ಚಿಕ್ಕಬಳ್ಳಾಪುರ: ಆಮ್ಲಜನಕದ ಕೊರತೆಯಿಂದ ಮೀನುಗಳ ಸಾವು
ಚಿಕ್ಕಬಳ್ಳಾಪುರ, ಏಪ್ರಿಲ್ 08: ತಾಲ್ಲೂಕಿನ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿರುವ ನೀರು ಮೀನುಗಾರಿಕೆಗೆ ಯೋಗ್ಯವಾಗಿದೆ ಎಂದು ಮೀನು ಆರೋಗ್ಯ ತನಿಖಾ ಪ್ರಯೋಗಾಲಯ ವರದಿ ನೀಡಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಟಿ.ಎನ್.ಯಶಸ್ವಿನಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ಈ ಕೆರೆಯಲ್ಲಿ ಮೀನುಗಳ ಸಾವು ಸಂಭವಿಸಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾಡಳಿತ, ಅಧಿಕೃತ ಹೇಳಿಕೆ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಮೀನುಗಳು ಸತ್ತಿದ್ದವು ಹೀಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಮೀನು ಆರೋಗ್ಯ ತನಿಖಾ ಪ್ರಯೋಗಾಲಯಕ್ಕೆ ಕೆರೆ ನೀರನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು ಪ್ರಯೋಗಾಲಯ ಈಗ ವರದಿ ನೀಡಿದ್ದು, ಕೆರೆಯಲ್ಲಿ ನೀರಿನ ಗುಣಮಟ್ಟ ಅನುಮತಿಸಲಾದ ಮಿತಿಯಲ್ಲೇ ಇದೆ ಅಲ್ಲದೆ ಕೆರೆಯಲ್ಲಿರುವ ನೀರು ಮೀನುಗಾರಿಕೆಗೆ ಯೋಗ್ಯವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ .
ಆಮ್ಲಜನಕದ ಕೊರತೆಯಿಂದ ಮೀನುಗಳ ಸಾವು: ತೀವ್ರ ಉಷ್ಣಾಂಶದ ಹಿನ್ನಲೆಯಲ್ಲಿ ಕೆರೆಯಲ್ಲಿರುವ ನೀರಿನ ಆಮ್ಲಜನಕದ ಕೊರತೆಯಿಂದ ಮೀನುಗಳು ಸತ್ತಿವೆ ಆದರೆ ಕೆರೆಯ ನೀರಿನಲ್ಲಿ ಯಾವುದೇ ವಿಷಕಾರಿ ಅಂಶಗಳಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ,ಚಿಕ್ಕಬಳ್ಳಾಪುರ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.