ಕಾಂಗ್ರೆಸ್ ನಾಯಕಿ ಮಗಳ ಸಾವು; ತಂದೆಯಿಂದ ದೂರು
ಚಿಕ್ಕಬಳ್ಳಾಪುರ, ಆಗಸ್ಟ್ 19: ಕಾಂಗ್ರೆಸ್ ನಾಯಕಿ ಮಮತಾ ಮೂರ್ತಿ ಅವರ ಮಗಳು ಇಂದು ಬೆಳಗ್ಗಿನ ಜಾವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ತಂದೆ ವೆಂಕಟೇಶ್ ಮೂರ್ತಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಂದು ಬೆಳಿಗ್ಗೆ ಮಮತಾ ಮೂರ್ತಿ ಅವರ ಮಗಳಾದ ನಿಹಾರಿಕಾ (19) ಸಾವನ್ನಪ್ಪಿದ್ದರು. ನೇಣು ಹಾಕಿಕೊಂಡು ಸಾವನ್ನಪ್ಪಿರುವುದಾಗಿ ತಿಳಿದುಬಂದಿತ್ತು. ಆದರೆ ಸಾವಿನ ಕುರಿತು ಅನುಮಾನ ವ್ಯಕ್ತವಾಗಿತ್ತು. ಇದೀಗ ಯುವತಿಯ ತಂದೆ ದೂರು ನೀಡಿದ್ದಾರೆ.
ನನ್ನ ಮಗಳು ನಿಹಾರಿಕಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ತಯಾರಾಗುತ್ತಿದ್ದಳು. ನೀಟ್ ಪರೀಕ್ಷೆ ನಡೆಯದೆ ಮೂಂದೂಡುತ್ತಿದ್ದರಿಂದ ಬೇಸರ ಮಾಡಿಕೊಂಡು, ಸಿಇಟಿ ಫಲಿತಾಂಶದಲ್ಲಿ ಕಡಿಮೆ ಅಂಕ ಬರುವ ಆತಂಕದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ ಎಂದು ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿಯೂ ಆಗಿರುವ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜಲಾಶಯಕ್ಕೆ ಹಾರಿ ಶಿಕ್ಷಕ ಆತ್ಮಹತ್ಯೆ
ಇಂದು ಬೆಳಗ್ಗೆ ನನ್ನ ಹೆಂಡತಿ ಮಗಳು ಬಾಗಿಲು ತೆರೆಯದ ವಿಷಯ ತಿಳಿಸಿದಾಗ ಶಿಡ್ಲಘಟ್ಟ ಪ್ರವಾಸಿ ಮಂದಿರದಿಂದ ಮನೆಗೆ ಬಂದೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಮಗಳು ಉಸಿರಾಡುತ್ತಿದ್ದುದನ್ನು ಕಂಡು ಶಿಡ್ಲಘಟ್ಟ ಆಸ್ಪತ್ರೆ ಗೆ ಕರೆದುಕೊಂಡು ಹೋದೆ. ಆದರೆ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.