ವಾರಾಂತ್ಯ ದಿನಗಳಂದು ವಿಶ್ವವಿಖ್ಯಾತ ನಂದಿ ಬೆಟ್ಟಕ್ಕೆ ಪ್ರವೇಶವಿಲ್ಲ; ಪರದಾಡಿದ ಪ್ರವಾಸಿಗರು
ಚಿಕ್ಕಬಳ್ಳಾಪುರ, ಜನವರಿ 29: ಮೋಡವೇ ಹೊದ್ದಂತೆ, ಬೀಸುವ ಗಾಳಿಗೆ ಮೋಡದೊಳಗೆ ಹೊಕ್ಕಂತೆ ಭಾಸವಾಗುತ್ತಾ, ಸುತ್ತಲೂ ಆವರಿಸಿರುವ ಮೋಡದಿಂದ ಜಿನುಗುವ ಹನಿನೀರಿಗೆ ಮೈಯೊಡ್ಡುವ ಸುಖಕ್ಕಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ನಂದಿಬೆಟ್ಟಕ್ಕೆ ಪ್ರವಾಸಿಗರು ಎಲ್ಲ ಕಾಲಗಳಲ್ಲೂ ಭೇಟಿ ನೀಡುತ್ತಾರೆ. ನಂದಿಬೆಟ್ಟ ಕೇವಲ ಮೋಜಿನ ತಾಣವಲ್ಲ, ಅಲ್ಲಿ ಕೌತುಕದ ಲೋಕವೂ ಒಂದಿದೆ. ಚಳಿಗಾಲದಲ್ಲಿ ಮುಂಜಾನೆ ಮಂಜು ಮತ್ತು ಚಳಿಯ ನಡುವೆ ಓಡಾಡುವುದೇ ಒಂದು ಸೊಗಸು.
ಡಿಸೆಂಬರ್- ಜನವರಿ ಚುಮುಚುಮು ಚಳಿಯಲ್ಲಿ ನಂದಿ ಬೆಟ್ಟ ಹತ್ತಿ ಅಲ್ಲಿನ ಸೂರ್ಯೋದಯದ ಸೊಬಗನ್ನು ಸವಿಯುವುದೇ ಕಣ್ಣಿಗೆ ಹಬ್ಬದಂತಿರುತ್ತದೆ. ಬಹುತೇಕ ಪ್ರವಾಸಿಗರು, ಚಾರಣಿಗರು ಇಂತಹ ಅವಕಾಶಕ್ಕಾಗಿ ಕಾದಿರುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ವಾರಾಂತ್ಯ ಪ್ರವಾಸಿಗರ ಆಸೆಗೆ ತಣ್ಣೀರೆರಚಿದೆ.
ನಂದಿ ಬೆಟ್ಟಕ್ಕೆ ಹೋಗಿ ಬರಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಾಕರಿಸಿದ್ದು, ಅದರಲ್ಲೂ ಪ್ರವಾಸಿಗರಿಗೆ ಪ್ರಿಯವಾದ ವಾರಾಂತ್ಯ ದಿನಗಳಾದ ಶನಿವಾರ ಹಾಗೂ ಭಾನುವಾರಗಳಂದೇ ಪ್ರವೇಶ ನಿರಾಕರಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದು (ಶನಿವಾರ) ನಸುಕಿನ ಜಾವ ನಂದಿ ಗಿರಿಧಾಮ ನೋಡಲು ಆಗಮಿಸಿರುವ ಪ್ರವಾಸಿಗರಿಗೆ ಪ್ರವೇಶವಿಲ್ಲದೆ ನಿರಾಶರಾದರು. ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ತೆರವುಗೊಳಿಸದ ಹಿನ್ನೆಲೆ ನಂದಿ ಗಿರಿಧಾಮದ ಬಳಿ ಪ್ರವಾಸಿಗರು ಪರದಾಡುವಂತಾಗಿದೆ. ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಕಳೆದ 6 ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣಕ್ಕೆ ನಿರ್ಬಂಧ ಹೇರಲಾಗುತ್ತಿದೆ.
ವಾರಾಂತ್ಯದಂದು ಕೋವಿಡ್ ವೀಕೆಂಡ್ ಕರ್ಫ್ಯೂ
ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಪ್ರವಾಸಿಗರು ಆಕ್ರೋಶಗೊಂಡಿದ್ದರೆ, ಇತ್ತ ಗಿರಿಧಾಮದಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದು ಸಬೂಬು ಹೇಳುತ್ತಿದೆ. ಅಲ್ಲದೆ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ವಾರಾಂತ್ಯ ಕರ್ಫ್ಯೂ ಇರಲಿದೆ ಎಂದು ತಿಳಿಸಿದೆ. ವಾರಾಂತ್ಯ ದಿನಗಳಂದು ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಕೊರೊನಾ ಹರಡಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೇಳಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುತ್ತದೆ.
ಕೋವಿಡ್-19 ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳೂ ಇರುವುದರಿಂದ, ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ವಾರಾಂತ್ಯ ದಿನಗಳಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ನಲವತ್ತೈದು ಕಿ.ಮೀ
ನಂದಿಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೆ. ಚಿಕ್ಕಬಳ್ಳಾಪುರ ನಗರದಿಂದ 10 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರು ನಗರದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಹೊಸದಾಗಿ ನಿರ್ಮಾಣಗೊಂಡ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಜೊತೆಗೆ, ನಂದಿಬೆಟ್ಟವು ದೇವನಹಳ್ಳಿ ನಗರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-7)ಯಿಂದ 20 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆ.