• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿರಿಯೂರು ತೇರುಮಲ್ಲೇಶ್ವರ ದೇವಾಲಯದ ಇತಿಹಾಸ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಫೆಬ್ರವರಿ 25: ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಫೆಬ್ರವರಿ 26 ರಂದು ಮಧ್ಯಾಹ್ನ 1 ಗಂಟೆಗೆ ನೇರವೆರಲಿದೆ.

ರಥೋತ್ಸವದ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ. ರಥೋತ್ಸವ ಕಾರ್ಯಕ್ರಮಕ್ಕೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ನಂತರ ಸ್ವಾಮೀಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಲಿದೆ.

ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.

ಶ್ರೀ ಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಾಣವಾಗಿದೆ ಎಂಬುದು ನಂಬಿಕೆಯಾಗಿದೆ.

ದೇವಾಲಯದ ಇತಿಹಾಸದ ಕಥೆ

ದೇವಾಲಯದ ಇತಿಹಾಸದ ಕಥೆ

ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಆಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾಗಿ ಎಲೆ ಅಡಿಕೆ ಹಾಕಿಕೊಳ್ಳಲು ಬಯಸಿದಳು. ಅಡಿಕೆ ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು ಪುಡಿಮಾಡಿ ನಂತರ ಬಿಸಾಡುತ್ತಾರೆ. ಮುಂದೆ ದಾರಿಯಲ್ಲಿ ಎರಡು ಮೂರು ಬಾರಿ ಅಡಿಕೆ ಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ, ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಬಿಸಾಡಿದಾಗ ಅದು ಮನೆಯ ಒಳಗಿದ್ದ ಒಳ ಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.

ಚೆನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು "ಇನ್ನು ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು ನಾನೇ ಇಲ್ಲಿ ನನ್ನನ್ನು ಪೂಜಿಸು" ಎಂದು ಹೇಳಿ ಮಾಯವಾದಂತೆ. ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗ ವಾಗಿತ್ತು. ಈ ಘಟನೆ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲ ವಾಯಿತು ಎಂಬ ಪ್ರತೀತಿ ಇದೆ.

ಮಲ್ಲೇಶ್ವರ ದೇಗುಲ ಉದ್ಭವವಾದ ಕೆಲವು ವರ್ಷಗಳ ಬಳಿಕ ನೆರೆಯ ಹೊಸದುರ್ಗ ತಾಲೂಕಿನ ಯಗಟಿ ಎಂಬಲ್ಲಿ ಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ಕೊಚ್ಚಿಹೋದ ಮಲ್ಲೇಶ್ವರನ ರಥ ಹಿರಿಯೂರಿನ ಮಲ್ಲೇಶ್ವರ ದೇವಸ್ಥಾನ ಹತ್ತಿರ ನಿಂತಾಗ ಭಕ್ತರು ರಥವನ್ನು ಎತ್ತಿ ದೇವಸ್ಥಾನ ಹತ್ತಿರಕ್ಕೆ ತಂದರು. ಅಂದಿನಿಂದ ಮಲ್ಲೇಶ್ವರನನ್ನು ತೇರುಮಲ್ಲೇಶ್ವರ ಎಂದು ಕರೆಯಲಾಗುತ್ತಿದೆ. ಅಂದಿನಿಂದ ಪ್ರತಿವರ್ಷ ಮಾಘ ಮಾಸದ ಮಾಘ ನಕ್ಷತ್ರದಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಅಲ್ಲದೆ ಅಂದೆ ಚಂದ್ರಮೌಳೇಶ್ವರ ಉಮಾಮಹೇಶ್ವರ ಸ್ವಾಮಿಗಳ ರಥೋತ್ಸವವೂ ನಡೆಯುತ್ತದೆ.

