ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಸುದ್ದಿ: ಬಾಷ್ ಕಂಪನಿಯ ಕೊಡುಗೆಯಿಂದ ಹೊಸ ವಿನ್ಯಾಸ ಪಡೆದ ಚಿತ್ರದುರ್ಗದ ಜೆಜಿ ಹಳ್ಳಿಯ ಸರ್ಕಾರಿ ಶಾಲೆ

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 2: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ, ಆದರೆ ಇಲ್ಲೊಂದು ಖಾಸಗಿ ಕಂಪನಿಯ ನೆರವಿನಿಂದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಶಾಲೆಗಳು ಹಲವಾರು ಇವೆ. ಅದರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನಲವತ್ತು ವರ್ಷಕ್ಕೂ ಹೆಚ್ಚು ಹಳೆಯದಾದ ಶಾಲೆಯಾಗಿದ್ದು, ಸಂಪೂರ್ಣ ಶಿಥಿಲಗೊಂಡಿತ್ತು.

ಚಿತ್ರದುರ್ಗ ಸಂಸದರಾಗಿ ಎ. ನಾರಾಯಣಸ್ವಾಮಿ ಆಯ್ಕೆಯಾದ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ನೀಡುವಂತೆ ಅಂದಿನ ಬಿಇಒ ನಟರಾಜ್ ಅವರಿಗೆ ಸೂಚಿಸಿದ್ದರು. ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಎಲ್.ರತ್ನಮ್ಮ, ತಮ್ಮ ಶಾಲೆಯ ವಿಡಿಯೋವನ್ನು ಸಂಸದರಿಗೆ ಕೊಟ್ಟು, 'ಸದರಿ ಶಾಲೆ ಹೋಬಳಿ ಮುಖ್ಯ ಕೇಂದ್ರದಲ್ಲಿದ್ದು, ಹತ್ತಾರು ಹಳ್ಳಿಗಳ ನೂರಾರು ಬಡ ಮಕ್ಕಳು ಶಾಲೆಗೆ ಬರುವ ಕಾರಣ ಗುಣಮಟ್ಟದ ಶಿಕ್ಷಣ ನೀಡಲು, ಶಾಲೆಯ ಭೌತಿಕ ಪರಿಸರ ಸುಧಾರಣೆ ಅನಿವಾರ್ಯ' ಎಂದು ಗಮನ ಸೆಳೆದಿದ್ದರು.

ಹೊಸ ರೂಪ ಕೊಡಲು ಮುಂದಾದ ಸಂಸದರು

ಹೊಸ ರೂಪ ಕೊಡಲು ಮುಂದಾದ ಸಂಸದರು

ಮುಖ್ಯ ಶಿಕ್ಷಕಿಯ ಕಾಳಜಿಯನ್ನು ಅರಿತ ಸಂಸದ ಎ.ನಾರಾಯಣಸ್ವಾಮಿ ಅವರು ಸರ್ಕಾರಿ ಶಾಲೆಗೆ ಹೊಸ ರೂಪ ಕೊಡಲು ಮುಂದಾದರು. ಅದಕ್ಕಾಗಿ ಕೆಲವು ಖಾಸಗಿ ಕಂಪನಿಗಳನ್ನು ಅವರು ಸಂಪರ್ಕಿಸಿದ್ದರು. ಅಂತಿಮವಾಗಿ ‘ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಫಂಡ್ಸ್' ಅಡಿಯಲ್ಲಿ ಹೆಸರಾಂತ ಕಂಪನಿ ಬಾಷ್ (BOSCH) ಪ್ರಾಯೋಜತಕ್ವದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಾಲೆಗಳಿಗೆ ಸರಿಸಮನಾದ ಮಾದರಿ ಶಾಲೆ ಜವನಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ನೋಡುಗರನ್ನು ಆಕರ್ಷಿಸುತ್ತದೆ.

