• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಮೆರಾ ಹಿಂದಿನ ಕಣ್ಣು ಶಿಡ್ಲಘಟ್ಟದ ಮಲ್ಲಿಕಾರ್ಜುನ ಜತೆ ಮಾತುಕತೆ

|

ಇವತ್ತು (ಆಗಸ್ಟ್ 19) ವಿಶ್ವ ಫೋಟೋಗ್ರಫಿ ದಿನ. ಈ ದಿನವನ್ನು ಸಾರ್ಥಕ ಮಾಡುವ ಉದ್ದೇಶದಿಂದ ಒಬ್ಬ ಛಾಯಾಚಿತ್ರಕಾರರನ್ನು ಒನ್ಇಂಡಿಯಾ ಕನ್ನಡದಿಂದ ಮಾತನಾಡಿಸಿದ್ದೀವಿ. ಇವರನ್ನು ಫೋಟೋಗ್ರಾಫರ್ ಅಂತಷ್ಟೇ ಪರಿಚಯಿಸಿದರೆ ಬಹಳ ಕಷ್ಟ. ಏಕೆಂದರೆ, ಇವರು ಅದು ಮಾತ್ರ ಅಲ್ಲ. ಪ್ರಜಾವಾಣಿ ಪತ್ರಿಕೆಯ ಶಿಡ್ಲಘಟ್ಟ ತಾಲೂಕಿನ ಅರೆಕಾಲಿಕ ವರದಿಗಾರರು.

ಚಿಟ್ಟೆ ಹಾಗೂ ಕೀಟ ಜಗತ್ತಿನ ಬಗ್ಗೆ ಸೊಗಸಾದ ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಯಾವುದೋ ಮಾಯದಲ್ಲಿ ಶಿಡ್ಲಘಟ್ಟದಿಂದ ಹಾರಿ ಈಜಿಪ್ಟ್, ಜೋರ್ಡಾನ್, ಸಿಂಗಾಪೂರ್ ಅಂತ ಹೋಗಿ ಬಂದಿರುತ್ತಾರೆ. ಮೆಡಿಕಲ್ ಶಾಪ್ ನಡೆಸುತ್ತಿರುವ ಇವರ ಬಗ್ಗೆ ಹೇಳಿದಷ್ಟೂ ಬಾಕಿ ಉಳಿದು ಹೋಗಬಹುದಾದಂಥ ವಿಚಾರಗಳು ಸಾಕಷ್ಟಿವೆ.

ವಿಶ್ವ ಛಾಯಾಚಿತ್ರ ದಿನ: ಮನಸೆಳೆವ ಆ 10 ಚಿತ್ರಗಳು

ಅಂದಹಾಗೆ, ಇವರ ಹೆಸರು ಡಿ.ಜಿ.ಮಲ್ಲಿಕಾರ್ಜುನ. ಕನ್ನಡದ ಬಹುತೇಕ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಸಿಕ್ಕ ಫೋಟೋಗಳು ಬಂದಿವೆ. ಕೆಲವಕ್ಕೆ ಹೆಸರುಂಟು, ಹಲವಕ್ಕೆ ಮೆಚ್ಚುಗೆಯೊಂದೇ ದಕ್ಕಿದರೆ ಅಷ್ಟೇ ಸಾರ್ಥಕ ಎಂದು ಸುಮ್ಮನಾಗುವುದು ಉಂಟು.

ಮಡಿಕೇರಿ ಸೌಂದರ್ಯದ ಸೊಬಗು ಬಿಚ್ಚಿಟ್ಟ ಆ 4 ಚಿತ್ರಗಳು

'ಅದೊಂದು ಪ್ರಶ್ನೆಗೆ ಮಾತ್ರ ಉತ್ತರ ಕೇಳಬೇಡಿ. ಮನೆಯಲ್ಲಿ ಯುದ್ಧಗಳು ಆಗೋಗ್ತವೆ' ಎಂದು ಯಾವ ಕಾರಣಕ್ಕೂ ಆ ಪ್ರಶ್ನೆಗೆ ಉತ್ತರಿಸಲು ಒಪ್ಪಲಿಲ್ಲ. ಅದೇನು ಅಂಥದ್ದು ಕೇಳಿದೆವು ಅಂತೀರಾ, "ನಿಮ್ಮ ಫೋಟೋಗ್ರಫಿ ಹವ್ಯಾಸಕ್ಕೆ ಎಷ್ಟು ಖರ್ಚು ಮಾಡಿದ್ದೀರಿ?" ಎಂಬ ಪ್ರಶ್ನೆಗೆ ಮೈಮೇಲೆ ಹಾವು ಬಿದ್ದವರಂತೆ ಗಾಬರಿ ಆದರು.

