• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುರಿವ ಮಳೆ, ಬೆಚ್ಚನೆಯ ಕಾಫಿ ಮಲೆನಾಡಿಗರ ಜೀವಾಳ

By ರೇಖಾ ಬೆಳವಾಡಿ
|

ಮಳೆ ಮತ್ತು ಕಾಫಿ ಮಲೆನಾಡಿಗರ ಜೀವಾಳ. ಧೊ ಧೊ ಅಂತ ಮಳೆ ಸುರಿತಾ ಇರಬೇಕು, ಸೊರ್ ಸೊರ್ ಅಂತ ಕಾಫಿ ಹೀರ್ತಾನೆ ಇರಬೇಕು.... ಅದೇ ಮಲೆನಾಡ ಲಕ್ಷಣ.

ಚಟ್ಟಿಯಿಂದ ಲೋಟಕ್ಕೆ, ಲೋಟದಿಂದ ಚಟ್ಟಿಗೆ ಭೋರ್ಗರೆವ ಕಾಫಿ ಯಾವ ಜಲಪಾತಕ್ಕೂ ಕಡಿಮೆ ಇಲ್ಲ.

ಈ ಕಾಫಿ ಫಿಲ್ಟರ್ ಗೆ ವಿರಾಮ ಅನ್ನೋದೆ ಇಲ್ಲ ಬಿಡಿ.

ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ

ಆಮೇಲೆ ಈ ಬೇರೆಬೇರೆ ಊರಿನಿಂದ ಬಂದ ಮಂದಿಗೆ ನಮ್ಮವರು ಕಾಫಿ ಕೊಟ್ರೆ , ಕಾಫಿ ಲೋಟ ... ಕೋಡಿ ಒಡೆದ ತುಂಬು ಕೆರೆಯಂತೆ ಕಂಡು ... ಸ್ವಲ್ಪ ತಡವರಿಸಿಕೊಂಡು, ಅಯ್ಯೋ!!!! ಇಷ್ಟೊಂದು ಬೇಡಪ್ಪ, ಒಂದೇ ಒಂದು ಸಿಪ್ ಸಾಕು.... ಅಂತ ರಾಗ ಎಳೆದರೆ- ನಮಗೆ ಒಂಥರಾ ಪಿತ್ತ ನೆತ್ತಿಗೆ ಏರಿದಂತಾಗುತ್ತೆ.

ಹ ಹ್ಹ ಹ್ಹ ಕಾರಣ ಬೇರೆ ಬೇರೆ ....

ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ

ಒಂದೇ ಒಂದು ಸಿಪ್ ಕೊಟ್ಟರೆ ಕಾಫಿಗೇ ಅವಮಾನ ಆದಂತೆ, ಮತ್ತೊಂದು ಒಂದೇ ಒಂದು ಸಿಪ್ ಹಿಡಿಸೋ ಅಳತೆಯ ಲೋಟದ ಕೊರತೆ .ಅಷ್ಟು ದೊಡ್ಡ ಲೋಟದಲ್ಲಿ ಇಷ್ಟೇ ಇಷ್ಟು ಕಾಫಿ ತಳ ಕಂಡ ಬಾವಿ ನೀರಂತೆ ಕಾಣುತ್ತೆ.

ತುಂತುರು ಸೋನೆ ಮಳೆಗಾಳಿ ಕಾಡಂಗಳದ ಪಾರಿಜಾತ , ಸಂಪಿಗೆ ಹೂ ಕಂಪು ನಾಡಂಗಳದ ನಾಸಿಕವನು ಮುದಗೊಳಿಸುವಂತೆ , ಕಾಫಿ ಹೂ ಪರಿಮಳ ಕೂಡಾ.

ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು

ಮಳೆಗಾಲದ ಹದಿಯಿರುಳಲಿ ಕಿಟಕಿಯ ಬಳಿ ಕುಳಿತ ಕೆಂಪು ಕದಪುಗಳಿಗೆ ಹನಿಗಾಳಿ ತನ್ನ ಹದ್ದು ಮೀರಿ ಸೋಕಿದಂತೆ, ಎಳೆಬಿಸಿಲಿಗೆ ಹೊಳೆವ ಕೆಂಪು ಕಾಫಿ ಹಣ್ಣುಗಳು ಕಣ್ಮನಸುಗಳಿಗೆ ಹಬ್ಬ.

ಕಾಫಿ ಬಣ್ಣ ಹಾಗೂ ವಾಸನೆ ಇಂದಲೇ ರುಚಿ ಹೀಗೇ ಇರತ್ತೆ ಅಂತ ಹೇಳೋ ಕಲೆ ನಮಗೆ ಬಹಳ ಸಣ್ಣ ವಯಸ್ಸಿನಲ್ಲೇ ಕರಗತವಾಗಿರತ್ತೆ....

ಕುದಿಸಿ ಸೋಸಿ ಕೊಟ್ರೆ ಕಾಫಿ ಕಷಾಯ ಆಗುತ್ತೆ ಅಷ್ಟೇ

ಕುದಿಸಿ ಸೋಸಿ ಕೊಟ್ರೆ ಕಾಫಿ ಕಷಾಯ ಆಗುತ್ತೆ ಅಷ್ಟೇ

ಕಾಫಿ ಆಚಾರ ವಿಚಾರ ಸಂಪ್ರದಾಯಗಳು ಬಹಳ ಸುಂದರ. ಕಾಫಿ ಮಾಡೋವಾಗ ಕ್ರಮ ಗೊತ್ತಿರಬೇಕು. ಇದೆಲ್ಲ ಯಾಕೆ ಹೇಳ್ತಿದೀನಿ ಅಂದ್ರೆ, ಕಾಲೇಜು ದಿನಗಳಲ್ಲಿ ಒಬ್ಬ ಗೆಳತಿ ಮನೆಗೆ ಓದಲು ಹೋಗುತ್ತಿದ್ದಾಗ ಅವರ ಮನೆಯಲ್ಲಿ ಕೊಡುತ್ತಿದ್ದ ಕಾಫಿಯನ್ನ ನಾನು ಸ್ವಲ್ಪ ದಿನ ಕಷಾಯ ಅಂತನೇ ತಿಳಕೊಂಡಿದ್ದೆ. ಒಂದಿನ "ಆಂಟಿ ನಮ್ ಮನೆಲಿ ಮಳೆಗಾಲದಲ್ಲಿ ಮಾತ್ರ ಒಂದು ಹೊತ್ತು ಕಾಷಾಯ ಕುಡಿತೀವಿ" ಅಂತ ಮಾತು ಮುಗಿಸೋದ್ರಲ್ಲಿ ನನ್ನೆದುರು ಒಂದು ಕೈಯಲ್ಲಿ ಕಾಫಿ ಮತ್ತೊಂದು ಕೈಯಲ್ಲಿ ಪೇಪರ್ ಹಿಡಿದಿದ್ದ ಅಂಕಲ್ "ಏನೇ...ಇಲ್ಕೇಳು....ಕಾಫಿಗೆ ಸ್ವಲ್ಪ ಸಕ್ಕರೆ ಹಾಕು" ಅಂದಾಗಲೇ ನನ್ನ ಸಂಶಯದ ಆದಿ ಹಾಗು ಅಂತ್ಯ. ಅಂದೇ ಅವರ ಮನೆ ಕಾಫಿಯ ಕೊನೆಯ ಭೇಟಿ .

ಇದೆಲ್ಲ ಯಾಕೆ ಹೇಳ್ತಾ ಇದೀನಿ ಅಂದ್ರೆ, ಹಾಲು ,ಕಾಫಿ ಪುಡಿ ಸಕ್ಕರೆ ಎಲ್ಲ ಒಟ್ಟಿಗೆ ಹಾಕಿ ಕುದಿಸಿ ಸೋಸಿ ಕೊಟ್ರೆ ಕಾಫಿ ಕಷಾಯ ಆಗದೇ ಇರುತ್ತೋ ಇಲ್ವೋ ನೀವೇ ಹೇಳಿ???!!!!

ಕಾಫಿ ಪರಿಮಳ ಮೈ ಮನಸುಗಳನು ಜಾಗೃತಗೊಳಿಸುತ್ತೆ

ಕಾಫಿ ಪರಿಮಳ ಮೈ ಮನಸುಗಳನು ಜಾಗೃತಗೊಳಿಸುತ್ತೆ

ಬೆಳಿಗ್ಗೆ ಎದ್ದು ಮುಖ ತೊಳೆದು ಅಮ್ಮಂದಿರು ಮೊದಲು ಮಾಡುವ ಕೆಲಸವೇ ಸ್ಟವ್ ಹಚ್ಚಿ ನೀರು ಕುದಿಸೋದು, ಫಿಲ್ಟರ್ ಗೆ ಘಮಘಮಿಸುವ ಕಾಫಿ ಪುಡಿ ಹಾಕಿ, ತಕ ತೈ ಎಂದು ಕುಣಿಯುತಿರುವ ಬಿಸಿ ನೀರನ್ನು ಸೇರಿಸಿ, ಭದ್ರವಾಗಿ ಮುಚ್ಚಳ ಮುಚ್ಚಿ ಇಕ್ಕಳದಲ್ಲಿ ಫಿಲ್ಟರ್ ತಲೆ ಬೆನ್ನು ಒಂದೆರಡು ಸಲ ತಟ್ಟಿದರೆ , ಗಟ್ಟಿಯಾದ ರುಚಿಯಾದ ಡಿಕಾಕ್ಷನ್ ಅನ್ನು ತಾವು ಬಾಗಿಲು ಸಾರಿಸಿ ಹೊಸಲಿಗೆ ರಂಗೋಲಿ ಹಾಕಿ ಬರುವುದರೊಳಗೆ ತಯಾರಿಡುವಂತೆ ಫಿಲ್ಟರ್ ಗೆ ಕೊಡುವ ಸೂಚನೆ.

ಸುಪ್ರಭಾತದಂತೆ, ಕಾಫಿ ಪರಿಮಳ ಮೈ ಮನಸುಗಳನು ಜಾಗೃತಗೊಳಿಸುತ್ತದೆ.... ಇನ್ನೂ ಬಣ್ಣ ರುಚಿಗೆ ಒಂದು ಪವಾಡ ಸದೃಶ ಶಕ್ತಿ ಇದೆ ಅಂದರೆ ತಪ್ಪಾಗಲ್ಲ.

ಕಾಫಿ ಪರಿಮಳ ಇಡೀ ಅಡುಗೆ ಮನೆಯನ್ನು ಆವರಿಸುತ್ತಾ ಹೋದಂತೆ ಡಬ್ಬದಲ್ಲಿರುವ ಅಕ್ಕಿತರಿ, ಅವಲಕ್ಕಿ, ಒರಳಲ್ಲಿ ತಿರುವಿದ ಹದವಾಗಿ ಹುದುಗಿದ ದೋಸೆ ಹಿಟ್ಟು ತಮ್ಮ ಸರದಿಯಲ್ಲಿ ಮುಂದಿನ ತಿಂಡಿ ಕಾರ್ಯಕ್ರಮಕ್ಕೆ ತಯಾರಾಗುತ್ತವೆ.

ಅಜ್ಜಿ ಮೊಮ್ಮಕ್ಕಳ

ಅಜ್ಜಿ ಮೊಮ್ಮಕ್ಕಳ " ಕಾಫಿ ಕೂಟ" ಪ್ರಸಂಗಗಳು

ಜನ ವಾಕಿಂಗ್, ಜಾಗಿಂಗು, ಜಿಮ್ಮು,ನಗೆ ಕೂಟ ಮುಗಿಸಿ ಮನೆಗೆ ಬಂದಂತೆ ದಿನದ ಮೊದಲ ಮೀಟಿಂಗ್ ಶುರುವಾಯಿತು ಅಂತನೇ. ಯಾವ ಕಾಲದಿಂದಲೂ ಕಾಫಿ ಎಲ್ಲರನ್ನೂ ಒಂದಾಗಿಸುವ, ಮನಸುಗಳ ಪಿಸುಮಾತುಗಳನ್ನು ತಲುಪಿಸುವ, ಸಂತೋಷ ಪ್ರೀತಿಯ ಸಂಚಾಲಕ, ಮಧ್ಯವರ್ತಿ, ಕಾರ್ಯಕರ್ತನಂತೆ. ಅಪ್ಪ ಅಮ್ಮ ತಾತ ಅಜ್ಜಿ ಮೊಮ್ಮಕ್ಕಳ "ಕಾಫಿ ಕೂಟ" ಪ್ರಸಂಗಗಳು ಬಹಳ ಮುದವಾಗಿರುತ್ತೆ.

ಒಬ್ಬರಿಗೆ ಸಕ್ಕರೆ ಬೇಕು, ಇನ್ನೊಬ್ಬರಿಗೆ ಕಡಿಮೆ ಮತ್ತೊಬ್ಬರಿಗೆ ಸಕ್ಕರೆ ರಹಿತ ಕಾಫಿ....ಹೀಗೆ. ಬಿಸಿ ಬಿಸಿಯಾಗಿ ಕಾಫಿ ಕುಡುದ್ರೇನೇ ಮಜ. ಅಜ್ಜಿ ಗೆ ತಾತನ ಮೇಲೆ ಸಿಟ್ಟು ಯಾಕೇಂದ್ರೆ ತಾನು ಸಕ್ಕರೆ ತಿನ್ನೊ ಹಾಗಿಲ್ಲ ಅಂತ ಗೊತ್ತಿದ್ರೂ ನ್ಯೂಸ್ ಪೇಪರ್ ತರ್ತೀನಿ ಅಂತ ಒಳಗೆ ಹೋಗಿ ಸಕ್ಕರೆ ಹಾಕೊಂಡು ಬರ್ತಾರೆ ಅಂತ.

ಡಿಕಾಕ್ಷನ್ ಹಾಲು ಸಕ್ಕರೆ ಒಂದೊಂದಾಗಿ ಕಾಫಿ ಚಟ್ಟಿಯ ಅಖಾಡಕ್ಕೆ ಇಳಿದು ಕೈ-ಕೈ ಮಿಲಾಯಿಸಿ, ಸಣ್ಣುರಿಯಲಿ ಒಂದಾಗಿ ಬೆರೆತು ನಮ್ಮ ಬಣ್ಣ ರುಚಿಗಂಳಿಂದ ಶಕ್ತಿ ಮೀರಿ ಎದುರಾಳಿಯ ಮೈ ಮನಸನ್ನು ಗೆಲ್ಲುತ್ತವೆ. ತಾತನಿಗೆ ಕಾಫಿ ಹಿಡಿಸಿದರೆ ಅಜ್ಜಿಯ ಧನ್ಯ. ದಿನ ದಿನ ಅಜ್ಜಿ ಮಾಡೋ ಕಾಫಿನ ಹೊಗೊಳೋಕೇ ತಾತನಿಗೇ ಒಂಥರಾ ನಾಚಿಕೆ. ಅಪ್ಪಿ ತಪ್ಪಿ ಅಜ್ಜಿ ಊರಿಗೆ ಹೋದಾಗ ಬೇರೆ ಕೈಕಾಫಿ ಕುಡಿದ ಮೋರೆ ಭಗ್ನ ಪ್ರೇಮಿಯಂತಾಗಿರುತ್ತದೆ.

ಮೊಮ್ಮಕ್ಕಳು coffee day ಅಂತೆಲ್ಲ ಮಾತಾಡುವಾಗ

ಮೊಮ್ಮಕ್ಕಳು coffee day ಅಂತೆಲ್ಲ ಮಾತಾಡುವಾಗ

ಇನ್ನು ಅಪ್ಪನ ಕಾಫಿ ಅಭಿಮಾನ ಎಷ್ಟರ ಮಟ್ಟಿಗೆ ಅಂದ್ರೆ, ದೂರದ ನೆಂಟರು -ಇಷ್ಟರು ಗೆಳೆಯರ ಮನೆಗೆ ಹೋದಾಗ ಹಣ್ಣು ಹೂವಿನ ಜೊತೆಗೆ ಕಾಫಿ ಪುಡಿ ಒಯ್ಯುವ ವಾಡಿಕೆ ಶುರು ಮಾಡಿದರು.

