ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನೊಂದಿಗೆ ಹಿಂದಿಯಲ್ಲಿ ಸಂವಹನ ಏಕೆ? : ಹೈಕೋರ್ಟ್‌

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 9: ಕೇಂದ್ರ ಸರ್ಕಾರವು ತಮಿಳುನಾಡಿನೊಂದಿಗೆ ಸಂವಹನ ಮಾಡುವಾಗ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗದು ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅನೇಕ ರಾಜ್ಯಗಳಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿಲ್ಲ, ಅಂಥ ರಾಜ್ಯಗಳಲ್ಲಿ ಇಂಗ್ಲಿಷ್‌ ಬಳಸಿ ಸಂವಹನ ನಡೆಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಮಧುರೈ ಲೋಕಸಭಾ ಕ್ಷೇತ್ರದ ಸಂಸದ ಸು ವೆಂಕಟೇಸನ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಹೀಗೆ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್ (ಪ್ರಸ್ತುತ ನಿವೃತ್ತರು) ಮತ್ತು ಎಂ ದುರೈಸ್ವಾಮಿ ಅವರು, ಅಧಿಕೃತ ಭಾಷೆಗಳ ಕಾಯಿದೆ 1963 ಹಾಗೂ ಅಧಿಕೃತ ಭಾಷೆಗಳ ನಿಯಮಗಳ 1976ರ ಅನ್ವಯ ಕೇಂದ್ರ ಸರ್ಕಾರವು ನಡೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾವು ಕೇಂದ್ರ ಸರ್ಕಾರಕ್ಕೆ ಇಂಗ್ಲಿಷ್‌ನಲ್ಲಿ ಮನವಿಯೊಂದನ್ನು ಸಲ್ಲಿಸಿದ್ದು ಅದಕ್ಕೆ ಉತ್ತರವನ್ನು ಕೇಂದ್ರ ಸರ್ಕಾರವು ಹಿಂದಿಯಲ್ಲಿ ನೀಡಿದೆ. ತಾವು ಇಂಗ್ಲಿಷ್‌ನಲ್ಲಿ ಉತ್ತರವನ್ನು ನೀಡುವಂತೆ ಕೋರಿ ಮತ್ತೆ ಪತ್ರವನ್ನು ಬರೆದಿದ್ದರೂ ಸಹ ತಮಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಎಲ್ಲ ಸಂವಹನಗಳನ್ನೂ ಇಂಗ್ಲಿಷ್‌ನಲ್ಲಿ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ವೆಂಕಟೇಸನ್‌ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

ವಿಚಾರಣೆ ವೇಳೆ ನ್ಯಾಯಾಲಯವು, "ಒಮ್ಮೆ ಮನವಿಯೊಂದನ್ನು ಇಂಗ್ಲಿಷ್‌ನಲ್ಲಿ ನೀಡಿದ ಮೆಲೆ ಇಂಗ್ಲಿಷ್‌ನಲ್ಲಿಯೇ ಪ್ರತಿಕ್ರಿಯಿಸಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು, ಇದು ಅದಿಕೃತ ಭಾಷೆಗಳ ಕಾಯಿದೆಯ ಅನುಸರಣೆಯೂ ಅಗಿದೆ," ಎಂದು ಹೇಳಿತು. ಈ ವಿಚಾರವಾಗಿ ನ್ಯಾಯಾಲಯವು ಅಧಿಕೃತ ಭಾಷೆಗಳ ಕಾಯಿದೆ 1963ರ ಸೆಕ್ಷನ್‌ 3 ಅನ್ನು ಅವಲಂಬಿಸಿತು.

Hindi cannot be used by Centre for official correspondence with Tamil Nadu: Madras High Court

ಇದೇ ವೇಳೆ ನ್ಯಾಯಾಲಯವು, ಜನಾಂಗೀಯತೆ, ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯಮಯ ಅನನ್ಯತೆಗಳನ್ನು ರಕ್ಷಿಸಬೇಕು, ಇದರ ಹೊರತಾಗಿ ಅವುಗಳನ್ನು ನಾಶಪಡಿಸಲು ಅಥವಾ ಕದಡಲು ಮುಂದಾಗುವ ಕ್ರಮಗಳು ಸೂಕ್ಷ್ಮ ವಿಷಯಗಳಾಗಿ ಮಾರ್ಪಡಬಹುದು ಎಂದೂ ಎಚ್ಚರಿಸಿದೆ.

