ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ

|
Google Oneindia Kannada News

Recommended Video

Karunanidhi Life Story | ಕರುಣಾನಿಧಿ ಯಾರು? | Oneindia Kannada

ಚೆನ್ನೈ, ಆಗಸ್ಟ್ 7: ಮಂಗಳವಾರ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ವ್ಯಕ್ತಿತ್ವ ಹಲವು ಆಯಾಮಗಳದ್ದು.

ರಾಜಕೀಯ ನಾಯಕರಾಗಿ, ತಮಿಳುನಾಡಿನ ಪ್ರಮುಖ ಮತ್ತು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಇಂದಿನ ತಲೆಮಾರಿಗೆ ಹೆಚ್ಚು ಪರಿಚಿತರಾದರೂ, ತಮಿಳುನಾಡಿನ ಕಲಾಜಗತ್ತಿಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು.

ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ

ಹಿಂದಿ ಹೇರಿಕೆಯ ವಿರುದ್ಧದ ಹೋರಾಟದಂತೆಯೇ ಅವರು ಸಾಮಾಜಿಕ ಅವ್ಯವಸ್ಥೆ, ಕಟ್ಟುಪಾಡುಗಳು ಮತ್ತು ಸಂಪ್ರದಾಯಗಳ ಹೇರಿಕೆಗಳ ವಿರುದ್ಧವೂ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಅದನ್ನು ತಮ್ಮ ಸಿನಿಮಾ ಹಾಗೂ ಸಾಹಿತ್ಯಗಳಲ್ಲಿಯೂ ತಂದರು.

ಅನೇಕ ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಅವರು ಹಿಂದೂ ವಿರೋಧಿ ಎಂಬ ಹಣೆಪಟ್ಟಿಯನ್ನೂ ಅಂಟಿಸಿಕೊಂಡರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ ತಮಿಳುನಾಡು ಮಾಜಿ ಮುಖ್ಯಮಂತ್ರಿ 'ಕಲೈನಾರ್' ಕರುಣಾನಿಧಿ ಇನ್ನಿಲ್ಲ

ಕರುಣಾನಿಧಿ (94) ಅವರ ರಾಜಕೀಯ ಮತ್ತು ಸಾಮಾಜಿಕ ಪಯಣದ ಹೆಜ್ಜೆಗೆ 80 ವರ್ಷಗಳ ಇತಿಹಾಸವಿದೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ 50 ವರ್ಷ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದ ಅವರು, ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು.

ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

ಕಲೈನಾರ್ (ಕಲಾವಿದ) ಎಂದೇ ಪ್ರಸಿದ್ಧರಾಗಿದ್ದ ಅವರು, ರಾಜಕೀಯಕ್ಕೆ ಬರುವ ಮೊದಲು ಸಿನಿಮಾರಂಗದಲ್ಲಿ ಚಿತ್ರಕಥೆ ರಚನಾಕಾರರಾಗಿ ಗುರುತಿಸಿಕೊಂಡಿದ್ದರು.

ಆಳಗಿರಿಸ್ವಾಮಿ ಪ್ರೇರಣೆ

ಆಳಗಿರಿಸ್ವಾಮಿ ಪ್ರೇರಣೆ

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಳೈ ಗ್ರಾಮದಲ್ಲಿ 1924ರ ಜೂನ್ 3 ರಂದು ಮುತ್ತುವೇಲು ಮತ್ತು ಅಂಜು ದಂಪತಿಗೆ ಜನಿಸಿದ ಕರುಣಾನಿಧಿ ಬಾಲ್ಯದಿಂದಲೂ ನಾಟಕ, ಪದ್ಯ ಮತ್ತು ಸಾಹಿತ್ಯದ ಒಲವು ಬೆಳೆಸಿಕೊಂಡಿದ್ದರು.

