ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ಗೇಮ್ ನಿಷೇಧ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

|
Google Oneindia Kannada News

ಚೆನ್ನೈ, ಆಗಸ್ಟ್ 03: ದುಡ್ಡು ನೀಡಿ ಆನ್ ಲೈನ್ ಗೇಮ್, ಫ್ಯಾಂಟಸಿ ಲೀಗ್, ಆಪ್ ಆಧಾರಿತ ಗೇಮಿಂಗ್ ನಿಷೇಧಕ್ಕೆ ಮುಂದಾಗಿದ್ದ ಈ ಹಿಂದಿನ ಎಐಎಡಿಎಂಕೆ ತಮಿಳುನಾಡು ಸರ್ಕಾರ ಈ ನಿಟ್ಟಿನಲ್ಲಿ ನಿಷೇಧ ಹೇರುವ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಆದರೆ, ಆನ್‌ಲೈನ್ ರಮ್ಮಿ ಮತ್ತು ಆನ್‌ಲೈನ್ ಪೋಕರ್ ಸೇರಿದಂತೆ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಸರ್ಕಾರದ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರದಂದು ಬ್ರೇಕ್ ಹಾಕಿದೆ. ತಮಿಳುನಾಡು ಗೇಮಿಂಗ್ ಕಾಯಿದೆ- 1930 ತಿದ್ದುಪಡಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ, ಇದು ಅಸಂವಿಧಾನಿಕ ಕ್ರಮ ಎಂದು ಆದೇಶ ನೀಡಿದೆ.

ಈ ಮೂಲಕ ಆನ್‌ಲೈನ್ ಗೇಮ್‌ಗಳು ನಿಷೇಧದ ತೂಗುಗತ್ತಿಯಿಂದ ಬಚಾವಾಗಿವೆ. ಆನ್‌ಲೈನ್ ಗೇಮಿಂಗ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ. ತಮಿಳುನಾಡು ಗೇಮಿಂಗ್ ಮತ್ತು ಪೋಲಿಸ್ ಕಾನೂನುಗಳ (ತಿದ್ದುಪಡಿ) ಕಾಯಿದೆ, 2021 ರ ಭಾಗ II ಅಸಾಂವಿಧಾನಿಕ ಎಂದು ಮದ್ರಾಸ್ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಈ ಕಾಯ್ದೆಗಳು ಸೈಬರ್‌ ಮೂಲಕ ನಡೆಸುವ ಬೆಟಿಂಗ್, ಜೂಜಾಟ ಹಾಗೂ ಕೌಶಲ್ಯಪೂರ್ಣ ಆಟಗಳ ಮೂಲಕ ನಡೆಸುವ ಬಾಜಿ, ಬೆಟಿಂಗ್‌ಗಳನ್ನು ಈ ಭಾಗ ನಿಷೇಧಿಸುತ್ತದೆ.

ದೊಡ್ಡ ಮಟ್ಟದಲ್ಲಿ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ. ಆ ಮೂಲಕ ಸಂವಿಧಾನದತ್ತವಾಗಿ ದೊರೆತ 19 (1) (ಜಿ)ಯನ್ನು (ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡುವ ಹಕ್ಕು, ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ಉದ್ಯಮವನ್ನು ಮುಂದುವರಿಸುವ ಹಕ್ಕು) ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠ ತಿಳಿಸಿದೆ.

Madras High Court strikes down amendment to law that banned online games

ಕಾಯಿದೆಗೆ ತಂದಿರುವ ತಿದ್ದುಪಡಿ ತರ್ಕರಹಿತ, ಅತಿರೇಕ, ಅಸಮಾನತೆಯಿಂದ ಕೂಡಿರುವುದಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಗೇಮಿಂಗ್‌ ಕುರಿತು ತಿದ್ದುಪಡಿ ಮಾಡಲಾದ ವ್ಯಾಖ್ಯಾನ ಇಡೀ ಶಾಸನಕ್ಕೆ ಅನ್ವಯವಾಗುವುದರಿಂದ ಪ್ರಕರಣದಲ್ಲಿ ಕಾನೂನಿನ ನಿರ್ದಿಷ್ಟ ಭಾಗಕ್ಕೆ ಮಾತ್ರವೇ ಅನ್ವಯಿಸುವ 'ಪ್ರತ್ಯೇಕಿಸುವ ಸಿದ್ಧಾಂತ'ವೂ ಕೂಡ ಅನ್ವಯವಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಂತಿಮವಾಗಿ ತಿದ್ದುಪಡಿ ತನ್ನ ಉದ್ದೇಶಕ್ಕೆ ತಕ್ಕಂತೆ ಇಲ್ಲ. ಅದರ ಯಾವುದೇ ಭಾಗವನ್ನು ಉಳಿಸಿಕೊಳ್ಳಲಾಗದು ಎಂದು ತೀರ್ಮಾನಿಸಿದ ನ್ಯಾಯಾಲಯ ಸಂವಿಧಾನವನ್ನು ಉಲ್ಲಂಘಿಸುವ ಕಾರಣಕ್ಕೆ ತಿದ್ದುಪಡಿಯನ್ನು ಇಡಿಯಾಗಿ ರದ್ದುಪಡಿಸಿತು. ಆದರೂ ರಾಜ್ಯ ಸರ್ಕಾರ ಸಾಂವಿಧಾನಿಕ ತತ್ವಗಳ ಔಚಿತ್ಯಕ್ಕೆ ಅನುಗುಣವಾಗಿ ಸೂಕ್ತ ಶಾಸನ ರೂಪಿಸುವುದನ್ನು ತಾನು ತಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

2020ರಲ್ಲಿ ಆನ್ಲೈನ್ ಜೂಜು ನಿಷೇಧ ಕೋರಿ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ ಎಂದು ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಿತ್ತು.

ಆನ್ ಲೈನ್ ರಮ್ಮಿ ಮುಂತಾದ ಆಟದ ಚಟಕ್ಕೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ, ಇಂಥ ಗೇಮಿಂಗ್, ಬೆಟ್ಟಿಂಗ್ ನಲ್ಲಿ ತೊಡಗಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಜೈಲಿಗೆ ಹಾಕಲಾಗುವುದು, ದುಡ್ಡು ಕೊಟ್ಟು ಆಡುವಂಥ ಎಲ್ಲಾ ಬಗೆಯ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಕೊಯಮತ್ತೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಘೋಷಿಸಿದ್ದರು. ನಂತರ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಿದ್ದರು.

ಆಂಧ್ರಪ್ರದೇಶದಲ್ಲಿಆನ್ ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಈ ಕುರಿತಂತೆ ಕೂಡಲೇ ಕ್ರಮ ಜರುಗಿಸಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಅನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದಿದೆ.

ಆನ್‌ ಲೈನ್ ಜೂಜಿನಲ್ಲಿ ತೊಡಗಿದ ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು 1 ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧ ಮರುಕಳಿಸಿದರೆ 10 ಸಾವಿರ ದಂಡ ಮತ್ತು ಎರಡು ವರ್ಷದ ಜೈಲು ಶಿಕ್ಷೆ ಇದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳಿಲ್ಲ.

English summary
The Madras High Court on Tuesday struck down in its entirety the amendment brought by the state government to the Tamil Nadu Gaming Act, which banned online games including online rummy and online poker with stakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X