ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಎಡಿಎಂಕೆಯಿಂದ ಜಯಲಲಿತಾಗೆ ಕೊಕ್ ಏಕೆ?

By Mahesh
|
Google Oneindia Kannada News

ಚೆನ್ನೈ, ಅ.10: ಅಕ್ರಮ ಆಸ್ತಿ ಗಳಿಕೆ ಅಪರಾಧದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲುಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಪಕ್ಷದಿಂದ ದೂರ ಇಡಲು ಎಐಎಡಿಎಂಕೆ ಯತ್ನಿಸುತ್ತಿರುವ ಸುದ್ದಿ ದಟ್ಟವಾಗಿದೆ. ಅದರೆ, ಇದು ಅಮ್ಮನ ವಿರುದ್ಧದ ಬಂಡಾಯವಲ್ಲ, ಪಕ್ಷದ ಪ್ರತಿಷ್ಠೆ ಪ್ರಶ್ನೆ ಎಂದು ಎಐಎಡಿಎಂಕೆ ಹೇಳಿಕೊಂಡು ತಿರುಗುತ್ತಿದ್ದಾರೆ.

ಜಯಲಲಿತಾ ಅವರು ನೈತಿಕ ಹೊಣೆ ಹೊತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇದರಿಂದ ಪಕ್ಷದ ಪ್ರತಿಷ್ಥೆ ಹೆಚ್ಚುತ್ತದೆ ಎಂದು ಎಐಎಡಿಎಂಕೆ ಉನ್ನತ ಮಟ್ಟದ ಸಭೆಯಲ್ಲಿ ಕೂಗು ಕೇಳಿ ಬಂದಿದೆ. [ಅಮ್ಮ ತಮಿಳುನಾಡಿಗೆ ಸ್ಥಳಾಂತರ?]

ಜೊತೆಗೆ ಕೊಯಮತ್ತೂರು ಮೂಲದ ಕೆ. ರಾಮಸುಬ್ರಮಣಿಯನ್ ಎಂಬ ಎಐಎಡಿಎಂಕೆ ನಾಯಕ ಧೈರ್ಯ ಮಾಡಿ ಜಯಲಲಿತಾಗೆ ನೇರವಾಗಿ ಪತ್ರ ಬರೆದು ಪರಿಸ್ಥಿತಿ ವಿವರಿಸಿದ್ದಾರೆ. ದೇಶದಲ್ಲಿ ಪಕ್ಷದ ಪ್ರತಿಷ್ಠೆ ಉಳಿಸಿಕೊಳ್ಳಲು ನಿಮ್ಮ ಈ ತ್ಯಾಗ ಅಗತ್ಯವಿದೆ ಎಂದಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಎಐಎಡಿಎಂಕೆ ನಾಯಕರು ನಾಂದಿ ಹಾಡಿದ್ದಾರೆ. [ಜಯಾಗೆ ಜಾಮೀನು, ರಾಜಗೋಪುರಕ್ಕೆ ಬೆಂಕಿ!]

ಭವಿಷ್ಯದ ಹಿತದೃಷ್ಟಿಯಿಂದ ನೀವು ರಾಜೀನಾಮೆ ನೀಡುವುದು ಒಳಿತು. ನಿಮ್ಮ ಮೇಲೆ ಗಂಭೀರ ಆರೋಪಗಳು ಕೇಳಿಬಂದಿರುವುದರಿಂದ ನೈತಿಕತೆ ಆಧಾರದ ಮೇಲೆ ರಾಜೀನಾಮೆ ನೀಡಬೇಕು. ನೀವು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ನಮ್ಮ ನಾಯಕಿ ಅಧಿಕಾರ ಮೋಹಿಯಲ್ಲ ಎಂದು ನಾವು ಸಾರಬಹುದು ಎಂದು ಪತ್ರದಲ್ಲಿ ರಾಮಸುಬ್ರಮಣಿಯನ್ ಉಲ್ಲೇಖಿಸಿದ್ದಾರೆ. [ಜಯಾ ಸುಪ್ರೀಂಗೆ ಮೊರೆ]

AIADMK functionary wants Jayalalithaa to quit as party General Secretary

ನ್ಯಾಯಾಲಯ ನಿಮ್ಮನ್ನು ನಿರ್ದೋಷಿ ಎಂದು ತೀರ್ಪು ನೀಡುವವರೆಗೂ ಪಕ್ಷದ ಯಾವುದೇ ಹುದ್ದೆಗಳನ್ನು ಅಲಂಕರಿಸಬಾರದು. ನಾನು ನಿಮ್ಮ ಕಟ್ಟಾ ಬೆಂಬಲಿಗನಾಗಿ ಪಕ್ಷದ ಹಿತದೃಷ್ಟಿಯಿಂದ ಇದನ್ನು ಹೇಳುತ್ತಿದ್ದೇನೆ. ಜನರ ಬಳಿ ಮತ ಕೇಳುವಾಗ ನಮಗೆ ಉಂಟಾಗುವ ಮುಜುಗರ ತಪ್ಪಿಸಲು ನೀವು ಹುದ್ದೆ ತ್ಯಾಗ ಮಾಡಬೇಕೆಂದು ಕೋರಿದ್ದಾರೆ.

ಬಹುಜನ ಸಮಾಜವಾದಿ ಪಕ್ಷದ ಮುಖಂಡರಾಗಿದ್ದ ರಾಮಸುಬ್ರಮಣಿಯನ್ 2010ರಲ್ಲಿ ಎಐಎಡಿಎಂಕೆ ಸೇರಿದ್ದು ಎಂಬುದು ಗಮನಾರ್ಹ. ಜಯಲಲಿತಾ ಅವರ ಬಿಡುಗಡೆಗಾಗಿ ದಿನ ನಿತ್ಯ ಪ್ರತಿಭಟನೆ, ಮೆರವಣಿಗೆ, ಧರಣಿ ಸತ್ಯಾಗ್ರಹಗಳು ನಡೆದಿರುವ ಬೆನ್ನಲ್ಲೇ ರಾಮಸುಬ್ರಮಣಿಯನ್ ಅವರ ಪತ್ರ ಹಲವರ ಹುಬ್ಬೇರಿಸಿದೆ. ಪಕ್ಷ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ನಿರ್ಧಾರವನ್ನು ಕೈಗೊಂಡಿಲ್ಲ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಅಕ್ರಮ ಆಸ್ತಿ ಸಂಪಾದನೆ ಮೇಲೆ ಜಯಲಲಿತಾ ಅವರಿಗೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ 100 ಕೋಟಿ ರೂ. ದಂಡ ವಿಧಿಸಿದೆ. ಜತೆಗೆ ಅವರ ಆಪ್ತರಾದ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 10 ಕೋಟಿ ರೂ. ದಂಡ ವಿಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜಯಲಲಿತಾ ಅವರಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. (ಪಿಟಿಐ)

English summary
Amidst the demand for her release in Tamil Nadu, an AIADMK functionary has written to jailed party chief Jayalalithaa, convicted in a graft case, asking her to quit the powerful General Secretary's post, taking moral responsibility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X