ಸುಂದರ ವಿನ್ಯಾಸದ ಶಾಲಾ ಕಟ್ಟಡ

ಸುಂದರ ವಿನ್ಯಾಸದ ಶಾಲಾ ಕಟ್ಟಡ

ನೂತನವಾಗಿ ನಿರ್ಮಿಸಿರುವ ಸರ್ಕಾರಿ ಶಾಲೆಯಲ್ಲಿ ಏನಿದೆ ಎಂಬುದಕ್ಕಿಂತ, ಕಲಿಯಲು ವಿದ್ಯಾರ್ಥಿಗಳಿಗೆ ಇನ್ನೇನು ಬೇಕಿದೆ? ಎಂಬ ರೀತಿಯಲ್ಲಿ ನಾಡು-ನುಡಿ, ಕಲೆ-ಸಂಸ್ಕೃತಿ ಬಿಂಬಿಸುವ ಭಿತ್ತಿ ಚಿತ್ರಗಳು, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್ ಒಳಗೊಂಡಂತೆ ಸ್ವಾತಂತ್ರ್ಯ ಹೋರಾಟಗಾರರು, ಇತಿಹಾಸ ಪುರುಷರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಆಕರ್ಷಕ ಚಿತ್ರಗಳು, ಬೋಧನಾ ಕೊಠಡಿಗಳ ಒಳಗಿನ ಗೋಡೆಗಳ ಮೇಲೆ ಪಂಚತಂತ್ರ ಹಾಗೂ ನೀತಿ ಕಥೆಗಳಿಗೆ ಚಿತ್ರಗಳ ಮೂಲಕ ಅಭಿವ್ಯಕ್ತಿ ಕೊಡಲಾಗಿದೆ. ತರಗತಿ ಕೋಣೆಯೊಳಗಿನ ಮೇಲ್ಛಾವಣಿಗೆ ನಕ್ಷತ್ರಗಳೊಂದಿಗೆ ಆಕಾಶ ಬಣ್ಣ ಹೋಲುವ ರೀತಿ ಮಾಡಿಸಿರುವುದು ವಿದ್ಯಾರ್ಥಿಗಳಿಗೆ ನೈಸರ್ಗಿಕ ಪರಿಸರದಲ್ಲಿ ಪಾಠ ಕೇಳಿದ ಅನುಭವ ಮೂಡಿಸುತ್ತದೆ.

ಉತ್ತಮ ಆಸನ ವ್ಯವಸ್ಥೆ

ಉತ್ತಮ ಆಸನ ವ್ಯವಸ್ಥೆ

ಮಕ್ಕಳು ಐದಾರು ಗಂಟೆ ಕುಳಿತು ಪಾಠ ಕೇಳಿದರೂ ದಣಿವಾಗದ ರೀತಿಯಲ್ಲಿ ಡೆಸ್ಕ್, ಫ್ಯಾನ್, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಪುಸ್ತಕದ ಬ್ಯಾಗ್ ಇಡಲು ಪ್ರತ್ಯೇಕ ಸ್ಥಳಾವಕಾಶವಿದೆ. ಶಿಕ್ಷಕರು ಬರೆದರೆ ಎದ್ದು ಕಾಣುವ ರೀತಿಯಲ್ಲಿ ಆಕರ್ಷಕ ಕಪ್ಪು ಹಲಗೆ ರಚಿಸಲಾಗಿದೆ. ನಲಿ-ಕಲಿ ವಿದ್ಯಾರ್ಥಿಗಳಿಗೆಂದು ವಿಶೇಷ ರೀತಿಯಲ್ಲಿ ದುಂಡುಮೇಜು ಹಾಗೂ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಕೊಠಡಿಯಲ್ಲೂ ಆಧುನಿಕ ಪೀಠೋಪಕರಣ ಅಳವಡಿಸಲಾಗಿದೆ.

