ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ
ಚಾಮರಾಜನಗರ, ಜನವರಿ 02: ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ರಾತ್ರಿ ಚಿರತೆಗಳೆರಡು ರಸ್ತೆ ಮಧ್ಯೆ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಗಾಬರಿಗೊಂಡು ಕಾರು ನಿಲ್ಲಿಸಿದ್ದಾನೆ. ನಂತರ ಚಿರತೆಗಳು ಮಿಲನ ನಡೆಸುತ್ತಿರುವುದನ್ನು ನೋಡಿ ಮುಂದೆ ಸಾಗಲು ಪರದಾಟ ನಡೆಸಿದ್ದಾನೆ. ಬಳಿಕ ತನ್ನ ಮೊಬೈಲ್ನಲ್ಲಿ ಚಿರತೆಗಳ ಈ ದೃಶ್ಯವನ್ನು ಸೆರೆ ಹಿಡಿದಿದ್ದಾನೆ. ನಂತರ ಚಿರತೆಗಳು ವಾಹನ ನೋಡಿ ಓಡಿ ಹೋಗಿವೆ.
ಮೈಸೂರಿನ ಕೋಳಿ ಫಾರಂನಲ್ಲಿ ಮರಿ ಚಿರತೆ ಪ್ರತ್ಯಕ್ಷ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚಿರತೆಗಳೆರಡರ ಅಪರೂಪದ ದೃಶ್ಯ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲೇ ಹಿಂದೊಮ್ಮೆ ಚಿರತೆಯೊಂದು ಕಾಣಿಸಿಕೊಂಡಿತ್ತು. ನಂತರ ಅರಣ್ಯ ಇಲಾಖೆ ಆ ಜಾಗದಲ್ಲಿ ಬೋನುಗಳನ್ನು ಇಟ್ಟಿತ್ತು. ಆದರೆ ಚಿರತೆ ಸೆರೆಯಾಗಿರಲಿಲ್ಲ. ಎಣ್ಣೆ ಹೊಳೆ ಸಮೀಪ ಕೆರೆಗಳಿದ್ದು, ಪೊದೆ, ಗುಡ್ಡಗಳೂ ಇರುವುದರಿಂದ ಚಿರತೆಗಳು ವಾಸಿಸಲು ಸೂಕ್ತವಾಗಿದೆ. ಹೀಗಾಗಿ ಆಗಾಗ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುತ್ತವೆ.