ಜಲ್ಲಿಕಟ್ಟು ನಿಷೇಧದ ಹಿಂದೆ ಕಾಂಗ್ರೆಸ್, ಡಿಎಂಕೆ ಕೈವಾಡ: ಮೋದಿ
ಚೆನ್ನೈ, ಏಪ್ರಿಲ್ 2: ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಜಲ್ಲಿಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟದ ವಿರುದ್ಧ ಕಿಡಿಕಾರಿದ್ದಾರೆ.
2011ರಿಂದಲೂ ಜಲ್ಲಿಕಟ್ಟು ನಿಷೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಡಿಎಂಕೆ ದ್ವಂದ್ವ ನೀತಿಗಳನ್ನು ಅನುಸರಿಸುತ್ತಿವೆ. 2011 ರಲ್ಲಿ ಜಲ್ಲಿಕಟ್ಟು ನಿಷೇಧಕ್ಕೆ ಡಿಎಂಕೆ ಒಲವು ತೋರಿತ್ತು.
"ತಮಿಳುನಾಡಿನ ಜನರು ದಡ್ಡರಲ್ಲ; ಎಂದಿಗೂ ತಮ್ಮ ಮತವನ್ನು ವ್ಯರ್ಥ ಮಾಡುವುದಿಲ್ಲ"
ಕಾಂಗ್ರೆಸ್ ಕೂಡ ಇದನ್ನು ಬೆಂಬಲಿಸಿತ್ತು, ಅದಲ್ಲದೆ ಯುಪಿಎ ಹಾಗೂ ಡಿಎಂಕೆ ಸರ್ಕಾರದ ಅವಧಿಯಲ್ಲೇ ಜಲ್ಲಿಕಟ್ಟನ್ನು ನಿಷೇಧಿಸಲಾಗಿತ್ತು. 2016ರ ಚುನಾವಣಾ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಜಲ್ಲಿಕಟ್ಟು ನಿಷೇಧದ ಪ್ರಸ್ತಾಪವನ್ನು ಮಾಡಿತ್ತು.

ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ
ಆದರೆ ಈಗ ತಮಿಳು ಸಂಸ್ಕೃತಿಯ ಬಗ್ಗೆ ದೊಡ್ಡ ನಾಟಕ ಮಾಡುತ್ತಿದ್ದಾರೆ ಹಾಗೂ ಬಿಜೆಪಿ ಹಾಗೂ ಎಐಎಡಿಎಂಕೆ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ತಮಿಳುನಾಡು ಜನತೆಗೆ ಯಾರು ಏನು ಮಾಡಿದ್ದಾರೆಂಬ ಅರಿವಿದೆ
ಆದರೆ ತಮಿಳುನಾಡು ಜನರಿಗೆ ಯಾರು ಏನು ಮಾಡಿದ್ದಾರೆ ಎನ್ನುವ ಸ್ಪಷ್ಟ ಅರಿವಿದೆ, ಈ ಹಿಂದೆ ಜಲ್ಲಿಕಟ್ಟು ನಿಷೇಧಕ್ಕೆ ಸುಪ್ರೀಂಕೋರ್ಟ್ ಆದೇಶಗಳಾದಾಗ ತಮಿಳುನಾಡು ಜನತೆ ಪರವಾಗಿ ನಿಂತಿದ್ದು ಕೇಂದ್ರ ಎನ್‌ಡಿಎ ಸರ್ಕಾರ ಹಾಗೂ ರಾಜ್ಯದೆ ಎಐಡಿಎಂಕೆ ಸರ್ಕಾರ.

ತಮಿಳು ಸಂಸ್ಕೃತಿಯ ಪರವಾಗಿ ನಿಂತಿದ್ದು ಎನ್‌ಡಿಎ
ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಕೂಡಲೇ ಸುಗ್ರೀವಾಜ್ಞೆಯನ್ನು ಹೊರಡಿಸಿ, ತಮಿಳು ಸಂಸ್ಕೃತಿಯ ರಕ್ಷಣೆಗೆ ನಿಂತಿದ್ದು ಎನ್‌ಡಿಎ ಸರ್ಕಾರವೆಂಬುದನ್ನು ತಮಿಳರು ಮರೆಯುವುದಿಲ್ಲ.
ಸ್ಟಾಲಿನ್ ಹಾಗೂ ರಾಹುಲ್ ಗಾಂಧಿ ಈ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಜನರು ಈ ಸತ್ಯದಿಂದ ದೂರಸರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಎಂಜಿಆರ್ ನೆನಪಿಸಿಕೊಂಡ ಮೋದಿ
ಇನ್ನು ತಮಿಳುನಾಡು ಅಭಿವೃದ್ಧಿ ಹಾಗೂ ಚುನಾವಣಾ ರಾಜಕೀಯ ಸಂದರ್ಭದಲ್ಲಿ ಎಂಜಿಆರ್‌ನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಎಂಜಿಆರ್ ಸರ್ಕಾರವನ್ನು ಉಚ್ಛಾಟಿಸಿ ರಾಷ್ಟ್ರಪತಿ ಆಡಳಿತ ಹೇರಿದ್ದು ಕಾಂಗ್ರೆಸ್ ಸರ್ಕಾರ, ನಂತರದ ಚುನಾವಣೆಯಲ್ಲಿ ಎಂಜಿಆರ್ ಗೆದ್ದು ಬೀಗಿದರು, 1970, 80, 84 ರಲ್ಲಿ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸತತವಾಗಿ ಚುನಾವಣೆಯಲ್ಲಿ ನಿಂತು ಎಂಜಿಆರ್ ಗೆಲುವು ಸಾಧಿಸಿದರು.
ಎಂಜಿಆರ್ ಕನಸಿನ ತಮಿಳುನಾಡು ನಿರ್ಮಾಣವೇ ಬಿಜೆಪಿ ಹಾಗೂ ಎಐಎಡಿಎಂಕೆ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ತನ್ನದೇ ಆದ ಯೋಜನೆಗಳನ್ನು ರೂಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.