ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ

ನಿಸರ್ಗ ನಿರ್ಮಿತ ಕೂರ್ಮಗಿರಿಯೆಂದೇ ಪ್ರಸಿದ್ಧಿ ಪಡೆದ ಗುಡಿಬಂಡೆ ತಾಲೂಕಿನ ಎಲ್ಲೋಡು ಶ್ರೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವವು ಭಾನುವಾರದಿಂದ ಅದ್ಧೂರಿಯಾಗಿ ಪ್ರಾರಂಭವಾಗಿದೆ.

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಫೆಬ್ರವರಿ 6: ನಿಸರ್ಗ ನಿರ್ಮಿತ ಕೂರ್ಮಗಿರಿಯೆಂದೇ ಪ್ರಸಿದ್ಧಿ ಪಡೆದ ಗುಡಿಬಂಡೆ ತಾಲೂಕಿನ ಎಲ್ಲೋಡು ಶ್ರೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವವು ಭಾನುವಾರದಿಂದ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಫೆಬ್ರವರಿ 5ರಂದು ನಡೆದ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಭಕ್ತಾಧಿಗಳು, ತಹಶೀಲ್ದಾರ್‌ ಮನಿಷಾ, ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಬಿಜೆಪಿ ಮುಖಂಡ ಸಿ.ಮುನಿರಾಜು ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿ ತೇರು ಎಳೆಯುವ ಮೂಲಕ ಚಾಲನೆ ನೀಡಿದರು.

ಪ್ರತಿವರ್ಷ ಮಾಘಮಾಸದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ಪೂಜೆ ನೆರವೇರಿಸಿ ಹರಕೆ ತೀರಿಸುತ್ತಾರೆ.

ಹಾಸನಾಂಬ ಗರ್ಭಗುಡಿ ಬಾಗಿಲು ಓಪನ್‌; ಈ ಬಾರಿ ಜಾತ್ರಾ ಉತ್ಸವ ಹೇಗಿದೆ? ಇಲ್ಲಿದೆ ಮಾಹಿತಿ ಹಾಸನಾಂಬ ಗರ್ಭಗುಡಿ ಬಾಗಿಲು ಓಪನ್‌; ಈ ಬಾರಿ ಜಾತ್ರಾ ಉತ್ಸವ ಹೇಗಿದೆ? ಇಲ್ಲಿದೆ ಮಾಹಿತಿ

ಫೆ.5ರಿಂದ ಫೆ.6 ರ ವರೆಗೆ ಜಾತ್ರೆ ನಡೆಯಲಿದ್ದು ಫೆ.5 ರಂದು ಬ್ರಹ್ಮರಥೋತ್ಸವ, ಫೆ.6 ಸೋಮವಾರ ರಾತ್ರಿ ಹೂವಿನ ಪಲ್ಲಕ್ಕಿ ಮೆರೆವಣಿಗೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಪ್ರತಿನಿತ್ಯ ಅನ್ನ ಸಂತರ್ಪಣೆಗಳು, ಪಾನಕ ಹೆಸರು ಬೇಳೆಯನ್ನು ಹಂಚುವ ಕಾರ್ಯಗಳು ನಡೆದಿದ್ದು, ಎತ್ತಿನ ಬಂಡಿಗಳು ಹಾಗೂ ಮನರಂಜನೀಯ ಆಟೋಟಗಳು ವಿಶೇಷವಾಗಿದೆ.

ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ಧ

ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ಧ

ಎಲ್ಲೋಡು ಗುಡಿಬಂಡೆ ತಾಲೂಕಿಗೆ ಸೇರಿದ ರಾಜ್ಯದ ಒಂದು ಪ್ರಮುಖ ಯತ್ರಾ ಸ್ಥಳ. ಪರಮ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಲಕ್ಷ್ಮೀ ಆದಿನಾರಾಯಣಸ್ವಾಮಿ ಉಗಮ ಸ್ಥಾನವೇ ಕೂರ್ಮಗಿರಿ. ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆಯ ಆಕಾರದಲ್ಲಿ ಇರುವುದರಿಂದ ಇದಕ್ಕೆ ಕೂರ್ಮಗಿರಿ ಎಂದು ಹೆಸರು ಬಂದಿದೆ.

ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ಧವಾಗಿದೆ. ಉತ್ತರ ಭಾರತದ ಬದರಿ ಕ್ಷೇತ್ರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರ ಕ್ಷೇತ್ರದ ಅಮರನಾರಾಯಣ, ಮೇಲುಕೋಟೆ ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಶ್ರೀ ವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳೆಂದು ಕರೆಯಲ್ಪಟ್ಟಿದ್ದು ಮಹತ್ವ ಪಡೆದುಕೊಂಡಿದೆ.

ಎಲ್ಲೋಡು ಗ್ರಾಮದ ಪೂರ್ವದಿಕ್ಕಿನಲ್ಲಿ ಪ್ರಕೃತಿ ಮಾತೆಯಿಂದ ಪವಿತ್ರ ಗಿರಿಯಾಗಿ ಕಂಗೊಳಿಸಿದೆ. ಪ್ರಕೃತಿಯಿಂದ ನಿರ್ಮಾಣವಾಗಿರುವ ಗುಹೆಯಲ್ಲಿ ಮಹಾವಿಷ್ಣುವು ಲಕ್ಷ್ಮೀ ಆದಿನಾರಾಯಣಸ್ವಾಮಿ ಎಂಬ ಹೆಸರಿನಿಂದ ಶಿಲಾ ಮೂರ್ತಿಯಾಗಿ ಉದ್ಬವಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ. ಈ ಕ್ಷೇತ್ರ ರಾಜ್ಯ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ ಮುಂತಾದ ಹೊರರಾಜ್ಯಗಳಲ್ಲಿಯೂ ಪ್ರಸಿದ್ಧ ಪಡೆದುಕೊಂಡಿದೆ.

ಯಲವಲೋಡು ಗ್ರಾಮ ಸ್ಥಾಪನೆ ಆಗಿದ್ದೇಗೆ..?

ಯಲವಲೋಡು ಗ್ರಾಮ ಸ್ಥಾಪನೆ ಆಗಿದ್ದೇಗೆ..?

ಕೂರ್ಮಗಿರಿ ಪುರಾಣದ ಹಿಂದೆ ಕೂರ್ಮ ಮಹರ್ಷಿ ಎಂಬ ಮುನಿ ಈ ಪ್ರದೇಶದಲ್ಲಿದ್ದ ದಟ್ಟ ಅರಣ್ಯದಲ್ಲಿ ಮಹಾ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಾಗ ಆತನ ಇಷ್ಟ ದೇವರು ಬೆಟ್ಟದ ಮೇಲಿನ ಗುಹೆಯಲ್ಲಿ ಆತನಿಗೆ ದರ್ಶನವಿತ್ತ ಬಗ್ಗೆ ಉಲ್ಲೇಖವಿದೆ.

450 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಭಯಂಕರ ಜಲಕ್ಷಾಮ ಉಂಟಾದಾಗ ತತ್ತರಿಸುತ್ತಿದ್ದ ಜನರನ್ನು ತಮ್ಮಲ್ಲಿದ್ದ ಐಶ್ವರ್ಯದಿಂದ ದಾನ ಧರ್ಮಗಳನ್ನು ನೆರವೇರಿಸುವ ಮೂಲಕ ಸಂತೈಸುತ್ತಿದ್ದ ಯರ್ರಪ್ಪರೆಡ್ಡಿ, ಚಿನ್ನಪ್ಪರೆಡ್ಡಿ ಎಂಬ ಸಹೋದರರು ಕಡೆಗೊಂದು ದಿನ ಬರದ ಭೀಕರತೆ ತಾಳಲಾರದೆ ತಮ್ಮ ಪರಿವಾರದೊಂದಿಗೆ ದನಕರುಗಳಿಗೆ ಮೇವನ್ನು ಅರುಸುತ್ತಾ ಕೂರ್ಮಗಿರಿ ಕ್ಷೇತ್ರಕ್ಕೆ ವಲಸೆ ಬಂದು ಇಲ್ಲಿನ ವನಸಿರಿಗೆ ಮನಸೋತು, ಇಲ್ಲಿಯೇ ನೆಲೆಸಿ ಯಲವಲೋಡು ಎಂಬ ಗ್ರಾಮ ಸ್ಥಾಪಿಸಿದರೆಂಬ ಪ್ರತೀತಿ ಇದೆ.

