• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಬೆಳಕಾದ ವಿರೂಪಾಕ್ಷಸ್ವಾಮಿ

|

ಚಾಮರಾಜನಗರ, ಫೆಬ್ರವರಿ 12: ಅದೆಷ್ಟೋ ಪೋಷಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವ, ತಿಳುವಳಿಕೆಯಿರುವ ಮಕ್ಕಳನ್ನೇ ಸಾಕಲು ಇಂದು ಹೆಣಗಾಡುತ್ತಾರೆ. ಅಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ವಿಕಲಚೇತನರಿಗಾಗಿ, ಬುದ್ಧಿಮಾಂದ್ಯ ಮಕ್ಕಳಿಗೆಂದು ಬಾಡಿಗೆ ಕಟ್ಟಡದಲ್ಲಿ, ಸ್ವಂತ ಖರ್ಚಿನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿ, ತಮ್ಮ ಮಕ್ಕಳಂತೆ ಸಲಹುತ್ತಾ, ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ, ಯಾವುದರಲ್ಲೂ ಕುಂದು ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ನೀವಂದುಕೊಳ್ಳಬಹುದು. ಇದರಲ್ಲೇನಿದೆ ವಿಶೇಷ. ದುಡ್ಡು ಕೊಟ್ಟರೆ ಇಂಥ ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ಲೆಕ್ಕವಿಲ್ಲದಷ್ಟು ಸಂಸ್ಥೆಗಳಿವೆ ಎಂದು. ಆದರೆ ಅಂತಹ ಸಂಸ್ಥೆಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಕಂತೆಗಟ್ಟಲೇ ದುಡ್ಡನ್ನು ಕೇಳುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಬೆಂಗಳೂರು ಸೇರಿದಂತೆ ಇತರೆ ಯಾವುದೇ ರಾಜ್ಯಗಳಲ್ಲಿ ಇಂಥ ವಿಶೇಷ ಮಕ್ಕಳನ್ನು ನೋಡಿಕೊಳ್ಳಬೇಕೆಂದರೆ ಕನಿಷ್ಠ 15-20 ಸಾವಿರ ರೂಪಾಯಿಗಳಿಂದ 1.50 ಸಾವಿರದವರೆಗೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿ ಬಳಿ ಮಕ್ಕಳನ್ನು ಬಿಡಲು ಹೋದರೆ "ನಿಮಗೆ ಕೈಲಾದಷ್ಟು ಕೊಡಿ,ಇಲ್ಲದಿದ್ದರೆ ಬೇಡ" ಎಂದು ವಿನಯದಿಂದಲೇ ನುಡಿಯುತ್ತಾರೆ.

ಬುದ್ಧಿಮಾಂದ್ಯ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೂತನ ಕೇಂದ್ರ

ನಿಮಗೆ ಆಶ್ಚರ್ಯವಾಗಬಹುದು. ಅದ್ಹೇಗೆ ದುಡ್ಡಿಲ್ಲದೆ ಈ ಸಂಸ್ಥೆ ನಡೆಸುತ್ತಿದ್ದಾರೆಂದು. ಆದರೆ ಹೇಳಲೇಬೇಕಾದ ಸಂಗತಿಯೆಂದರೆ ಅವರೇನೂ ಲಕ್ಷಾಧಿಪತಿಯಲ್ಲ. ಕೂಲಿ ನಾಲಿ ಮಾಡಿ, ಇರುವ ನಾಲ್ಕು ಎಕರೆ ಕೃಷಿ ಜಮೀನಿನಲ್ಲಿ ಬಂದ ಆದಾಯವನ್ನು ಬಳಸಿ ಈ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಸಂಸ್ಥೆಗೆ ಅನನ್ಯವಾದ ಸೇವೆಯನ್ನು ಮಾಡುತ್ತಾ ಬಂದಿರುವ ಅವರ ಹೆಸರು ವಿರೂಪಾಕ್ಷಸ್ವಾಮಿ. ಮಾತು, ನಡೆನುಡಿಯಲ್ಲೂ ಅಷ್ಟೇ ಸರಳ ಮತ್ತು ಪ್ರಾಮಾಣಿಕ.

