• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನ 'ಪೊಲ್ಲಾಚಿ ಲೈಂಗಿಕ ಹಗರಣ' ಏನು? ಎತ್ತ?

By ಅನಿಲ್ ಆಚಾರ್
|

ತಮಿಳುನಾಡಿನಲ್ಲಿ ಈಗ ಲೋಕಸಭೆ ಚುನಾವಣೆ ಕಾವಿಗಿಂತ ಜೋರಾಗಿ ಪೊಲ್ಲಾಚಿಯಲ್ಲಿನ ಲೈಂಗಿಕ ಹಗರಣದ ಸುದ್ದಿ ಕೇಳಿಬರುತ್ತಿದೆ. ಇಡೀ ಹಗರಣದ ಆಳ- ಅಗಲ ದಿನದಿನಕ್ಕೂ ಹೆಚ್ಚಾಗುತ್ತಿದೆ. ಒಂದು ಪ್ರಕರಣದ ಚುಂಗು ಹಿಡಿದು ಹೊರಟಾಗ ಭಾರೀ ದೊಡ್ಡ ಜಾಲವೇ ಬಯಲಾಗಿದೆ. ಏನಿದು 'ಪೊಲ್ಲಾಚಿ ಲೈಂಗಿಕ ಹಗರಣ' ಎಂಬುದನ್ನು ವಿವರವಾಗಿ ತಿಳಿಸುವ ವರದಿ ಇದು.

ಕಳೆದ ಫೆಬ್ರವರಿ ಹನ್ನೆರಡನೇ ತಾರೀಕು ಹತ್ತೊಂಬತ್ತು ವರ್ಷದ ಪೊಲ್ಲಾಚಿಯ ಕಾಲೇಜು ವಿದ್ಯಾರ್ಥಿನಿಗೆ ಒಂದು ಫೋನ್ ಕರೆ ಬಂದಿತ್ತು. ಶಬರಿರಾಜನ್ ಅಲಿಯಾಸ್ ರಿಷ್ವದ್ ಎಂಬಾತ, ನಿನ್ನ ಜತೆ ಮುಖ್ಯವಾದ ವಿಷಯ ಮಾತನಾಡಬೇಕು. ಪೊಲ್ಲಾಚಿಯ ಬಸ್ ಸ್ಟಾಪ್ ಹತ್ತಿರ ಬಾ ಎಂದು ಕರೆದಿದ್ದ. ಅಂದು ಮಧ್ಯಾಹ್ನ ಆಕೆ ಅಲ್ಲಿಗೆ ತಲುಪುವ ಹೊತ್ತಿಗೆ ಶಬರಿರಾಜನ್ ಜತೆಗೆ ಆತನ ಮತ್ತೊಬ್ಬ ಸ್ನೇಹಿತ ತಿರುನಾವುಕ್ಕರಸು ಒಂದು ಕಾರಿನ ಬಳಿ ನಿಂತಿದ್ದರು.

ಹಾಗೇ ಹೋಗುತ್ತಾ ದಾರಿಯಲ್ಲಿ ಮಾತನಾಡೋಣ. ನೀನು ಕಾರು ಹತ್ತು ಎಂದು ಇಬ್ಬರೂ ಸೇರಿ ಆಕೆಯನ್ನು ವಾಹನದೊಳಗೆ ಕೂರಿಸಿಕೊಂಡಿದ್ದಾರೆ. ತಿರುನಾವುಕ್ಕರಸು ಕಾರನ್ನು ಚಲಾಯಿಸುವುದಕ್ಕೆ ಮುಂದೆ ಕೂತರೆ, ಶಬರಿರಾಜನ್ ಆಕೆಯ ಪಕ್ಕದಲ್ಲಿ ಕೂತಿದ್ದಾನೆ. ದಿಢೀರನೇ ಸತೀಶ್ ಮತ್ತು ವಸಂತ್ ಕುಮಾರ್ ಎಂಬಿಬ್ಬರು ಸಹ ಕಾರಿನ ಒಳಗೆ ಬಂದಿದ್ದಾರೆ.

