ಸತ್ಯ ಹೊರತರುತ್ತೇನೆ; ನಾಪತ್ತೆ ನಂತರ ವಿಡಿಯೋ ಪೋಸ್ಟ್ ಮಾಡಿದ ಪಂಜಾಬಿ ನಟ
ಚಂಡೀಗಢ, ಜನವರಿ 29: ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪಗಳು ಕೇಳಿಬರುತ್ತಿದ್ದಂತೆ ನಾಪತ್ತೆಯಾಗಿದ್ದ ಪಂಜಾಬಿ ನಟ ದೀಪ್ ಸಿಧು ಫೇಸ್ ಬುಕ್ ನಲ್ಲಿ ಗುರುವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಗಣರಾಜ್ಯೋತ್ಸವದಂದು ರೈತರು ಕೆಂಪುಕೋಟೆ ಮೇಲೆ ಬಾವುಟ ಹಾರಿಸಲು ಪ್ರಚೋದಿಸಿದ ಆರೋಪ ಸಿಧು ಮೇಲೆ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಧು, "ನನಗೆ ಸತ್ಯ ಹೊರತರಲು ಸಮಯ ಕೊಡಿ, ನಾನು ತನಿಖೆಗೆ ಹಾಜರಾಗುತ್ತೇನೆ" ಎಂದು ಕೇಳಿಕೊಂಡು ವಿಡಿಯೋ ಮಾಡಿದ್ದಾರೆ. ನನ್ನನ್ನು ಸುಮ್ಮನೆ ಟ್ರ್ಯಾಪ್ ಮಾಡಲಾಗುತ್ತಿದೆ ಎಂದು ದೂಷಿಸಿದ್ದಾರೆ. ಮುಂದೆ ಓದಿ...
ದೆಹಲಿ ಗಲಭೆ ಆರೋಪ ಕೇಳಿಬರುತ್ತಿದ್ದಂತೆ ನಾಪತ್ತೆಯಾದ ನಟ

ಎರಡು ದಿನಗಳ ಕಾಲಾವಕಾಶ ಕೇಳಿದ ಸಿಧು
"ನನ್ನ ವಿರುದ್ಧ ಬಂಧನದ ವಾರಂಟ್ ಹೊರಡಿಸಿ ನೋಟೀಸ್ ನೀಡಲಾಗಿದೆ ಎಂಬುದು ತಿಳಿದುಬಂದಿದೆ. ಆದರೆ ನಾನು ಎಲ್ಲರಿಗೂ ಮೊದಲು ಒಂದು ಸಂದೇಶ ನೀಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ತನಿಖೆಗೆ ಹಾಜರಾಗುತ್ತೇನೆ" ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಸತ್ಯವನ್ನು ಹೊರತರಲು ನನಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೇಳಿಕೊಂಡಿರುವ ಸಿಧು, ನನ್ನ ಬಗ್ಗೆ ಹರಡಿರುವ ಸುದ್ದಿ ಸುಳ್ಳು. ಈ ಮಾಹಿತಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ. ಆದ್ದರಿಂದ ನನಗೆ ಎರಡು ದಿನ ಸಮಯ ಕೊಡಿ. ನಂತರ ತನಿಖೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

"ನನ್ನ ಬಗ್ಗೆ ಹರಡಿರುವ ಸುದ್ದಿಗಳೆಲ್ಲಾ ಸುಳ್ಳು"
ತನಿಖಾ ತಂಡಗಳಿಗೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲದ ಕಾರಣ ಓಡಿಹೋಗುವ ಅವಶ್ಯಕತೆಯೂ ಇಲ್ಲ. ನನಗೆ ಭಯವೂ ಇಲ್ಲ. ನಾನು ಬಂದೇ ಬರುತ್ತೇನೆ. ಇನ್ನೆರಡು ದಿನಗಳಲ್ಲಿ ನಾನು ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇನೆ. ಆನಂತರ ಸತ್ಯದೊಂದಿಗೆ ನಿಮ್ಮ ಬಳಿ ಬರುತ್ತೇನೆ. ನನ್ನ ಬಗ್ಗೆ ಹರಡಿರುವ ಸುದ್ದಿಗಳು ಸತ್ಯಕ್ಕೆ ದೂರ ಎಂದು ಸಮರ್ಥಿಸಿಕೊಂಡಿದ್ದಾರೆ.