ಅಂದಹಾಗೆ ಅವರು ನಡೆಸುತ್ತಿರುವ ಸಂಸ್ಥೆಯ ಹೆಸರು ಪೃಥ್ವಿ ವುಮೆನ್ ಅಂಡ್ ರೂರಲ್ ಡೆವಲಪ್ ಮೆಂಟ್ ಆರ್ಗನೈಜೇಷನ್. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿದೆ. ಸದರಿ ಪಟ್ಟಣದಲ್ಲಿ ಯಾವುದೇ ಸಮಾರಂಭಗಳಾದರೂ, ಸ್ವಾತ್ರಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಯಾವುದೇ ಕಾರ್ಯಕ್ರಮಗಳು ನಡೆದರೂ ತಮ್ಮ ಸ್ವಂತ ಮಕ್ಕಳಿಗೆ ಹೇಳುವಂತೆ ತರಬೇತಿ ಕೊಟ್ಟು, ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ. ವಿರೂಪಾಕ್ಷಸ್ವಾಮಿಗೆ ಗುಂಡ್ಲುಪೇಟೆ ಅಷ್ಟೇ ಅಲ್ಲ, ಅಕ್ಕ ಪಕ್ಕದ ಊರುಗಳಲ್ಲಿ ತುಂಬಾ ಒಳ್ಳೆಯ ಹೆಸರಿದೆ ಅಂದರೆ ಅವರ ಸಾಮಾಜಿಕ ಸೇವೆಯ ಕಾರ್ಯದ ಬಗ್ಗೆ ನೀವೇ ಊಹಿಸಿ.

ವಿಶೇಷ ಮಕ್ಕಳಿಗಾಗಿ ಸ್ಪ್ಯಾಸ್ಟಿಕ್ ಸೊಸೈಟಿಯಿಂದ 'ವಿಂಟರ್ ಕಾರ್ನಿವಲ್'

ವಿರೂಪಾಕ್ಷಸ್ವಾಮಿಯವರು ಪೃಥ್ವಿ ಸಂಸ್ಥೆ ಕಟ್ಟಲು, ಬೆಳೆಸಲು ಸಾಕಷ್ಟು ಶ್ರಮವಹಿಸಿದ್ದು, ಸಂಸ್ಥೆ ಬೆಳೆದು ಬಂದ ಬಗೆಯ ಕುರಿತ ವಿವರವಾದ ಲೇಖನ ಇಲ್ಲಿದೆ ಓದಿ..

