ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿನಾಡಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್.04: ಭಕ್ತರು ದೇವರಿಗೆ ನಾನಾ ರೀತಿಯಲ್ಲಿ ಭಕ್ತಿ ಸಮರ್ಪಿಸುವುದು ಸಾಮಾನ್ಯ. ಆದರೆ ದೇವಿರಮ್ಮನ ಭಕ್ತರು ಮಾತ್ರ ಕೊಂಚ ವಿಭಿನ್ನ.ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ದೇಹವನ್ನು ದಂಡಿಸಿಕೊಂಡು ಭಕ್ತಿ ಸಮರ್ಪಿಸುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಬಿಂಡಿಗದ ಬಳಿಯಲ್ಲಿ ಸುಮಾರು 3,000 ಅಡಿಗಳಷ್ಟು ಎತ್ತರದಲ್ಲಿರೋ ಬೆಟ್ಟದಲ್ಲಿ ನೆಲೆಸಿರೋ ದೇವಿರಮ್ಮ ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ದಿಸೋ ದೇವತೆ. ವರ್ಷಂಪ್ರತಿ ನರಕ ಚತುರ್ದಶಿಯಂದು ದೇವಿರಮ್ಮನ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.

ದೀಪಾವಳಿ ವಿಶೇಷ ಪುರವಣಿ

ಈ ಜಾತ್ರೆಯಲ್ಲಿ ಪಾಲ್ಗೊಂಡರೆ ಭಕ್ತರ ಇಷ್ಟಾರ್ಥಗಳೆಲ್ಲಾ ಸಿದ್ದಿಸುತ್ತಂತೆ. ಹೀಗಾಗಿಯೇ ಭಕ್ತರು ಜಾತ್ರೆಯಂದು ದೇಹವನ್ನು ದಂಡಿಸಿಕೊಂಡು ಭಕ್ತಿ ಸಮರ್ಪಿಸುತ್ತಾರೆ. ಪಶ್ಚಿಮಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರೋ ದೇವೀರಮ್ಮನ ಬೆಟ್ಟ ರಾಜ್ಯದ ಎತ್ತರದ ಶಿಖರಗಳ ಸಾಲಿಗೆ ಸೇರಿದೆ.

ರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರ

ರಾಜ್ಯದ ಎತ್ತರ ಶಿಖರವೆಂಬ ಖ್ಯಾತಿಗೆ ಪಾತ್ರವಾಗಿರೋ ಮುಳ್ಳಯ್ಯನಗಿರಿ ಶ್ರೇಣಿಗೆ ಹೊಂದಿಕೊಂಡಂತಿರೋ ದೇವಿರಮ್ಮನ ಬೆಟ್ಟ ಸಮುದ್ರಮಟ್ಟದಿಂದ 3,000 ಅಡಿಗಳಷ್ಟು ಎತ್ತರದಲ್ಲಿದೆ. ಕಣ್ಣಾಡಿಸಿದಲ್ಲೆಲ್ಲಾ ಕಂಡು ಬರೋ ಹಚ್ಚ ಹಸಿರಿನ ವನಸಿರಿ, ಚುಮು ಚುಮು ಚಳಿ, ಸದಾ ಪ್ರಶಾಂತತೆಯಿಂದ ಕೂಡಿರೋ ಆಹ್ಲಾದಕರ ವಾತಾವರಣ. ಎತ್ತರದಿಂದ ಧುಮ್ಮಿಕ್ಕುತ್ತಿರೋ ಜಲಧಾರೆ. ಇಂತಹ ನಿಸರ್ಗದ ಸೌಂದರ್ಯದ ನಡುವಲ್ಲಿರೋ ಬೆಟ್ಟದಲ್ಲಿ ಚಿಕ್ಕಮಗಳೂರಿನ ಊರ ದೇವತೆ ದೇವಿರಮ್ಮ ನೆಲೆಸಿದ್ದಾಳೆ. ಮುಂದೆ ಓದಿ...

 ಬರಿಗಾಲಿನಲ್ಲಿಯೇ ಸಾಗುವ ಭಕ್ತರ ದಂಡು

ಬರಿಗಾಲಿನಲ್ಲಿಯೇ ಸಾಗುವ ಭಕ್ತರ ದಂಡು

ವರ್ಷಕ್ಕೊಮ್ಮೆ ನಡೆಯೋ ಬಿಂಡಿಗ ಜಾತ್ರೆಯ ಮೊದಲ ದಿನ ದೇವಿ ತನ್ನ ಮೂಲಸ್ಥಾನದಲ್ಲಿ ದರ್ಶನ ನೀಡುತ್ತಾಳೆ. ಅದಕ್ಕಾಗಿ ಭಕ್ತರ ದಂಡು ಬರಿಗಾಲಿನಲ್ಲಿಯೇ ಅಲ್ಲಿಗೆ ಸಾಗುತ್ತದೆ. ಸುಮಾರು 3,000 ಅಡಿಗೂ ಮೀರಿದ ಗಿರಿಪ್ರದೇಶಕ್ಕೆ ತೆರಳುವುದೇ ಒಂದು ಸಾಹಸ.

ಮಹಿಳೆಯರು ಮಕ್ಕಳು ಸೇರಿದಂತೆ ಇಳಿವಯಸ್ಸಿನವರೂ ಸಹ ಯಾವುದೇ ಭಯ ಆತಂಕವಿಲ್ಲದೇ ಬೆಟ್ಟ ಹತ್ತುತ್ತಾರೆ. ದೇವಿರಮ್ಮನ ಬೆಟ್ಟ ಚಿಕ್ಕಮಗಳೂರು ನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಇದರಲ್ಲಿ ಸುಮಾರು 22 ಕಿ.ಮೀ. ವಾಹನದ ಸಹಾಯದಿಂದ ಸಾಗಬಹುದು. ನಂತರ ಉಳಿಯೋ 8 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಮಾತ್ರವಲ್ಲ ಈ 8 ಕಿ.ಮೀ. ದೂರದವರೆಗೂ ಯಾವುದೇ ರಸ್ತೆಗಳಿಲ್ಲ. ಹೀಗಾಗಿ ಕಾಲುದಾರಿ ದುರ್ಗಮ ಹಾದಿಯನ್ನ ಬಳಸಿಕೊಂಡೇ ಸಾಗಬೇಕು. ಇನ್ನು ಬಾಬಾಬುಡನ್ ಗಿರಿ ಮಾಣಿಕ್ಯಧಾರ, ಅರಶಿನಗುಪ್ಪೆ, ಮಲ್ಲೇನಹಳ್ಳಿ ಮಾರ್ಗದ ಮೂಲಕವೂ ಸಾಗಿ ದೇವಿಯ ದರ್ಶನ ಪಡೆಯಬಹುದು.

ಒಂದೊಮ್ಮೆಯೂ ಕಡಿದಾದ ದಾರಿಯಲ್ಲಿ ನಡೆದು ಭಕ್ತರಿಗೆ ತೊಂದರೆಯಾದ ಉದಾಹರಣೆಗಳಿಲ್ಲ. ಇಂತಹ ದುರ್ಗಮ ಹಾದಿಯಲ್ಲಿ ದೇವಿರಮ್ಮ ದರ್ಶನ ಪಡಯೋ ಭಕ್ತರು ಭಕ್ತಿಯಿಂದ ದೇವಿಯ ಸ್ಮರಣೆ ಮಾಡುತ್ತ ನಡೆದ್ರೆ ಕಠಿಣ ಹಾದಿಯು ಸುಲಭವಾಗುತ್ತೆ ಅನ್ನೋದು ಭಕ್ತರ ನಂಬಿಕೆ.

 ವರ್ಷದ ನಂತರ ಬಾಗಿಲು ತೆರೆಯುತ್ತದೆ

ವರ್ಷದ ನಂತರ ಬಾಗಿಲು ತೆರೆಯುತ್ತದೆ

ನರಕಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ಬೆಳಗಿನ ವೇಳೆಯಲ್ಲಿ ಪೂಜೆ ಜಾತ್ರೆ ನಡೆದರೆ, ರಾತ್ರಿಯಾಗುತ್ತಿದ್ದಂತೆಯೇ ದಿಪೋತ್ಸವ ನಡೆಯುತ್ತದೆ. ದೇವಿರಮ್ಮನ ಬೆಟ್ಟದಲ್ಲಿರೋ ದೇವೀರಮ್ಮನ ಸನ್ನಿಧಿಯಲ್ಲಿ ಭಕ್ತರು ತರೋ, ಕಟ್ಟಿಗೆ ತುಪ್ಪ, ಸೀರೆಯನ್ನು ಬಳಸಿ ದೀಪವನ್ನು ಬೆಳಗಿಸಲಾಗುತ್ತದೆ. ಬೆಟ್ಟದಲ್ಲಿ ಹೊತ್ತಿ ಉರಿಯೋ ಬೆಳಕನ್ನು ನೋಡಿದ ನಂತರವೇ ಊರವರು ಮನೆಗಳಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ.

ದೇವಿರಮ್ಮನ ಕ್ಷೇತ್ರದಲ್ಲಿ ಒಟ್ಟು ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಮೊದಲ ದಿನ ದೇವಿರಮ್ಮನ ಬೆಟ್ಟದಲ್ಲಿ ದೇವಿಯನ್ನು ಆರಾಧಿಸಿದ್ರೆ ಎರಡನೇ ದಿನ ಬೆಟ್ಟದ ತಳದಲ್ಲಿರೋ ಮಲ್ಲೇನಹಳ್ಳಿಯಲ್ಲಿರೋ ದೇವಾಲಯದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಎರಡನೇ ದಿನ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುತ್ತೆ ಅನ್ನೋ ಪ್ರತೀತಿ ಇದೆ. ಅಂದ್ರೆ ದೀಪಾವಳಿ ಕಳೆದು ಮಾರನೆಯ ದಿನ ಇಲ್ಲಿ ಮತ್ತೊಂದು ಪವಾಡ ನಡೆಯುತ್ತದೆ. ಈ ಶುಭ ಮೂಹರ್ತದಲ್ಲಿ ಸಂಭವಿಸುವ ಪವಾಡವನ್ನು ನೋಡಲು ಭಕ್ತರ ದಂಡೆ ಹರಿದು ಬರ್ತಿದೆ. ಆ ಕ್ಷಣದ ಕೌತುಕವನ್ನು ನೋಡಲು ಭಕ್ತರು ಉಸಿರು ಬಿಗಿಹಿಡಿದು ಕುಳಿತಿರುತ್ತಾರೆ.

ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯವನ್ನು ಪ್ರದಕ್ಷಿಣಿ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸುತ್ತಿದಂತೆ ದೇವಾಲಯದ ಬಾಗಿಲು ತೆರೆದುಕೊಳ್ಳುತ್ತದೆ. ದೇವಿರಮ್ಮಳ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರದುಕೊಳ್ಳವುದು ಇಂದಿಗೂ ಕುತೂಹಲ ಮೂಡಿಸಿದೆ. ಅಲ್ಲದೇ ಈ ಜಾತ್ರೆಯ ತರುವಾಯ ದೇವಾಲಯಕ್ಕೆ ಹಾಕುವ ಬಾಗಿಲು ಮತ್ತೆ ತೆರೆದುಕೊಳ್ಳುವುದು ಇನ್ನೊಂದು ವರ್ಷದ ತರುವಾಯವೇ.

ಅನ್ಯರಿಗೂ ಜ್ಞಾನದೀಪ ದಾನ ಮಾಡಿ ದೀಪಾವಳಿ ಆಚರಿಸೋಣ...ಅನ್ಯರಿಗೂ ಜ್ಞಾನದೀಪ ದಾನ ಮಾಡಿ ದೀಪಾವಳಿ ಆಚರಿಸೋಣ...