ರೈತ ಸಂಘಗಳಿಂದಲೂ ಸಿಧು ಮೇಲೆ ಆರೋಪ
ದೆಹಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಲು ಪ್ರಚೋಚನೆ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಸಿಧು ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ಕೆಂಪು ಕೋಟೆ ಬಳಿ ಬಾವುಟ ಹಾರಿಸುವಾಗ ಸಿಧು ಅಲ್ಲೇ ಇದ್ದರು ಎಂಬುದು ತಿಳಿದುಬಂದಿದೆ. ಅದನ್ನು ಅವರು ಕೂಡ ಒಪ್ಪಿಕೊಂಡಿದ್ದರು.
ಈ ನಡುವೆ ಸಿಧು ತಮ್ಮ ಚಳವಳಿಯ ದಿಕ್ಕು ತಪ್ಪಿಸಿದರು ಎಂದು ರೈತ ಸಂಘಗಳು ದೂರಿದ್ದವು. ಚಳವಳಿ ಗಲಭೆ ರೂಪ ಪಡೆಯಲು ಪ್ರಚೋದನೆ ನೀಡಿದ್ದರು ಎಂದೂ ಆರೋಪಿಸಿದ್ದರು.

ನಟ ನೀಡಿದ ಇನ್ನೊಂದು ಚಿತ್ರಣ
ಈ ಆರೋಪಗಳ ಕುರಿತು ವಿಡಿಯೋ ಮಾಡಿ ಹಂಚಿಕೊಂಡಿದ್ದ ಸಿಧು, "ನಾನು ಬೆಳಿಗ್ಗೆ 10.30 ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದೆ. ಆಗ ರಿಂಗ್ ರೋಡ್ ನಲ್ಲಿ ರೈತರು ದೆಹಲಿ ಕಡೆಗೆ ಹೊರಟಿರುವುದು ತಿಳಿದುಬಂತು. ನಾನು ಹಳ್ಳಿಗಳನ್ನು ಹಾದು ಮುಖ್ಯ ರಸ್ತೆಗೆ ಬಂದರೆ ಅಲ್ಲೂ ರಸ್ತೆ ಬ್ಲಾಕ್ ಆಗಿತ್ತು. ಅಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲಾಗಿತ್ತು. ಒಂದು ಟ್ರ್ಯಾಕ್ಟರ್, ಒಂದು ಕಾರನ್ನು ಏಕಕಾಲಕ್ಕೆ ಬಿಡಲಾಗುತ್ತಿತ್ತು. ನಂತರ ಕೆಂಪು ಕೋಟೆ ಬಳಿ ತಲುಪಿದ್ದೆ. ವ್ಯಕ್ತಿಯೊಬ್ಬರು ನನ್ನ ಕೈಗೆ ನಿಶಾನ್ ಸಾಹಿಬ್ ಧ್ವಜ ನೀಡಿದರು. ಅಲ್ಲಿ ಸಾವಿರಾರು ಜನರು ಸೇರಿದ್ದರು. ನಾನು ಕೆಂಪು ಕೋಟೆ ಬಿಟ್ಟು ಹೊರಬಂದೆ ಅಷ್ಟೆ. ಆಮೇಲೂ ವಾಪಸ್ ಹೋಗಿ ಅಲ್ಲಿ ಕೋಟೆಯಿಂದ ಇಳಿಯುವಂತೆ ರೈತರನ್ನು ಮನವಿ ಮಾಡಿದೆ. ಪೊಲೀಸರು ಇದಕ್ಕೆ ನನಗೆ ಧನ್ಯವಾದ ಸಲ್ಲಿಸಿದರು. ಆದರೆ ಈಗ ಚಿತ್ರಣವೇ ಬೇರೆಯಾಗಿದೆ ಎಂದು ಆರೋಪಿಸಿದ್ದಾರೆ.