ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣ್ಣಲ್ಲಿ ಮಣ್ಣಾದ ನಿಸರ್ಗ ಸುಂದರಿ ಚಾರ್ಮಾಡಿ; ಹಾಳೂರಾದ ಬಾಳೂರು ಅರಣ್ಯ ಪ್ರದೇಶ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಇವತ್ತಿಗೆ ಅಂದಾಜು ಮೂರು ವರ್ಷದ ಹಿಂದೆ ನನ್ನೂರು ಮಲೆನಾಡು‌ ಚಿಕ್ಕಮಗಳೂರಿಗೆ ಜಿಲ್ಲಾ ವರದಿಗಾರನಾಗಿ ಕೆಲಸಕ್ಕೆಂದು ಹಾಜರಾಗಿದ್ದೆ. ಅದೇ ಮೊದಲು ಆ ಸೌಂದರ್ಯವನ್ನು ನನ್ನ ಕಣ್ಣಲ್ಲಿ ತುಂಬಿಕೊಂಡಿದ್ದು. ಧೋ‌ ಎಂದು‌ ಸುರಿಯುವ ಮಳೆ. ಆ ಮಳೆ‌ ಕೊಂಚ ಕಡಿಮೆ‌ ಆದ ಕೂಡಲೇ ಎಲ್ಲೆಲ್ಲೂ ಹಸಿರೆಲೆಗಳ ಮೇಲೆ‌ ಎತ್ತರದ ಬೆಟ್ಟ- ಗುಡ್ಡಗಳಿಗೆ ಮುತ್ತಿಕ್ಕಲು ಹಾತೊರೆಯುವಂತೆ ಗೋಚರಿಸುವ ಮಂಜಿನಾಟ.

ಎಂತಹವರನ್ನೂ ಪ್ರಣಯ ಭಾವಕ್ಕೆ ತಳ್ಳುವಂತಹ ಮೈ ಕೊರೆಯುವ ಕುಳಿರ್ಗಾಳಿ. ಅಲ್ಲಲ್ಲಿ ಬೆಳ್ಳನೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು. ಇವೆಲ್ಲವನ್ನೂ ನೋಡಿ‌, ಸ್ವರ್ಗವನ್ನೇ ನೋಡಿದಷ್ಟು ಖುಷಿಯಾಗಿತ್ತು. ಹಾಗೆ ನೋಡಿದರೆ ಚಾರ್ಮಾಡಿ ನಿಜಕ್ಕೂ ಪ್ರವಾಸಿಗರ ಸ್ಬರ್ಗ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಚಾರ್ಮಾಡಿ ಕೇವಲ‌ ರಸ್ತೆಯಲ್ಲ, ಅದು ಸ್ವರ್ಗ. ಮಳೆಗಾಲದಲ್ಲಿ ಒಂದು ಅನುಭವ, ಬೇಸಿಗೆಯಲ್ಲಿ ಮತ್ತೊಂದು ತರಹದ ಅನುಭವ ನೀಡುವ ನಿಸರ್ಗ‌ ಸುಂದರಿ‌ ಆಕೆ.‌ ಮೇ ಅಂತ್ಯದಿಂದ ಸೆಪ್ಟೆಂಬರ್ ತಿಂಗಳ‌ವರೆಗೂ ಚಾರ್ಮಾಡಿ ಅನುಭವ ಸ್ವರ್ಗಕ್ಕೆ ಸಮ. ನೀವು ಚಾರ್ಮಾಡಿ ಎಂಬ ಅಂಕುಡೊಂಕಿನ ಕಪ್ಪಗೆ ಮಲಗಿರುವ ಹೆಬ್ಬಾವಿನಂತೆ ಗೋಚರಿಸುವ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದೇ ರೋಚಕ.