 ಚಾಮುಂಡಿಗೂ ದೇವಿರಮ್ಮನಿಗೂ ಸಂಬಂಧವಿದೆ

ಚಾಮುಂಡಿಗೂ ದೇವಿರಮ್ಮನಿಗೂ ಸಂಬಂಧವಿದೆ

ಒಟ್ಟಾರೆ ದೀಪಾವಳಿ ದಿನದಂದು ಆರಂಭಗೊಳ್ಳುವ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದಲು ಜನಸಾಗರವೇ ಹರಿದು ಬರುತ್ತಿದೆ. ಬಡವ ಬಲ್ಲಿದನೆಂಬ ಬೇಧ ಭಾವವಿಲ್ಲದೇ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ವರ್ಷಂಪ್ರತಿ ದೇವಿರಮ್ಮನ ಜಾತ್ರೆಯ ಮುನ್ನಾದಿನ ಮಳೆಯಾಗುತ್ತಿತ್ತು, ಆದರೆ ಈ ಬಾರಿ ಮಳೆ ಬಾರದೇ ಇರುವುದರಿಂದಾಗಿ ಭಕ್ತರ ಸಂಖ್ಯೆಯಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ 3,000 ಅಡಿಗಳಷ್ಟು ಎತ್ತರದಲ್ಲಿರೋ ದೇವೀರಮ್ಮನನ್ನು ಕಾಣಲು ಭಕ್ತರು ಅನುಸರಿಸಿದ ಮಾರ್ಗ ಮಾತ್ರ ಭಯಾನಕ.

ಮೈಸೂರಿನ ಚಾಮುಂಡಿಗೂ ದೇವಿರಮ್ಮನಿಗೂ ಸಂಬಂಧವಿದೆ. ಮಹಿಶಾಸುರನನ್ನು ಮರ್ಧನ ಮಾಡಿದ ನಂತರ ಚಾಮುಂಡಿಯು ಮನಶಾಂತಿಗಾಗಿ ಒಂದು ಪ್ರಶಾಂತವಾದ, ತಂಪಾದ ಪ್ರದೇಶಕ್ಕೆ ಬಂದು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾಳೆ. ಈ ಬೆಟ್ಟದ ಮೇಲೆ ಕುಳಿತು ಚಾಮುಂಡಿಬೆಟ್ಟವನ್ನು ತಿರುಗಿ ನೋಡುತ್ತಾಳೆ.

ಆಗ ಅಲ್ಲಿ ಸಂಹಾರ ಮಾಡಿ ಬಂದಿದ್ದ ಮಹಿಶಾಸುರನ ದೇಹವನ್ನು ಕಾಗೆ, ರಣಹದ್ದುಗಳು ತಿನ್ನುತ್ತಿದ್ದನ್ನು ನೋಡಿ ಸಂತೋಷ ಪಟ್ಟಳು. ಇಲ್ಲಿನ ವಾತಾವರಣ, ಬೆಟ್ಟಗುಡ್ಡಗಳನ್ನು ನೋಡಿ, ನಾನು ಇಲ್ಲೇ ನೆಲಸಬೇಕೆಂದು ನಿಶ್ಚಯಿಸಿ. ಸಮುದ್ರ ಮಟ್ಟದಿಂದ 3000 ಕ್ಕೂ ಹೆಚ್ಚು ಅಡಿಗಳಷ್ಟಿಯುವ ಬೆಟ್ಟದ ಮೇಲೆ ನೆಲೆಯೂರುತ್ತಾಳೆ ಎಂಬುದು‌ ಪ್ರತೀತಿ.

ಚಾಮುಂಡಿ ದೇವಿಯು ಅಲ್ಲಿಗೆ ಬಂದದ್ದರಿಂದ ಅಲ್ಲೊಂದು ಚಾಮುಂಡಿ ತಾಯಿಯ ವಿಗ್ರಹವುಳ್ಳ ಮೂರ್ತಿಯನ್ನು ಪ್ರತಿಷ್ಟಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಅಲ್ಲಿ ಪೂಜೆಯನ್ನು ಮಾಡಿಕೊಂಡು ಬರಲಾಗುತ್ತಿದೆ.