ಮೊಮ್ಮಕ್ಕಳು coffee day ಅಂತೆಲ್ಲ ಮಾತಾಡುವಾಗ, ಅದೇನದು ನೋಡೇಬಿಡೋಣ ಅಂತ ಒಂದಿನ ಪರಿವಾರ ಸಮೇತವಾಗಿ ಹೋದರೆ... ತರಾವರಿ ಜನ ವಿಧವಿಧವಾದ ಕಾಫಿಗಳನ್ನ ನೋಡಿ ಅಜ್ಜಿ- ತಾತನಿಗೊಂದೇ ಆಶ್ಚರ್ಯ... ಮೊಮ್ಮಕ್ಕಳು ಫೋಟೋ ಗೀಟೋ ,ಪೋಸು ಅಂತ ಅಂತಿದ್ರೆ ,ಅಲ್ಲ ಕಾಫಿ ಕುಡಿತಿರೋದನ್ನ ಎಂತ ಫೋಟೊ ತೆಗೆಯುವುದು??? ಈಗೇನು face book ಹಾಕೋದಾ!!!!! ಅನ್ನೋ ತಾತನ ಪ್ರಶ್ನೆಗಳಿಗೆ ಉತ್ತರ ಕೊಡೋ ಸಮಯಕ್ಕೆ ಮನೆ ಸಿಕ್ಕೇ ಬಿಡುತ್ತೆ.

ಕಾಫಿ ಜೊತೆಗೆ ಪುಸ್ತಕದ ಗೀಳು

ಕಾಫಿ ಜೊತೆಗೆ ಪುಸ್ತಕದ ಗೀಳು

ತಾತಾ ಚೆನ್ನಾಗಿತ್ತಾ ಕಾಫಿ ???? ಅಂತ ಕೇಳಿದ್ರೆ...ಒಂಥರಾ ಚೆನ್ನಾಗಿತ್ತು... ಮೇಲೆಲ್ಲಾ ಕೆನೆ ಕೆನೆ ನೊರೆ ನೊರೆ ಇತ್ತಲ,.... ಇದೆನಾ ಕ್ಯಾಪೆಚೀನೊ ಅಂದೆರ.!!!! ಆದರೂ ದಿನಾ ದಿನಾ ಈಥರ ಕಾಫಿ ರುಚ್ಸಲ್ಲ ಕಣಪ್ಪಾ ನಮಗೆ. ಅಪರೂಪಕ್ಕೆ ಒಂದಂದು ಸಲ ಕುಡಿಬಹುದು ಅಷ್ಟೇ ಅಲ್ವೇನ್ರೀ.. ಅಂತ ಅಜ್ಜಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಕೊಡ್ತಾರೆ.

ಏನೇ.... ಸಂಜೆ ಆಯಿತು ದೀಪ ಹಚ್ಚು ... ಹಾಗೆ ಒಂದ್ಹನಿ ಕಾಫಿ ಬಿಸಿ ಮಾಡು... ಆಮೇಲೆ ಊಟದ time ಆಗತ್ತೆ.... ಹಾಗೆ ನಿನ್ನ ತಂಗಿಗೆ ಈಗ್ಲೆ phone ಮಾಡಿಬಿಢು... ಇವತ್ತು ಮಗಳು ಜಾನಕಿ ಚೆನ್ನಾಗಿದೆ... ಅಂತ ಅಂದ್ರೆ Tv remote ತಾತನ ಸುಪರ್ದಿಗೆ ಅಂತ ಅರ್ಥ 😊

