ಕರುಣಾನಿಧಿ ಪುತ್ರರ ಕಾಳಗ, ಅಳಗಿರಿಯಿಂದ ಹೊಸ ಪಕ್ಷ ಉದಯ?
ಚೆನ್ನೈ, ನ. 17: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಈಗಲೇ ಸದ್ದಿಲ್ಲದೆ ತಯಾರಿ ಜೋರಾಗಿ ನಡೆದಿದೆ. ಡಿಎಂಕೆಯಿಂದ ಹೊರಹಾಕಲ್ಪಟ್ಟಿರುವ ಎಂ ಅಳಗಿರಿ ಅವರು ಹೊಸ ಪಕ್ಷ ಸ್ಥಾಪಿಸಲಿದ್ದಾರೆ. ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಚಾಲ್ತಿಯಲ್ಲಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ಅವರ ಪುತ್ರರ ನಡುವಿನ ಕಾಳಗ ಯಾವ ಹೊಸ ರೂಪ ಪಡೆದುಕೊಳ್ಳುವುದೋ ಕಾದುನೋಡಬೆಕಿದೆ.
ಕರುಣಾನಿಧಿಯವರ ಕಿರಿಯ ಮಗ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು ಹೊತ್ತು ಶ್ರಮಿಸುತ್ತಿದ್ದರೆ, ಅವರ ಸೋದರ, ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ ಅವರು ಹೊಸ ಪಕ್ಷ ರಚನೆ ಬಗ್ಗೆ ತೀವ್ರವಾಗಿ ಯೋಚಿಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಹೊಸ ಪಕ್ಷಕ್ಕೆ ಕಲೈನಾರ್ (Kalaignar) ಡಿಎಂಕೆ ಎಂದು ಹೆಸರಿಡಲು ಮುಂದಾಗಿದ್ದಾರೆ ಎಂಬ ಸುದ್ದಿಯಿದೆ. ತಮಿಳುನಾಡಿನಲ್ಲಿ ಮುಂದಿನ 2021ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಹೊಸ ಪಕ್ಷ ಸ್ಥಾಪನೆ ಬಗ್ಗೆ ಸುದ್ದಿ ಖಚಿತ ಪಡಿಸಿರುವ ಅಳಗಿರಿ ಅವರು ಬಿಜೆಪಿ ಜೊತೆ ಕೈಜೋಡಿಸುವ ಬಗ್ಗೆ ನಿರ್ಧರಿಸಿಲ್ಲ ಎಂದು ದಿನಮಲರ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ನಮ್ಮದೇ ಆದ ಸ್ವಂತ ಪಕ್ಷ ಸ್ಥಾಪಿಸಿ ಚುನಾವಣೆ ಎದುರಿಸಬೇಕೇ ಅಥವಾ ಬೇರೆ ಪಕ್ಷಕ್ಕೆ ಬೆಂಬಲ ಘೋಷಿಸಬೇಕೆ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, ಪಕ್ಷದ ಇತರೆ ಸದಸ್ಯರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಬಗ್ಗೆ ಪ್ರಕಟಿಸಲಾಗುವುದು ಎಂದು ಅಳಗಿರಿ ಹೇಳಿದ್ದಾರೆ.
ಡಿಎಂಕೆ ಬಾಗಿಲು ಬಂದ್
ಡಿಎಂಕೆಗೆ ಮರಳಲು ಅಳಗಿರಿಗೆ ಮನಸ್ಸಿದ್ದರೂ ಡಿಎಂಕೆ ಬಾಗಿಲು ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಹೊಸ ಪಕ್ಷ ರಚಿಸುವುದು ಅಳಗಿರಿಗೆ ಅನಿವಾರ್ಯವಾಗಿದೆ. ನವೆಂಬರ್ 23ರಂದು ಡಿಎಂಕೆ ಉನ್ನತಮಟ್ಟದ ಸಭೆ ಆಯೋಜಿಸಿದ್ದು, ಮುಂದಿನ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಅಳಗಿರಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಬೇಡ ಅದು ಮುಗಿದ ಅಧ್ಯಾಯ ಎಂದು ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್ ಹಾಗೂ ಅವರ ಪುತ್ರ ಉದಯನಿಧಿ ಇಬ್ಬರು ಸ್ಪಷ್ಟಪಡಿಸಿದ್ದಾರೆ.
ಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿ
2014ರ ಮಾರ್ಚ್ ತಿಂಗಳಿನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಕಾರಣ ನೀಡಿ ಡಿಎಂಕೆಯಿಂದ ಅಳಗಿರಿಯನ್ನು ಉಚ್ಚಾಟನೆ ಮಾಡಲಾಯಿತು. ಇನ್ನು ಮೂರು ತಿಂಗಳಿನಲ್ಲಿ ಸ್ಟಾಲಿನ್ ಸಾವನ್ನು ಕಾಣುತ್ತೀರಾ ಎಂದು ನನ್ನ ಮುಂದೆ ಅಳಗಿರಿ ಹೇಳಿದ್ದ ಎಂದು ಕರುಣಾನಿಧಿ ಅವರು ನಂತರ ವ್ಯಥೆಪಟ್ಟಿದ್ದರು.
2018ರಲ್ಲಿ ಕರುಣಾನಿಧಿ ನಿಧನವಾದ ಬಳಿಕ ಸ್ಟಾಲಿನ್ ನಾಯಕತ್ವ ಒಪ್ಪಿಕೊಂಡು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ಗೆ ಮರಳಲು ಸಿದ್ಧ ಎಂದು ಎಂ.ಕೆ ಅಳಗಿರಿ ಘೋಷಿಸಿದರೂ ಕೇಳುವವರು ಯಾರೂ ಇಲ್ಲದ್ದಂತಾಗಿದೆ.