ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ; ರಸ್ತೆ ಬಿರುಕು, ಮನೆಗಳು ಕುಸಿತ

By (ಚಿಕ್ಕಮಗಳೂರು ಪ್ರತಿನಿಧಿ)
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 07: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಅಲ್ಲಲ್ಲಿ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳ ಸರಣಿ ಮುಂದುವರೆಯುತ್ತಲೇ ಇವೆ.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಭಾನುವಾರವೂ ಧಾರಾಕಾರ ಮಳೆಯಾಗಿದ್ದು, ಈ ಭಾಗಗಳ ಜನರ ಜೀವನ ಹೇಳತೀರದಾಗಿದೆ. ಮಲೆನಾಡು ಭಾಗದಲ್ಲಿ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಇನ್ನು ಕೆಲವು ಕಡೆ ಭೂ ಕುಸಿತದಿಂದಾಗಿ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನೀರಿನ ಹರಿವು ಹೆಚ್ಚಳ: ಕಳಸ ತಾಲೂಕಿನ ಹೊರನಾಡು ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿರುವ ಕವನಹಳ್ಳ ಗ್ರಾಮದಲ್ಲಿ ಭಾರೀ ಮಳೆ ಸುರಿದಿದ್ದು, ಯಶೋಧ ಎಂಬವರ ಮನೆಯ ಹಿಂಬದಿಯಲ್ಲಿ ಭೂ ಕುಸಿತ ಸಂಭವಿಸಿದೆ. ಮೆನಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಟುಂಬದ ಸದಸ್ಯರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಭಾಗದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ಭೂಕುಸಿತ ಹೆಚ್ಚಾಗಿ ಮನೆಗಳು ಸಂಪೂರ್ಣವಾಗಿ ಮಣ್ಣು ಪಾಲಾಗುವ ಭೀತಿ ಉಂಟಾಗಿದೆ.

Continued rain in Chikkamagalur; Road cracked, houses collapse

ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಸೇತುವೆ ಮುಳುಗಡೆಗೆ ಅರ್ಧ ಅಡಿ ನೀರು ಬಾಕಿ ಇದೆ. ಮತ್ತೆ ಮಳೆ ಹೆಚ್ಚಾದರೆ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹೇಮಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಅಲ್ಲಿನ ಸುತ್ತಮುತ್ತಲಿನ ಜನರಿಗೆ ಆತಂಕ ಶುರುವಾಗಿದೆ.

ಕಪ್ಪೆಶಂಕರ ಮಂಟಪ ಮುಳುಗಡೆ: ಶೃಂಗೇರಿ ಪಟ್ಟಣದಲ್ಲಿ ಹರಿಯುವ ತುಂಗಾ ನದಿ ಕೂಡ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಪ್ಪೆಶಂಕರ ಮಂಟಪ ಮುಳುಗಡೆಯಾಗಿದೆ. ಮತ್ತು ದೇವಾಲಯ ಸಮೀಪದ ಗಾಂಧಿ ಮೈದಾನವೂ ತುಂಗಾ ನದಿಯ ನೆರೆ ನೀರಿನಲ್ಲಿ ಮುಳುಗಡೆಯಾಗುವ ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆ ಹಾಗೂ ಹೊಸಕೋಟೆ, ಮಾರನಹಳ್ಳಿ ಗ್ರಾಮಗಳಲ್ಲಿ ಎರೆಡು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

Continued rain in Chikkamagalur; Road cracked, houses collapse

Recommended Video

ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಅಖ್ತರ್ ! | Oneindia Kannada

ಕೃಷಿಕರಿಗೆ ಮಳೆರಾಯ ಅಡ್ಡಿ: ಜಿಲ್ಲಾದ್ಯಂತ ಸದ್ಯ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ, ನಾಟಿ ಕಾರ್ಯ ನಡೆಯುತ್ತಿದ್ದು, ನಿರಂತರ ಮಳೆ ಭತ್ತದ ಗದ್ದೆಗಳ ಕೃಷಿ ಚಟುವಟಿಕೆಗೆ ಅಡ್ಡಿಯುಂಟು ಮಾಡಿದೆ. ಕಾಫಿ, ಅಡಿಕೆ ತೋಟಗಳ ಕೃಷಿ ಕೆಲಸಕ್ಕೂ ಅಡೆತಡೆಯಾಗಿದೆ. ಇನ್ನು ಕಳಸ ತಾಲೂಕಿನಲ್ಲಿ ಕೌನಲ ಗ್ರಾಮದಲ್ಲಿ ತಿಂಗಳ ಹಿಂದಷ್ಟೇ ಪೂರ್ಣಗೊಂಡ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆಯಿಂದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು, ಏಳು ಗ್ರಾಮಗಳ ಜನರಲ್ಲಿ ಆತಂಕ ಎದುರಾಗಿದೆ. ರಸ್ತೆ ಬಿರುಕು ಬಿಟ್ಟ ಹಿನ್ನೆಲೆ ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಕಳಪೆ ಕಾಮಗಾರಿಯಿಂದಲೇ ರಸ್ತೆ ಬಿರುಕು ಬಿಟ್ಟಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

English summary
Rain continues in Chikkamagalur and people's life is disrupted, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X