'ನಿವಾರ್' ಚಂಡಮಾರುತ: ಹೇಗಿರಲಿದೆ ಮಳೆ ಆರ್ಭಟ?
ಚೆನ್ನೈ, ನವೆಂಬರ್ 24: ಒಂದು ವಾರದಲ್ಲಿಯೇ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಎರಡನೆಯ ಚಂಡಮಾರುತ ರೂಪುಗೊಳ್ಳುತ್ತಿದೆ. ಮೇ ತಿಂಗಳಲ್ಲಿ ಅಂಫಾನ್ ಚಂಡಮಾರುತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಳಿಕ ಬಂಗಾಳ ಕೊಲ್ಲಿ ಈ ವರ್ಷದ ಎರಡನೇ ಭೀಕರ ಚಂಡಮಾರುತವನ್ನು ಎದುರುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ತಮಿಳುನಾಡಿನ ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನ ಭಾರಿಯಿಂದ ಅತಿ ಭಾರಿ ಮಳೆ, ಪ್ರಬಲ ಗಾಳಿಯಿಂದ ಜನಜೀವನ ತತ್ತರಿಸುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆಯು ತಮಿಳುನಾಡಿನ ಕರಾವಳಿಯಲ್ಲಿನ ನೈಋತ್ಯ ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿರುವ ಮಾಹಿತಿ ನೀಡಿತ್ತು. 2018ರಲ್ಲಿ ಗಜ ಚಂಡಮಾರುತದ ಬಳಿಕ ಎರಡು ವರ್ಷದಲ್ಲಿ ತಮಿಳುನಾಡನ್ನು ಹಾದುಹೋಗಲಿರುವ ಎರಡನೆಯ ಚಂಡಮಾರುತ ಇದು.
'ನಿವಾರ್' ಚಂಡಮಾರುತ: ಬೆಂಗಳೂರಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ
ಮಂಗಳವಾರ ಬೆಳಿಗ್ಗೆ 5.30ರ ಮಾಹಿತಿ ಪ್ರಕಾರ ಚಂಡಮಾರುತವು ಪುದುಚೆರಿಯ ಆಗ್ನೇಯ ದಿಕ್ಕಿನ 410 ಕಿಮೀ ಮತ್ತು ಚೆನ್ನೈನ ಆಗ್ನೇಯದ 450 ಕಿಮೀ ದೂರದಲ್ಲಿ ಕಂಡುಬಂದಿದೆ. ಇದು ಕ್ರಮೇಣ ಪ್ರಬಲಗೊಳ್ಳಲಿದೆ. ಪ್ರಸ್ತುತ ಗಂಟೆಗೆ 70-80 ಕಿಮೀ ವೇಗದಲ್ಲಿರುವ ಗಾಳಿ, ಬುಧವಾರದ ವೇಳೆಗೆ 90-100 ಕಿಮೀಗೆ ಹೆಚ್ಚಲಿದ್ದು, 110 ಕಿಮೀ ವೇಗದವರೆಗೂ ಬೀಸಲಿದೆ. ಒಮ್ಮೆ ತೀವ್ರವಾದ ನಂತರ ತನ್ನ ಆರ್ಭಟ ಪ್ರದರ್ಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದೆ ಓದಿ.

ಅಸಹನೀಯ ವಾತಾವರಣ
ಬುಧವಾರ ಮಧ್ಯಾಹ್ನದ ವೇಳೆಗೆ ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಪುದುಚೆರಿಯ ಸಮೀಪ ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗುವಾಗ ಅದು ಗಂಟೆಗೆ 100-110 ಕಿಮೀ ವೇಗದಲ್ಲಿ ಸಾಗಲಿದೆ ಮತ್ತು 120 ಕಿಮೀ ವೇಗದಲ್ಲಿ ಸುತ್ತಲಿದೆ.
ಈ ಚಂಡಮಾರುತದಿಂದ ಅತಿ ಹೆಚ್ಚು ಹಾನಿ ಅನುಭವಿಸಲಿರುವುದು ತಮಿಳುನಾಡು. ಮಂಗಳವಾರ ಮತ್ತು ಬುಧವಾರ ಎರಡೂ ದಿನ ಇಲ್ಲಿನ ವಾತಾವರಣವನ್ನು ಸಹಿಸಿಕೊಳ್ಳುವುದು ಕಷ್ಟಕರವಾಗಲಿದೆ. ಚಂಡಮಾರುತದೊಂದಿಗಿನ ಮಳೆ ಅಬ್ಬರದ ಜತೆಗೆ ಬಂಗಾಳ ಕೊಲ್ಲಿಯ ಪೂರ್ವ-ನೈಋತ್ಯ ಪ್ರದೇಶಗಳಲ್ಲಿನ ಸಮುದ್ರ ಸ್ಥಿತಿಯು ಗಡುಸಿನಿಂದ ಅತಿ ಗಡುಸಾಗಲಿದೆ. ಬುಧವಾರ ಸಮುದ್ರದ ಸ್ಥಿತಿ ಅಪಾಯಕಾರಿಯಾಗಲಿದೆ.
ಭಾರಿ ಮಳೆ ಸುರಿಸಲಿದೆ 'ನಿವಾರ್' ಚಂಡಮಾರುತ
|
ರೆಡ್ ಅಲರ್ಟ್ ಘೋಷಣೆ
20 ಸೆಂ.ಮೀ. ಅಥವಾ ಅದಕ್ಕೂ ಹೆಚ್ಚಿನ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಜಿಲ್ಲೆಗಳಲ್ಲಿ ಒಂದು ದಿನದಲ್ಲಿ 24 ಸೆಂಮೀ ಮಳೆಯಾಗುವ ಸಂಭವ ಕೂಡ ಇದೆ.
ಛತ್ತೀಸಗಡ ಮತ್ತು ಒಡಿಶಾದ ದಕ್ಷಿಣ ಭಾಗಗಳಲ್ಲಿ ಕೂಡ ಚಂಡಮಾರುತದ ಪ್ರಭಾವದಿಂದ ನವೆಂಬರ್ 26-27ರಂದು ಮಳೆಯಾಗುವ ಸಾಧ್ಯತೆ ಇದೆ. ಸೋಮವಾರದವರೆಗೂ ಸಮುದ್ರ ಭಾಗದ ಮೇಲೆ ತೀವ್ರವಾದ ಗಾಳಿ ರೂಪುಗೊಳ್ಳುತ್ತಿದ್ದು, ಮುಂದಿನ ಮೂರು ದಿನ ಅದು ತನ್ನ ಪ್ರಕೋಪ ಪ್ರದರ್ಶಿಸಬಹುದು.