ಕೇರಳದಲ್ಲಿ ಮತ್ತೆ ಬುಸುಗುಟ್ಟಿದ ರಾಜಕಾರಣಿಗಳ 'ಸೆಕ್ಸ್ ಸ್ಕ್ಯಾಂಡಲ್'

ನಾಲ್ವರೂ ಸೇರಿ ಬಲವಂತವಾಗಿ ಆ ಯುವತಿಯ ಬಟ್ಟೆಗಳನ್ನು ತೆಗೆದು, ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆಕೆಯ ಬಳಿಯಿದ್ದ ಚಿನ್ನದ ಸರ ಕಸಿದುಕೊಂಡಿದ್ದಾರೆ. ನಾವು ಕೇಳಿದಾಗ ಹಣ ಕೊಡದಿದ್ದರೆ, ಲೈಂಗಿಕ ಸಂಪರ್ಕಕ್ಕೆ ಒಪ್ಪದಿದ್ದರೆ ಈ ವಿಡಿಯೋವನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಆಕೆ ಜೋರಾಗಿ ಕಿರುಚಾಡಿದಾಗ ಹಾಗೂ ಅಳಲು ಆರಂಭಿಸಿದಾಗ ದಾರಿಯ ಮಧ್ಯದಲ್ಲೇ ಬಿಟ್ಟು, ಕಾರಿನಲ್ಲಿ ಹೊರಟುಹೋಗಿದ್ದಾರೆ.

ನಾಲ್ವರದೂ ಲೈಂಗಿಕ ದೌರ್ಜನ್ಯ, ಬೆದರಿಕೆ ದಂಧೆ

ನಾಲ್ವರದೂ ಲೈಂಗಿಕ ದೌರ್ಜನ್ಯ, ಬೆದರಿಕೆ ದಂಧೆ

ಈ ಘಟನೆಯಿಂದ ಕಂಗಾಲಾದ ಯುವತಿ ತನ್ನ ಕುಟುಂಬದವರ ಬಳಿ ಕೂಡ ವಿಚಾರವನ್ನು ಹೇಳಿಕೊಂಡಿಲ್ಲ. ಆದರೆ ಯಾವಾಗ ಈ ನಾಲ್ವರು ಸೇರಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ, ಹಲವು ಸಲ ಹಣಕ್ಕಾಗಿ ಒತ್ತಾಯಿಸಿದರೋ ಆಗ ಕುಟುಂಬದವರ ಬಳಿ ಆಗಿದ್ದನ್ನೆಲ್ಲ ಹೇಳಿಕೊಳ್ಳಲು ಯುವತಿ ನಿರ್ಧರಿಸಿದ್ದಾಳೆ. ಆ ಯುವತಿಯ ಸೋದರ ಆ ನಂತರ ತಿರುನಾವುಕ್ಕರಸು ಮತ್ತು ಶಬರಿರಾಜನ್ ನನ್ನು ಪತ್ತೆ ಮಾಡಿ, ಚೆನ್ನಾಗಿ ತದುಕಿದ ಮೇಲೆ ಭಯಾನಕವಾದ ಲೈಂಗಿಕ ಹಿಂಸೆ ಮತ್ತು ಹಫ್ತಾ ವಸೂಲಿ ದಂಧೆ ಬೆಳಕಿಗೆ ಬಂದಿದೆ. ಅವರಿಬ್ಬರ ಬಳಿ ಇದ್ದ ಮೊಬೈಲ್ ಫೋನ್ ಪರಿಶೀಲಿಸಿದಾಗ ಮತ್ತೂ ಮೂವರು ಮಹಿಳೆಯರ ವಿಡಿಯೋ ಪತ್ತೆಯಾಗಿದೆ. ಅವರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದುದು ಗೊತ್ತಾಗಿದೆ. ಆಗ ಈ ಯುವತಿಯ ಕುಟುಂಬದವರು ಪೊಲ್ಲಾಚಿ ಪೊಲೀಸರ ಬಳಿ ಲೈಂಗಿಕ ದೌರ್ಜನ್ಯ ಮತ್ತು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಈ ಒಂದು ಪ್ರಕರಣದ ಬೆನ್ನಿಗೆ ಶಬರಿರಾಜನ್, ತಿರುನಾವುಕ್ಕರಸು, ಸತೀಶ್ ಹಾಗೂ ವಸಂತ್ ಕುಮಾರ್ ನಾಲ್ವರು ಇತರರ ಜತೆ ಸೇರಿ ಇಂಥದ್ದೇ ದೊಡ್ಡ ದಂಧೆ ನಡೆಸುತ್ತಿರುವ ಬಗ್ಗೆ ಗುಮಾನಿ ಬಂದಿದೆ. ಪೊಲೀಸರು ಅವರಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್: ಸರ್ಕಾರದ ವಿರುದ್ಧ ಕಮಲ್ ಕಿಡಿ

ವಂಚನೆಗೆ ತೊಡಗುತ್ತಿದ್ದುದು ಹೇಗೆ?