ದಕ್ಷಿಣ ಭಾರತದಲ್ಲಿ ವಿಶಿಷ್ಟ ಕರ್ಪೂರದ ಆರತಿ

ದಕ್ಷಿಣ ಭಾರತದಲ್ಲಿ ವಿಶಿಷ್ಟ ಕರ್ಪೂರದ ಆರತಿ

ತೇರುಮಲ್ಲೇಶ್ವರ ರಥೋತ್ಸವ ನಡೆದು ಎರಡು ದಿನಗಳ ನಂತರ ರಾತ್ರಿ 9 ಗಂಟೆಗೆ ದಕ್ಷಿಣ ಭಾರತದಲ್ಲಿ ವಿಶಿಷ್ಟವಾಗಿ ಆಚರಿಸುವ ಕರ್ಪೂರದ ಆರತಿ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಕಾರ್ಯಕ್ರಮದ ಮೈಜುಮ್ಮೆನ್ನಿಸುವ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತದೆ. ಕರ್ಪೂರದಾರತಿ ಕಾರ್ಯಕ್ರಮ ಮಹಿಳೆಯರಿಗೆ ವಿಶೇಷ ಹಬ್ಬವಾಗಿದೆ. ದೇಗುಲದ ಒಳ ಆವರಣದಲ್ಲಿ ಗರ್ಭಗುಡಿಯ ಮುಂಭಾಗದ 48 ಅಡಿಯ ಕಲ್ಲುಕಂಬವಿದ್ದು ಕಂಬದ ಮೇಲೆ 8 ಅಡಿ ಎತ್ತರದ ಬಸವ ಮಂಟಪದಲ್ಲಿ ಒಳಗೆ ಚಿಕ್ಕ ನಂದಿ ವಿಗ್ರಹವಿದೆ ಇದಕ್ಕೆ ಆರು ಅಡಿ ಉದ್ದವಿರುವ ಕಬ್ಬಿಣದ ಸೌಟುಗಳನ್ನು ಜೋಡಿಸಲಾಗಿದ್ದು ಕರ್ಪೂರದಾರತಿಯ ದಿನ ಒಟ್ಟಾರೆ 56 ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಏರಿ ಬತ್ತಿ ಎಣ್ಣೆ ಹಾಕಿ ಕರ್ಪೂರ ಬಳಸಿ ದೀಪ ಹಚ್ಚಲಾಗುತ್ತದೆ.

ಆಂಧ್ರದಿಂದ ತರಿಸಿದ ದೀಪಸ್ತಂಭ

ಆಂಧ್ರದಿಂದ ತರಿಸಿದ ದೀಪಸ್ತಂಭ

ಸುಮಾರು 56 ಅಡಿ ಎತ್ತರವಿರುವ ದೀಪದ ಸ್ತಂಭದ ಕಲ್ಲನ್ನು ಆಂಧ್ರಪ್ರದೇಶದಿಂದ ಹಿರಿಯೂರಿಗೆ ತರುವಾಗ ತಾಲೂಕಿನ ಅಂಬಲಗೆರೆ ಗ್ರಾಮದ ಬಳಿ ಬಿದ್ದು ಎರಡು ಹೊಳಾಯಿತು ಎನ್ನುತ್ತದೆ ಇತಿಹಾಸ. ಅದರಲ್ಲಿ ಉದ್ದವಿದ್ದ ಕಂಬವನ್ನು ಹಿರಿಯೂರಿಗೆ ತಂದು ಮತ್ತೊಂದು ಭಾಗವನ್ನು ಅದೇ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದೆ ಸ್ಥಾಪಿಸಲಾಯಿತು ಎಂದು ಹಿರಿಯರು ಹೇಳುತ್ತಾರೆ.

ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದ ಆರತಿ ಕಾರ್ಯಕ್ರಮವನ್ನು ಪುರುಷರ ಶೌರ್ಯದ ಪ್ರತೀಕವನ್ನಾಗಿ ಪರಿಗಣಿಸಿದ್ದರು. ಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಚಕಚಕನೆ ಏರಿ ಕರ್ಪೂರ ಹಚ್ಚಿ ನೆರೆದಿದ್ದ ಹೆಂಗಳೆಯರ ಮನ ಗೆಲ್ಲುವುದು ವಾಡಿಕೆಯಾಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

ದೀಪದ ಬೆಳಕು ರಾತ್ರಿ ವೇಳೆ ಮೂರು ಕಿಲೋಮೀಟರ್ ದೂರದವರೆಗೂ ಕಾಣುತ್ತದೆ. ಈ ಕಾರ್ಯಕ್ರಮದಲ್ಲಿ ಕರ್ಪೂರದ ಸೇವೆಯನ್ನು ಮಾಡುವುದರ ಮೂಲಕ ನಿರ್ಧರಿಸಲಾಗುತ್ತದೆ. ಹಿರಿಯೂರು ತಾಲೂಕು ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ದಾವಣಗೆರೆ, ಹೊಸದುರ್ಗ ಮೊದಲಾದ ನಗರಗಳಿಂದ ಭಕ್ತರು ಆಗಮಿಸುತ್ತಾರೆ.

  ಮತ್ತೆ ಜನಸಾಮಾನ್ಯರಿಗೆ ಅನಿಲಾಘಾತ- ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಳ..! | Oneindia Kannada
  ರಥ ಮುಂದಕ್ಕೆ ಚಲಿಸುವುದಿಲ್ಲ