ಹತ್ತು ಮೀಟರ್ ಎತ್ತರಕ್ಕೆ ಅಲೆಗಳು
ಚಂಡಮಾರುತವು ಸಮುದ್ರದಿಂದ ಭೂಭಾಗದ ಮೇಲೆ ಹಾದು ಹೋಗುವಾಗ ಸುಮಾರು ಒಂದು ಮೀಟರ್ ಎತ್ತರದವರೆಗೂ ಎಲೆಗಳು ಏಳಲಿವೆ. ಇದರಿಂದ ಸಮುದ್ರಮಟ್ಟದಿಂದ ಕೆಳಭಾಗದಲ್ಲಿರುವ ಪ್ರದೇಶಗಳಿಗೆ ಹೆಚ್ಚಿನ ತೊಂದರೆಯಾಗಲಿದೆ. ಪುದುಚೆರಿ ಮತ್ತು ಚೆನ್ನೈ ಮಧ್ಯೆ ಇರುವ ಕರಾವಳಿ ಪ್ರದೇಶಗಳಲ್ಲಿ ಅತಿಯಾದ ಮಳೆ ಸಾಧ್ಯತೆ ಇದೆ.
ಬುಧವಾರದ ವೇಳೆಗೆ ಸಮುದ್ರದ ಆರ್ಭಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಅಲೆಗಳು ಹತ್ತು ಮೀಟರ್ ಎತ್ತರದವರೆಗೂ ಜಿಗಿಯಬಹುದು. ಇದರಿಂದ ಮೀನುಗಾರಿಕೆಗೆ ತೆರಳಿದರೆ ಅಪಾಯ ಖಚಿತ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
|
ಹೆಚ್ಚಿನ ಮಳೆ ಎಲ್ಲೆಲ್ಲಿ?
ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ಅತಿಯಾದ ಹಾನಿ ಸಂಭವಿಸುವ ಸಾಧ್ಯತೆ ಇದೆ. ಮಂಗಳವಾರ ಪುಡುಕೊಟ್ಟೈ, ತಂಜಾವೂರ್, ತಿರುವರೂರ್, ಕಾರೈಕಲ್, ನಾಗಪಟ್ಟಿಣಂ, ಕುಡ್ಡಲೋರ್, ಅರಿಯಲೂರ್ ಮತ್ತು ಪೆರಂಬುದಲ್ಲಿ ಭಾರಿ ಮಳೆಯಾಗಲಿದೆ. ಚಂಡಮಾರುತವು ಭೂಭಾಗವನ್ನು ಹಾದುಹೋಗುವಾಗ ಪುದುಚೇರಿ, ಕಲ್ಲಕುರುಚಿ, ಕದಲೂರ್, ವಿಳ್ಳುಪುರಂ, ತಿರುವಣ್ಣಮಲೈ, ಚೆಂಗಲ್ಪಟ್ಟು, ಕಾರೈಕಲ್ಗಳಲ್ಲಿ ವಿಪರೀತ ಮಳೆಯಾಗಲಿದೆ.

ಅಪಾರ ಹಾನಿಯ ಭೀತಿ
ತಾತ್ಕಾಲಿಕ ಮನೆಗಳು, ಗುಡಿಸಲುಗಳಿಗೆ ಅಪಾರ ಹಾನಿಯಾಗಲಿದೆ. ವಿದ್ಯುತ್ ಹಾಗೂ ಇತರೆ ಸಂವಹನ ಮಾರ್ಗಗಳು ಕಡಿತಗೊಳ್ಳುವ ಸಂಭವವಿದೆ. ವೇಗವಾಗಿ ಬೀಸುವ ಗಾಳಿಗೆ ನೂರಾರು ಮರಗಳು ಧರೆಗುರುಳಲಿವೆ. ಚೆನ್ನೈ ಸೇರಿದಂತೆ ನಗರ ಪ್ರದೇಶಗಳಲ್ಲಿ ಮಳೆಯಿಂದ ನೆರೆಯ ಪರಿಸ್ಥಿತಿ ಉಂಟಾಗಬಹುದು. ಬೆಳೆದು ನಿಂತ ಕೃಷಿ ಬೆಳೆಗಳಿಗೆ ನೀರು ನುಗ್ಗುವುದರಿಂದ ಕೃಷಿಕರು ತೊಂದರೆಗೀಡಾಗುವ ಸಾಧ್ಯತೆ ಇದೆ.