ನಾ ಖಾವೂಂಗಾ, ನಾ ಖಾನೇದೂಂಗ ಎನ್ನುವುದು ಮೋದಿಯ ಬೂಟಾಟಿಕೆಯಷ್ಟೇ: ಸಿದ್ದರಾಮಯ್ಯ
ಚಾಮರಾಜನಗರ, ಏಪ್ರಿಲ್ 19 : ಕೇಂದ್ರ ಸರ್ಕಾರ ದಿನೇ ದಿನೇ ಬೆಲೆ ಏರಿಕೆ ಮಾಡುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನಲೆ ಬೆಲೆ ಏರಿಕೆ ಹಾಗೂ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣದ ವಿರುದ್ದ ಮಂಗಳವಾರ ಚಾಮರಾಜನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನಾ ಸಭೆಯನ್ನ ಹಮ್ಮಿಕೊಂಡಿತ್ತು. ಈ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಭಾಗಿಯಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಲೀಟರ್‌ಗೆ 100 ಗಡಿ ದಾಟಿ ಆಗಿದೆ. ಇನ್ನು ಡಿಸೇಲ್ ಕೂಡ 100 ಸಮೀಪ ಇದೆ. ಇತ್ತ ಅಡುಗೆ ಅನಿಲ ಕೂಡ ಸಾವಿರ ರೂ ತಲುಪಿದ್ದು, ಈ ಸರ್ಕಾರ ಜನ ಸಾಮಾನ್ಯರ ಹೊಟ್ಟೆ ಒಡೆಯುತ್ತಿದೆ ಅಂತ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ದ ಕಿಡಿಕಾರಿದ್ದಾರೆ.
ಇದಿಷ್ಟೇ ಅಲ್ಲದೆ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 40 ಪರ್ಸೆಂಟ್ ಕಮಿಷನ್ ಹಗರಣದ ಕುರಿತಾಗಿಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಠ, ಮಂದಿರಗಳನ್ನು ಬಿಡದೇ ನಿರ್ಲಜ್ಜವಾಗಿ 40% ರಷ್ಟು ಕಮಿಷನ್ ಬಿಜೆಪಿಯ ಹಲವು ಶಾಸಕರು ಕೊಳ್ಳೆ ಹೊಡೆಯುತ್ತಿದ್ದಾರೆ. ಇದಲ್ಲದೆ ಕಮಿಷನ್‌ಗಾಗಿ ಅಮಾಯಕ ಗುತ್ತಿಗೆದಾರನ ಜೀವವನ್ನ ಇದೇ ಸರ್ಕಾರದ ಪಡೆದುಕೊಂಡಿದೆ ಅಂತ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಒಂಭತ್ತು ತಿಂಗಳಾದರೂ ಕ್ರಮವಿಲ್ಲವೇಕೆ?
07/06/2021 ರಲ್ಲಿ ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕದ ಯಾವುದೇ ಸರ್ಕಾರಿ ಕಾಮಗಾರಿಗೆ ನಾವು 40% ಕಮಿಷನ್ ನೀಡಬೇಕು, ಈ 40% ಕಮಿಷನ್ ಕೊಟ್ಟು ನಮ್ಮಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ. ಕಮಿಷನ್ ಗಾಗಿ ಈ ಸರ್ಕಾರ ನಮಗೆ ಕಿರುಕುಳ, ಹಿಂಸೆ ಕೊಡುತ್ತಿದೆ, ದಯಮಾಡಿ ಇದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ. ಕೆಂಪಣ್ಣನವರು ಬರೆದ ಈ ಪತ್ರ ನನ್ನ ಬಳಿಯೂ ಇದೆ, ಎಲ್ಲಾ ಪತ್ರಿಕೆಗಳಲ್ಲಿ ವರದಿ ಕೂಡ ಆಗಿದೆ. ಈ ರೀತಿ ಗುತ್ತಿಗೆದಾರರ ಸಂಘದವರು ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡಿ ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದರು.

ನರೇಂದ್ರ ಮೋದಿ ಅವರು ತಮ್ಮನ್ನು ಚೌಕಿದಾರ ಎಂದು ಕರೆದುಕೊಂಡಿದ್ದರು, ನಾ ಖಾವೂಂಗಾ, ನಾ ಖಾನೇದೂಂಗ ಎಂದಿದ್ದರು. ಈಗ ಒಂಭತ್ತು ತಿಂಗಳು ಆಗಿದೆ, ಆದರೂ ಪತ್ರದ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ. ನರೇಂದ್ರ ಮೋದಿ ಅವರ ಬೂಟಾಟಿಕೆ, ನಾಟಕ ಜನರಿಗೆ ಅರ್ಥವಾಗ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಅನೇಕ ಜನ ಪ್ರಧಾನಿಗಳು ಬಂದು ಹೋಗಿದ್ದಾರೆ, ಆದರೆ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಇಲ್ಲ. ನರೇಂದ್ರ ಮೋದಿ ಅವರು ಕೊಟ್ಟ ಯಾವುದಾದರೂ ಒಂದು ಭರವಸೆಯನ್ನು ಈಡೇರಿಸಿದ್ದಿದ್ದರೆ ತೋರಿಸಲಿ ನೋಡೋಣ.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕುರ್ಚಿಯಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ತಾವೆಲ್ಲ ಮನೆ ಮನೆಗೆ ಹೋಗಿ ಈ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಬೇಕು, ಆ ಮೂಲಕ ರಾಜ್ಯವನ್ನು ಉಳಿಸಬೇಕು.
ಬೆಲೆ ಏರಿಕೆ ಮತ್ತು 40% ಕಮಿಷನ್ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಹಿಳಾ ಘಟಕದ ಆಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವ ಪುಟ್ಟರಂಗ ಶೆಟ್ಟಿ, ಶಾಸಕರಾದ ನರೇಂದ್ರ, ಡಾ. ತಿಮ್ಮಯ್ಯ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಮಾಜಿ ಸಂಸದ ಶಿವಣ್ಣ ಭಾಗಿಯಾಗಿದ್ದರು.