 ಬುದ್ಧಿ ಮಾಂದ್ಯ ಮಕ್ಕಳಿಗೆ ಅವಕಾಶ

ಬುದ್ಧಿ ಮಾಂದ್ಯ ಮಕ್ಕಳಿಗೆ ಅವಕಾಶ

ವಿರೂಪಾಕ್ಷಸ್ವಾಮಿ ಅವರು 2008ನೇ ಇಸವಿಯಲ್ಲಿ ತಮ್ಮ ಸ್ವಗ್ರಾಮ ಹಳ್ಳಮಾದಹಳ್ಳಿಯಲ್ಲಿ ಪೃಥ್ವಿ ಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿ ಮೊದಲಿಗೆ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಯ್ತು. ಸ್ವಸಹಾಯ ಸಂಘಗಳನ್ನು ರಚಿಸಿ ಅವರಿಗೆ ಹಣಕಾಸಿನ ನಿರ್ವಹಣೆ, ಉಳಿತಾಯ, ಸದ್ಭಳಕೆ, ಮೊದಲಾದವುಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅರ್ಧಕ್ಕೆ ಶಾಲೆಯನ್ನು ಬಿಟ್ಟ ಮಕ್ಕಳಿಗೆ ಸಂಸ್ಥೆಗೆ ಕರೆತಂದು ಪ್ರತ್ಯೇಕವಾಗಿ, ಶೈಕ್ಷಣಿಕವಾಗಿ ಮತ್ತು ದೈಹಿಕವಾಗಿ ತರಬೇತಿಯನ್ನು ನೀಡಿ, ಶಾಲೆಗೆ ಮರಳಿ ಸೇರುವಂತೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಅಷ್ಟು ದಿನಗಳವರೆಗೆ ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗಾಗಿ ಮಾತ್ರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ವಿರೂಪಾಕ್ಷಸ್ವಾಮಿ, ಸಂಸ್ಥೆಯಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೂ ನೆಲೆ ಕಲ್ಪಿಸಲು ಆಲೋಚಿಸಿದರು. ತಡಮಾಡದೆ 2009 ನೇ ಇಸವಿಯಲ್ಲಿ 5 ಬುದ್ಧಿ ಮಾಂದ್ಯ ಮಕ್ಕಳನ್ನು ದಾಖಲಿಸಿಕೊಂಡು ಸಂಸ್ಥೆ ನಡೆಸಲು ಪ್ರಾರಂಭಿಸಿದರು. ಆದರೆ ಇಲ್ಲಿ ಮೂಲ ಸೌಕರ್ಯದ ಕೊರತೆಯ ಕಾರಣ ಹಾಗೂ ಪಟ್ಟಣ ಪ್ರದೇಶದಿಂದ ದೂರವಿದ್ದುದರಿಂದ ಈ ಸಂಸ್ಥೆಯನ್ನು 2011-12 ಸಾಲಿನಲ್ಲಿ ಗುಂಡ್ಲುಪೇಟೆ ಪಟ್ಟಣಕ್ಕೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಸಂಸ್ಥೆಯಲ್ಲಿ ಸುಮಾರು 35 ಬುದ್ದಿಮಾಂದ್ಯ ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು, ತರಬೇತಿ ಕೊಡಲು ಶಿಕ್ಷಣ ಮತ್ತು ತರಬೇತಿಯನ್ನು ಪಡೆದಿರುವ 4 ನುರಿತ ವಿಶೇಷ ಸಂಪನ್ಮೂಲ ಶಿಕ್ಷಕರಿದ್ದಾರೆ. ಇದಲ್ಲದೆ ಇಬ್ಬರು ಅಡುಗೆಯ ಸಿಬ್ಬಂದಿ, ಒರ್ವ ಕಿರಿಯ ಮಹಿಳಾ ಶುಶ್ರೂಷಕಿ, 3 ಜನ ಆಯಾಗಳು ಇದ್ದಾರೆ.

 ಪುಟ್ಟಣ್ಣ ಕಣಾಗಲ್ ಅವರ ಮೊಮ್ಮಗ ಇದ್ದಾರೆ

ಪುಟ್ಟಣ್ಣ ಕಣಾಗಲ್ ಅವರ ಮೊಮ್ಮಗ ಇದ್ದಾರೆ

ಪೃಥ್ವಿ ಸಂಸ್ಥೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಬುದ್ಧಿಮಾಂದ್ಯ ಮಕ್ಕಳಿದ್ದಾರೆ. ಮುಖ್ಯವಾದ ಸಂಗತಿಯೆಂದರೆ ಪುಟ್ಟಣ್ಣ ಕಣಾಗಲ್ ಅವರ ಮೊಮ್ಮಗ ಕೂಡ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ. 2015 ನೇ ಇಸವಿಯಲ್ಲಿ ಅವರು ಈ ಸಂಸ್ಥೆಗೆ ಬಂದು ದಾಖಲಾಗಿದ್ದಾರೆ. "ಬಹಳಷ್ಟು ಜನ ಪೋಷಕರು ಮನೆಯಲ್ಲಿನ ಅರ್ಥಿಕ ಸಮಸ್ಯೆಯಿಂದಾಗಿ ತಮ್ಮ ಮಕ್ಕಳನ್ನು ಇಲ್ಲೇ ಬಿಟ್ಟು ಹೋಗುತ್ತಾರೆ. ತಮ್ಮನ್ನು ನಂಬಿ ಬಂದವರಿಗೆ ಮನೆಯ ನೆನಪು ಬರದಂತೆ, ಒಳ್ಳೆಯ ಸೌಲಭ್ಯ ಒದಗಿಸಿ ಅತ್ಯಂತ ಜಾಗ್ರತೆಯಿಂದ ನೋಡಿಕೊಳ್ಳುವುದು ಸವಾಲೇ ಸರಿ" ಎಂದು ಹೇಳುತ್ತಾರೆ ವಿರೂಪಾಕ್ಷಸ್ವಾಮಿ. ಮೊದಲೇ ಹೇಳಿದಂತೆ ವಿಶೇಷ ಮಕ್ಕಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುವ ವಿರೂಪಾಕ್ಷಸ್ವಾಮಿ ಪ್ರತಿಯೊಬ್ಬರ ಹುಟ್ಟುಹಬ್ಬದಂದು ಕೇಕ್ ಕಟ್ ಮಾಡಿ, ಸಿಹಿ ಹಂಚುತ್ತಾರೆ. ಇವರ ಆಪ್ತರು,ಕೆಲವು ಸಂಘ ಸಂಸ್ಥೆಗಳು ಮಕ್ಕಳಿಗೆ ಅನುಕೂಲವಾಗುವಂತೆ ವಸ್ತುಗಳು, ಬಟ್ಟೆಗಳು ಗೌರವಧನ ನೀಡಿ, ವಿರೂಪಾಕ್ಷಸ್ವಾಮಿಯವರ ಕಾರ್ಯವನ್ನು ಶ್ಲಾಘಿಸುತ್ತಾರೆ.