ವಂಚನೆಗೆ ತೊಡಗುತ್ತಿದ್ದುದು ಹೇಗೆ?

ಇನ್ನು ಈ ನಾಲ್ವರಿಂದ ವಂಚನೆಗೆ ಒಳಗಾದ ಸಂತ್ರಸ್ತೆಯರು ಮುಂದೆ ಬಂದು, ತಮಗಾದ ಅನ್ಯಾಯದ ಬಗ್ಗೆ ದೂರು ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಈ ನಾಲ್ವರು ಅನುಸರಿಸುತ್ತಿದ್ದ ವಿಧಾನ ಏನೆಂದರೆ, ಮೊದಲಿಗೆ ಶಬರಿರಾಜನ್ ಅಲಿಯಾಸ್ ರಿಷ್ವದ್ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಅವರನ್ನು ಯಾವುದಾದರೂ ಹೋಟೆಲ್ ಅಥವಾ ಮನೆಗೆ ಕರೆತರುತ್ತಿದ್ದ. ಅಲ್ಲಿ ಒಂದೋ ಅವರನ್ನು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಅಥವಾ ಒಪ್ಪಿಸುತ್ತಿದ್ದ. ಆ ವೇಳೆ ಆತನ ಸಹಚರರು ಅವಿತಿಟ್ಟುಕೊಂಡು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಒಂದು ವೇಳೆ ಆ ಮಹಿಳೆ ಅಥವಾ ಯುವತಿ ಪ್ರತಿರೋಧ ಒಡ್ಡಿದರೆ ಒಬ್ಬನು ಅತನ ಸಹಾಯಕ್ಕೆ ಬರುತ್ತಿದ್ದ. ಉಳಿದಿಬ್ಬರು ವಿಡಿಯೋ ಮಾಡುತ್ತಿದ್ದರು. ಆ ರೀತಿ ಶಬರಿರಾಜನ್ ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿಡಿಯೋವೊಂದನ್ನು ತಮಿಳು ನಿಯತಕಾಲಿಕೆವೊಂದು ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಯುವತಿಯೊಬ್ಬಳು ಶಬರಿರಾಜನ್ ಹೆಸರನ್ನು ಪದೇಪದೇ ಹೇಳುವುದು ಕೇಳಿಸುತ್ತದೆ. ಮತ್ತು ತಿರುನಾವುಕ್ಕರಸು ಕೂಡ ಸ್ಪಷ್ಟವಾಗಿ ಕಾಣಿಸುತ್ತಾನೆ.

ಲೈಂಗಿಕ ಸಂಪರ್ಕ ಅಥವಾ ಹಣಕ್ಕಾಗಿ ಒತ್ತಾಯ

ಲೈಂಗಿಕ ಸಂಪರ್ಕ ಅಥವಾ ಹಣಕ್ಕಾಗಿ ಒತ್ತಾಯ

ಈ ರೀತಿಯದೇ ಮತ್ತೊಂದು ಲೈಂಗಿಕ ದೌರ್ಜನ್ಯ ವಿಡಿಯೋದಲ್ಲಿ ಸತೀಶ್ ಇದ್ದಾನೆ. ತನ್ನ ಗೆಳೆಯರು ವಿಡಿಯೋ ಚಿತ್ರೀಕರಣ ಮಾಡಲು ಆನುಕೂಲ ಆಗಲಿ ಎಂಬ ಕಾರಣಕ್ಕೆ ಬಾಗಿಲು ತೆರೆದಿಟ್ಟಿರುವುದು ಗೊತ್ತಾಗುತ್ತದೆ. ಮತ್ತೊಂದು ವಿಡಿಯೋದಲ್ಲಿ ಶಬರಿರಾಜನ್ ಮಹಿಳೆಯನ್ನು ಪದೇಪದೇ ಕೇಳುತ್ತಾನೆ. ನಾಳೆ ಮತ್ತೆ ಸಿಕ್ತಿಯಾ ಎನ್ನುತ್ತಾನೆ. ಅಂಥ ವಿಡಿಯೋಗಳನ್ನೇ ಹಣಕ್ಕೆ ಅಥವಾ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಲು ಬಳಸಲಾಗಿದೆ. ಒಂದು ವೇಳೆ ಲೈಂಗಿಕ ಸಂಪರ್ಕ ಸಹಮತದಿಂದ ಆಗಿದ್ದಲ್ಲಿ ಅಂಥ ಮಹಿಳೆಯರ ಬಳಿ ಲೈಂಗಿಕ ಸಂಪರ್ಕಕ್ಕೆ ಅಥವಾ ಹಣಕ್ಕೆ ಒತ್ತಾಯಿಸಿದ್ದಾರೆ. ಒಂದು ವೇಳೆ ಒಪ್ಪದಿದ್ದಲ್ಲಿ ವಾಟ್ಸ್ ಅಪ್ ಅಥವಾ ಇಂಟರ್ ನೆಟ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಎಲ್ಲ ವಿಡಿಯೋದಲ್ಲಿ ಗೊತ್ತಾಗುವ ಸಾಮಾನ್ಯ ಅಂಶ ಏನೆಂದರೆ, ಬಾಗಿಲು ತೆರೆದಿಟ್ಟು ತಮ್ಮ ಕೃತ್ಯ ಎಸಗಿದ್ದಾರೆ.

