ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ವಿವಾದ : ಕನ್ನಡಿಗರ ಮನಗೆದ್ದ ನಟ ಸಿಂಬು ಭಾಷಣ

By ಸಾರಕ್ಕಿ ಮಂಜು
|
Google Oneindia Kannada News

Recommended Video

ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

ಚೆನ್ನೈ, ಏಪ್ರಿಲ್ 09: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಗೊಂದಲ ಮುಂದುವರೆದಿದೆ. ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನ ರೈತರು ನಡೆಸಿರುವ ಪ್ರತಿಭಟನೆ, ಹೋರಾಟಕ್ಕೆ ತಮಿಳುನಾಡಿನಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಇದರ ಜತೆಗೆ ತಮಿಳು ಚಿತ್ರರಂಗ ಕೂಡಾ ಕೈಜೋಡಿಸಿದೆ.

ನಟ ಸಿಂಬು ಅವರು ತಮಿಳಿನಲ್ಲಿ ಮಾಡಿರುವ ಭಾಷಣದ ಬಗ್ಗೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ. ಸಿಂಬು ಮಾಡಿದ ಭಾಷಣದ ಕನ್ನಡ ಭಾವಾನುವಾದವನ್ನು ಸಾರಕ್ಕಿ ಮಂಜು ಅವರ ಫೇಸ್ ಬುಕ್ ನಿಂದ ತೆಗೆದುಕೊಂಡು ಇಲ್ಲಿ ನೀಡಲಾಗಿದೆ....

ಒಂದು ಏಡಿ ನನ್ನ ಕಾಲನ್ನ ಕಚ್ಚಿದ್ರೆ ನಾನು ಅದನ್ನ ತೆಗೆದು ಪಕ್ಕಕ್ಕೆ ಇಡ್ತೀನಿ. ಅದು ನಿಮ್ಮನ್ನ ಕಚ್ತಿದೆಯಲ್ಲ, ನೀವ್ ಯಾಕ್ ಅದನ್ನ ಉಳಿಸ್ತೀರಿ ಅಂತ ನೀವು ಕೇಳ್ತೀರಿ ಅಂದ್ರೆ, ಕಚ್ಚುವುದು ಅದರ ಕೆಲಸ. ಕಾಯುವುದೇ (ಕಾಪಾಡುವುದು) ಕಣ್ರೀ ತಮಿಳಿಗನ ಕೆಲಸ. ಈ ಪ್ರಪಂಚದಲ್ಲಿ... ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯವನ್ನು ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಮಹಾತ್ಮರು ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ. ನಾವು ಯಾರೊಂದಿಗೂ ಜಗಳ ಮಾಡಬಾರದು. ಅವರೇನಾದ್ರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ರಾ? ಹಾಗಂತ ಅವರು ಹೇಳಿದ್ರು ಅಂದ್ರೆ... ಆಮೇಲೆ ನೀವು ನನ್ನನ್ನ ಕೇಳಿ ನಾನು ನಿಮಗೆ ಉತ್ತರ ಕೊಡ್ತೀನಿ''

Actor Silambarasan alias Simbu speech on Cauvery Water dispute

ನಾವೂ ಈ ದೇಶದಲ್ಲಿ ಹುಟ್ಟಿದೋರೇ... ನಾವೂ ಈ ಭೂಮೀಲಿ ಹುಟ್ಟಿದೋರೇ... ಈ ಭೂಮಿ ಅಂತ ಅಂದ್ರೆ... ಅದು ಭಾರತ ಆಗಿರಬಹುದು, ಕರ್ನಾಟಕ ಆಗಿರಬಹುದು, ತಮಿಳುನಾಡು ಆಗಿರಬಹುದು. ಮೊದಲಿಗೆ... ನಾವು ಈ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿದ್ದೀವಿ. ಈಗ..ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇನ್ನೂ ಎಷ್ಟು ದಿನಾಂತ ಆ ಜಾತಿ, ಈ ಧರ್ಮ, ಆ ಪಂಗಡ ಅನ್ನೋ ಹೆಸರಲ್ಲಿ ಬೇರೆ ಮಾಡ್ತಾ ಇರ್ತೀರಿ? (ಒಡೆದು ಆಳ್ತಾ ಇರ್ತೀರಿ?) ಮನುಷ್ಯನನ್ನು ಮನುಷ್ಯ ಯಾವಾಗ ನೋಡ್ತೀವಿ? ಯಾವಾಗ ಗೌರವಿಸ್ತೀವಿ? ಯಾರೋ ಅಧಿಕಾರದ ಗದ್ದುಗೆ ಹಿಡಿಯೋದಿಕ್ಕೋಸ್ಕರ ಅಂತ, ಯಾರೋ ನಮ್ಮನ್ನ ಆಳೋದಿಕ್ಕೋಸ್ಕರ... ನಮ್ಮನ್ನ ನಾನಾ ಕಾರಣಕ್ಕೆ ಹೀಗೆ ಒಡೆದು ಬೇರೇ ಬೇರೆ...ಮಾಡಿ ಆಳ್ತಿದ್ದಾರೆ'

ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ (ಪರವಾಗಿ ಆಗಲೀ-ವಿರುದ್ಧವಾಗಿ ಆಗಲೀ) ಮಾತಾಡೋ ಸಲುವಾಗಿ ನಾನಿಲ್ಲಿಗೆ ಬಂದಿಲ್ಲ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯ ಮಾಡೋದಿಕ್ಕೋಸ್ಕರ ನಾನಿಲ್ಲಿಗೆ ಬಂದಿಲ್ಲ. ಆ ಕೆಲಸ ಮಾಡೋದಿಕ್ಕೆ ಬಹಳಷ್ಟು ಜನ ಇದ್ದಾರೆ. ನಾನು ಕರ್ನಾಟಕದಲ್ಲಿರೋಂಥ... ನಾನು ಅವರ ಹೆತ್ತ ಮಗ ಅಲ್ಲದೇ ಇದ್ರೂ... ಅವರ ಮಗನಾಗಿ ನಿಮ್ಮನ್ನ ಕೇಳ್ತಾ ಇದ್ದೀನಿ. ಆ ಕರ್ನಾಟಕ ಮಾತೆ ಹೇಳಲಿ.. ನಮ್ಮಿಂದ ನೀರು ಕೊಡಲು ಸಾಧ್ಯ ಇಲ್ಲ ಅಂತ... ನಾನೇನೂ ನಿಮ್ಮ ಮಗು ಹತ್ರ.., ನಿಮ್ಮ ಮಗು ಕೈಲಿರೋ ನೀರು ಕೊಡಿ ಅಂತ ಕೇಳಲಿಲ್ಲವಲ್ಲ? ನೀವು ಕುಡಿದು ದಣಿವಾರಿಸಿಕೊಂಡ ಬಳಿಕ., ಉಳಿದಿರೋ ನೀರನ್ನ ನಮಗ್ ಕೊಡ್ತೀರಾ ಅಮ್ಮಾ... ಅಂತ ಕೇಳ್ತಾ ಇದ್ದೀನಿ''

ಬರೋ ಹನ್ನೊಂದನೇ ತಾರೀಖು, ಬುಧವಾರ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆ ಒಳಗೆ ಕರ್ನಾಟಕದಲ್ಲಿರೋಂಥ ನಮ್ಮ ತಾಯಿ, ತಂದೆ, ನಾನು ತಮ್ಮ ಅಂತ ಭಾವಿಸೋ, ನಾನು ಅಣ್ಣ ಅಂತ ಭಾವಿಸೋ, ನಾನು ಸ್ನೇಹಿತ ಅಂತ ಭಾವಿಸೋ...ಕರ್ನಾಟಕದ ಅಷ್ಟೂ ಜನ... "ನೀವು...ಒಂದು ಲೋಟದಲ್ಲಿ ನೀರು ತುಂಬಿ ಹಿಡಿದು...ನಾವು ತಮಿಳರಿಗೆ ನೀರು ಕೊಡ್ತೀವಿ ಅಂತ ಅದನ್ನ ವಿಡಿಯೋ ಮಾಡಿ ತೋರಿಸಿ" ನೀವು ಹಾಗೆ ಮಾಡಿ ತೋರಿಸ್ಲಿಲ್ಲವಾ...ಆಗ ನೀವು ನೀರು ಕೊಡೋದಿಲ್ಲ ಅಂತ ನಾವೇ ತಿಳ್ಕೊಳ್ತೀವಿ ಅಮ್ಮಾ...ಯಾಕಂದ್ರೆ, ಈ ರಾಜಕೀಯದ ಕುತಂತ್ರಗಳನ್ನ ಸಹಿಸ್ಕೊಳ್ಳೋದಿಕ್ಕೆ ನಮ್ಮಿಂದ ಸಾಧ್ಯ ಆಗ್ತಿಲ್ಲ

ನಾವು ಹೋಗಿ ಈ ಹೋರಾಟ, ರಾಡಿ ರಂಪಾಟ...ಇದೆಲ್ಲ ನಮ್ಮಿಂದ ಸಾಧ್ಯ ಆಗ್ತಿಲ್ಲ. ನೀವು ಬಳಸಿ ಮಿಕ್ಕಿದ್ದನ್ನ ಮಾತ್ರ ನಮಗೆ ಕೊಡಿ. ಅಣೆಕಟ್ಟು ಕಟ್ಟಿ ನೀರನ್ನ ತಡೀಬಹುದು. ಆದ್ರೆ ಒಂದು ಅಳತೆ ಮೀರಿ ನೀರು ಬಂತು ಅಂದ್ರೆ, ನೀವು ಅದನ್ನ ಹೇಗೆ ತಡೆದು ನಿಲ್ಲಿಸೋದಿಕ್ಕೆ ಸಾಧ್ಯ? ಆ ನೀರನ್ನ ಬಿಡ್ಲೇ ಬೇಕು. (ಪತ್ರಕರ್ತರಿಗೆ)ಆ ನೀರನ್ನ ಬಿಡೋದಿಲ್ಲ...ಹಿಡಿದಿಟ್ಕೊಂಡ್ ಬಿಡ್ತಾರೆ ಅಂತ ಅಂದ್ಕೋಬೇಡಿ. ಅಲ್ಲಿರೋ ಎಲ್ಲಾ ತಾಯಂದಿರೂ "ಅಯ್ಯೋ, ನೀರು ಕೊಡೋದಿಕ್ಕಾಗ್ತಿಲ್ಲವಲ್ಲ ಅಂತ ನೊಂದು ಕಣ್ಣೀರು ಹಾಕಿದ್ರೆ, ಆ ಕಣ್ಣೀರೂ ನೀರೇ...ಆ ತಾಯಂದಿರ ಕಣ್ಣಲ್ಲಿ ನೀರು ಬಂತು ಅಂದ್ರೆ, ಆ ತಾಯಂದಿರ ಪ್ರೀತಿಯ ಅಣೆಕಟ್ಟು ಒಡೀತು ಅಂದ್ರೆ...ತಮಿಳು ನಾಡಿನ ಜನರಿಗೆ ಆ ದೇವರು ನೀರು ಕೊಡ್ತಾನೋ ಇಲ್ವೋ ಅಂತ ನೀವೇ ನೋಡಿ ಬೇಕಾದ್ರೆ...ನಾನ್ ಯಾಕ್ ಈ ಮಾತು ಹೇಳ್ತಾ ಇದ್ದೀನಿ ಅಂತ ಅಂದ್ರೆ, ನಮ್ಮನಮ್ಮಲ್ಲಿ ಒಗ್ಗಟ್ಟು ಬೇಕು ಕಣ್ರೀ

'ಯಾರ್ರೀ ಕರ್ನಾಟಕದಲ್ಲಿರೋರು? ಯಾಕೆ ನಾವು ಈ ಹೋರಾಟ ಮಾಡಬೇಕು? ಯಾಕೆ ನಾವು ಜಗಳ ಮಾಡಬೇಕು? ನನ್ನ ತಮ್ಮನ ಹತ್ರ...ನನ್ ತಂಗಿ ಹತ್ರ ಕೇಳೋದಿಕ್ಕೆ ನಾನು ಜಗಳ ಮಾಡಬೇಕಾ? ಸಮಸ್ಯೆ ಏನು? ನಿಮಗೆ ಹೇಗೆ ಕಷ್ಟ ಇದೆಯೋ ಹಾಗೇನೇ ನಮಗೂ ಕಷ್ಟ ಇದೆ ಅಂತ ನಮ್ಮ ಪರಿಸ್ಥಿತಿನ ಅವರಿಗೆ ಹೇಳ್ತಿರೋದ್ರಿಂದ್ಲೇ (ಹಕ್ಕೊತ್ತಾಯ ಮಾಡ್ತಿರೋದ್ರಿಂದಲೇ) ಅವರು ನೀರು ಕೊಡಲು ಸಾಧ್ಯ ಇಲ್ಲ ಅಂತ ಹೇಳ್ತಿದ್ದಾರೆ. (ಹಕ್ಕೊತ್ತಾಯದ) ಭಾವನೆ ನಮ್ಮದಲ್ಲ. ನೀರು ಮಿಕ್ಕಿದ್ರೆ ಕೊಡ್ತೀವಿ ಅಂತ ಹೇಳ್ತಿದ್ದಾರೆ. ನೀರು ಕೊಡೋಲ್ಲ ಅಂತ ಹೇಳಿದ್ರೇನೇ ನಿಮಗೆ ಓಟು ಅನ್ನೋಂಥ ಪರಿಸ್ಥಿತೀನ ಅಲ್ಲಿ ಕ್ರಿಯೇಟ್ ಮಾಡಿಟ್ಟಿದ್ದಾರೆ.

ಆದ್ರೆ ಈಗ ನಾನು ಹೇಳ್ತೀನಿ. ಹನ್ನೊಂದನೇ ತಾರೀಖಿನ ದಿನ ನೀವು...ಕರ್ನಾಟಕದ ಜನರೆಲ್ಲ ಒಂದುಗೂಡಿ, ನಾನು ಹೇಳಿದ್ದನ್ನ ಮಾಡಿ ತೋರಿಸಿದ್ರಿ ಅಂದ್ರೆ, ನೀರು ಕೊಡ್ಲಿಲ್ಲ ಅಂದ್ರೆ ಮಾತ್ರ ಓಟು ಅನ್ನೋ ಪರಿಸ್ಥಿತಿ ಛಿದ್ರ ಆಗಿ... ನೀರು ಕೊಡೋನಿಗೇ ಓಟು ಅಂತಾಗುತ್ತೆ. ಇದು ನಡೆಯುತ್ತಾ ಇಲ್ವಾ ಅಂತ ನೋಡಿ. ಅಕಸ್ಮಾತ್...ನಾನ್ ಹೇಳಿದಂಗ್ ನಡೀಲಿಲ್ಲವಾ...ಆಗಲೂ ಜಗಳ ಮಾಡೋದಿಲ್ಲ. ಯಾಕೆ ಗೊತ್ತಾ? ಮನುಷ್ಯತ್ವ ಇರೋ ಮನುಷ್ಯ...ಮನುಷ್ಯನ್ನ ಮನುಷ್ಯನ್ ಥರಾನೇ ನಡೆಸ್ಕೊಳ್ತಾನೆ

ಅಕಸ್ಮಾತ್ ಅಲ್ಲಿಂದ ನಮಗ್ ನೀರು ಬರಲಿಲ್ಲ ಅಂದ್ಕೊಳ್ಳೋಣ. ನಾವು ಇಲ್ಲಿ ಏನ್ ಮಾಡ್ಬೇಕು? ನೀರು (ಬೀದಿ ಬೀದೀಲೂ) ನದೀ ಥರ ಹರೀತಲ್ಲ? ಮನೆ ತುಂಬಾ ನೀರು ತುಂಬ್ಕೊಂಡಿತ್ತಲ್ಲ? ಏನ್ ಮಾಡಿದ್ವಿ ಇಷ್ಟು ವರ್ಷ? ಅದರ ಬಗ್ಗೆ ನಾವ್ ಯಾರಾದ್ರೂ ಯಾವೊತ್ತಾದ್ರೂ ಮಾತಾಡಿದ್ದೀವಾ? ಇಲ್ಲಿ ಸಮಸ್ಯೆ ಏನು ಅಂತ ಅಂದ್ರೆ... ನಮ್ಮನಮ್ಮನ್ನೇ ಬೇರೆ ಮಾಡಿ ಬೇರೆ ಮಾಡೋದು (ಜಗಳ ತಂದಿಡೋದು-ಬೆಂಕಿ ಹಚ್ಚೋದು)., ಸಾಕ್ರೀ...''