ಗುಂಡ್ಲುಪೇಟೆ ಪೃಥ್ವಿ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಅಗ್ನಿ ಅವಘಡ

 ಬಾಡಿಗೆಯಿಂದ ಸ್ವಂತ ಕಟ್ಟಡಕ್ಕೆ

ಬಾಡಿಗೆಯಿಂದ ಸ್ವಂತ ಕಟ್ಟಡಕ್ಕೆ

2014ನೇ ಇಸವಿಯಲ್ಲಿ ವಯೋವೃದ್ಧರಿಗೂ ಸಂಸ್ಥೆಯಲ್ಲಿ ಆಶ್ರಯ ಕಲ್ಪಿಸಲಾಯಿತು. ಅವರುಗಳಿಗೆ ಆಸಕ್ತಿ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ವಿವಿಧ ಚಟುವಟಿಕೆ, ಆಹಾರ, ಹವ್ಯಾಸಗಳೊಂದಿಗೆ ಜೀವನ ನಿರ್ವಹಣೆ ನಡೆಸಲು ಸಂಸ್ಥೆ ಶ್ರಮಿಸುತ್ತಾ ಹೋಯಿತು. ಆದರೆ ಕಾಲಕ್ರಮೇಣ ಕಾರಣಾಂತರಗಳಿಂದ ವಯೋವೃದ್ಧರನ್ನು ನೋಡಿಕೊಳ್ಳಲು ಸಾಧ್ಯವಾಗದೆ ಅವರನ್ನು ಸ್ವಸ್ಥಾನಕ್ಕೆ ಕಳುಹಿಸಲಾಯಿತು. ನಂತರ ಬುದ್ಧಿ ಮಾಂದ್ಯ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅವರಿಗೋಸ್ಕರ ವಸತಿಯುತ ಪೃಥ್ವಿ ಬುದ್ಧಿ ಮಾಂದ್ಯ ಸಂಸ್ಥೆಯನ್ನು ಪ್ರಾರಂಭಿಸಲು ಮುಂದಾದರು. ಬಾಡಿಗೆ ಕಟ್ಟಡದಲ್ಲಿ ಪೂರ್ಣ ಪ್ರಮಾಣದ ಸೌಲಭ್ಯಗಳು ಇಲ್ಲದೇ ಇರುವ ಪ್ರಯುಕ್ತ ಸರ್ಕಾರ ನೀಡಿರುವ ಖಾಲಿ ನಿವೇಶನದಲ್ಲಿ ಪೂರ್ಣ ಸೌಲಭ್ಯಗಳುಳ್ಳ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ನೀಲಿ ನಕ್ಷೆಯನ್ನು ತಯಾರಿಸಿ ಕಾರ್ಯ ಸಾಧ್ಯವಾಗುವ ಯೋಜನೆಯನ್ನು ರೂಪಿಸಿದರು. ಬುದ್ಧಿ ಮಾಂದ್ಯ ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ಪೂರಕವಾಗುವಂತೆ ಶಿಕ್ಷಣ ಮತ್ತು ತರಬೇತಿಯನ್ನು ಮುಂದಿನ ದಿನಗಳಲ್ಲಿ ನೀಡಲು ಒಂದು ಸಮಗ್ರವಾದ ಯೊಜನೆಯನ್ನು ರೂಪಿಸುತ್ತಿದ್ದಾರೆ.