ಪ್ರತ್ಯೇಕ ಶೌಚಾಲಯ

ಪ್ರತ್ಯೇಕ ಶೌಚಾಲಯ

ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯಲ್ಲಿ ಬಾಲಕಿಯರಿಗೆ, ಬಾಲಕರಿಗೆ ಮತ್ತು ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ, ಶಾಲೆಯ ಸುರಕ್ಷತೆ ದೃಷ್ಟಿಯಿಂದ ಎಂಟು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

‘ಶಾಲೆಗೆ ಒಬ್ಬರು ಕಂಪ್ಯೂಟರ್ ಶಿಕ್ಷಕರು, ಸೆಕ್ಯುರಿಟಿ ಗಾರ್ಡ್, ಶಾಲಾ ಮುಂಭಾಗದಲ್ಲಿ ಪುಟ್ಟ ಉದ್ಯಾನ ನಿರ್ಮಿಸಿಕೊಡುವುದಾಗಿ ಕಂಪನಿಯವರು ತಿಳಿಸಿದ್ದಾರೆ' ಎಂದು ಜೆಜಿ ಹಳ್ಳಿ ಹೋಬಳಿ ಶಿಕ್ಷಣ ಸಂಯೋಜಕ ಕೆ.ಎಚ್ ಗಿರೀಶ್ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಂತಸ

ಕ್ಷೇತ್ರ ಶಿಕ್ಷಣಾಧಿಕಾರಿ ಸಂತಸ

"ನಮ್ಮ ತಾಲ್ಲೂಕಿನಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಯೊಂದು ನಿರ್ಮಾಣವಾಗಿದೆ ಎಂಬುದು ಅಚ್ಚರಿಯ ಸಂಗತಿ. ಹೊಸಯಳನಾಡು ಪಬ್ಲಿಕ್ ಶಾಲೆ ಕೂಡ ಇದೇ ಮಾದರಿಯಲ್ಲಿದೆ. ಸಕ್ಕರೆ ಕಾರ್ಖಾನೆ ಆವರಣದ ಶಾಲೆ, ಕೆಇಬಿ ಶಾಲೆ, ಅಂಬಲಗೆರೆ, ವೇಣುಕಲ್ಲುಗುಡ್ಡ, ಜಡೆಗೊಂಡನಹಳ್ಳಿ, ಬಗ್ಗನಡು ಸರ್ಕಾರಿ ಶಾಲೆಗಳು ಶಿಕ್ಷಕರು, ಪೋಷಕರ ಸಹಾಕರದೊಂದಿಗೆ ಹೊಸ ರೂಪು ಪಡೆಯುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಬೇಕು' ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್.

Recommended Video

ಜಮ್ಮು- ಕಾಶ್ಮೀರದಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಾಣ..! | Oneindia Kannada
ಗ್ರಾಮೀಣ ಪ್ರದೇಶದ ಮಕ್ಕಳ ನಡಿಗೆ, ಸರ್ಕಾರಿ ಶಾಲೆಗಳ ಕಡೆಗೆ

ಗ್ರಾಮೀಣ ಪ್ರದೇಶದ ಮಕ್ಕಳ ನಡಿಗೆ, ಸರ್ಕಾರಿ ಶಾಲೆಗಳ ಕಡೆಗೆ

ನೂತನ ಶಾಲಾ ಕಟ್ಟಡದ ಉದ್ಘಾಟನೆ ಏ.3 ರಂದು ಶನಿವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಲಿದ್ದು, ತರಗತಿ ಕೊಠಡಿಗಳನ್ನು ಸಂಸದ ಎ.ನಾರಾಯಣಸ್ವಾಮಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಡಿಡಿಪಿಐ ರವಿಶಂಕರ್ ರೆಡ್ಡಿ, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಒಂದೊಂದೆ ಸರ್ಕಾರಿ ಶಾಲೆಗಳು ಈ ರೀತಿ ಹೊಸ ಹುಟ್ಟು ಪಡೆದುಕೊಂಡು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಗುಡ್ ಬೈ ಹೇಳಿ "ಗ್ರಾಮೀಣ ಪ್ರದೇಶದ ಮಕ್ಕಳ ನಡಿಗೆ, ಸರ್ಕಾರಿ ಶಾಲೆಗಳ ಕಡೆಗೆ' ಎಂಬ ಸಂದೇಶವನ್ನು ನೀಡುತ್ತಾರಾ ಕಾದು ನೋಡಬೇಕಿದೆ.

English summary
In BOSCH Company sponsorship, model school built to match international standards In the village of Javanagondanahalli, chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X