ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಮಹದೇಶ್ವರ ಬೆಟ್ಟದಲ್ಲಿ ನಿಲ್ಲದ ಅರಣ್ಯ ಅಪರಾಧ: ಬೆಚ್ಚಿಬೀಳಿಸಿದ ಅಂಕಿಅಂಶ

By ಚಾಮರಾಜನಗ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 12: ಇಡೀ ದೇಶದಲ್ಲಿ ಕೊರೊನಾ ಸೋಂಕು ಎಂಬ ಮಹಾಮಾರಿಯ ದೆಸೆಯಿಂದಾಗಿ ಲಾಕ್‌ಡೌನ್‌ ಘೊಷಣೆ ಮಾಡಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಸಾವಿರಾರು ಕಾರ್ಖಾನೆಗಳೇ ಮುಚ್ಚಿದವು. ಲಕ್ಷಾಂತರ ಕೆಲಸಗಾರರು ಉದ್ಯೋಗವನ್ನೂ ಕಳೆದುಕೊಂಡರು.

ಆದರೆ ಕ್ರಿಮಿನಲ್‌ಗಳು ಮಾತ್ರ ಏನಾದರೆ ನಮಗೇನು ಎಂದು ಹೇಳಿಕೊಂಡು ತಮ್ಮ ಉದ್ಯೋಗವನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿಯೂ ಮಲೆಮಹದೇಶ್ವರ ವನ್ಯಧಾಮದಲ್ಲಿ ಕಳ್ಳರು ತಮ್ಮ ವೃತ್ತಿಯನ್ನು ಮುಂದುವರೆಸಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಅರಣ್ಯ ಉತ್ಪನ್ನಗಳಲ್ಲೇ ಅತ್ಯಂತ ಬೆಲೆಬಾಳುವ ಶ್ರೀಗಂಧಕ್ಕೆ ಕಳ್ಳರು ಆಕರ್ಷಿತರಾಗಿದ್ದು, ಮಲೆಮಹದೇಶ್ವರ ವಿಭಾಗದಲ್ಲಿ ಕಳೆದ ಜೂನ್‌ನಿಂದ ಈ ವರ್ಷದ ಜುಲೈ 10 ರವರೆಗೆ ಶ್ರೀಗಂಧ ಕಳ್ಳತನದ ಆರು ಪ್ರಕರಣಗಳು ದಾಖಲಾಗಿದ್ದು, 15ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

Chamarajanagar: Theft Continues At Male Mahadeshwara Wildlife Sanctuary During Lockdown

ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಏಳು ವನ್ಯಜೀವಿ ವಲಯಗಳ ಪೈಕಿ ಕೊಳ್ಳೇಗಾಲ ಬಫರ್ ವಲಯದಲ್ಲಿ ಮೂರು ಪ್ರಕರಣ, ಪಿ.ಜಿ. ಪಾಳ್ಯ ವಲಯದಲ್ಲಿ ಎರಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಒಂದು ಪ್ರಕರಣ ವರದಿಯಾಗಿವೆ.

ಬಂಧಿತರಲ್ಲಿ ಸ್ಥಳೀಯರ ಜೊತೆಗೆ ನೆರೆಯ ತಮಿಳುನಾಡಿನವರೂ ಇದ್ದಾರೆ. ಮೂವರು ಮಹಿಳಾ ಆರೋಪಿಗಳೂ ಇರುವುದು ಅಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿದೆ. ಶ್ರೀಗಂಧ ಕಳ್ಳತನ ಮಾಡಿ, ಮಾರಾಟ ಮಾಡುವ ಮಧ್ಯವರ್ತಿಗಳ ದೊಡ್ಡ ಜಾಲವೊಂದು ಗಡಿ ಜಿಲ್ಲೆ ಹಾಗೂ ಸುತ್ತಮುತ್ತ ಸಕ್ರಿಯವಾಗಿರುವುದು ಈ ಪ್ರಕರಣಗಳಿಂದ ಸ್ಪಷ್ಟವಾಗಿದೆ.

ದಾಖಲಾಗಿರುವ ಪ್ರಕರಣಗಳಲ್ಲಿ ಒಂದಕ್ಕೊಂದು ಸಂಬಂಧವಿದೆಯೇ, ಆರೋಪಿಗಳ ನಡುವೆ ಸಂಪರ್ಕವಿದೆಯೇ ಎನ್ನುವ ನಿಟ್ಟಿನಲ್ಲೂ ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಒಂದೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅದನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಇತ್ತೀಚೆಗೆ ಅಂದರೆ ಏಪ್ರಿಲ್‌ 22ರಂದು ಕೊಳ್ಳೇಗಾಲದ ಭರಚುಕ್ಕಿ ಬಳಿ ದಾಳಿ ನಡೆಸಿ 24 ಕೆ.ಜಿ ಗಂಧವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರೆಲ್ಲರೂ ತಮಿಳುನಾಡಿನವರಾಗಿದ್ದು, ಮೂರು ಮಹಿಳೆಯರು ಇದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗಂಧದ ಕಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಇಬ್ಬರನ್ನು ಬಂಧಿಸಲಾಗಿತ್ತು.

ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ 16 ಕೆ.ಜಿ ಗಂಧ ಹಾಗೂ ನಾಲ್ವರನ್ನು ಬಂಧಿಸಲಾಗಿತ್ತು. ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ನಾಮದಳ್ಳಿ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಮೂಲದ ವ್ಯಕ್ತಿಗಳು ಗಂಧದ ಮರ ಕಡಿಯುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ತಿಳಿಯುತ್ತಿದ್ದಂತೆ ಆರೋಪಿಗಳು ನಾಲ್ಕು ಕೆಜಿ ಗಂಧವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳೀಯರೇ ಮದ್ಯವರ್ತಿಗಳು
"ಎರಡು ಪ್ರಕರಣಗಳನ್ನು ಬಿಟ್ಟು ಉಳಿದ ಪ್ರಕರಣಗಳಲ್ಲಿ ಗಂಧದ ಮಾರಾಟಕ್ಕೆ ಸ್ಥಳೀಯರೇ ಮಧ್ಯವರ್ತಿಗಳಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಕೊಳ್ಳೇಗಾಲ ಹಾಗೂ ಹನೂರು ಭಾಗದ ಕೆಲವರು ಕಳ್ಳರಿಂದ ಶ್ರೀಗಂಧ ಖರೀದಿಸಿ ಬೇರೆ ಕಡೆಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿಯೂ ತನಿಖೆಯಿಂದ ಬಯಲಾಗಿದೆ. ಮಧ್ಯವರ್ತಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು,'' ಎಂದು ಅಧಿಕಾರಿಗಳು ಹೇಳುತ್ತಾರೆ.

"ಕೊಳ್ಳೇಗಾಲದಲ್ಲಿ ನಡೆದ ಪ್ರಕರಣದ ಎಂಟು ಆರೋಪಿಗಳ ಪೈಕಿ ಇಬ್ಬರಿಗೆ ಕೋವಿಡ್ ದೃಢಪಟ್ಟಿದ್ದರಿಂದ ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಮಧ್ಯವರ್ತಿಗಳ ವಿಳಾಸ ಹಾಗೂ ಅವರ ವ್ಯವಹಾರದ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ," ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ತಿಳಿಸಿದರು.

Recommended Video

ರನ್ ಔಟ್ ಮಾಡಿದ್ದೇ ಇಂಗ್ಲೆಂಡ್ ಸೋಲೋಕೇ ಕಾರಣ!! | Oneindia Kannada

English summary
Chamarajanagar: Theft continued at Male mahadeshwara Wildlife Sanctuary during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X