ಜಸ್ಟೀಸ್ ಪಾರ್ಟಿಯ ಆಳಗಿರಿಸ್ವಾಮಿ ಅವರ ಭಾಷಣದಿಂದ ಪ್ರೇರೇಪಿತರಾಗಿದ್ದ ಕರುಣಾನಿಧಿ, ತಮ್ಮ 14ನೆಯ ವಯಸ್ಸಿನಲ್ಲಿಯೇ ಸಾಮಾಜಿಕ ಚಳವಳಿಗಳಲ್ಲಿ ತೊಡಿಸಿಕೊಂಡಿದ್ದರು.

ದ್ರಾವಿಡ ಚಳವಳಿಯ ವಿದ್ಯಾರ್ಥಿ ಘಟಕದಲ್ಲಿ ಸೇರಿಕೊಂಡು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡರು.

ಸಿನಿಮಾ ನಂಟು

20ನೇ ವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು, ಐತಿಹಾಸಿಕ ಹಾಗೂ ಸಾಮಾಜಿಕ ಕಥಾಹಂದರದ ಸಿನಿಮಾಗಳಿಗೆ ಅವರು ಕಥೆಗಳನ್ನು ಬರೆದರು. ಅವರ ಸಾಮಾಜಿಕ ಸಿನಿಮಾಗಳು ಹೋರಾಟ, ಚಳವಳಿಯ ಅಂಶಗಳನ್ನೇ ಒಳಗೊಂಡಿದ್ದವು.

ಅವರು ಕಥೆ ಬರೆದ ರಾಜಕೀಯ ವಸ್ತುವುಳ್ಳ 'ಪರಾಶಕ್ತಿ' ಸಿನಿಮಾ ತಮಿಳುಚಿತ್ರರಂಗದ ದಿಕ್ಕು ಬದಲಿಸಿತು. ಇದು ಯಶಸ್ವಿ ಚಿತ್ರವಾದರೂ ಒಂದು ವರ್ಗದ ವಿರೋಧಕ್ಕೆ ಕಾರಣವಾಗಿ ವಿವಾದ ಸೃಷ್ಟಿಸಿತು.

ಮುಂದೆ 'ಪನಂ' ಮತ್ತು 'ತಂಗರತ್ನಂ' ಚಿತ್ರಗಳಲ್ಲಿಯೂ ಇಂತಹ ರಾಜಕೀಯ ಹಾಗೂ ಸಾಮಾಜಿಕ ವಸ್ತುಗಳನ್ನು ಅವರು ಬಳಸಿಕೊಂಡಿದ್ದರು.

ವಿಧವಾ ವಿವಾಹ, ಅಸ್ಪೃಶ್ಯತೆ ನಿವಾರಣೆ, ಜಮೀನ್ದಾರಿ ಪದ್ಧತಿ ನಿರ್ಮೂಲನೆ, ಧಾರ್ಮಿಕ ದುರಾಚರಣೆಗಳ ವಿರುದ್ಧ ದನಿ ಎತ್ತುವ ಸಿನಿಮಾ ಕಥೆಗಳನ್ನು ಅವರು ರಚಿಸಿದರು. ಇದು ಜನಪ್ರಿಯತೆ ಪಡೆದುಕೊಂಡರೂ ಕೊನೆಗೆ ಸೆನ್ಸಾರ್‌ನ ಕೆಂಗಣ್ಣಿಗೆ ಗುರಿಯಾದವು. ಅವರ ಎರಡು ನಾಟಕಗಳ ಮೇಲೆ ನಿಷೇಧ ಹೇರಲಾಯಿತು.

ಸುಮಾರು 40 ಸಿನಿಮಾಗಳಿಗೆ ಅವರು ತಮ್ಮ ಬರಹದ ಕೊಡುಗೆ ನೀಡಿದ್ದರು.

ರಾಜಕೀಯ ಪ್ರವೇಶ

ರಾಜಕೀಯ ಪ್ರವೇಶ

ಆಳಗಿರಿಸ್ವಾಮಿ ಅವರಿಂದ ಪ್ರೇರೇಪಣೆಗೊಂಡ ಕರುಣಾನಿಧಿ, ಹದಿನಾಲ್ಕರ ವಯಸ್ಸಿನಲ್ಲಿಯೇ ಸ್ಥಳೀಯ ಯುವಕರ ಸಂಘವನ್ನು ಹುಟ್ಟುಹಾಕಿದರು. 'ಮನವರ್ ನೇಸನ್' ಎಂಬ ಕೈಬರಹದ ಪತ್ರಿಕೆ ಹೊರತರುತ್ತಿದ್ದರು.