''ಒಂದು ಹ್ಯಾಶ್ ಟ್ಯಾಗ್... #UniteForHumanity ಒಂದು ಹ್ಯಾಶ್ ಟ್ಯಾಗ್ ಹಾಕಿ...ದಯವಿಟ್ಟು ನಾನು ಹೇಳಿದ ವಿಷಯಾನ ಕರ್ನಾಟಕದಲ್ಲಿರೋ ತಮಿಳು ಜನ, ಕನ್ನಡ ಗೊತ್ತಿರೋ ತಮಿಳು ಜನ, ಅಲ್ಲಿರೋ ಕನ್ನಡಿಗರಿಗೆ ಅರ್ಥ ಮಾಡಿಸಿ. ನಾನು ಈ ಮಾತನ್ನ ಕರ್ನಾಟಕದಲ್ಲಿರೋ ಜನರಿಗೆ ಮಾತ್ರ ಹೇಳ್ತಾ ಇಲ್ಲ. ನಮ್ಮ ಜನರಿಗೆ ಮಾತ್ರ ಹೇಳ್ತಾ ಇಲ್ಲ. ಈ ಹ್ಯಾಶ್ ಟ್ಯಾಗ್'ನ್ನ ಭಾರತದಾದ್ಯಂತ ಇರೋ ಜನ, ವಿಶ್ವದಾದ್ಯಂತ ಇರೋ...ಈ ವಿಡಿಯೋನ ನೋಡೋ ಅಷ್ಟೂ ಜನ., ಒಂದು ಹ್ಯಾಶ್ ಟ್ಯಾಗ್'ನ್ನ ಹಾಕಿ. ದಯವಿಟ್ಟು ನನ್ನ ವಿಡಿಯೋನ ಶೇರ್ ಮಾಡಬೇಡಿ. ದಯವಿಟ್ಟು ಮಾಡಬೇಡಿ. ನೀವು ಈ ಹ್ಯಾಶ್ ಟ್ಯಾಗ್'ನ್ನ ಹಾಕಿ., ಈ ವಿಷಯಾನ., ಹನ್ನೊಂದನೇ ತಾರೀಖು ಮೂರು ಗಂಟೆಯಿಂದ ಆರು ಗಂಟೆಯೊಳಗೆ ನಮ್ಮ ಒಗ್ಗಟ್ಟನ್ನ... ನಮ್ಮೊಳಗೆ ಒಗ್ಗಟ್ಟಿದೆ ಅನ್ನೋದನ್ನ-ನಮ್ಮ ಒಗ್ಗಟ್ಟನ್ನ ತೋರಿಸಲು ನಿಮ್ಮಿಂದ ಸಾಧ್ಯವಾಯ್ತು ಅಂದ್ರೆ...ಮೊದಲು ನೀವು ಒಂದು ವಿಡಿಯೋ ತೆಗೆದು ಹಾಕೋದರ ಮೂಲಕ ಶೇರ್ ಮಾಡಿ. ಯಾಕ್ ಹೇಳ್ತಿದ್ದೀನಿ ಅಂದ್ರೆ., ಏನಾಗುತ್ತೆ ಅಂತ ಅಂದ್ರೆ., ಇಂಥವರು ಹೇಳಿದ್ರು... ಹಾಗಾಗಿ... ಅಂತ ಆಗ್ಬಿಡುತ್ತೆ. ಅದೆಲ್ಲ ಏನೂ ಬೇಡ ಸ್ವಾಮಿ. ಸದ್ಯ ಹೀಗೆ ನಡೆದ್ರ ಸಾಕಾಗಿದೆ. ಮನುಷ್ಯತ್ವ ಇರೋ ಮನುಷ್ಯರಿಗೆ ಒಳ್ಳೆಯದಾಗಬೇಕು. ಇಷ್ಟು ದಿನ ನಾವು ಬೇರೆ ಬೇರೆ ಆಗಿದ್ದಿದ್ದು ಸಾಕು. ಇನ್ನು ಮುಂದೆ ನಾವು ಒಂದಾಗೋಣ ಅಂತ. ಮಾನವೀಯತೆಯಿಂದ ಭಾವಿಸುವವರು...ತಲುಪಿಸಿದರೆ, (ಸುದ್ದಿ)ತಲುಪಿದವರು, ಇದನ್ನ ಅರ್ಥ ಮಾಡಿಕೊಂಡವರು ಪೋಸ್ಟ್ ಮಾಡಿದರೆ ಸಾಕು. ಎಲ್ಲರೂ ಪೋಸ್ಟ್ ಮಾಡಿ...ಈ ವಿಷಯ ಕಾರ್ಯರೂಪಕ್ಕೆ ಬಂತು ಅಂದ್ರೆ., ನಿಮ್ಮಿಂದ ಆಗಿದ್ದು ಅಂತ ಬಂದ್ ಬಿಡುತ್ತೆ. ಅದಕ್ಕೋಸ್ಕರನೇ ಹೇಳ್ತಾ ಇದ್ದೀನಿ. ಈ ಹನ್ನೊಂದನೇ ತಾರೀಖು ಹೀಗ್ ನಡೀತು ಅಂತ ಅಂದ್ರೆ...ಸಂತೋಷ. ಆಮೇಲೆ ಇವರನ್ನ ನೋಡ್ಕೊಳ್ಳೋಣ. (ತಮಿಳುನಾಡಿನಲ್ಲಿ ನಡೀತಾ ಇರೋ ಹೋರಾಟ/ಹೋರಾಟಗಾರರನ್ನು ಕುರಿತು ಇರಬೇಕು). ಆದರೆ...ಆ ಜನರೇ ಈ ವಿಷಯದಲ್ಲಿ ನಮಗೆ ಸಹಮತವಿಲ್ಲ. ನಾವು ಕೊಡೋದಿಲ್ಲ, ನಮ್ ಹತ್ರ ಇದ್ದೂ ನಾವು ಕೊಡೋದಿಲ್ಲ ಅಂತ ಅಂದ್ರೆ... ಬಹುಶಃ ಖಂಡಿತ ಆ ಜನ ಹಾಗೆ ಹೇಳೋದಿಲ್ಲ ಅಂತ ನಂಬ್ತೀನಿ''

