ಪಂಜಾಬ್ ಚುನಾವಣೆ: ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಚಂಡೀಗಢ, ಜನವರಿ 21: ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು 34 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ತೊರೆದ ಹಾಲಿ ಶಾಸಕ ರಾಣಾ ಗುರ್ಮೀತ್ ಸಿಂಗ್ ಸೋಧಿ, ಅರವಿಂದ್ ಖನ್ನಾ ಮತ್ತು ದಿವಂಗತ ಅಕಾಲಿ ದಿಗ್ಗಜ ಗುರುಚರಣ್ ಸಿಂಗ್ ತೋಹ್ರಾ ಅವರ ಮೊಮ್ಮಗ ಕನ್ವರ್ವೀರ್ ಸಿಂಗ್ ತೋಹ್ರಾ ಮಾಜಿ ಸಚಿವ ಮನೋರಂಜನ್ ಕಾಲಿಯಾ ಅವರ ಹೆಸರುಗಳು ಇವೆ.
ಪಂಜಾಬ್ ಚುನಾವಣೆ: ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್ ಧುರಿ ಕ್ಷೇತ್ರದಿಂದ ಸ್ಪರ್ಧೆ
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪಂಜಾಬ್ ರಾಷ್ಟ್ರದ ಹೆಮ್ಮೆ. ಆದರೆ ಅಲ್ಲಿ ಪರಿಸ್ಥಿತಿಯು ಕೆಟ್ಟದಾಗಿದೆ ಎಂದು ಹೇಳಿದರು.
ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷವು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯವನ್ನು ನೀಡಿದೆ. ಮೊದಲ ಪಟ್ಟಿಯಲ್ಲಿ 12 ರೈತ ಕುಟುಂಬಗಳು, ಎಂಟು ಪರಿಶಿಷ್ಟ ಜಾತಿಯವರು ಮತ್ತು ವೃತ್ತಿಪರರು ಇದ್ದಾರೆ ಎಂದು ತರುಣ್ ಚುಗ್ ಹೇಳಿದರು.
ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ವೈದ್ಯರು, ವಕೀಲರು, ಕ್ರೀಡಾಪಟುಗಳು, ರೈತರು, ಯುವಕರು, ಮಹಿಳೆಯರು ಮತ್ತು ಮಾಜಿ ಐಎಎಸ್ ಅಧಿಕಾರಿಗಳು ಇದ್ದಾರೆ ಎಂದು ಚುಗ್ ಹೇಳಿದರು.
ಬಿಜೆಪಿ ಪಕ್ಷವು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಎಸ್ಎಡಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.
ಮೂರು ಪಕ್ಷಗಳು ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸಲು ಮೂರು ಪಕ್ಷಗಳಿಂದ ತಲಾ ಇಬ್ಬರು ಆರು ಸದಸ್ಯರ ಸಮಿತಿಯನ್ನು ರಚಿಸಿವೆ. ಮೂರು ಪಕ್ಷಗಳು ಸಾಮಾನ್ಯ ಪ್ರಣಾಳಿಕೆಯನ್ನೂ ಮಾಡಲಿವೆ.
ಮೆಹ್ತಾ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಮೆಹ್ತಾ ಹೊರತುಪಡಿಸಿ, ಮತ್ತೊಬ್ಬ ಮಹಿಳಾ ಅಭ್ಯರ್ಥಿ ರೇಣು ಕಶ್ಯಪ್ ದಿನಾನಗರದಿಂದ ಕಣದಲ್ಲಿದ್ದಾರೆ. ಕಬಡ್ಡಿ ಆಟಗಾರ ರಂಜಿತ್ ಸಿಂಗ್ ಖೋಜೆವಾಲಾ ಅವರನ್ನು ಕಪುರ್ತಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ಮಾಜಿ ಸಹಾಯಕಿ ನಿಮಿಷಾ ಮೆಹ್ತಾ ಅವರನ್ನು ಗಢಶಂಕರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಗಿಲ್ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಆರ್ ಲದ್ಧರ್ ಅವರನ್ನು ಕಣಕ್ಕಿಳಿಸಲಾಗಿದೆ.
ವರದಿಗಳ ಪ್ರಕಾರ, ಬಿಜೆಪಿ 34 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ, ಅದರ ಮೈತ್ರಿ ಪಾಲುದಾರರು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡುತ್ತಾರೆ.
ಪಂಜಾಬ್ನಲ್ಲಿ ಫೆಬ್ರವರಿ 20 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆಯಾಗಲಿದೆ.
ಕಾಂಗ್ರೆಸ್ ಐದಾರು ದಿನಗಳ ಹಿಂದೆಯೇ 86 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ತನ್ನ 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಕಾಂಗ್ರೆಸ್ನ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ನಿಂದ ಚುನಾವಣೆ ಎದುರಿಸಲಿದ್ದಾರೆ, ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಡೇರಾ ಬಾಬಾ ನಾನಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ರಾಜ್ಯ ಸಾರಿಗೆ ಸಚಿವ ರಾಜಾ ಅಮರಿಂದರ್ ವಾರಿಂಗ್ ಅವರು ಗಿಡ್ದರ್ಬಾಹಾದಿಂದ ಸ್ಪರ್ಧಿಸಿದ್ದಾರೆ.
ಮೊಗಾ ಕ್ಷೇತ್ರದಿಂದ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಾನಸಾದಿಂದ ಪಂಜಾಬಿ ಗಾಯಕ ಸಿಧು ಮುಸ್ಸೆವಾಲಾ ಮತ್ತು ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಖಾದಿಯಾನ್ನಿಂದ ಸ್ಪರ್ಧಿಸಲಿದ್ದಾರೆ.