"ಕಾಂಗ್ರೆಸ್ ಈಗ ಒಡೆದ ಮನೆ; ಮೂರು ಗುಂಪುಗಳ ನಡುವೆ ನಿರಂತರ ಗುದ್ದಾಟ''
ಚಿಕ್ಕಮಗಳೂರು, ಫೆಬ್ರವರಿ 27: ಕಾಂಗ್ರೆಸ್ ಈಗ ಒಡೆದ ಮನೆಯಾಗಿದ್ದು, ಮೂರು ಗುಂಪುಗಳಾಗಿ ವಿಂಗಡನೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯರವರದ್ದು ಒಂದು ಗುಂಪು, ಡಿ.ಕೆ.ಶಿವಕುಮಾರ್ರವರದ್ದು ಒಂದು ಗುಂಪು, ಮಲ್ಲಿಕಾರ್ಜುನ್ ಖರ್ಗೆಯವರದ್ದು ಒಂದು ಗುಂಪಾಗಿದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಲೇವಡಿ ಮಾಡಿದರು.
ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಕಾಂಗ್ರೆಸ್ ಒಳಜಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಮೂರು ಗುಂಪುಗಳ ನಡುವೆ 24 ಗಂಟೆಯೂ ಗುದ್ದಾಟ ನಡೆಯುತ್ತಿರುತ್ತದೆ. ಕಾಂಗ್ರೆಸ್ ಪಕ್ಷದ ಮೂರು ಗುಂಪುಗಳ ಗುದ್ದಾಟ ಹೊಸದೇನಲ್ಲ, ಈ ಗುದ್ದಾಟದಿಂದಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದರು.
ಸಕಾಲ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಸ್ಥಾನ
2006ರಲ್ಲಿ ಬಿಜೆಪಿಯವರು ಜೆಡಿಎಸ್ ಸೇರಲು ಸಿದ್ಧರಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ದೇಶವೇ ಬಿಜೆಪಿಯಾಗಿದೆ. 23 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇಷ್ಟು ಸ್ಥಾನಗಳು ಕುಮಾರಸ್ವಾಮಿಯವರ ಆಶೀರ್ವಾದದಿಂದಲೇ ಬಂದಿದೆಯಾ ಎಂದು ಪ್ರಶ್ನಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಿಜೆಪಿ ಸದೃಢವಾಗಿದೆ. 2009ರಲ್ಲಿ ಪ್ರಧಾನಿ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದಿದ್ದರು ಇವತ್ತು ಕಾಂಗ್ರೆಸ್ ಮುಕ್ತ ಭಾರತವಾಗಿದೆ ಎಂದ ಅವರು, ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದರು.