ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ವಿಶೇಷ; 2 ದಶಕದ ಬಳಿಕ ದಾಖಲೆ ಬರೆದ ವಿವಿ ಸಾಗರ ಡ್ಯಾಂ

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ನವೆಂಬರ್ 28; ಬಯಲು ಸೀಮೆಯ ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಿವಿ ಸಾಗರ ಜಲಾಶಯದಲ್ಲಿ ಎರಡು ದಶಕದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯದ ಭಾನುವಾರದ ನೀರಿನ ಮಟ್ಟ 122.75 ಅಡಿ. ಡ್ಯಾಂ ತುಂಬುವ ವಿಶ್ವಾಸದಲ್ಲಿದ್ದರೆ, ಇತ್ತ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಹೊಸ ಚೈತನ್ಯ ಮೂಡಿದೆ.

ಚಂಡಮಾರುತದ ಪರಿಣಾಮ ಕಳೆದ 15 ದಿನಗಳ ಹಿಂದೆ ಸುರಿದ ಜಿಟಿ-ಜಿಟಿ ಮಳೆಯಿಂದ ಹಾಗೂ ಭದ್ರಾ ಜಲಾಶಯದಿಂದ ಹರಿಸಿದ ನೀರಿನಿಂದ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬಂದಿದೆ. 2000ನೇ ಇಸವಿಯಲ್ಲಿ 122.50 ಅಡಿ ತುಂಬಿದ್ದ ಡ್ಯಾಂ ದಾಖಲೆ ಬರೆದಿತ್ತು. ಈಗ 2021 ನವೆಂಬರ್‌ನಲ್ಲಿ 122.75 ಅಡಿಗೆ ಡ್ಯಾಂ ನೀರಿನ ಮಟ್ಟ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ

1958ರಲ್ಲಿ ಡ್ಯಾಂ ನೀರಿನ ಮಟ್ಟ 124.25 ಅಡಿ ದಾಟಿತ್ತು. ಇದೀಗ ಆ ದಾಖಲೆಯನ್ನು (63 ವರ್ಷಗಳ ನಂತರ) ಮುರಿಯಲು ಒಂದೂವರೆ ಅಡಿ ಮಾತ್ರ ಬಾಕಿಯಿದೆ. ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಮಳೆಯಲ್ಲಿ ತುಂಬುವುದು ವಾಡಿಕೆ. ಆದರೆ ವಿವಿ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಡ್ಯಾಂನಲ್ಲಿ ನೀರು ಶೇಖರಣೆಯಾಗುತ್ತಿರುವುದು ವಿಶೇಷ.

ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರುವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು

1935ರಲ್ಲಿ 135.25 ಅಡಿ ನೀರು ಹರಿದು ಬಂದಿದ್ದರಿಂದ ಮೊದಲ ಬಾರಿಗೆ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು. ತದನಂತರ 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿತ್ತು‌. 1957ರಲ್ಲಿ 125.05 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. 2000 ಸಾಲಿನಲ್ಲಿ 122.50 ಅಡಿಗೆ ಮಾತ್ರ ನೀರಿನ ಮಟ್ಟ ತಲುಪಿತ್ತು. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿ ನೀರು ಜಲಾಶಯಕ್ಕೆ ಹರಿದು ಬಂದರೆ 88 ವರ್ಷಗಳ ನಂತರ ಎರಡನೇ ಬಾರಿಗೆ ಕೋಡಿ ಬೀಳುವ ಸಂಭವವಿದೆ. ಒಂದು ವೇಳೆ ಈ ವರ್ಷ ಕೋಡಿ ಬೀಳದಿದ್ದರೂ ಮುಂಬರುವ ಮಳೆಗಾಲದಲ್ಲಿ ಕೋಡಿ ಬೀಳುವ ನಿರೀಕ್ಷೆ ಇದೆ.

ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿ

ಡೆಡ್ ಸ್ಟೋರೇಜ್ ತಲುಪಿದ್ದ ಜಲಾಶಯ

ಡೆಡ್ ಸ್ಟೋರೇಜ್ ತಲುಪಿದ್ದ ಜಲಾಶಯ

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಡ್ಯಾಂ ಬತ್ತಿ ಹೋಗಿ, ಡೆಡ್ ಸ್ಟೋರೆಜ್ ತಲುಪಿತ್ತು. ಆದರೆ ಈಗ ದಿನ ಕಳೆದಂತೆ ನೀರಿನ ಮಟ್ಟ ಏರಿಕೆಯಾಗಿದ್ದು, ಜಲಾಶಯ ತುಂಬುವ ಹಂತಕ್ಕೆ ಬಂದು ನಿಂತಿದೆ. ಜಲಾಶಯದ ಎತ್ತ ಕಣ್ಣು ಹಾಯಿಸಿ ನೋಡಿದರು ದೂರ ದೂರಕ್ಕೆ ಕಾಣುವ ನೀರಿನ ಜಲರಾಶಿ. ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಜಲಾಶಯದ ನೀರಿನ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಸಂಭವಿಸಿತ್ತು. ತೋಟಗಳು ಒಣಗಿ ತೀವ್ರ ಸಂಕಷ್ಟಕ್ಕೆ ರೈತರು ಸಿಲುಕಿದ್ದರು. ಮತ್ತೊಂದು ಕಡೆ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಜನವರಿ ಅಂತ್ಯದವರೆಗೆ ನೀರು ಹರಿಸಬೇಕು ಎಂಬ ಸರ್ಕಾರದ ಆದೇಶ ಇದೆ. ಈ ಆದೇಶದಂತೆ ನೀರು ಹರಿದು ಬಂದರೆ ಡ್ಯಾಂ ನೀರಿನ ಮಟ್ಟ ಮತ್ತೊಷ್ಟು ಹೆಚ್ಚಳವಾಗುವ ಎಲ್ಲ ಲಕ್ಷಣಗಳಿವೆ.

