ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಮಾನತು
ಚಿಕ್ಕಮಗಳೂರು, ನವೆಂಬರ್ 19: ಅವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರನ್ನು ಬಿಜೆಪಿ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಸುಜಾತ ಕೃಷ್ಣಪ್ಪ ಅವರನ್ನು ಅಮಾನತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷದ ತೀರ್ಮಾನ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಸುಜಾತಾ ಅವರ ಮೇಲಿತ್ತು. ಸುಜಾತಾ ಕೃಷ್ಣಪ್ಪ ಅವರಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗಿದೆ. ಈ ಕುರಿತು ಸಮಜಾಯಿಷಿ ನೀಡಲು ಸೂಚಿಸಿದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ಚಿಕ್ಕಮಗಳೂರು: ಜಿ.ಪಂ ಅಧ್ಯಕ್ಷೆ ರಾಜೀನಾಮೆಗೆ ಸ್ವಪಕ್ಷಿಯ ಸದಸ್ಯರ ಆಗ್ರಹ
ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷಗಿರಿಗೆ ಸುಜಾತ ಕೃಷ್ಣಪ್ಪ ರಾಜೀನಾಮೆ ನೀಡಿರಲಿಲ್ಲ. ಹೀಗಾಗಿ ಬುಧವಾರ ಸ್ವಪಕ್ಷಿಯ ಸದಸ್ಯರೇ ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದ್ದರು.
ಪಕ್ಷದ ಆಂತರಿಕ ಒಪ್ಪಂದದಂತೆ ನೀವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಪಟ್ಟು ಹಿಡಿದಿದ್ದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು. ನಂತರ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದಿದ್ದರು.
ಈ ಮುನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಖುದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೂಚನೆ ನೀಡಿದ್ದರೂ ಸುಜಾತ ಕೃಷ್ಣಪ್ಪ ಸೊಪ್ಪು ಹಾಕಿರಲಿಲ್ಲ. ಇದೀಗ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.