ಎಐಎಡಿಎಂಕೆ ಪದಾಧಿಕಾರಿ ಪಕ್ಷದಿಂದ ಉಚ್ಚಾಟನೆ

ಎಐಎಡಿಎಂಕೆ ಪದಾಧಿಕಾರಿ ಪಕ್ಷದಿಂದ ಉಚ್ಚಾಟನೆ

ಸಂತ್ರಸ್ತೆಯರ ಪರ ವಕೀಲರು ಹೇಳುವ ಪ್ರಕಾರ, ಇಬ್ಬರು ಆರೋಪಿಗಳ ಮೊಬೈಲ್ ಫೋನ್ ನಿಂದ ಮೂರು ವಿಡಿಯೋ ವಶಕ್ಕೆ ಪಡೆದಿದ್ದಾರೆ. ಮಾಧ್ಯಮದ ವರದಿ ಹಾಗೂ ಅಂದಾಜಿನ ಪ್ರಕಾರ ಐವತ್ತರಿಂದ ಇನ್ನೂರು ಮಂದಿ ಈ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಈ ಸಂಖ್ಯೆ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ವರೆಗೆ ಸೋರಿಕೆ ಆಗಿರುವ ವಿಡಿಯೋದಲ್ಲಿ ಕನಿಷ್ಠ ಆರು ಮಹಿಳೆಯರು ಇದ್ದಾರೆ. ವಿಧಿವಿಜ್ಞಾನ ಇಲಾಖೆಯಿಂದ ವರದಿ ಬಂದ ನಂತರವೇ ಉಳಿದಿದ್ದರ ಬಗ್ಗೆ ಮಾಹಿತಿ ಸಿಗಬೇಕು. ಆರೋಪಿ ತಿರುನಾವುಕ್ಕರಸು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾನೆ. ಈ ಮಧ್ಯೆ ನಾಲ್ವರು ಆರೋಪಿಗಳ ಜತೆಗೆ ಐದನೇ ವ್ಯಕ್ತಿ- ಎಐಎಡಿಎಂಕೆ ಪದಾಧಿಕಾರಿಯಾಗಿದ್ದ 'ಬಾರ್' ನಾಗರಾಜ್ ಎಂಬಾತನ ಹೆಸರನ್ನೂ ಪೊಲೀಸರು ಸೇರಿಸಿದ್ದಾರೆ. ಆತನನ್ನು ಸದ್ಯಕ್ಕೆ ಆ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಲೋಕಸಭೆ ಚುನಾವಣೆ ಬರುತ್ತಿದ್ದಂತೆ ರಾಜಕೀಯದ ನಂಟು