  ರಥ ಮುಂದಕ್ಕೆ ಚಲಿಸುವುದಿಲ್ಲ

  ಬುಡಕಟ್ಟು ಕಾಡುಗೊಲ್ಲರ ಆರಾಧ್ಯದೈವನಾದ ವೀರಕರಿಯಣ್ಣ ದೇವರು ಬರುವವರೆಗೂ ತೆರುಮಲ್ಲೇಶ್ವರನ ರಥ ಮುಂದಕ್ಕೆ ಚಲಿಸುವುದಿಲ್ಲ. ಹಿರಿಯೂರು ತಾಲೂಕಿನ ಬೀರನಹಳ್ಳಿ ಮುಜರೆ ಗ್ರಾಮದ ಕರಿಯ್ಯನಹಟ್ಟಿ ಗ್ರಾಮದ ವೀರ ಕರಿಯಣ್ಣ ದೇವರು ತೇರುಮಲ್ಲೇಶ್ವರ ಆಸ್ಥಾನಕ್ಕೆ ಬಂದಾಗ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಈ ಹಿಂದೆ ಹೊಸದುರ್ಗ ತಾಲೂಕಿನ ಯಗಟಿ ಎಂಬಲ್ಲಿ ಮಲ್ಲೆಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿ ಬರುತ್ತದೆ. ನದಿಯಲ್ಲಿ ಕೊಚ್ಚಿ ಬಂದ ರಥ ಇಲ್ಲಿನ ರಾಜರ ಗಮನಕ್ಕೆ ಬರುತ್ತದೆ. ಆನೆ, ಕುದುರೆ ಮೂಲಕ ರಥವನ್ನು ಮೆಲಕ್ಕೆತ್ತುವ ಕಾರ್ಯ ನಡೆಯುತ್ತದೆ. ಆದರೆ ರಥ ಬರುವುದಿಲ್ಲ. ರಥವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಗ ಪಶುಪಾಲಕ ನಾಗಿದ್ದ ವೀರ ಕರಿಯಣ್ಣ ನೋಡಿ ಅಪ್ಪಣೆ ಕೊಟ್ಟರೆ ನಾನು ರಥವನ್ನು ದಡಕ್ಕೆ ಎಳೆಯುತ್ತಲೇನೆಂದು ಕೇಳಿದಾಗ ರಾಜರು ಅಪ್ಪಣೆ ಕೊಡುತ್ತಾರೆ. ನಂತರ ವೀರ ಕರಿಯಣ್ಣನು ಎರಡು ಹೋರಿಗಳ ಮೂಲಕ ಹೆಗಲ ಮೇಲೆ ಕಂಬಳಿಯನ್ನು ತೆಗೆದು ಹಗ್ಗವನ್ನಾಗಿ ಮಾಡಿ ರಥಕ್ಕೆ ಕಟ್ಟಿ ಯಾರು ನೋಡದ ಮಧ್ಯರಾತ್ರಿ ಸಮಯದಲ್ಲಿ ದೇವಸ್ಥಾನದ ಮುಂದಕ್ಕೆ ರಥವನ್ನು ಎಳೆದು ತಂದು ನಿಲ್ಲಿಸುತ್ತಾನೆ.

  ಬೆಳಗ್ಗೆ ರಥವನ್ನು ನೋಡಿದ ಭಕ್ತರು ಅಚ್ಚರಿ ಪಡುತ್ತಾರೆ. ಈ ಹಿಂದೆ ತೇರುಮಲ್ಲೇಶ್ವರ ದೇವಸ್ಥಾನವನ್ನು ಕಟ್ಟುವ ಸಂದರ್ಭದಲ್ಲಿ ತಳಪಾಯ ಹಾಕುವಾಗ ಪೂಜಾ ಕಾರ್ಯಕ್ರಮದಲ್ಲಿ ಹಾಲುತುಪ್ಪ ಬಿಡುವ ಸಂಪ್ರದಾಯವಿರುತ್ತದೆ. ಬುಡಕಟ್ಟು ಕಾಡುಗೊಲ್ಲರ ವೀರಗಾರನಾದ ಕರಿಯಣ್ಣ ಒಬ್ಬ ಪೂಜಾರಿ ಹಾಗೂ ಅಪಾರ ದೈವ ಭಕ್ತ ಉಳ್ಳವನಾಗಿದ್ದನು. ಪಶುಪಾಲಕ ನಾದ ವೀರ ಕರಿಯಣ್ಣ ದೇಗುಲದ ಅಡಿಪಾಯಕ್ಕೆ ಹಾಲನ್ನ ಮೀಸಲಾಗಿ ತಂದು ದೇವಸ್ಥಾನದ ಅಡಿಪಾಯಕ್ಕೆ ಹಾಕುತ್ತಾನೆ. ಅಂದಿನಿಂದ ಇಂದಿನವರೆಗೂ ಕರಿಯಣ್ಣ ಮುಂದಾಳತ್ವದಲ್ಲಿ ರಥೋತ್ಸವ ನಡೆಯುತ್ತದೆ ಎಂದು ಗ್ರಾಮದ ಹಿರಿಯ ವ್ಯಕ್ತಿ ಕೆ. ವೀರಪ್ಪ ತಿಳಿಸುತ್ತಾರೆ. ಕೆಂಚಪ್ಪ ನಾಯಕ ಮಾಯಸಂದ್ರ ಗ್ರಾಮದವರಾಗಿದ್ದು, ವೀರ ಕರಿಯಣ್ಣ ಪಕ್ಕದ ಬೀರೆನಹಳ್ಳಿ ಕರಿಯ್ಯನಹಟ್ಟಿ ಗ್ರಾಮದ ಆಗಿದ್ದರು ಇಬ್ಬರಿಬ್ಬರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನಲಾಗಿದೆ.

  English summary
  Teru Malleshvara temple jatre will be held on February 26, 2021. Teru Malleshvara temple in Hiriyur taluk ok Chitradurga district.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X