"ಯಾವುದೇ ಬಗೆಯ ಅಂಧಾಭಿಮಾನವು ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ರೂಪದಲ್ಲಿ ದುರಭಿಮಾನವನ್ನು ವ್ಯಕ್ತಪಡಿಸಿದರೆ ಅದನ್ನು ವಿರೋಧಿಸಬೇಕು. ಭಾಷಾ ದುರಭಿಮಾನವು ಹೆಚ್ಚು ಅಪಾಯಕಾರಿಯಾಗಿದ್ದು ಅದು ಒಂದು ಭಾಷೆಯು ಮಾತ್ರವೇ ಹೆಚ್ಚು ಶ್ರೇಷ್ಠವಾದುದು ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಇತರೆ ಭಾಷೆಗಳನ್ನು ಮಾತನಾಡುವ ಜನರ ಮೇಲೆ ಹೇರಿಕೆಯನ್ನು ಮಾಡಲು ಕಾರಣವಾಗುತ್ತದೆ," ಎಂದು ನ್ಯಾಯಾಲಯವು ಸ್ಪಷ್ಟವಾಗಿ ದಾಖಲಿಸಿದೆ.

ಅಲ್ಲದೆ, "ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಭಾರತದ ಅಧಿಕೃತ ಭಾಷೆಯನ್ನು (ಹಿಂದಿ) ತಮಿಳುನಾಡು ರಾಜ್ಯದೊಂದಿಗೆ ಸಂವಹನಕ್ಕಾಗಿ ಬಳಸಲು ಸಾಧ್ಯವಿಲ್ಲ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳದ ರಾಜ್ಯಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್‌ ಭಾಷೆಯನ್ನು ಬಳಸಬೇಕು ಎನ್ನುವ ಸಂಸತ್ತಿನ ಕಾನೂನಿಗೆ ಕೇಂದ್ರ ಸರ್ಕಾರವು ಬದ್ಧವಾಗಿರಬೇಕಿದೆ," ಎಂದು ನ್ಯಾಯಾಲಯವು ಹೇಳಿದೆ.

ಸ್ದಂವಿಧಾನದ 350ನೇ ವಿಧಿಯನ್ವಯ ಕೇಂದ್ರ ಸರ್ಕಾರಕ್ಕೆ ಅಥವಾ ರಾಜ್ಯ ಸರ್ಕಾರಕ್ಕೆ ಯಾವುದೇ ವ್ಯಕ್ತಿಯು ಒಕ್ಕೂಟದಲ್ಲಿ ಅಥವಾ ರಾಜ್ಯದಲ್ಲಿ ಬಳಸುವ ಯಾವುದೇ ಭಾಷೆಯಲ್ಲಿ ಮನವಿಯನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎನ್ನುವ ಅಂಶವನ್ನು ನೆನಪಿಸಿತು. ಮುಂದಿನ ದಿನಗಳಲ್ಲಿ ಸಂವಿಧಾನದ 350ನೇ ವಿಧಿಗೆ ಸೂಕ್ತ ಮಾರ್ಪಾಡು ತರುವ ಮೂಲಕ ಕೇಂದ್ರ ಸರ್ಕಾರವು ತನಗೆ ಮನವಿಯನ್ನು ಸಲ್ಲಿಸಲಾದ ಭಾಷೆಯಲ್ಲಿಯೇ ಪ್ರತಿಕ್ರಿಯೆಯನ್ನು ಸಲ್ಲಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರ್ಟ್ ತಿಳಿಸಿದೆ.

ತಮಿಳುನಾಡಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯವು, ತಮಿಳುನಾಡು ಸರ್ಕಾರವು ತಮಿಳು ಮತ್ತು ಇಂಗ್ಲಿಷ್‌ ಒಳಗೊಂಡ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿರುವ ಅಧಿಕೃತ ಭಾಷೆಗಳ ಕಾಯಿದೆಯನ್ನು ಜಾರಿಗೊಳಿಸಿದೆ. ಹೀಗಾಗಿ, ಕೇಂದ್ರ ಸರ್ಕಾರವು ಸಹ ಜನರ ಭಾವನೆಗಳನ್ನು ಗೌರವಿಸಬೇಕಿದೆ. ಹಾಗಾಗಿ, ತನ್ನ ಜನತೆಗೆ ಕೇಂದ್ರ ಸರ್ಕಾರವು ಸಂವಿಧಾನದ 350ನೇ ವಿಧಿಯಲ್ಲಿ ತಿಳಿಸಲಾಗಿರುವಂತೆ ಅವರ ಭಾಷೆಯಲ್ಲಿಯೇ ನೀಡುವುದು ನಿರೀಕ್ಷಿತವೂ, ಸೂಕ್ತವೂ ಅಗಿದೆ ಎಂದು ಅಭಿಪ್ರಾಯಪಟ್ಟಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
The Central government is duty-bound to communicate in English with those States that have not adopted Hindi as their official language, the Madras High Court emphasised recently
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X