ಬೈಕ್ ನಲ್ಲಿ‌ ಬಂದರೆ ನಿಜಕ್ಕೂ‌ ಅದು ಸ್ವರ್ಗಕ್ಕೆ ಸಮ

ಬೈಕ್ ನಲ್ಲಿ‌ ಬಂದರೆ ನಿಜಕ್ಕೂ‌ ಅದು ಸ್ವರ್ಗಕ್ಕೆ ಸಮ

ಅದರಲ್ಲೂ ನಿಮ್ಮ ಸ್ವಂತ ಕಾರಿನಲ್ಲಿ ಬಂದರೆ ಸಾಮಾನ್ಯ ಅನುಭವ. ನಮ್ಮ ಸರಕಾರಿ ಬಸ್ಸು ಹತ್ತಿದರೆ ಅನುಭವಿ‌ ಡ್ರೈವರ್ ಗಳು ಈ ರಸ್ತೆಯಲ್ಲಿ ಬಸ್ ಓಡಿಸುವುದೇ, ಅಬ್ಬಾ ಅದೇ ಕೊರೆಯುವ ಚಳಿಯಲ್ಲೂ ಮೈ ಬೆಚ್ಚಗಾಗುವ ಅನುಭವ. ಇನ್ನು ನೀವು ಬೈಕ್ ನಲ್ಲಿ‌ ಬಂದರೆ ನಿಜಕ್ಕೂ‌ ಅದು ಸ್ವರ್ಗಕ್ಕೆ ಸಮ. ಅಚ್ಚ ಹಸಿರಿನ‌ ಕಾನನದಿಂದ ನಿಮ್ಮ ಮುಖಕ್ಕೆ‌ ಅಪ್ಪಳಿಸುವ ಮಳೆ‌ ಹನಿ ಮುತ್ತುಗಳು ಆಕಾಶದಿಂದ ಮೈಗೆ ಅಪ್ಪಳಿಸಿದಂತೆ ಗೋಚರಿಸುತ್ತವೆ.‌ ಆ ಚಳಿ, ಆ ಗಾಳಿ,‌ ಸುತ್ತಲಿನ‌ ಜಲಪಾತಗಳು, ಮಳೆ‌... ವಾಹ್, ಜೊತೆಗೆ ಗಟ್ಟಿಯಾಗಿ‌ ಅಪ್ಪಿಕೊಳ್ಳುವ ಸಂಗಾತಿ‌ ಇದರೆ ಅದು ಸ್ವರ್ಗಕ್ಕೆ‌ ಕಿಚ್ಚು ಹಚ್ಚಿದಂತೆ.

ಮೈಮನ ಸೆಳೆಯುತ್ತಾರೆ ಚಾರ್ಮಾಡಿ ಸುಂದರಿಯರು

ಮೈಮನ ಸೆಳೆಯುತ್ತಾರೆ ಚಾರ್ಮಾಡಿ ಸುಂದರಿಯರು

ಕೊಟ್ಟಿಗೆಹಾರದಿಂದ ಚಾರ್ಮಾಡಿಯೊಳಗೆ ಹೊಕ್ಕಿದೊಡನೆ ಚಾರ್ಮಾಡಿ ಎಂಬ ಗ್ರಾಮದವರೆಗೆ ಪ್ರಯಾಣ‌ ಮಾಡುವ 22 ಕಿ.ಮೀ. ದೂರದ 45 ನಿಮಿಷದ ಪ್ರಯಾಣ ವರ್ಣಿಸಲಸಾಧ್ಯ. ಆ‌ ಚಿಕ್ಕ ಪಯಣದ ಅವಧಿಯಲ್ಲಿ ನಿಮಗೆ ಅದೆಷ್ಟೋ‌ ನಿಸರ್ಗ ಸುಂದರಿಯರು ಭೇಟಿಯಾಗುತ್ತಾರೆ. ಅವರು ನಿಮ್ಮನ್ನು ಅಲ್ಲಲ್ಲಿ ತಮ್ಮ ನೈಜ ಸೌಂದರ್ಯದೊಂದಿಗೆ‌ ತಡೆದು ನಿಲ್ಲಿಸುತ್ತಾರೆ. ಆ ಸುಂದರಿಯರು ಯಾರೆಂದರೆ, ಇಲ್ಲಿನ‌ ಜಲಪಾತಗಳು. 22 ಕಿ.ಮೀ. ಹಾದಿಯಲ್ಲಿ ನಿಮಗೆ ಮಳೆಗಾಲದಲ್ಲಿ ಹತ್ತಾರು ಜಲಪಾತಗಳು ಗೋಚರಿಸುತ್ತವೆ.‌ ಪ್ರತಿಯೊಂದೂ ತನ್ನೊಳಗೆ ವಿಭಿನ್ನ ಸೌಂದರ್ಯವನ್ನು ಒಳಗೊಂಡಿರುವ ಜಲಸಿರಿಗಳು. ಅವುಗಳನ್ನು‌ ನೀವು ಕಣ್ಣು ತುಂಬಿಕೊಂಡು, ಅವುಗಳ ಜೊತೆ ನೆನೆಯದೆ ಮುಂದೆ ಹೋಗಲು ಸಾಧ್ಯವೇ ಇಲ್ಲ ಬಿಡಿ.