ಬಳಿಕ ತಮಿಳುನಾಡು ತಮಿಳು ಮನವರ್ ಮಂಡ್ರಮ್ ಎಂಬ ವಿದ್ಯಾರ್ಥಿ ಸಂಘಟನೆ ಹುಟ್ಟುಹಾಕಿದರು. ಇದು ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಘಟಕವಾಗಿತ್ತು. ಹಿಂದಿ ಹೇರಿಕೆ ವಿರುದ್ಧ ನಡೆದ ಹೋರಾಟದಲ್ಲಿ ಕರುಣಾನಿಧಿ ಮುಂಚೂಣಿಯಲ್ಲಿದ್ದರು. ಇಲ್ಲಿಯೇ ಡಿಎಂಕೆ ಪಕ್ಷದ ಮುಖವಾಣಿಯಾದ 'ಮುರಸೋಳಿ' ಪತ್ರಿಕೆ ಆರಂಭವಾಯಿತು.

ಕಲ್ಲಕುಡಿ ಕೈಗಾರಿಕಾ ಪ್ರದೇಶದ ಹೆಸರು ಬದಲಾವಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಅವರ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು.

ಜನಪ್ರತಿನಿಧಿಯಾಗಿ ಆಯ್ಕೆ

ಜನಪ್ರತಿನಿಧಿಯಾಗಿ ಆಯ್ಕೆ

1957ರಲ್ಲಿ 33ನೇ ವಯಸ್ಸಿನಲ್ಲಿ ತಮಿಳುನಾಡು ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. 1961ರಲ್ಲಿ ಡಿಎಂಕೆಯ ಖಜಾಂಚಿಯಾಗಿ, 1962ರಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಇಲಾಖೆ ಸಚಿವರಾದರು.

1969ರಲ್ಲಿ ಮುಖ್ಯಮಂತ್ರಿ ಅಣ್ಣಾದೊರೈ ನಿಧನರಾದಾಗ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ 1987ರಲ್ಲಿ ಎಐಎಡಿಎಂಕೆ ನಾಯಕ ಎಂ.ಜಿ. ರಾಮಚಂದ್ರನ್ ನಿಧನದವರೆಗೂ ಕರುಣಾನಿಧಿ ಅಧಿಕಾರಕ್ಕೆ ಬರಲು ಕಷ್ಟಪಡಬೇಕಾಯಿತು.

ಚುನಾವಣೆಯಲ್ಲಿ ಸೋತಿದ್ದೇ ಇಲ್ಲ

ಚುನಾವಣೆಯಲ್ಲಿ ಸೋತಿದ್ದೇ ಇಲ್ಲ

13 ಬಾರಿ ವಿಧಾನಸಭೆಗೆ ಹಾಗೂ ಒಮ್ಮೆ ವಿಧಾನ ಪರಿಷತ್‌ಗೆ ಅವರು ಆಯ್ಕೆಯಾಗಿದ್ದರು. 1984ರ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಅದರ ಹೊರತಾಗಿ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸಿದ್ದರು.

1980ರ ದಶಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣ ಕೇಂದ್ರ ಸರ್ಕಾರವು ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಿತ್ತು. 1996ರಲ್ಲಿ ಅವರು ಮತ್ತೆ ಮುಖ್ಯಮಂತ್ರಿಯಾದರು. 2001ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತು. 2006ರಲ್ಲಿ ಕರುಣಾನಿಧಿ ಮತ್ತೆ ಅಧಿಕಾರ ಹಿಡಿದರು.

ಅಣ್ಣಾಮಲೈ ವಿಶ್ವವಿದ್ಯಾಲಯವು 1971ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಅವರ ಕೃತಿ 'ತೆನ್ಪಂಡಿ ಸಿಂಗಂ'ಗೆ ರಾಜಾ ರಾಜನ್ ಪ್ರಶಸ್ತಿ ದೊರಕಿತ್ತು.

