ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಬಾಬುಡನ್ ಗಿರಿ ದತ್ತ ಪೀಠ: ಮುಜಾವರ್ ನೇಮಕ ಆದೇಶ ರದ್ದು

|
Google Oneindia Kannada News

ಚಿಕ್ಕಮಗಳೂರು/ಬೆಂಗಳೂರು, ಸೆಪ್ಟೆಂಬರ್ 28: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ಗೊಂದಲಕ್ಕೆ ತೆರೆ ಬಿದ್ದಿದೆ. ಗುರು ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯಕ್ಕೆ ಮುಜಾವರ್ ನೇಮಕ ಮಾಡಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಇಂದು ರದ್ದುಗೊಳಿಸಿದೆ.

2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ನ್ಯಾ. ಪಿ.ಎಸ್ ದಿನೇಶ್ ಅವರಿದ್ದ ಏಕಸದಸ್ಯಪೀಠ ರದ್ದುಪಡಿಸಿ ಆದೇಶ ಹೊರಡಿಸಿದೆ.

ಈ ಹಿಂದಿನ ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ತಕರಾರು ಅರ್ಜಿ ಸಲ್ಲಿಸಿತ್ತು. ಶಾ ಖಾದ್ರಿ ಪರಂಪರೆಯಿಂದ ಬಂದವರನ್ನೇ ಮುಜಾವರ್ ಆಗಿ ನೇಮಿಸಲಾಗಿದೆ, ಹಿಂದೂ ಅರ್ಚಕರನ್ನು ನೇಮಿಸುವ ಅಗತ್ಯವಿಲ್ಲ ಎಂದು ಈ ಹಿಂದೆ ಸರ್ಕಾರದ ಪರ ವಕೀಲರು ವಾದಿಸಿದ್ದರು.

Baba budan giri dispute: HC quashes Govt order on Mujawar appointment

ಇನಾಂ ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಅವರನ್ನು ನೇಮಕ ಮಾಡಿ 2018ರ ಮಾರ್ಚ್‌ 19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ 2018ರ ಏಪ್ರಿಲ್ ತಿಂಗಳಿನಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಮಾರ್ಚ್‌ 19ರ ಆದೇಶ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ನೀಡಿದ್ದ ಮುಚ್ಚಳಿಕೆ ಆಧರಿಸಿ, ದತ್ತ ಪೀಠದ ಪೂಜಾ ವಿಧಿ ವಿಧಾನದ ಬಗ್ಗೆ ಯಾವುದೇ ಆತುರದ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

ಆದರೆ, ನಂತರ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿ, 2021ರ ಆಗಸ್ಟ್ ತಿಂಗಳಲ್ಲಿ ತೀರ್ಪು ಕಾಯ್ದಿರಿಸಿತ್ತು. ಇಂದು ಪೂರ್ಣಪ್ರಮಾಣದಲ್ಲಿ ಆದೇಶ ಹೊರ ಬಂದಿದೆ.

ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಆ ವರದಿ ಆಧರಿಸಿ ರಾಜ್ಯ ಸರ್ಕಾರ ಮುಜಾವರ್ ನೇಮಕ ಮಾಡಿದೆ. ಹಿಂದೂಗಳ ಪೂಜಾಸ್ಥಳದ ಧಾರ್ಮಿಕ ಆಚರಣೆಗಳನ್ನು ಮುಜಾವರ್‌ಗಳು ನಡೆಸಿಕೊಡಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ನಿರ್ಧಾರ ಹಿಂದೂಗಳ ಭಾವನೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಮುಜರಾಯಿ ಇಲಾಖೆ ಅಧೀನದಲ್ಲಿರುವ ಇನಾಂ ದತ್ತಾತ್ರೇಯ ಪೀಠದಲ್ಲಿ ಹಿಂದೂ-ಮುಸ್ಲಿಂ ರೀತ್ಯ ಪೂಜಾ ಕೈಂಕರ್ಯ ನೆರವೇರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಮುಜಾವರ್ ನೇಮಕದಿಂದ ಗೊಂದಲ ಏರ್ಪಟ್ಟಿತ್ತು.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ 1975 ಹಿಂದೆ ಇದ್ದ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅವಕಾಶ ಇದೆ. ಅದರಂತೆ ಪಾದುಕೆಗಳಿಗೆ ಹೂಗಳನ್ನು ಸಮರ್ಪಿಸಿ ನಂದಾದೀಪ ಬೆಳಗಿಸಲಾಗುತ್ತದೆ. ಬರುವ ಭಕ್ತಾದಿಗಳಿಗೆ ತೀರ್ಥ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ವಾರ್ಷಿಕ 'ಸಂದಲ್ ಉರುಸ್‌' ಸಂದರ್ಭದಲ್ಲಿ ಸೂಫಿ ಸಂತರು, ಶಾಖಾದ್ರಿ ಪರಂಪರೆಯವರಿಂದ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತದೆ. ಫಕೀರರು ಗೋರಿಗಳಿಗೆ ಗಂಧ ಲೇಪಿಸಿ, ವಿವಿಧ ವಿಧಿ ವಿಧಾನ ನೆರವೇರಿಸುತ್ತಾರೆ. ಗೋರಿಗಳಿಗೆ ಲೇಪಿಸುವ ಗಂಧವನ್ನು ಬಡಾಮಕಾನ್ ಮಸೀದಿ ಹಾಗೂ ಅತ್ತಿಗುಂಡಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಭಕ್ತರು ತಾವು ತಂದಿದ್ದ ಹೂವು, ಸಕ್ಕರೆ, ತೆಂಗಿನಕಾಯಿಗಳನ್ನು ಅರ್ಪಿಸಿ, ಗಂಧ ಲೇಪಿಸಿದರು. ಜಿಲ್ಲಾಡಳಿತ ವತಿಯಿಂದ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ.

ಚಿಕ್ಕಮಗಳೂರು ಪಟ್ಟಣದಿಂದ ಉತ್ತರಕ್ಕೆ 25 ಕಿ.ಮೀ. ದೂರ, ಬೆಂಗಳೂರಿನಿಂದ ಸುಮಾರು 250 ಕಿ.ಮೀ.ಗೂ ಹೆಚ್ಚು ದೂರದಲ್ಲಿ ಬಾಬಾ ಬುಡನ್ ಗಿರಿ ಶ್ರೇಣಿ ಇದೆ. ಮುಳ್ಳಯ್ಯನ ಗಿರಿಯು ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ದಾರಿಯಲ್ಲಿ ಸುಮಾರು 15 ಕಿ.ಮೀಗೆ ಸಿಕ್ಕುತ್ತದೆ. ಚಂದ್ರದ್ರೋಣ ಪರ್ವತ ಶ್ರೇಣಿ ಎಂದು ಗುರುತಿಸಲ್ಪಡುವ ಈ ತಾಣ ಧಾರ್ಮಿಕ, ಚಾರಣಿಗರ ನೆಚ್ಚಿನ ಪ್ರದೇಶವಾಗಿದೆ.

English summary
Baba budan giri dispute: High Court today quashed Karnataka Government order on Mujawar appointment at the holy shrin Shree Guru Dattatreya Bababudan Dargah, Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X