ಕೆಸರು ಮುದ್ದೆಯಾದ ಚಾರ್ಮಾಡಿ

ಕೆಸರು ಮುದ್ದೆಯಾದ ಚಾರ್ಮಾಡಿ

ಈ ಬಾರಿಯ ಭೀಕರ‌ ಮಳೆಗೆ ಚಾರ್ಮಾಡಿ ಕೆಸರು ಮುದ್ದೆಯಾಗಿದ್ದಾಳೆ. ಆಕೆಯ ಇಕ್ಕೆಲಗಳಲ್ಲಿಯೂ ಕೆಸರು‌ ಸಿಕ್ಕಿ ಹಾಕಿಕೊಂಡು, ಉಸಿರುಗಟ್ಟುತ್ತಿದ್ದಾಳೆ.‌ ಆ 22 ಕಿ.ಮೀ. ನಿಸರ್ಗ ಸೌಂದರ್ಯದ ತಾಣ ಅಕ್ಷರಶಃ ನರಕಕ್ಕೆ ಸಮಾನವಾಗಿದೆ. ಹಸಿರು ಹೊದ್ದು ಮಲಗಿದ್ದ‌ ಬೆಟ್ಟಗುಡ್ಡಗಳು ರಕ್ಕಸಾಕಾರದಲ್ಲಿ ರಸ್ತೆಗೆ ಬಂದು‌ ಬಿದ್ದಿವೆ. ಕಪ್ಪಗೆ ಹೆಬ್ಬಾವಿನಂತೆ ಮಲಗಿದ್ದ ಅಂಕುಡೊಂಕಿನ ಡಾಂಬರು ರಸ್ತೆ ಕೆಸರುಮಯವಾಗಿದೆ. ತನ್ನ ನೈಜ ಸೌಂದರ್ಯದಿಂದ‌ ಧುಮ್ಮಿಕ್ಕುತ್ತಿದ್ದ ಜಲಸಿರಿಗಳು ದೊಡ್ಡ ದೊಡ್ಡ ಬಿರುಕು ಬಿಟ್ಟು ಯಾರನ್ನೋ‌ ಆಪೋಶನ ಮಾಡಿಕೊಳ್ಳಲು ಬಾಯ್ತೆರೆದು ಕಾಯುತ್ತಿರುವಂತೆ ಗೋಚರಿಸುತ್ತಿವೆ.

ಹಾಳೂರಾಗಿದೆ ಬಾಳೂರು ಅರಣ್ಯ ಪ್ರದೇಶ

ಹಾಳೂರಾಗಿದೆ ಬಾಳೂರು ಅರಣ್ಯ ಪ್ರದೇಶ

ರಸ್ತೆಯ ಇಕ್ಕೆಲಗಳಲ್ಲಿ ಸೃಷ್ಟಿಯಾಗಿರುವ ಕಂದಕಗಳು ಬಲಿಗಾಗಿ ಕಾಯುತ್ತಿವೆ. ಇನ್ನು ಈಗ ಅಲ್ಲಿ ಕಣ್ಣಾಡಿಸಿದಲ್ಲೆಲ್ಲಾ ಏಳು ಹೆಡೆಯ ಕಾಳಿಂಗ ಸರ್ಪ ಬುಸುಗುಡುವಂತೆ ಜೆಸಿಬಿ, ಹಿಟಾಚಿಗಳದು ಸದ್ದೇ ಸದ್ದು ಕೇಳಿಸುತ್ತಿದೆ. ಚಾರ್ಮಾಡಿಯ ಇವತ್ತಿನ‌ ಸ್ಥಿತಿ, 'ಒಲಿದರೆ ನಾರಿ ಮುನಿದರೆ ಮಾರಿ' ಎಂಬುವಂತಾಗಿದೆ. ಹೀಗಾಗಿ ಕೆಲವು ದಿನ‌ ಹಳೆಯ ಚಾರ್ಮಾಡಿಯ ನೆನೆದು, ಇತ್ತ ಧಾವಿಸಬೇಡಿ, ಆಕೆಯ ಚೇತರಿಕೆಗೆ ಒಂದಷ್ಟು ಸಮಯ ಕೊಡಿ. ಇನ್ನು ಪೂರ್ಣಚಂದ್ರ ತೇಜಸ್ವಿ ಇಷ್ಟಪಟ್ಟು ಓಡಾಡುತ್ತಿದ್ದ ಬಾಳೂರು ಅರಣ್ಯ ಪ್ರದೇಶ ಈಗ ಹಾಳೂರಾಗಿದೆ. ಒಟ್ಟಾರೆ ಚಾರ್ಮಾಡಿ ಎಂಬ ನಿಸರ್ಗ ಸುಂದರಿ ತಾತ್ಕಾಲಿಕವಾಗಿ ಶಾಪಗ್ರಸ್ತ ದೇವತೆಯಂತಾಗಿದ್ದಾಳೆ.

English summary
Chikkamagaluru district Charmadi ghat (Kottigehar to Charmadi 22 K.M. stretch) beautiful place to travel. But what happened now? Here is an experience shared by Chikkamagaluru reporter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X