ನಮ್ಮನ್ನ ಮನುಷ್ಯರು ಅಂತ ಪರಿಗಣಿಸಿ-ನಮ್ಮ ಮಾತುಗಳನ್ನ ಗೌರವಿಸ್ತಾರೆ ಅನ್ನೋ ನಂಬಿಕೆಯಿಂದಲೇ ನಾನು ಇಲ್ಲಿ ನಿಂತ್ಕೊಂಡು ಈ ಮಾತುಗಳನ್ನ ಆಡ್ತಾ ಇದ್ದೀನಿ. ಇದು ನಡೆಯುತ್ತೆ ಅಂತ ನಾನು ನಂಬ್ತೀನಿ. ದೇವರನ್ನ ಬೇಡ್ಕೊಳ್ತೀನಿ. ದಯವಿಟ್ಟು ನೀವು ಈ ವಿಷಯಾನ ಶೇರ್ ಮಾಡಿ ಅಂತ ಮನವಿ ಮಾಡ್ಕೊಳ್ತೀನಿ. ನಾನು ಹೀಗೆಲ್ಲ ಯಾಕ್ ಮಾತಾಡ್ತಾ ಇದ್ದೀನಿ ಅಂದ್ರೆ...ನನಗ್ ಸ್ವಲ್ಪ ಹೆಸರು (ಜನಪ್ರಿಯತೆ) ಬೇಕು. ನನಗೆ ಸ್ವಲ್ಪ ಜನಪ್ರಿಯತೆ ಬೇಕು. ನಾನು ಸ್ವಲ್ಪ ದುಡ್ಡು ಮಾಡಬೇಕು. ನನಗೆ ಸ್ವಲ್ಪ ನನ್ ಹಿಂದೆ ಹಿಂಬಾಲಕರು ಬೇಕು. ನಾನು ಸ್ವಲ್ಪ ಆ ಮಾಸ್ (ಹೀರೋಯಿಸಂ) ನೋಡಬೇಕು. ನಾನು ನಿಜವಾಗ್ಲೂ ಹೇಳ್ತಾ ಇದ್ದೀನಿ. ನನಗೆ ಅದೆಲ್ಲ ಬೇಕು. ಅದಕ್ಕೋಸ್ಕರಾನೇ ನಾನು ಇದನ್ನೆಲ್ಲ ಮಾಡ್ತಾ ಇದ್ದೀನಿ. ಹಾಗಾಗಿ...ಹೇಗಾದ್ರೂ ಮಾಡಿ ನಾನ್ ಹೇಳ್ದಂಗೆ ಮಾಡಿ ನನ್ನನ್ನ ದೊಡ್ಡ ಮನುಷ್ಯನನ್ನಾಗಿ ಮಾಡಿಬಿಟ್ರೆ...ನಾನು ನಿಮಗೆ ತುಂಬಾ ಋಣಿಯಾಗಿರ್ತೀನಿ. ದೊಡ್ಡ ಮನುಷ್ಯ ಆದ ಮೇಲೆ ನಿಮ್ಮನ್ನ ಪೂಜೆ ಮಾಡ್ತೀನಿ. (ಎಂದು ವ್ಯಂಗ್ಯವಾಗಿ-ತನಗೆ ಅಂಥ ಯಾವ ದುರಾಲೋಚನೆ-ದೂರಾಲೋಚನೆ ಇಲ್ಲ ಎನ್ನುವರ್ಥದಲ್ಲಿ ಆಂಗಿಕ ಭಾಷೆಯಲ್ಲಿ ಹೇಳುತ್ತಾರೆ) ಈ ರಾಜಕಾರಣಿಗಳ ಮಾತು ನಿಜ ಆಗಿರಬಹುದು. ಅಥವಾ ಸುಳ್ಳೇ ಆಗಿರಬಹುದು. ಆಳುವ ಪಕ್ಷದವರ ಮೇಲೆ ಅಥವಾ ಬಿಜೆಪಿ ಪಕ್ಷದ ಮೇಲೆ ಒಂದು ತಪ್ಪು ಭಾವನೆ ಮೂಡಿಸುವ ಸಲುವಾಗಿಯೇ ಇರಬಹುದು. ನಮಗ್ ಹೇಗ್ ಗೊತ್ತಾಗಬೇಕು. ಸತ್ಯ ಗೊತ್ತಿಲ್ಲದೇ ನಾವು ಅವರನ್ನ(ರಾಜಕೀಯ ಪಕ್ಷ/ರಾಜಕಾರಣಿ/ಕರ್ನಾಟಕದ ಜನ) ಬೈಯ್ತಾ ಇರೋದಿಕ್ಕಾಗುತ್ತಾ? ಅಥವಾ ಸತ್ಯ ಏನೂಂತ ತಿಳ್ಕೊಳ್ದೇ ಯಾರನ್ನೋ (ರಾಜಕೀಯ ಪಕ್ಷ/ರಾಜಕಾರಣಿ) ಬೆಂಬಲಿಸ್ತಾ ಕೂತ್ಕೋಬೇಕಾ? ಹಾಗಾಗಬಾರದು ಅಂತ ಹೇಳ್ತಾ ಇದ್ದೀನಿ''