ಕೊಳವೆ ಬಾವಿಗಳಲ್ಲಿ ಉಕ್ಕಿ ಬರುತ್ತಿದೆ ನೀರು

ಕೊಳವೆ ಬಾವಿಗಳಲ್ಲಿ ಉಕ್ಕಿ ಬರುತ್ತಿದೆ ನೀರು

ಇನ್ನು ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್‌ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50 ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮ್ಯ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಜಲಾಶಯ ತುಂಬುವ ಹಂತಕ್ಕೆ ಬಂದಿರೋದು, ರೈತ ಸಮುದಾಯದಲ್ಲಿ ಚೈತನ್ಯ ಮೂಡಿಸಿದೆ. ಮತ್ತೊಂದು ಕಡೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದಂತಾಗಿದೆ. ಸತತ ಬರದಿಂದ ಕೃಷಿಯನ್ನೇ ಮರೆತಿದ್ದ ರೈತರು ಹಗಲಿರುಳು ತಮ್ಮ ಜಮೀನು, ತೋಟಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಲಾಶಯ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಲಾಶಯ

112 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಮಾರಿಕಣಿವೆ ಡ್ಯಾಂ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸುಮಾರು ಶೇ 85ರಷ್ಟು ತುಂಬಿರುವ ಡ್ಯಾಂನ ರಮಣೀಯ ನೋಟ ನೋಡುಗರನ್ನು ಕಣ್ಮನ ಸೆಳೆಯುವಂತೆ ಮಾಡಿದೆ.

ಇನ್ನೂ ಪೂರ್ಣಮಟ್ಟ ತಲುಪಲು ಸುಮಾರು 12.25 ಅಡಿ ನೀರು ಬಾಕಿ ಇದ್ದು, ಈ ಬಾಕಿ ಇರುವ ನೀರು ಹರಿದು ಬಂದರೆ ಜಲಾಶಯ ತುಂಬುತ್ತದೆ. ಜಲಾಶಯದ ಲೈವ್ ಸ್ಟೋರೇಜ್ 22.47 ಇದೆ. 5.66 ಟಿಎಂಸಿ ನೀರು ಬಂದಲ್ಲಿ ಎರಡನೇ ಬಾರಿಗೆ ಕೋಡಿಯಲ್ಲಿ ನೀರು ಹರಿಯಬಹುದು.
ಹಿರಿಯೂರು ತಾಲ್ಲೂಕಿನ ರೈತಾಪಿ ವರ್ಗಕ್ಕೆ ಅನುಕೂಲಕ್ಕಾಗಿ 1907ರಲ್ಲಿ ವಾಣಿವಿಲಾಸ ಜಲಾಶಯವನ್ನು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಅಂದರೆ 1898 ರಿಂದ 1907ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ ಈಗ ಅಣೆಕಟ್ಟು ಶತಮಾನ ದಾಟಿದೆ.

Recommended Video

ಟೊಮ್ಯಾಟೋ ರೇಟ್ ಕುಸಿತ: ರೈತರಿಗೆ ಆತಂಕ,ಗ್ರಾಹಕರಿಗೆ ಸಂತಸ | Oneindia Kannada
ವೇದಾವತಿ ನದಿಗೆ ಅಡ್ಡವಾಗಿ ಡ್ಯಾಂ

ವೇದಾವತಿ ನದಿಗೆ ಅಡ್ಡವಾಗಿ ಡ್ಯಾಂ

ಮೈಸೂರು ಅರಸರ ಕಾಲದಲ್ಲಿ ಈ ಜಲಾಶಯವು ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಹತ್ತಿರ ಮಾರಿಕಣಿವೆ ಎಂಬ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ನಿರ್ಮಿಸಿದ್ದಾರೆ. 1897ರಲ್ಲಿ ಪ್ರಾರಂಭವಾದ ಕಾಮಗಾರಿಯನ್ನು 10 ವರ್ಷದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ಮುಗಿಸಿ ಜಲಾಶಯವನ್ನು ನಿರ್ಮಿಸಲಾಯಿತು. ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50. ಮೀಟರ್, ಜಲಾವೃತ ಪ್ರದೇಶ 5374 ಚದರ ಕಿಲೋ ಮೀಟರ್. ಜಲಾಶಯ 850.30 (30 ಟಿಎಂಸಿ) ನೀರಿನ ಸಾಮರ್ಥ್ಯ ಹೊಂದಿದೆ.

ಒಟ್ಟಾರೆಯಾಗಿ ಮಳೆ ಇಲ್ಲದೆ ಬಳಲಿ ಬೆಂಡಾಗಿದ್ದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರದಲ್ಲಿ ನೀರಿನ ಮಟ್ಟ ಹೆಚ್ಚಳ ಇದ್ದು ಇಡೀ ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ಆ ಮೂಲಕ ಜಿಲ್ಲೆಗೆ ಅಂಟಿದ್ದ ಬರದ ಕರಿನೆರಳು ದೂರ ಸರಿದಿದೆ.

English summary
Chitradurga district Hiriyur taluk Vanivilas sagar dam recorded 122.75 feet water after 21 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X