ನ.25ರಿಂದ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಚೆನ್ನೈ, ನ. 22: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನವೆಂಬರ್ 25ರಿಂದ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ಗಾಳಿ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಭಾನುವಾರದಂದು ವರದಿ ನೀಡಿದೆ.
ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿಯಲ್ಲಿ ನವೆಂಬರ್ 25ರಂದು ಮೀನುಗಾರರಿಗೆ ಮುನ್ಸೂಚನೆ ನೀಡಲಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆ ನಿರೀಕ್ಷಿತವಾಗಿದ್ದು, ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಭಾನುವಾರದಿಂದ ಬಂಗಾಳಕೊಲ್ಲಿಯ ನೈಋತ್ಯ ಮಾರುತಗಳು 100 ಕಿ. ಮೀ ವೇಗದಲ್ಲಿ ಬೀಸಲಿದ್ದು, ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ.
ಮಳೆ ಮುನ್ಸೂಚನೆ: ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು, ಆಂಧ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಅನಿಯಮಿತ ಗಾಳಿ ಮಳೆ ನಿರೀಕ್ಷಿಸಬಹುದು. ಆಂಧ್ರಪ್ರದೇಶವಲ್ಲದೆ ತೆಲಂಗಾಣದಲ್ಲೂ ನವೆಂಬರ್ 24 ರಿಂದ 26ರನಕ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.