 ವಿರೂಪಾಕ್ಷಸ್ವಾಮಿಯ ಆತ್ಮಬಲ ಮೆಚ್ಚಲೇಬೇಕು

ವಿರೂಪಾಕ್ಷಸ್ವಾಮಿಯ ಆತ್ಮಬಲ ಮೆಚ್ಚಲೇಬೇಕು

ವಿರೂಪಾಕ್ಷಸ್ವಾಮಿಯವರು ಬಹಳ ಆಸ್ಥೆಯಿಂದ ಈ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾರಿಂದಲೂ ಧನ ಸಹಾಯವಾಗದಿದ್ದಾಗ ಎಷ್ಟೋ ಬಾರಿ ಇವರ ಸ್ವಂತ ಹಣವನ್ನು ಉಪಯೋಗಿಸಿದ್ದಾರೆ.ಅಂದರೆ ಹೆಂಡತಿಯ ಚಿನ್ನ ಅಡವಿಟ್ಟು, ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಇವರ ಕಾರ್ಯ ಇತರರಿಗೂ ಶ್ಲಾಘನೀಯ. ತಾವು ಚೆನ್ನಾಗಿರಬೇಕು.ಇತರರು ಚೆನ್ನಾಗಿರಬೇಕು ಎಂಬ ಮನೋಭಾವನೆಯಿಂದ ಸಂಸ್ಥೆ ಆರಂಭಿಸಿದ ವಿರೂಪಾಕ್ಷಸ್ವಾಮಿ ಈಗ ಚಾಮರಾಜನಗರದ ಸುತ್ತಮುತ್ತಲಿನ ಜನರಿಗೆ ಚಿರಪರಿಚಿತ. ನಿಮಗೊಂದು ವಿಷಯ ಇಲ್ಲಿ ಹೇಳಲೇಬೇಕು. ಆಕಸ್ಮಿಕವೆಂಬಂತೆ ಸಂಸ್ಥೆಗೆ ಎರಡು ಬಾರಿ ಬೆಂಕಿ ಬಿದ್ದಿದೆ. ಇಂತಹ ಸಂದರ್ಭದಲ್ಲೂ ಅವರು ಎದೆಗುಂದದೆ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಿದ್ದಾರೆಂದರೆ ಅವರ ಆತ್ಮಬಲ ಮೆಚ್ಚುವಂಥದ್ದೇ. ಇದುವರೆಗೆ ಸ್ಥಳೀಯ ದಾನಿಗಳು ಹಾಗೂ ಇತರೆ ಸಂಘ ಸಂಸ್ಥೆಗಳು ನೀಡುವ ಅಲ್ಪ ಸಹಾಯಧನ ಮತ್ತು ವಿರೂಪಾಕ್ಷಸ್ವಾಮಿಯ ವೈಯಕ್ತಿಕ ದುಡಿಮೆಯ ಸಹಾಯದಿಂದ ಸಂಸ್ಥೆ ನಡೆಯುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು.ಈಗ ಸಂಸ್ಥೆಯ ಸ್ವಂತ ಕಟ್ಟಡದ ಕೆಲಸ ಶುರುವಾಗಿದ್ದು, ಸಂಸ್ಥೆಯ ಕಟ್ಟಡ ನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿಗಳ ಅವಶ್ಯಕತೆಯಿದೆ. ವಿರೂಪಾಕ್ಷಸ್ವಾಮಿಯವರ ಕಠಿಣ ಶ್ರಮ ನೋಡಿ ಮತ್ತಷ್ಟು ದಾನಿಗಳು ಸಹಾಯ ಮಾಡಲಿ ಎಂದು ಆಶಿಸೋಣ.

English summary
Virupakshaswamy is running an organization for mental retardation children in Gundlupet. He is not getting much money from children's parents. Looking at the organization in its own income. Here is a detailed description of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more