ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಕಾರ್ಯಕರ್ತರನ್ನು ನಿಯಂತ್ರಿಸಿ, ಇಲ್ಲದಿದ್ದರೆ ನಮ್ಮವರಿಗೆ ಕರೆ ನೀಡಬೇಕಾಗುತ್ತೆ- ಡಿಕೆಶಿ ಎಚ್ಚರಿಕೆ

|
Google Oneindia Kannada News

ಚಿತ್ರದುರ್ಗ, ಆಗಸ್ಟ್ 19: ಸರ್ಕಾರ ತಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ಇಲ್ಲದಿದ್ದರೆ ಸಿಎಂ ಸೇರಿದಂತೆ ಎಲ್ಲ ಮಂತ್ರಿಗಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇವಲ ನಮ್ಮ ಪಕ್ಷದ ನಾಯಕರಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಹಕ್ಕಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಅವರ ಯಾವುದಾದರೂ ಹೇಳಿಕೆ ಸರಿ ಇಲ್ಲ ಎನಿಸಿದ್ದಲ್ಲಿ ಅದನ್ನು ಟೀಕೆ ಮಾಡಬಹುದು. ಅದು ಪ್ರಜಾಪ್ರಭುತ್ವದ ಭಾಗ. ಆದರೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಕಣ್ಣು ತೆರೆಸಲು ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವಾಗ ಈ ರೀತಿ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಹೊಡೆದಿರುವುದು ಸರಿಯಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಸುಮಾರು 510 ಕಿ.ಮೀ. ನಡೆಯಲಿದ್ದು, ಗುಂಡ್ಲುಪೇಟೆಯಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಬಳ್ಳಾರಿ ಮೂಲಕ ರಾಯಚೂರು ಮಾರ್ಗವಾಗಿ ತೆಲಂಗಾಣ ತಲುಪುತ್ತಾರೆ. ಒಟ್ಟು 21 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ರಾಜ್ಯದ ಗಡಿ ಪ್ರವೇಶಿಸುವಾಗ ಅರಣ್ಯ ಪ್ರದೇಶವಿದ್ದು, ಈ ಭಾಗದಲ್ಲಿ ಮಾಡುವುದು ಬೇಡ ಎಂದು ಕೇರಳ ಪೊಲೀಸರು ಮನವಿ ಮಾಡಿದ್ದಾರೆ. ಅದೇ ರೀತಿ ರಾಜ್ಯದ ಭಾಗದಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂದು ಚರ್ಚೆ ಮಾಡುತ್ತೇವೆ ಎಂದು ಚಳ್ಳಕೆರೆಯಲ್ಲಿ ಡಿಕೆಶಿ ತಿಳಿಸುವ ವೇಳೆಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತಕ್ಕೆ ಖಾರವಾಗಿ ಪ್ರತಿಕ್ರಿಯನ್ನು ನೀಡಿದ್ದಾರೆ.

 ಸಿದ್ದರಾಮಯ್ಯರನ್ನು ಹೆದರಿಸಲು ಸಾಧ್ಯವಿಲ್ಲ

ಸಿದ್ದರಾಮಯ್ಯರನ್ನು ಹೆದರಿಸಲು ಸಾಧ್ಯವಿಲ್ಲ

ಸರ್ಕಾರ ಮಾಡಿದ ಅನೇಕ ತಪ್ಪುಗಳನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತಮಗೆ ಅನ್ಯಾಯ ಆಗಿದೆ ಎಂದು ಪ್ರತಿಭಟಿಸಿದ್ದಾರೆ. ಇದು ಚರ್ಚೆಗೆ ನಮಗೆ ಕೊಟ್ಟಿರುವ ಅಸ್ತ್ರಗಳು. ರಾಜ್ಯದ ಜನ ಸಮಸ್ಯೆಗಳಿಂದ ಪರದಾಡುತ್ತಿರುವಾಗ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ವಿರೋಧ ಪಕ್ಷದ್ದಾಗಿದೆ. ಅದನ್ನು ಮಾಡಲು ಮುಂದಾದರೆ ಕಪ್ಪು ಬಾವುಟ ಹಾರಿಸಿ, ಮೊಟ್ಟೆ ಹೊಡೆಯುತ್ತಿದ್ದಾರೆ. ಈ ರೀತಿ ಸಿದ್ದರಾಮಯ್ಯರನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವೇ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

 ನಮ್ಮ ಕಾರ್ಯಕರ್ತರಿಗೆ ಕರೆಯನ್ನು ನೀಡಬೇಕಾಗುತ್ತೆ

ನಮ್ಮ ಕಾರ್ಯಕರ್ತರಿಗೆ ಕರೆಯನ್ನು ನೀಡಬೇಕಾಗುತ್ತೆ

ನಾವು ಕಾಂಗ್ರೆಸ್ ಪಕ್ಷದವರು. ನಮಗೆ ಹೋರಾಟದ ಇತಿಹಾಸ ಇದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ವಿರೋಧ ಪಕ್ಷದ ನಾಯಕರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಬೊಮ್ಮಾಯಿ ಸಾಹೇಬರೆ, ಕಟೀಲ್ ಸಾಹೇಬರೇ ನಾನು ಯಾವುದೇ ಕರೆ ನೀಡದಿದ್ದರೂ ಅನೇಕ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಅಧಿಕೃತವಾಗಿ ಕರೆ ನೀಡಿ ಮಂತ್ರಿಗಳ ಕಾರ್ಯಕ್ರಮದ ಕಡೆಗಳಲ್ಲಿ ನಿಮ್ಮ ಲಂಚ ಹಾಗೂ 40% ಕಮಿಷನ್ ವಿರೋಧಿಸಿ ಅದೇ ಕಪ್ಪು ಬಾವುಟ ಹಿಡಿದು ಅಡ್ಡಿ ಮಾಡಲು ಹೊರಟರೆ ನಿಮ್ಮ ಕಾನೂನು ವ್ಯವಸ್ಥೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದ್ದಾರೆ.