 ಮೈಸೂರಿನ ಮನೆತನದವರು ದೀಪ ನೋಡಿ ನಮಸ್ಕರಿಸುತ್ತಾರೆ

ಮೈಸೂರಿನ ಮನೆತನದವರು ದೀಪ ನೋಡಿ ನಮಸ್ಕರಿಸುತ್ತಾರೆ

ವರ್ಷಕ್ಕೆ ಒಂದು ಭಾರಿ ಮಾತ್ರ ದೀಪಾವಳಿ ಹಬ್ಬದ ದಿನದಂದು ಬೆಟ್ಟಕ್ಕೆ ಹತ್ತಿ ಪೂಜೆಯನ್ನು ಮಾಡಿ ದೀಪವನ್ನು ಹತ್ತಿಸಲಾಗುತ್ತಿದೆ. ಇಲ್ಲಿ ಹೊತ್ತಿಸಿದ ದೀಪ ಮೈಸೂರಿನ ಚಾಮುಂಡಿ ತಾಯಿಗೆ ಕಾಣಿಸುತ್ತದೆ ಹಾಗೂ ಮೈಸೂರಿನ ಮನೆತನದವರು ದೀಪವನ್ನು ನೋಡಿ ನಮಸ್ಕರಿಸುತ್ತಾರೆ ಎಂಬ ನಂಬಿಕೆ ಈಗಲೂ ಈ ಭಾಗದ ಜನರ ಮನದಲ್ಲಿದೆ.

ಮೈಸೂರು ಸಂಸ್ಥಾನದ ರಾಜರು ಪ್ರತೀ ವರ್ಷ ದೀಪಾವಳಿಯ ರೇಷ್ಮೇ ಸೀರೆ, ಮಡಿಲಕ್ಕಿ, ಹಣ್ಣು, ಬಳೆ ಸೇರಿದಂತೆ ಉಡುಗೊರೆಯನ್ನು ಇಲ್ಲಿಗೆ ಕಳುಹಿಸುತ್ತಾರೆ. ಇವರು ಕಳುಹಿಸುವುದಕ್ಕೂ ಒಂದು ಹಿನ್ನೆಲೆಯಿದೆ. ಸುಮಾರು ವರ್ಷಗಳ ಹಿಂದೆ ಮೈಸೂರಿನಲ್ಲಿ ಇಬ್ಬರು ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಾರೆ. ನಂತರ ರಾಜರು ಅವರನ್ನು ಕರೆತಂದು ಬಂಧನದಲ್ಲಿಡುತ್ತಾರೆ. ಒಂದು ದಿನ ಬೆಳಗ್ಗಿನಿಂದ ರಾತ್ರಿಯವರೆಗೂ ಇಬ್ಬರು ಕಳ್ಳರು ಉಪವಾಸವಿರುತ್ತಾರೆ.

ಎಷ್ಟೇ ಹಿಂಸೆ ಮಾಡಿದರೂ ಊಟ ಮಾಡುವುದಿಲ್ಲ. ಆಗ ರಾತ್ರಿ ರಾಜನೇ ಇವರಲ್ಲಿಗೆ ಬಂದು ಕೇಳುತ್ತಾನೆ. ಆಗ ಇಬ್ಬರೂ ನಮ್ಮದು ಬೆಟ್ಟಗುಡ್ಡಗಳ ತಪ್ಪಲಿನಲ್ಲಿರುವ ಒಂದು ಹಳ್ಳಿ. ಅಲ್ಲಿ ದೇವಿರಮ್ಮ ಬೆಟ್ಟವಿದೆ. ಅಲ್ಲಿ ವರ್ಷಕ್ಕೆ ಒಂದು ಭಾರಿ ಪೂಜೆಯನ್ನು ಮಾಡುತ್ತಾರೆ. ಎಲ್ಲರೂ ಬೆಳಗ್ಗಿನಿಂದ ಉಪವಾಸವಿದ್ದಾರೆ. ರಾತ್ರಿ ಬೆಟ್ಟದಲ್ಲಿ ದೀಪ ಹಚ್ಚಿ, ಅದನ್ನು ನೋಡಿದ ನಂತರವಷ್ಟೇ ಊಟ ಮಾಡುವುದು. ಅದು ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಕಾಣಿಸುತ್ತದೆ ಎಂದು ಹೇಳುತ್ತಾರೆ.