ಪೂರ್ಣಚಂದ್ರ ತೇಜಸ್ವಿಯಿಂದ ಸ್ಫೂರ್ತಿ

ಪೂರ್ಣಚಂದ್ರ ತೇಜಸ್ವಿಯಿಂದ ಸ್ಫೂರ್ತಿ

ಡಿ.ಜಿ.ಮಲ್ಲಿಕಾರ್ಜುನ ಅವರಿಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಮೂಡಲು ಕಾರಣರಾದವರು ಪೂರ್ಣಚಂದ್ರ ತೇಜಸ್ವಿ. ಒಮ್ಮೆ ಮೂಡಿಗೆರೆಯ ಅವರ ಮನೆಗೆ ಹೋದಾಗ, ಮನೆ ತುಂಬ ಫೋಟೋಗಳನ್ನು ಹರಡಿಕೊಂಡು ಕೂತಿದ್ದರಂತೆ ತೇಜಸ್ವಿ. 'ಯಾವತ್ತಾದರೂ ಇಂಥ ಫೋಟೋಗಳನ್ನು ನಾವು ತೆಗೆಯಬಹುದಾ ಸರ್?' ಎಂದಿದ್ದಾರೆ ಮಲ್ಲಿಕಾರ್ಜುನ. 'ನಾನು ಕೂಡ ನಿಮ್ಮ ಹಾಗೇ ಮನುಷ್ಯ ಕಣ್ರೀ, ನೀವೂ ಇಂಥ ಫೋಟೋ ತೆಗೆಯಬಹುದು' ಅಂತ ತಮ್ಮ ಮಾಮೂಲಿ ಧಾಟಿಯಲ್ಲೇ ಉತ್ತರಿಸಿದ್ದಾರೆ ತೇಜಸ್ವಿ. ಆಗ ಮಲ್ಲಿಕಾರ್ಜುನ್ ಅವರು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು. ಅಲ್ಲಿಂದ ಬಂದ ಮೇಲೆ ತಮ್ಮ ಮಗುವಿನ ಫೋಟೋ ತೆಗೆಯುವ ಸಲುವಾಗಿ ಹಾಗೂ ತೇಜಸ್ವಿ ಮಾತಿಗೆ ಸ್ಫೂರ್ತಿಗೊಂಡು ಒಂದು ಕ್ಯಾಮೆರಾ ತೆಗೆದುಕೊಂಡಿದ್ದಾರೆ. ಅಂದರೆ ಹದಿನೆಂಟು ವರ್ಷದ ಹಿಂದಿರಬಹುದು. ತಾವು ಕೂಡಿಟ್ಟಿದ್ದ ಕಾಸಿಗೆ-ಕಾಸನ್ನು ಒಟ್ಟು ಮಾಡಿ, ಮೊದಲ ಕ್ಯಾಮೆರಾ ತಗೊಂಡಿದ್ದಾರೆ.

