ್ಟ್ ವಿಚಾರದಲ್ಲಿ ಗೋಲ್ಮಾಲ್ ವಿಚಾರ ನನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ. ಆ ರೀತಿಯಲ್ಲಿ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪು ವರದಿ ನೀಡಿದರೆ ಲೈಸನ್ಸ್ ಕ್ಯಾನ್ಸಲ್ ಮಾಡಿ ಕಾನೂನು ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.
ಕೆಲ ವ್ಯಕ್ತಿಗಳು ಅವರದ್ದೆ ವ್ಯಾಖ್ಯಾನ ಮಾಡುತ್ತಾರೆ, ಅವರ ಜನರ ಅಭಿಪ್ರಾಯ ಆಗಲ್ಲ. ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ನಿಯಮದ ಪ್ರಕಾರ ಕೆಲಸ ಮಾಡಬೇಕು ಎಂದು ಹೇಳಿದರು.
ಇನ್ನು ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಪರವಾನಗಿ ಪಡೆದು ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಕಾಶ ಇದೆ. ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ತಪ್ಪು ಮಾಡಿದರು ತಪ್ಪೇ. ನಿಯಮಗಳನ್ನು ಯಾರೂ ಸಹ ಮೀರಿ ನಡೆಯಬಾರದು. ಶುಕ್ರವಾರದ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ಸಾಧಕ- ಬಾಧಕ ಗಮನಿಸಿ ಸಿಎಂ ಬೊಮ್ಮಾಯಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿ ಹೊರಟರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏನೇನು ಸೌಲಭ್ಯಗಳಿವೆ?
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯು ಚಿಕಿತ್ಸೆ ದೊರೆಯುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಸಿಗಲಿದೆ. 100 ಹಾಲಿಗೆಯುಳ್ಳ ಆಸ್ಪತ್ರೆ ಇದಾಗಿದೆ. ಮೂರು ಹಂತಸ್ತಿನ ಕಟ್ಟಡ ಹೊಂದಿದ್ದು, ಇದರ ಜೊತೆಗೆ ಕ್ಷ-ಕಿರಣ ವಿಭಾಗ, ಪ್ರಯೋಗಾಲಯ, ಶಾಸ್ತ್ರ ಚಿಕಿತ್ಸೆ ಕೊಠಡಿ, ಸಂದರ್ಶನ ಕೊಠಡಿ, ತುರ್ತು ಚಿಕಿತ್ಸೆ ವಿಭಾಗ ಹೊಂದಿದೆ.
ನುರಿತ ವೈದ್ಯರು ಹಾಗೂ ಶುಶ್ರೂಷಕಿಯರ ವಿಶ್ರಾಂತಿ ಕೊಠಡಿಗಳು, ಔಷಧ ವಿತರಣೆ ಕೊಠಡಿಗಳು, ಪ್ರತ್ಯೇಕ ಪುರುಷ ಹಾಗೂ ಮಹಿಳೆಯರ ವಾರ್ಡ್ಗಳು, ಆಡಳಿತ ವಿಭಾಗ, ಐಸಿಯು ಚಿಕಿತ್ಸಾ ಕೊಠಡಿ, ಪ್ರಧಾನ ಶಸ್ತ್ರ ಚಿಕಿತ್ಸಾ ಕೊಠಡಿ, ರಿಕವರಿ ವಾರ್ಡ್ಗಳು, ಶವಗಾರ ರೂಂ, ಕ್ಯಾಂಟಿನ್ ಸೌಲಭ್ಯ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ, ಜಿಲ್ಲಾಧಿಕಾರಿ ಕವಿತಾ ಎಸ್. ಮಣ್ಣಿಕೇರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ರಾಜ್ಯ ಪ್ರವರ್ಗ-1 ರ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ಆರೋಗ್ಯ ವೈದ್ಯಾಧಿಕಾರಿಗಳು, ರೈತ ಹೋರಾಟಗಾರರು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.