 ಮೊದಲು ಬೊಪಯ್ಯ ಅವರನ್ನು ಬಂಧಿಸಬೇಕು

ಮೊದಲು ಬೊಪಯ್ಯ ಅವರನ್ನು ಬಂಧಿಸಬೇಕು

ನೀವು ಈ ಹಿಂದೆ ನೈತಿಕ ಪೊಲೀಸ್ ಗಿರಿಯಲ್ಲಿ ತಪ್ಪೇನಿದೆ ಎಂದು ಹೇಳಿದ್ದಿರಿ. ಮತ್ತೊಂದು ಕಡೆ ನಾವು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ 30-40 ಪ್ರಕರಣ ದಾಖಲಿಸಿದ್ದೀರಿ. ನಾವು ಅದಕ್ಕೆ ಹೆದರಲಿಲ್ಲ. ಸರ್ಕಾರ ಇದನ್ನು ತಡೆಯದಿದ್ದರೆ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಮುಂದಿನ ಹೋರಾಟದ ಹೆಜ್ಜೆ ಇಡಬೇಕಾಗುತ್ತದೆ. ಮೊಟ್ಟೆ ಹೊಡೆದಿರುವವರು ಕಾಂಗ್ರೆಸ್ ಕಾರ್ಯಕರ್ತರು ಎಂಬ ಬೋಪಯ್ಯ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, 'ಮೊದಲು ಬೊಪಯ್ಯ ಅವರನ್ನು ಬಂಧಿಸಬೇಕು. ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ. ನಾವು ಮಾಡಿದ ಕೆಲಸವನ್ನು ನಮ್ಮ ಕೆಲಸ ಎಂದು ಹೇಳಿಕೊಳ್ಳಬೇಕು. ತಾವು ಮಾಡಿದ ಕೆಲಸವನ್ನು ಬೇರೆಯವರ ಮೇಲೆ ಹಾಕುವುದು ಹೇಡಿತನ. ಸರಕಾರ ಎಲ್ಲ ವಿಚಾರಗಳಲ್ಲೂ ವಿಫಲವಾಗಿದ್ದು, ಅವರ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನಾನು ಪಕ್ಷದ ಅಧ್ಯಕ್ಷನಾಗಿ ಮುಖ್ಯಮಂತ್ರಿಗಳಿಗೆ ನಮ್ಮ ನೋವು, ಭಾವನೆಯನ್ನು ತಿಳಿಸುತ್ತಿದ್ದೇನೆ. ಬೇರೆಯವರ ಹೇಳಿಕೆಗೆ ಉತ್ತರ ನೀಡುವುದಿಲ್ಲ' ಎಂದು ತಿಳಿಸಿದರು.

 ಆದಷ್ಟು ಬೇಗ ತನಿಖೆ ಮಾಡಿಸಲಿ

ಆದಷ್ಟು ಬೇಗ ತನಿಖೆ ಮಾಡಿಸಲಿ

ಸಿದ್ದರಾಮಯ್ಯ ಬಗ್ಗೆ ವಿರೋಧವಿದ್ದರೂ ಕೊಡಗಿಗೆ ಹೋಗಿದ್ದೇಕೆ ಎಂಬ ಪ್ರಶ್ನೆಗೆ, 'ಅದೇನು ವಿರೋಧ ವ್ಯಕ್ತಪಡಿಸುವವರ ಮನೆಯೇ?' ಎಂದು ಪ್ರಶ್ನಿಸಿದರು. 2010 ರಿಂದ 2018 ರವರೆಗೆ ಇಂಧನ ಇಲಾಖೆಯಲ್ಲಿ ಸಾಕಷ್ಟು ಒಳಒಪ್ಪಂದಗಳು ಆಗಿದ್ದು ತನಿಖೆ ಮಾಡುತ್ತೇವೆ ಎಂಬ ಸರ್ಕಾರದ ಹೇಳಿಕೆ ಬಗ್ಗೆ ಕೇಳಿದಾಗ, 'ಅವರು ತಡ ಮಾಡದೇ ತನಿಖೆ ಮಾಡಿಸಲಿ. ಕೇವಲ ಬಾಯಿ ಮಾತಿಗೆ ಹೇಳಿ ಸುಮ್ಮನಾಗಬಾರದು. ಸಿಬಿಐ, ಇಡಿ ಅಥವಾ ಅವರೇ ಮಾಡಲಿ. ಆದಷ್ಟು ಬೇಗ ತನಿಖೆ ಮಾಡಿಸಲಿ' ಎಂದು ಡಿಕೆಶಿ ಹೇಳಿದರು.

English summary
KPCC president D.K.Shivakumar has warned that if the government keeps its workers under control, otherwise the Congress workers will have to protest in the programs of all the ministers including the CM. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X