ನಾನ್ ಯಾಕೆ ಈ ವಿಷಯಾನ ಈಗ ಹೇಳ್ತಾ ಇದ್ದೀನಿ ಅಂತ ಅಂದ್ರೆ, ಈ ಸಮಸ್ಯೆ ಅಳತೆ ಮೀರಿ/ ತುಂಬಾ ಉಲ್ಭಣಾವಸ್ಥೆಗೆ ಹೋಗ್ತಾ ಇದೆ. ಅದಕ್ಕೆ ಮಾತಾಡ್ತಾ ಇದ್ದೀನಿ. ಅಲ್ಲಿ ಮೌನ ಸತ್ಯಾಗ್ರಹ ನಡೀತಾ ಇದೆ ಅಂತಿದ್ದಾಗೆ ಭಾವುಕನಾದೆ. ಆ ಮೌನಾನ ಬೇಧಿಸಬೇಕು ಅಂತ ಮಾತಾಡ್ತಾ ಇದ್ದೀನಿ. (ಪತ್ರಕರ್ತರು ಸಿಂಬು ಅಭಿಪ್ರಾಯಕ್ಕೆ ಕ್ಯಾತೆ ತೆಗೆಯುವಂತೆ ಪ್ರಶ್ನಿಸಲು) ನಾನೇನ್ ಹೇಳಲಿಕ್ಕೆ ಬರ್ತಾ ಇದ್ದೀನಿ ಅಂತ ಅಂದ್ರೆ, ನಾವೆಲ್ರೂ ಈ ದೇಶದಲ್ಲಿ ಬಾಳ್ತಾ ಇದ್ದೀವಿ. ನೀರು ಅಲ್ಲಿಂದ ಹರ್ಕೊಂಡ್ ಬರ್ತಾ ಇದೆ. ನಾನೇನ್ ಹೇಳೋದಿಕ್ಕೆ ಬರ್ತಾ ಇದ್ದೀನಿ ಅಂದ್ರೆ, ನಾವು ಒಂದು ಮನೇಲಿದ್ದೀವಿ, ಒಂದು ಕುಟುಂಬದಲ್ಲಿದ್ದೀವಿ. ನಮ್ಮ ತಮ್ಮ ಊಟ ಮಾಡಲಿಲ್ಲ ಅಂತ ಅಂದ್ರೆ, ಅಣ್ಣ ಊಟ ಮಾಡ್ಲಿಲ್ಲ ಅಂದ್ರೆ, ನಮ್ ತಾಯಿ ಊಟ ಮಾಡ್ಲಿಲ್ಲ ಅಂದ್ರೆ ಕೇಳ್ತೀವಿ ಅಲ್ವ? ಯಾಕ್ ಕೇಳ್ತೀವಿ? (ಮನೆಯವರು ನಮಗಿಂತ ಮುಂಚೆ-ಸ್ವಲ್ಪ ಹೆಚ್ಚಿಗೆ ಊಟ ಮಾಡಿದರೆ ಬೇಡ ಎನ್ನುತ್ತೀವಾ ಎನ್ನುವರ್ಥದಲ್ಲಿ) (ಪತ್ರಕರ್ತರ ಉತ್ತರ: ನಮ್ ಮನೆಯವರು ಅಂತ) ಹಾಗೇನೇ ಅವರೂ ನಮ್ಮವರೇ ತಾನೇ.. ನಮಗಿಂತ ಮುಂಚೆ (ಸಾಲಿನಲ್ಲಿ) ಅವರಿದ್ದಾರೆ ಅಲ್ವ? ನಮಗಿಂತ ಮುಂದುಗಡೆ ಅವರಿದ್ದಾರೆ ಅಲ್ವ? ಅವರು ತಗೊಂಡು-ಕೊಡ್ಲಿ ಅಂತ ಹೇಳ್ತಾ ಇದ್ದೀನಿ. ಅದನ್ನ ಯಾಕೆ ನಾವು ಭಿಕ್ಷೆ ಅಂತ ತಿಳ್ಕೋಬೇಕು? ಯಾಕೆ ಭಿಕ್ಷೆ ಅಂತ ಅಂದ್ಕೋಬೇಕು? ಅಷ್ಟರ ಮಟ್ಟಿಗೆ ಮನುಷ್ಯತ್ವ/ಮಾನವೀಯತೆ ಇರುವವನೇ ತಮಿಳಿಗ. ನಮ್ಮೊಳಗಿರೋ ಆ ಮನುಷ್ಯತ್ವವನ್ನ ಹಾಳು ಮಾಡಿ, ನಮ್ಮನ್ನ ಹಿಂಸೆಗೆ ಪ್ರಚೋದಿಸಬೇಡಿ