ಕನಸಿನಲ್ಲಿ ದೇವರು ಹೇಳಿದ್ದನ್ನು ನಿರ್ಮಾಣ ಮಾಡಿದ ಭಕ್ತ

ಕನಸಿನಲ್ಲಿ ದೇವರು ಹೇಳಿದ್ದನ್ನು ನಿರ್ಮಾಣ ಮಾಡಿದ ಭಕ್ತ

ಗುಡಿಬಂಡೆಯ ಪಾಳೇಗಾರ ಹಾವಳಿ ಬೈರೇಗೌಡ ಈ ದೇವರ ಪರಮ ಭಕ್ತನಾಗಿದ್ದು, ಪ್ರತಿ ಸಲ ಆತ ಚೈತ್ರಯಾತ್ರೆಗೆ ಹೋಗುವ ಮುನ್ನ ಈ ಕ್ಷೇತ್ರದಲ್ಲಿ ನೆಲೆಸಿದ್ದ ಕೃಷ್ಣಾನಂದ ಅವದೂತ ಎಂಬ ಗುರುಗಳ ಆರ್ಶೀವಾದ ಪಡೆದು ದೇವರಿಗೆ ಪೂಜೆ ಸಲ್ಲಿಸುತ್ತಿದ್ದ. ಗೆದ್ದು ಬಂದ ನಂತರ ಗುರುಗಳಿಗೆ ಹಾಗೂ ದೇವರಿಗೆ ಕಾಣಿಕೆ ಸಲ್ಲಿಸುತ್ತಿದ್ದ ಎನ್ನುವುದಕ್ಕೆ ದೇವರ ಹೆಸರಿನಲ್ಲಿ ಬೈರೆಗೌಡ ನೀಡಿರುವ ನೂರಾರು ಎಕರೆ ಜಮೀನು ಮಾನ್ಯವೇ ಸಾಕ್ಷಿಯಾಗಿದೆ.

150 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಕಂಚಿ ಸಮುದ್ರಂ ಗ್ರಾಮದ ದಾಸರನರಸಯ್ಯ ಶೆಟ್ಟಿ ಎಂಬ ಭಕ್ತ ದೇವರಿಗೆ ಗುಡಿಗೋಪುರಗಳನ್ನು ನಿರ್ಮಿಸಿಕೊಡಲು ಮುಂದಾದಾಗ ಕನಸಿನಲ್ಲಿ ಕಾಣಿಸಿಕೊಂಡ ಆದಿನಾರಾಯಣ ನನಗೆ ಗುಡಿಗೋಪುರಗಳು ಬೇಡ, ಜನತೆಗೆ ಉಪಯೋಗವಾಗುವ ಕೆಲಸ ಮಾಡು ಎಂದು ತಿಳಿಸಿದರಂತೆ, ಆತ ಅಂದು ನಿರ್ಮಿಸಿದ ದೇವರ ಕೆರೆ ಇಂದಿಗೂ ಜನರಿಗೆ ನೀರಿನ ಆಸರೆಯಾಗಿದೆ.

ಕೂರ್ಮಗಿರಿ ಬೆಟ್ಟದಲ್ಲಿ ನಿಸರ್ಗದ ಚೆಲುವು

ಕೂರ್ಮಗಿರಿ ಬೆಟ್ಟದಲ್ಲಿ ನಿಸರ್ಗದ ಚೆಲುವು

ನಿಸರ್ಗದ ಚೆಲುವನ್ನು ಹೊದ್ದಂತಿರುವ ಎಲ್ಲೋಡಿನ ಕೂರ್ಮಗಿರಿಬೆಟ್ಟ ಹತ್ತು ಹಲವು ವೈಶಿಷ್ಟಗಳಿಂದ ಕೂಡಿದೆ. ಇತ್ತೀಚೆಗೆ ಗೋಪುರ, ಬೆಟ್ಟಕ್ಕೆ ಹೋಗುವ ಮೆಟ್ಟಲುಗಳು, ಮೇಲ್ಛಾವಣಿ ವ್ಯವಸ್ಥೆ, ಬೆಟ್ಟದಲ್ಲಿರುವ ವಿಶ್ರಾಂತಿ ಮಂಟಪ ಹಾಗೂ ದೇವಾಲಯಕ್ಕೆ ಹೊಸ ರೂಪ ನೀಡಿರುವುದು ಕ್ಷೇತ್ರಕ್ಕೆ ಮೆರುಗು ತಂದಿದ್ದು ಬ್ರಹ್ಮರತೋತ್ಸವಕ್ಕೆ ಹೊಸ ಆಕರ್ಷಣೆಯಾಗಿದೆ.