ಭ್ರಷ್ಟಾಚಾರ ಆರೋಪ

ಭ್ರಷ್ಟಾಚಾರ ಆರೋಪ

ವೀರನಮ್ ಯೋಜನೆಯ ಟೆಂಡರ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಕರುಣಾನಿಧಿ ಈಡಾಗಿದ್ದರು. ಭ್ರಷ್ಟಾಚಾರ ಮತ್ತು ರಾಜಕೀಯ ಸಂಘರ್ಷದ ಸಾಧ್ಯತೆಯ ನೆಪವೊಡ್ಡಿ ಇಂದಿರಾಗಾಂಧಿ, ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಿದ್ದರು.

2001ರಲ್ಲಿ ಚೆನ್ನೈನಲ್ಲಿ ಫ್ಲೈಓವರ್ ನಿರ್ಮಾಣದಲ್ಲಿ ಅವ್ಯವಹಾರ ನಡೆದಿತ್ತು ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಇವುಗಳಲ್ಲದೆ ಕರುಣಾನಿಧಿ ಮತ್ತು ಡಿಎಂಕೆ ಸದಸ್ಯರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು.

ವಿವಾದಗಳು ಹೊಸತಲ್ಲ

ವಿವಾದಗಳು ಹೊಸತಲ್ಲ

ಸೇತು ಸಮುದ್ರದ ವಿವಾದ ತೀವ್ರ ಚರ್ಚೆಗೆ ಒಳಗಾಗಿತ್ತು. ಶ್ರೀರಾಮನ ಅಸ್ತಿತ್ವದ ಬಗ್ಗೆ ಕರುಣಾನಿಧಿ ಪ್ರಶ್ನಿಸಿದ್ದರು. 'ಸಾವಿರಾರು ವರ್ಷಗಳ ಹಿಂದೆ ರಾಮ ಎಂಬ ದೇವರು ಇದ್ದನೆಂದು ಹೇಳುತ್ತಾರೆ. ಆತ ಕಟ್ಟಿದ ಸೇತುವೆಯನ್ನು ಮುಟ್ಟಬೇಡಿ. ನಾನು ಕೇಳುತ್ತೇನೆ ರಾಮ ಯಾರು? ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆತ ಪದವಿ ಪಡೆದ?' ಎಂದು ಅವರು ಹೇಳಿಕೆ ನೀಡಿದ್ದು ತೀವ್ರ ಕೋಲಾಹಲ ಸೃಷ್ಟಿಸಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆಸಿದ ಎಲ್‌ಟಿಟಿಇ ಉಗ್ರರಿಗೆ ಕರುಣಾನಿಧಿ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ತನಿಖಾ ವರದಿಯಲ್ಲಿ ಅವರ ಹೆಸರು ಇರಲಿಲ್ಲ. 2009ರಲ್ಲಿ ಸಂದರ್ಶನವೊಂದರಲ್ಲಿ ಅವರು 'ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ನನ್ನ ಉತ್ತಮ ಗೆಳೆಯ' ಎಂದು ಹೇಳಿದ್ದು ಮತ್ತೊಂದು ವಿವಾದ ಉಂಟುಮಾಡಿತ್ತು.

ಕರುಣಾನಿಧಿ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಡಿಎಂಕೆಯ ಕೆಲವು ಸದಸ್ಯರು ಆರೋಪಿಸಿದ್ದರು. ಟೀಕೆ, ವಿರೋಧಗಳ ನಡುವೆಯೇ ಅವರು ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಿದರು. ಪಕ್ಷದ ಹಿಡಿತ ಕುಟುಂಬದ ಕೈತಪ್ಪದಂತೆ ನೋಡಿಕೊಂಡರು.

English summary
Former Chief Minister of Tamil nadu, DMK Chief M Karunanidhi (94) died on Tuesday (August 7) in Kauvery hospital. Here is his profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X