ಇವರ ಮಾತನ್ನು ಕೇಳಿ ಬಂದು ನೋಡಿದಾಗ ಅವನ ಕಣ್ಣಿಗೆ ದೀಪ ಕಾಣಿಸುತ್ತದೆ ಅಂದಿನಿಂದ ಇಂದಿನವರೆಗೂ ಮೈಸೂಸು ಸಂಸ್ಥಾನದವರು ದೇವಿರಮ್ಮನನ್ನು ಆರಾಧ್ಯವನ್ನಾಗಿಸಿಕೊಂಡಿದ್ದಾರೆ.

ವಿಸ್ಮಯಗಳ ಆಗರ ನೆಲ್ಲಿತೀರ್ಥ ಗುಹಾಲಯದ ವಿಶೇಷತೆ ಏನೆಂದು ಬಲ್ಲಿರಾ?ವಿಸ್ಮಯಗಳ ಆಗರ ನೆಲ್ಲಿತೀರ್ಥ ಗುಹಾಲಯದ ವಿಶೇಷತೆ ಏನೆಂದು ಬಲ್ಲಿರಾ?

 ಇದೊಂದು ರೀತಿಯ ಪವಾಡ

ಇದೊಂದು ರೀತಿಯ ಪವಾಡ

ಪ್ರತೀ ವರ್ಷದ ದೀಪಾವಳಿಯ ಸಮಯದಲ್ಲಿ ಮೂರು ದಿನಗಳ ಕಾಲ ವಿಶೇಷವಾದ ಪೂಜೆ - ಪುನಸ್ಕಾರ, ಕೈಂಕರ್ಯ ಜರುಗುತ್ತವೆ. ಆಗ ಬೆಟ್ಟದ ಮೇಲಿರೋ ದೇವಿರಮ್ಮನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕರ್ಪೂರದ ಸೇವೆ, ಮಹಾಮಂಗಳಾರತಿ ನಡೆಯುತ್ತವೆ.

ಒಟ್ಟಿನಲ್ಲಿ ಕಾಫಿನಾಡಲ್ಲಿ ನೆಲೆಸಿರುವ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಅಗಣಿತ ಮಂದಿ ಭಕ್ತರ ಪಾಲಿಗೆ ಕರುಣಾಳು ಎಂದ್ರೆ ಅತಿಶಯೋಕ್ತಿ ಆಗಲಾರದು. ಒಟ್ಟಾರೆಯಾಗಿ ಜನರು ತಮ್ಮ ಆಸೆ, ಆಶೋತ್ತರಗಳನ್ನು ಈಡೇರಿಸುವ ದೇವಿಯಾಗಿ ದೇವಿರಮ್ಮನನ್ನು ನಂಬಿ ವರ್ಷಕ್ಕೊಂದು ಭಾರಿ ನಿಶ್ಕಲ್ಮಶ ಮನಸ್ಸಿನಿಂದ ಆಗಮಿಸಿ ಪಾವನರಾಗುತ್ತಿದ್ದಾರೆ.

ಇದೊಂದು ರೀತಿಯ ಪವಾಡವೆಂದೇ ಕರೆಯಬಹುದಾಗುದ್ದು, ಈ ಭಾರಿಯೂ ದೇವಿರಮ್ಮನ ಜಾತ್ರೆಗೆ ದಂಡೇ ಹರಿದು ಬರುವ ಸಾಧ್ಯತೆ ಇದೆ.

English summary
Deviramma Fair starts at Chikkamagalur on Naraka Chaturdashi.If you are participating in this fair, your likes will be fulfilled. Here is detailed information about fair significance and importance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X