ಪ್ರಶಸ್ತಿ ಬರಲು ಮೂರು ದಿನ ಇರುವಾಗ ತಾಯಿ ತೀರಿಕೊಂಡರು

ಪ್ರಶಸ್ತಿ ಬರಲು ಮೂರು ದಿನ ಇರುವಾಗ ತಾಯಿ ತೀರಿಕೊಂಡರು

ಆ ಮೇಲೆ ಫೋಟೋಗ್ರಫಿ ಹವ್ಯಾಸ ಆಯಿತು. ಹೇಗೆ ಫೋಟೋ ತೆಗೆಯಬೇಕು ಅನ್ನೋದು ಕೂಡ ಗೊತ್ತಿಲ್ಲದ ಕ್ಷಣದಿಂದ ಪ್ರಶಸ್ತಿಗಳು ಬರಲು ಆರಂಭಿಸಿದ್ದಕ್ಕೆ ಬದಲಾವಣೆ ಆಯಿತು. ರಾಜ್ಯ ಮಟ್ಟದ ಪ್ರಶಸ್ತಿ ಘೋಷಣೆಯೂ ಆಯಿತು. ಅದನ್ನು ಆಗಿನ ರಾಜ್ಯಪಾಲರ ಕೈಯಿಂದ ಮಲ್ಲಿಕಾರ್ಜುನ ಇಸಿದುಕೊಳ್ಳಬೇಕಿತ್ತು. ಈ ಸುದ್ದಿ ಕೇಳಿ ಮಲ್ಲಿಕಾರ್ಜುನ ಅವರ ತಾಯಿಗೆ ಸಂಭ್ರಮ. ಆದರೆ ಪ್ರಶಸ್ತಿ ವಿತರಣೆಗೆ ಇನ್ನೇನು ಮೂರು ದಿನ ಬಾಕಿ ಇದೆ ಅನ್ನೋವಾಗ ಆ ತಾಯಿ ಹೃದಯಾಘಾತವಾಗಿ ತೀರಿಕೊಂಡು ಬಿಟ್ಟರು. ಆ ಪ್ರಶಸ್ತಿಯನ್ನು ಪಡೆಯಲು ಮಲ್ಲಿಕಾರ್ಜುನ ಹೋಗಲೇ ಇಲ್ಲ. ಆ ನಂತರ ಪ್ರಶಸ್ತಿಗಳ ಬಗ್ಗೆ ನಿರೀಕ್ಷೆಯೇ ಹೊರಟುಹೋಯಿತು ಎಂದು ಅವರು ಅರೆ ಕ್ಷಣ ಮೌನವಾಗುತ್ತಾರೆ.

ಬಿ ಶ್ರೀನಿವಾಸ್ ನನ್ನ ಪಾಲಿನ ಗುರುಗಳು

ಬಿ ಶ್ರೀನಿವಾಸ್ ನನ್ನ ಪಾಲಿನ ಗುರುಗಳು

ನನಗೆ ಸ್ಫೂರ್ತಿ ಅಂದರೆ ಅದು ಪೂರ್ಣಚಂದ್ರ ತೇಜಸ್ವಿ ಹಾಗೂ ಕೃಷ್ಣಾನಂದ್ ಕಾಮತ್. ಆದರೆ ಗುರುಗಳು ಅಂತ ನಾನು ಹೇಳೋದು ಬಿ.ಶ್ರೀನಿವಾಸ್ ಅವರನ್ನು. ಒಂದಿಡೀ ದಿನ ಬೇಕಾದರೂ ಅವರ ಬಗ್ಗೆ ಹೇಳುತ್ತಲೇ ಇರುತ್ತೀನಿ. ಅವರ ಉತ್ಸಾಹ, ಚೈತನ್ಯ ನೋಡುತ್ತಿದ್ದರೆ ನಮಗೂ ತಾನಾಗಿಯೇ ಎನರ್ಜಿ ಬಂದುಬಿಡುತ್ತದೆ. ಅವರಿಂದ ಫೋಟೋಗ್ರಫಿಯಲ್ಲಿ ನಾನು ಕಲಿತಿದ್ದನ್ನು ಹೇಳುವುದಕ್ಕೆ ಹೋದರೆ ಅದು ಬಹಳ ಕಡಿಮೆ. ಅವರಿಂದ ಬೆಳೆದವರು, ಕಲಿತವರು ಬಹಳ ಜನ ಇದ್ದಾರೆ. ಈ ಫೋಟೋಗ್ರಫಿ ದಿನದಲ್ಲಿ ವಿಜಯವಾಡದಲ್ಲಿ ಒಂದು ಸನ್ಮಾನ, ದಾವಣಗೆರೆಯಲ್ಲಿ ಒಂದು ಸನ್ಮಾನ ಶ್ರೀನಿವಾಸ್ ಅವರಿಗಿದೆ. ಅಲ್ಲಿಂದ ಜೋಗಕ್ಕೆ ಮಾನ್ಸೂನ್ ಫೋಟೋಗ್ರಫಿಗೆ ಹೊರಟಿದ್ದಾರೆ. ತಂಪು ಹೊತ್ತಿನಲ್ಲಿ ನಾನು ಅವರನ್ನು ನೆನಪಿಸಿಕೊಳ್ಳುತ್ತಲೇ ಇರಬೇಕು ಎನ್ನುತ್ತಾರೆ.