ಲೋಕಸಭೆ ಚುನಾವಣೆ ಬರುತ್ತಿದ್ದಂತೆ ರಾಜಕೀಯದ ನಂಟು

ತಮಿಳುನಾಡಿನ ಡೆಪ್ಯೂಟಿ ಸ್ಪೀಕರ್ ಪೊಲ್ಲಾಚಿ ಜಯರಾಮನ್ ಅವರ ಮಗ ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ನಕ್ಕೀರನ್ ಪತ್ರಿಕೆ ಸಂಪಾದಕ ನಕ್ಕೀರನ್ ಗೋಪಾಲ್ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರವಾಗಲಿ, ಹೇಗೆ ನಂಟು ಹೊಂದಿದ್ದಾನೆ ಎಂಬ ಬಗ್ಗೆ ಬಗ್ಗೆ ಆಗಲಿ ಮಾಹಿತಿ ಇಲ್ಲ. ಇನ್ನು ಸ್ವತಃ ಜಯರಾಮನ್ ಕೂಡ ಈ ಆರೋಪವನ್ನು ನಿರಾಕರಿಸಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಮತ್ತು ಆಕೆ ಸೋದರ ಆಡಿಯೋ ಹೇಳಿಕೆ ನೀಡಿ, ಕುಟುಂಬದ ಸ್ನೇಹಿತರ ಮೂಲಕ ಜಯರಾಮನ್ ರನ್ನು ಭೇಟಿ ಮಾಡಿದ್ದೆವು. ದೂರು ದಾಖಲಿಸಲು ಹಾಗೂ ಈ ಪ್ರಕರಣ ಇನ್ನಷ್ಟು ಬೆಳವಣಿಗೆ ಕಾಣಲು ಅವರೇ ಕಾರಣ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಪ್ರಕರಣಕ್ಕೆ ರಾಜಕೀಯ ತಳುಕು ಹಾಕಲಾಗುತ್ತಿದೆ ಎಂದು ಸಂತ್ರಸ್ತೆ ಯುವತಿಯ ಸೋದರ ಆರೋಪ ಮಾಡಿದ್ದಾರೆ.

ಸಂತ್ರಸ್ತೆ ಹೆಸರು ಬಯಲು ಮಾಡಿದ ಪೊಲ್ಲಾಚಿ ಎಸ್ ಪಿ

ಸಂತ್ರಸ್ತೆ ಹೆಸರು ಬಯಲು ಮಾಡಿದ ಪೊಲ್ಲಾಚಿ ಎಸ್ ಪಿ

ಈ ಮಧ್ಯೆ ಪೊಲ್ಲಾಚಿಯಲ್ಲಿ ವಿರೋಧ ಪಕ್ಷ ಡಿಎಂಕೆಯಿಂದ ಸಭೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಡಿಎಂಕೆ ಸಂಸದೆ ಕನಿಮೊಳಿ ಮಾತನಾಡಿ, ನಾವು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ಯಾರೂ ಇದನ್ನು ರಾಜಕಾರಣ ಮಾಡಲು ಬಯಸುವುದಿಲ್ಲ. ಪ್ರಕರಣವು ರಾಜಕೀಯದ ತಿರುವು ಪಡೆದ ಮೇಲಷ್ಟೇ ಸರಕಾರವು ಕ್ರಮ ತೆಗೆದುಕೊಳ್ಳಲು ಮುಂದಾದರೆ ಬೇರೇನು ಮಾಡಲು ಸಾಧ್ಯ ಎಂದಿದ್ದಾರೆ. ಇನ್ನು ಸಂತ್ರಸ್ತೆಯರ ಹೆಸರನ್ನು ಹೇಳುವಂತಿಲ್ಲ ಎಂಬ ಕಾನೂನು ಇದ್ದರೂ ಪೊಲ್ಲಾಚಿ ಎಸ್ ಪಿ ಪಾಂಡಿರಾಜನ್ ಬಹಿರಂಗಪಡಿಸಿದ್ದಾರೆ. ಬೇರೆ ಸಂತ್ರಸ್ತೆಯರು ಹೊರಗೆ ಬಂದು ದೂರು ನೀಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಕನಿಮೊಳಿ ಆರೋಪಿಸಿದ್ದಾರೆ. ಇನ್ನು ಸಂತ್ರಸ್ತೆಯರ ವಿಡಿಯೋಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳು ಅರೋಪಿಗಳ ಮೊಬೈಲ್ ಫೋನ್ ನಲ್ಲಿದ್ದವು. ಫೋನ್ ಗಳನ್ನು ಸಂತ್ರಸ್ತೆಯ ಸೋದರ ಮೊದಲಿಗೆ ಪಡೆದಿದ್ದು, ಇನ್ನೆರಡು ಪೊಲೀಸರು ವಶಪಡಿಸಿಕೊಂಡಿದ್ದಾಗಿತ್ತು.

English summary
Pollachi sexual assault victim brother Subhash and his friends got hold of Thirunavukkarasu and Sabarirajan’s cell phones, which contained videos of at least three other women that the men may have blackmailed. The family submitted this to the Pollachi police, along with a complaint of sexual harassment and robbery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more