ಪ್ರವಾಸಿಗರಿಗೆ ಇದೊಂದು ಮದುರಾನುಭೂತಿಯ ತಾಣವಾಗಿದ್ದು ಬೆಟ್ಟದಲ್ಲಿ ನೋಡಲು ಸುಂದರ ನಿಸರ್ಗಮಯ ತಾಣಗಳಿವೆ ತಂಗಾಳಿಯ ತಂಪಿನಲ್ಲಿ ತೂರಿ ಮುಂದೆ ಸಾಗಿದರೆ ನೀರಿನ ಝರಿ ಸಿಗುತ್ತದೆ ದ್ವಣೆಯಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲವೆನ್ನದೆ ಸದಾ ನೀರು ಸಿಗುತ್ತದೆ. ಬೆಟ್ಟದ ಮೇಲಿಂದ ಹೊರ ಪ್ರಪಂಚವು ಅತ್ಯಂತ ಸುಂದರವಾಗಿ ಕಾಣುತ್ತದೆ. ಮುಖ್ಯವಾಗಿ ಮಕ್ಕಳಿಗೆ ಈ ತಾಣವು ಹೆಚ್ಚು ಆಕರ್ಷಿತವಾಗಿದ್ದು, ಬೆಟ್ಟದ ಕೆಳಗೆ ಮಕ್ಕಳಿಗೆ ಆಟವಾಡಲು ವಿವಿಧ ಆಟೋಪಕರಣಗಳನ್ನು ಅಳವಡಿಸಲಾಗಿದೆ.

ಮುಜರಾಯಿ ಇಲಾಖೆಗೆ ವಿರುದ್ಧ ಭಕ್ತರ ಅಸಮಧಾನ

ಮುಜರಾಯಿ ಇಲಾಖೆಗೆ ವಿರುದ್ಧ ಭಕ್ತರ ಅಸಮಧಾನ

ತಾಲೂಕು ಕೇಂದ್ರದಿಂದ 7 ಕಿ.ಮೀ ದೂರದಲ್ಲಿದ್ದು. ರಾಜಧಾನಿ ಬೆಂಗಳೂರಿನಿಂದ 105 ಕಿಮೀ ದೂರದಲ್ಲಿರುವ ಕ್ಷೇತ್ರದಲ್ಲಿ ಮುಖ್ಯವಾಗಿ ನಾಗರೀಕ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಬೆಟ್ಟದ ಮೇಲೆ ತಲೆಕೂದಲು ಕೊಡುವ ಪದ್ಧತಿ ರೂಡಿಯಲ್ಲಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಆದರೆ ಇಲಾಖೆಯವರು ಈವರೆವಗೆ ಅಭಿವೃದ್ದಿ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಭಕ್ತಾದಿಗಳ ಆರೋಪವಾಗಿದೆ.

ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಸಿ.ಮುನಿರಾಜು " ಭಾಗವಹಿಸುವ ಭಕ್ತಾದಿಗಳ ಅನುಕೂಲಕ್ಕಾಗಿ 150 ಆಟೋಗಳ ವ್ಯವಸ್ಥೆ ಮಾಡಲಾಗಿದೆ. ಮಜ್ಜಿಗೆ, ಪಾನಕ, ನೀರು, ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆ, ವಾಹನಗಳಿಗೆ ಸುಂಕ ಹಾಗೂ ಅಂಗಡಿಗಳ ಬಾಡಿಗೆಯನ್ನು ಹಾರಾಜಿನಲ್ಲಿ ಪಡೆದು ಪಾವತಿಸಿದ್ದೇನೆ. ನಾಳೆ ಪ್ರಸಾದ ವಿತರಣೆ ಇರಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಸಮಾಜ ಸೇವಕ ಹಾಗೂ ಬಿಜೆಪಿ ಪಕ್ಷದ ಮುಖಂಡ ಸಿ.ಮುನಿರಾಜು, ಸೇರಿದಂತೆ ಹಲವು ಪಕ್ಷಗಳ ಮುಖಂಡರು ಭಾಗವಹಿಸಿ ದೇವರ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಗುಡಿಬಂಡೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಲಿಂಗರಾಜು ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

English summary
Koorma Giri Yellodu Adinarayana Swamy Brahma Rathotsava at Feb 5th and 6th more than thousands participated in Brahma Rathotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X