ಬಲಿ ಯತ್ನ: ಪಂಜಾಬ್ಗೆ ದ್ವೇಷದ ರಾಜಕಾರಣ ಒಳನುಗ್ಗುತ್ತಿದೆ ಎಂದ ಸಿಧು
ಚಂಡೀಗಢ, ಜನವರಿ 25: ಪಂಜಾಬ್ನ ಪಟಿಯಾಲದಲ್ಲಿರುವ ಐತಿಹಾಸಿಕ ಕಾಳಿ ದೇವಸ್ಥಾನದಲ್ಲಿ ಬಲಿ ನೀಡುವ ಯತ್ನ ನಡೆದಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, "ಈ ಬಲಿ ಯತ್ನ ಶೋಚನೀಯ," ಎಂದು ಹೇಳಿ ಘಟನೆಯನ್ನು ಖಂಡನೆ ಮಾಡಿದ್ದಾರೆ. ಹಾಗೆಯೇ "ದ್ವೇಷದ ರಾಜಕೀಯವು ಪಂಜಾಬ್ಗೆ ಪ್ರವೇಶಿಸುತ್ತಿದೆ," ಎಂದು ತಿಳಿಸಿದ್ದಾರೆ.
"ವಿಭಜಕ ಶಕ್ತಿಗಳು ಪಂಜಾಬಿನಲ್ಲಿ ಸಾಮಾಜಿಕ-ಆರ್ಥಿಕ ರಚನೆಯನ್ನು ಎಂದಿಗೂ ಕೂಡಾ ಹರಿದು ಹಾಕಲು ಸಾಧ್ಯವಿಲ್ಲ," ಎಂದು ಪ್ರತಿಪಾದನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, "ಭಯ, ಧ್ರುವೀಕರಣ ಮತ್ತು ದ್ವೇಷದ ರಾಜಕೀಯವು ಪಂಜಾಬ್ಗೆ ಒಳನುಗ್ಗುತ್ತಿದೆ. ಮಾತಾ ಕಾಳಿ ದೇವಿ ದೇವಸ್ಥಾನದಲ್ಲಿ ನಡೆದ ಬಲಿ ಯತ್ನದ ಘಟನೆಯು ಶೋಚನೀಯವಾಗಿದೆ," ಎಂದಿದ್ದಾರೆ.
ದೇವಸ್ಥಾನದಲ್ಲಿ ಬಲಿ ಯತ್ನ, ಆರೋಪಿ ಬಂಧನ: ತನಿಖೆಗೆ ಆದೇಶಿಸಿದ ಸಿಎಂ ಚನ್ನಿ
"ವಿಭಜಕ ಶಕ್ತಿಗಳು ಪಂಜಾಬಿಯತ್ನ ಸಾಮಾಜಿಕ-ಆರ್ಥಿಕ ರಚನೆಯನ್ನು ಎಂದಿಗೂ ಹರಿದು ಹಾಕಲು ಸಾಧ್ಯವಿಲ್ಲ. ನಮ್ಮ ರಕ್ಷಾಕವಚವು ಸಾರ್ವತ್ರಿಕ ಸಹೋದರತ್ವ ಮತ್ತು ಎಲ್ಲಾ ಧರ್ಮಗಳಿಗೆ ಗೌರವವಾಗಿದೆ," ಎಂದು ಸಿಧು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸೋಮವಾರ ಪಂಜಾಬ್ನ ಪಟಿಯಾಲದಲ್ಲಿರುವ ಐತಿಹಾಸಿಕ ಕಾಳಿ ದೇವಸ್ಥಾನದಲ್ಲಿ ಬಲಿ ನೀಡುವ ಯತ್ನ ನಡೆದಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿರುವುದರಿಂದ ಭಾರೀ ಮಹತ್ವ ಪಡೆದಿದೆ. ಈ ಘಟನೆ ಮಧ್ಯಾಹ್ನ ನಡೆದಿದ್ದು, ಆರೋಪಿಯನ್ನು ರಾಜದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ ಮತ್ತು 354 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ದೇವಾಲಯದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಮುಸುಕುಧಾರಿಯೊಬ್ಬ ಕಾಳಿ ದೇವಿಯ ವಿಗ್ರಹವನ್ನು ಇರಿಸಲಾಗಿರುವ ಆವರಣವನ್ನು ಪರಿಶೀಲನೆ ನಡೆಸಿ ಅಲ್ಲಿ ಬಲಿ ನಡೆಸಲು ಯತ್ನ ಮಾಡಿರುವುದು ಕಂಡು ಬಂದಿದೆ. ಆದರೆ ಆ ವ್ಯಕ್ತಿಯನ್ನು ಪೂಜಾರಿಯವರು ತಕ್ಷಣವೇ ವಿಗ್ರಹದಿಂದ ದೂರ ತಳ್ಳಿದ್ದಾರೆ.
ಪಂಜಾಬಿಗಳು ಒಗ್ಗಟ್ಟಾಗಿ ಇರುವಂತೆ ಮುಖ್ಯಮಂತ್ರಿ ಮನವಿ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ, ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. "ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಂಜಾಬ್ನಲ್ಲಿ ಕಷ್ಟಪಟ್ಟು ಸ್ಥಾಪನೆ ಮಾಡಿದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಜನರನ್ನು ಒತ್ತಾಯಿಸಿದರು. ರಾಜ್ಯದಾದ್ಯಂತ ಇರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸುವಲ್ಲಿ ಪಂಜಾಬಿಗಳು ಒಗ್ಗಟ್ಟಾಗಿ ಇರುವಂತೆ ಮನವಿ ಮಾಡಿದರು.
ಏತನ್ಮಧ್ಯೆ ಘಟನೆಯನ್ನು ಖಂಡಿಸಿರುವ ಬಿಜೆಪಿ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಎಸ್ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಕೂಡ ಈ ಬಲಿ ಪ್ರಯತ್ನದ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಖ್ಬೀರ್ ಸಿಂಗ್ ಬಾದಲ್, "ಪಟಿಯಾಲಾದ ಕಾಳಿ ಮಾತಾ ಮಂದಿರದಲ್ಲಿ ನಡೆದ ದೌರ್ಜನ್ಯವನ್ನು ಬಲವಾಗಿ ಖಂಡಿಸುತ್ತೇನೆ. ಹಿಂದೂಗಳು ಮತ್ತು ಸಿಖ್ ದೇಗುಲಗಳ ನಡುವೆ ಕೋಮು ದ್ವೇಷವನ್ನು ಹರಡಲು ಪಂಜಾಬ್ ಹೊರಗಿನ ಶಕ್ತಿಗಳ ಪಿತೂರಿಯ ಬಗ್ಗೆ ನಾವು ಆತಂಕ ಹೊಂದಿದ್ದೇವೆ. ಈ ಪಿತೂರಿಯ ವಿರುದ್ಧ ಎಚ್ಚರಿಕೆ ನೀಡಿದ್ದೇವೆ. ಕೆಟ್ಟ ಭಯಗಳು ನಿಜವಾಗುತ್ತವೆ. ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕಾಪಾಡಲು ಅವರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಇರೋಣ," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)