ಅಮ್ಮ ಅಜ್ಜಿ ಗೆ ಮಳೆಗಾಲದಲ್ಲಿ ಕಾಫಿ ಜೊತೆಗೆ ಪುಸ್ತಕದ ಗೀಳು. ಮಹಡಿಯ ಕೋಣೆ ಭರ್ತಿ ಪುಸ್ತಕಗಳು. Red Oxide ನ ಕೆಂಪು ನೆಲದ ಮೇಲಿನ ಜಮಖಾನದ ಮೇಲೊಬ್ಬರು, ಕಿಟಕಿಯ ಬಳಿ ಇರುವ easy chair ಮೇಲೊಬ್ಬರು ಪುಸ್ತಕ ಹಾಗು ಕಾಫಿ ಹಿಡಿದು ಕೂತರೆ ಇರುವಲ್ಲೇ ಸ್ವರ್ಗ.

ತಾತನ ಹೊಸ

ತಾತನ ಹೊಸ " ಕಾಫಿ ಕಥೆ " ಶುರುವಾಗುತ್ತದೆ

ಇನ್ನು ತಾತನದೊಂದು ಡಬ್ಬ ಇದೆ. ಅದರಲ್ಲಿ ಅಯ್ಯಂಗಾರ್ ಬೇಕರಿಯ ಬ್ರೆಡ್, ಬನ್ನು, ರಸ್ಕು ನಿರ್ವಹಣೆ ಮಾಡೊ ಜವಾಬ್ದಾರಿ ಅವರದೇ. ಒಂದಿನ ಬ್ರೆಡ್, ಮತ್ತೊಂದು ದಿನ ಬನ್ನು, ರಸ್ಕು ಹೀಗೆ ಆಗ ತಯಾರಾದ ಈ ತಿನಿಸುಗಳನ್ನು, ಅಯ್ಯಂಗಾರ್ ಬೇಕರಿ ಕಟ್ಟೆ ಮುಂದೆ ಕಾದು, ಪೊಟ್ಟಣ ಕಟ್ಟಿಸಿ ತರುವುದು ತಾತನ ದಿನಚರಿ. ಬೆಳಗಿನ ಕಾಫಿಗೆ ಬ್ರೆಡ್, ಬನ್ನು ಎಲ್ಲರ ಕೈಯಲ್ಲಿಟ್ಟು ಮಕ್ಕಳು "ತಾತಾ ಇನ್ನೊಂದು ಬನ್ನು" ಅಂತ ಕೈ ಚಾಚಿದ್ರೆ, ತಾತನಿಗೆ ಖುಷಿ.

ತನ್ನ ಕೈ ರುಚಿ ಗಂಡ ಹೊಗಳಿದಾಗ ಆಗುವ ಖುಷಿಯಂತೆ. ದಿನ ಕಾಫಿ ಸಮಯದಲ್ಲಿ ತಮ್ಮ ಬಾಲ್ಯ ಮೆಲುಕು ಹಾಕುವ ತಾತ, ಹಂಡೆ ಒಲೆಯಲ್ಲಿ ಮಾಡುತ್ತಿದ್ದ ಬೆಲ್ಲದ ಕಾಫಿ ಕಥೆ, ಕಾಫಿಗೆಂದೇ ಮೀಸಲಿದ್ದ ಚಟ್ಟಿಯ ಕಥೆ ಹೇಳಲು ಶುರುಮಾಡಿದರೆ ಮಕ್ಕಳು ದಿನಾ ಅದೇ ಕಥೆ ಹೇಳ್ತೀಯ ತಾತಾ ಹೋಗು ಅಂದ್ರೆ, ಅರೇ ಬನ್ರೋ ಇಲ್ಲಿ, ಇವತ್ತು ಕಾಫಿ ತೋಟದ ಕಥೆ ಹೇಳ್ತೀನಿ ಅಂತ ತಾತನ ಹೊಸ "ಕಾಫಿ ಕಥೆ" ಶುರುವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Malnad Diaries : Rekha Belvaadi shares her memory about the Coffee Culture in Chikkamagaluru. Article takes you to rainy days of malenadu and how people enjoy every sip of coffee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more