ಫೋಟೋಗ್ರಫಿ ಸಂಭ್ರಮದ ನಶೆ

ಫೋಟೋಗ್ರಫಿ ಸಂಭ್ರಮದ ನಶೆ

ಫೋಟೋಗ್ರಫಿ ಒಂದು ಪ್ಯಾಷನ್. ಅದು ನಿಮ್ಮನ್ನು ಎಷ್ಟು ದೂರಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ನಿಮ್ಮಿಂದ ಎಷ್ಟು ಖರ್ಚಾದರೂ ಮಾಡಿಸುತ್ತದೆ. ಅದೊಂದು ರೀತಿಯ ಸಂಭ್ರಮದ ನಶೆ. ಯಾವುದಾದರೂ ಚಟ ಇರುವ ವ್ಯಕ್ತಿಯನ್ನು ಯಾಕಪ್ಪ ಹೀಗೆ, ಅದನ್ನು ಬಿಡು ಅಂದರೆ ಎಷ್ಟು ಕಷ್ಟವೋ, ಇದು ಹಾಗೆಯೇ. ಕ್ಯಾಮೆರಾ ನನ್ನ ಕಣ್ಣು. ಅದರ ಮೂಲಕ ಕಂಡಿದ್ದು ಫೋಟೋದಲ್ಲಿ, ಅದಕ್ಕೆ ವಿವರಣೆ ನೀಡಬೇಕಲ್ಲ ಅದಕ್ಕಾಗಿ ಬರವಣಿಗೆ ಇಟ್ಟುಕೊಂಡಿದ್ದೇನೆ. ಇದು ಆ ದೇವರ ಅನುಗ್ರಹ. ಇವೆರಡೂ ವಿಚಾರದಲ್ಲಿ ನಾನೆಷ್ಟು ಸಮರ್ಥನೋ ಗೊತ್ತಿಲ್ಲ. ಪುಟ್ಟ ಪುಟ್ಟ ವಿಚಾರಗಳಿಗೂ ಗೆಳೆಯರು- ಗುರುಗಳು ಬೆನ್ನು ತಟ್ಟುತ್ತಾರೆ. ಆ ಸಂಭ್ರಮದಲ್ಲಿ ಮತ್ತೊಂದು ಹೆಜ್ಜೆ ಇಡುವುದಕ್ಕೆ ಧೈರ್ಯ ಬರುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಡಿ.ಜಿ.ಮಲ್ಲಿಕಾರ್ಜುನ ಬಗ್ಗೆ ಮಾಹಿತಿ

ಡಿ.ಜಿ.ಮಲ್ಲಿಕಾರ್ಜುನ ಬಗ್ಗೆ ಮಾಹಿತಿ

ಡಿ.ಜಿ.ಮಲ್ಲಿಕಾರ್ಜುನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಅಸೋಸಿಯೇಟ್ ಷಿಪ್ ಫಾರ್ ರಾಯಲ್ ಫೋಟೋಗ್ರಫಿಕ್ ಸೊಸೈಟಿ, . ಅಸೋಸಿಯೇಟ್ ಷಿಪ್ ಆಫ್ ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಆರ್ಟ್ ಫೋಟೋಗ್ರಫಿಕ್ (ಪ್ಯಾರಿಸ್) ಮನ್ನಣೆ ಪಡೆದಿದ್ದಾರೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿ.ಎನ್.ಎಚ್.ಎಸ್) ನಡೆಸುವ ಪಕ್ಷಿಶಾಸ್ತ್ರದ ಕೋರ್ಸ್ ನ ಪ್ರಮಾಣಪತ್ರ ಪಡೆದಿದ್ದಾರೆ. ಬಿ.ಎನ್.ಎಚ್.ಎಸ್ ವತಿಯಿಂದ ಒರಿಸ್ಸಾದ ಚಿಲ್ಕಾ ಸರೋವರದಲ್ಲಿ ಆಯೋಜಿಸಿದ್ದ ಪಕ್ಷಿಗಳಿಗೆ ಉಂಗುರ ತೊಡಿಸುವ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರು. ರೆಡ್ ಕ್ರಾಸ್ ಸೊಸೈಟಿ ಆಜೀವ ಸದಸ್ಯರು. ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಜೀವ ವೈವಿದ್ಯ ನಿರ್ವಹಣಾ ಸಮಿತಿ ಸದಸ್ಯರು. ಎವೆರಿಮ್ಯಾನ್ ಡಾಟ್ ಕಾಮ್ ಅಂತಾರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ 100ಕ್ಕೂ ಹೆಚ್ಚು ಸ್ವೀಕೃತಿಗಳು, ಬಾಂಬೆ, ಕೋಲ್ಕತ್ತಾ, ಕೇರಳದ ರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ ಪ್ರಶಸ್ತಿ ಹಾಗೂ ಕೆ.ಪಿ.ಎ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

English summary
On World Photography Day (August 19th) here is an interview of the man behind Camera DG Mallikarjuna. Interesting conversation with well known photographer of Karnataka DG Mallikarjuna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more