(ಪತ್ರಕರ್ತರ ಪ್ರಶ್ನೆ) ನಾವು ಹಿಂಸಾಚಾರ ಮಾಡೋದಿಲ್ಲ ಕಣ್ರೀ.. ಮಾಡೋದಿಲ್ಲ ರೀ. ಮಾಡೋದಿಲ್ಲ. (ಪತ್ರಕರ್ತರು:-ಎಂಟು ವರ್ಷಗಳ ಹಿಂದೆ/ಗಳಿಂದ ಕರ್ನಾಟಕದವರಿಗೆ ವಿದ್ಯುತ್ ಅಭಾವವಾದಾಗ ತಮಿಳುನಾಡು ಸರ್ಕಾರ ಅವರಿಗೆ ವಿದ್ಯುತ್ ಕೊಟ್ಟಿತು. ಆಗ ಯಾವೊಬ್ಬ ತಮಿಳನೂ ಬೇಡ ಅನ್ನಲಿಲ್ಲ. ಆದರೆ ಕಾವೇರಿ ನೀರನ್ನ ಅವರು ನಮಗೆ ಕೊಡೋಲ್ಲ ಅಂದ್ರೆ ಅದು ನ್ಯಾಯ ಅಂತ ಅನ್ಸುತ್ತಾ? [ಎನ್ನುವರ್ಥದ ಪ್ರಶ್ನೆ]) -ಮನುಷ್ಯತ್ವಕ್ಕಿಂತ ದೊಡ್ಡ ನ್ಯಾಯ ಇದೆಯಾ ಅಂತ ಕೇಳ್ತೀನಿ. ಪತ್ರಕರ್ತರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಸಿಂಬು ಮೇಲೆ ಮುಗಿಬೀಳಲು... (ಒಬ್ಬರು) ಒಂದು ಕಣ್ಣಿಗೆ ತಿವಿದರೆ (ನಾವು ಅವರ) ಕಣ್ಣಿಗೆ ತಿವಿಯಬೇಕಾ? ನಾನು ಹೇಳಿದ್ದನ್ನೇ ಇಡೀ ತಮಿಳುನಾಡು ಕೇಳಬೇಕು ಅಂತ ನಾನೇನಾದ್ರೂ ಹೇಳಿದ್ನಾ? ಕರ್ನಾಟಕದವರೆಲ್ರೂ ನಾನು ಹೇಳಿದ್ದನ್ನ ಕೇಳಲೇ ಬೇಕು ಅಂತ ಹೇಳಿದ್ನಾ? ನಾನು ಎಲ್ಲಿಂದ ಬಂದೆ..ಹೇಗೆ ಹುಟ್ಟಿದೆ ಅಂತೆಲ್ಲ ನನಗ್ ಗೊತ್ತಿಲ್ಲ. ಆದ್ರೆ ನಂಗೊಂದ್ ವಿಷಯ ಗೊತ್ತು. ನನ್ನನ್ನ ಮೀರಿ ಯಾವುದೋ ಒಂದು ಶಕ್ತಿ ಇದೆ. ಇವರು ಯಾರೋ...ಅವರು ಯಾರೋ...ಆದ್ರೆ ನನಗೆ ಅವರೆಲ್ರೂ ಒಂದೇ ಕಣ್ರೀ. ನನಗೆ ಎಲ್ರೂ ಒಂದೇ. ನನ್ನ ವೈಯುಕ್ತಿಕ ಅಭಿಪ್ರಾಯವನ್ನ...ನನಗ್ ಏನ್ ಅನ್ಸುತ್ತೋ ಅದನ್ನಷ್ಟೇ ನಾನು ಹೇಳಲು ಸಾಧ್ಯ. ಬುದ್ಧನಿಗೆ ಏನ್ ಅನ್ನಿಸ್ತೋ...ಅದನ್ನಷ್ಟೇ ಬುದ್ಧ ಹೇಳಿದ. ನೀವು ಹೇಳೋದನ್ನೇ ಬುದ್ಧ ಹೇಳಬೇಕು ಅಂತೇನಿಲ್ಲ. ಬುದ್ಧ ಹೇಳಿದ್ದರಲ್ಲಿ ನ್ಯಾಯ ಇದೆಯಾ, ಸರಿ ಇದೆಯಾ ಅಂತ ಹೇಳೋದಿಕ್ಕೆ ನಾನು ಬರಲಿಲ್ಲ''

(ಮತ್ತೆ ಪತ್ರಕರ್ತರ ಪ್ರಶ್ನೆಗಳ ಸರಮಾಲೆ...) ''ಒಂದ್ ನಿಮಿಷ ಸರ್... ನಾನೊಬ್ಬ ಮನುಷ್ಯನಾಗಿ...ಈ ಭೂಮೀಲಿ/ಮಣ್ಣಲ್ಲಿ ಹುಟ್ಟಿದ ಮಗನಾಗಿ., ಅಹಿಂಸೆಯಿಂದ, ಪ್ರೀತಿಯಿಂದಲೇ ಮಾತ್ರ... ಈ ಪ್ರಪಂಚದಲ್ಲಿ... ಯಾವುದೇ ಒಂದು ವಿಷಯವನ್ನು ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಮಹಾತ್ಮರು ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ. ನಾವು ಯಾರೊಂದಿಗೂ ಜಗಳ ಮಾಡಬಾರದು. ನಾವೆಲ್ರೂ ಒಂದೇ. ಮನುಷ್ಯರನ್ನ ಮನುಷ್ಯರು ಗೌರವಿಸಬೇಕು. ಹಾಗಾಗಿ ಈ ಪ್ರೀತಿ ಅನ್ನೋ ಮಾರ್ಗದಲ್ಲಿ ಹೋದಾಗ ಮಾತ್ರ ಈ ಸಮಸ್ಯೆಗೆ ಒಂದು ಪರಿಹಾರ ಸಿಗುತ್ತದೆ. ಅದನ್ನು ಬಿಟ್ಟು ನಾವು ಬೇರೆ ಮಾರ್ಗದಲ್ಲಿ ಹೋರಾಡ್ತೀವಿ ಅಂತ ಅಂದ್ರೆ... (ಈಗಾಗ್ಲೇ ನೀವ್) ಎಲ್ಲರೂ ಹೋರಾಟ ಮಾಡ್ತಾನೇ ಇದ್ದೀರಿ ತಾನೇ? ಇಷ್ಟೂ ದಿನ ಹೋರಾಡಿದ್ರಲ್ಲ? ನಾನ್ ಹೇಳ್ತಿರೋದು...ಇದು ನನ್ನ ವೈಯಕ್ತಿಕ, ಮಾನವೀಯತೆಯಿಂದಿರೋ ನಾನು ಹುಟ್ಟಿದ... ನಾನು ದೇವರು ಅಂತ ಭಾವಿಸಿರೋ ಆ ಅಲ್ಲಾನೇ ಆಗಿರಲಿ, ಮೈ ಫಾದರ್ ಇನ್ ಹೆವೆನ್ ಆಗಿರಲಿ, ಪ್ರೀತಿಯೇ ದೈವ ಅನ್ನೋ ಶಿವನಾಗಿರಲಿ, ನನಗೆ ಎಲ್ಲಾನೂ ಒಂದೇ. ನಾನು ಇದನ್ನೇ ಬಯಸ್ತೀನಿ ಅಂತ ಹೇಳ್ತಾ ಇದ್ದೀನಿ. ಇದನ್ನು ಮೀರಿ, ಹೀಗೇ ಹೋರಾಟ ಮಾಡಬೇಕು. ಅದು (ನಿಮ್ಮ ಹೋರಾಟದ ಮಾರ್ಗ) ತಪ್ಪು, ನಾವ್ ಯಾಕೆ (ಕರೆಂಟ್) ಕೊಡಬೇಕು? ಹಾಗೆ ನೀವು ಪ್ರಶ್ನೆ ಮಾಡೋದಿಕ್ಕೆ ಇಷ್ಟ ಪಡ್ತೀರಿ ಅಂತ ಅಂದ್ರೆ, ನಿಮಗೆ ಅಂತ ಒಂದು ವ್ಯಕ್ತಿತ್ವ ಇದೆ. ಸ್ವಂತಿಕೆ ಇದೆ. ಸ್ವಂತ ಅಭಿಪ್ರಾಯ ವ್ಯಕ್ತಪಡಿಸೋ ಸ್ವಾತಂತ್ರ್ಯ ಇದೆ. ನೀವು ಕೇಳಿ. ನಿಮ್ಮನ್ನ ಯಾರೂ ತಡೀತಾ ಇಲ್ಲ''

ನಾನು ಏನನ್ನ ಕೇಳಬೇಕು ಅಂತ ಬಯಸ್ತೀನಿ, ನಾನು ಹೇಗೆ ಇದು ನಡೀಬೇಕು ಅಂತ ಬಯಸ್ತೀನಿ (ಈ ಸಮಸ್ಯೆ ಪರಿಹಾರ ಕಾಣಬೇಕು ಅಂತ ಬಯಸ್ತೀನಿ) ಅನ್ನೋದನ್ನಷ್ಟೇ ನಾನು ಹೇಳ್ತಾ ಇದ್ದೀನಿ. ನಾನು ಹೇಳಿದ್ದನ್ನ ನೀವು ಕೇಳಬೇಕು ಅಂತ ನಾನು ಹೇಳಲಿಲ್ಲ. ದಯವಿಟ್ಟು ನನ್ನ ಮಾತುಗಳನ್ನ ಅರ್ಥ ಮಾಡ್ಕೊಳ್ಳಿ. ಇಷ್ಟರ ಮೇಲೆ ಪ್ರೀತಿ-ಸೌಹಾರ್ದ ಮಾರ್ಗದಿಂದ ಹೋಗಬೇಕು, ಹೋರಾಟ ಮಾಡಬೇಕು ಅಂತ ಹೇಳ್ತಿರೋ ಈ ಸಿಂಬುವಿನ ಮಾತುಗಳು ತಪ್ಪು ಅಂತ ನೀವು ಹೇಳ್ತೀರಿ ಅನ್ನೋದಾದ್ರೆ, ನನ್ನದು ತಪ್ಪೇ ಆಗಿರಲಿ.

(ಮತ್ತೂ ಪತ್ರಕರ್ತರು ಕ್ಯಾತೆ ತೆಗೆಯಲು...) ಇದಕ್ಕೆ ಮುಂಚೆ ಈ ಪ್ರಶ್ನೆಗಳನ್ನ ಬೇರೆ (ರಾಜಕಾರಣಿಗಳು) ಯಾರನ್ನಾದ್ರೂ ಕೇಳಿದ್ದೀರಾ? ಅಣ್ಣಾ...ನಿಮಗೆ ಪರಿಹಾರ ಬೇಕಾ...ಸಮಸ್ಯೆ ಬೇಕಾ? ಅಣ್ಣ...ಹನ್ನೊಂದನೇ ತಾರೀಖು ಮೂರು ಗಂಟೆಯಿಂದ ಆರು ಗಂಟೆಯ ಒಳಗೆ, ಅವರೇನಾದ್ರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ರಾ? ಹಾಗಂತ ಅವರು ಹೇಳಿದ್ರು ಅಂದ್ರೆ...ಆಮೇಲೆ ನೀವು ನನ್ನನ್ನ ಕೇಳಿ ನಾನು ನಿಮಗೆ ಉತ್ತರ ಕೊಡ್ತೀನಿ. -ಇಷ್ಟೆಲ್ಲ ಮಾತನಾಡಿದ ಮೇಲೂ ಪತ್ರಕರ್ತರು ಈ ನಿಮ್ಮ ವಿಚಾರಧಾರೆ ಎಲ್ಲವನ್ನೂ ಸಿನಿಮಾಗೆ ಕತೆಯನ್ನಾಗಿಟ್ಟುಕೊಳ್ಳಬಹುದು ಅಷ್ಟೇ ಎನ್ನುತ್ತಾರೆ. ಸಿಂಬು ಕೋಪದಿಂದ ಕೈ ಮುಗಿದು ಅಲ್ಲಿಂದ ಹೊರನಡೆಯುತ್ತಾರೆ.

English summary
Here is transcript of Tamil Actor Silambarasan (Simbu's) speech on Cauvery Water Dispute. Actor has urged is fans, media friends #UniteForHumanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X