ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡಾನೆ ಹಾವಳಿ ತಡೆಗೆ ಬಿಆರ್‌ಟಿಯಲ್ಲಿ ರೈಲ್ವೆ ಕಂಬಿ ಬೇಲಿ ನಿರ್ಮಾಣ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 29: ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅರಣ್ಯದಿಂದ ನೇರವಾಗಿ ನಾಡಿಗೆ ಬರುತ್ತಿರುವ ಕಾಡಾನೆಗಳು ಎಲ್ಲೆಂದರಲ್ಲಿ ನಿರ್ಬಯವಾಗಿ ಓಡಾಡುತ್ತಿರುವುದರಿಂದ ಈ ಭಾಗದ ಅದರಲ್ಲೂ ಕಾಡಂಚಿನಲ್ಲಿ ಜೀವನ ಸಾಗಿಸುತ್ತಿರುವ ಜನರು ಭಯಭೀತರಾಗಿದ್ದು, ಕಾಡಾನೆಗಳು ನಾಡಿಗೆ ಬರದಂತೆ ತಡೆಗಟ್ಟಬೇಕೆಂಬ ಒತ್ತಾಯಗಳು ಕೇಳಿಬರುತ್ತಲೇ ಇದ್ದವು.

ಈ ನಡುವೆ ಬಿಳಿಗಿರಿರಂಗನಬೆಟ್ಟದಿಂದ ಕಾಡಾನೆಗಳು ನಾಡಿಗೆ ಬರದಂತೆ ತಡೆಗಟ್ಟುವ ಸಲುವಾಗಿ ಹೊಸ ಕ್ರಮಗಳಿಗೆ ಅರಣ್ಯ ಇಲಾಖೆ ಮುಂದಾಗಿದ್ದು, ಈ ಭಾಗದ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಯಿಂದ ಬೇಲಿ ನಿರ್ಮಾಣಕ್ಕೆ ಮುಂದಾಗಿದೆ. ಇದು ಈ ಭಾಗದ ಕಾಡಂಚಿನ ಜನರಲ್ಲಿ ತುಸು ನೆಮ್ಮದಿಯನ್ನು ತಂದಿದೆ. ಕೆಲ ದಿನಗಳ ಹಿಂದೆ ಈ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿತ್ತಲ್ಲದೆ, ಜತೆಗಿದ್ದ ಪುತ್ರನನ್ನು ಗಂಭೀರವಾಗಿ ಗಾಯಗೊಳಿಸಿತ್ತು.

ಕಾಡಾನೆ ಕಾಲಿನ ತುಳಿತಕ್ಕೆ 45 ವರ್ಷದ ಅರಣ್ಯ ಅಧಿಕಾರಿ ಸಾವು ಕಾಡಾನೆ ಕಾಲಿನ ತುಳಿತಕ್ಕೆ 45 ವರ್ಷದ ಅರಣ್ಯ ಅಧಿಕಾರಿ ಸಾವು

ಮತ್ತೊಂದೆಡೆ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೂ ನುಗ್ಗಿದ ಕಾಡಾನೆ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ವಸತಿ ಶಾಲೆಯ ತಂತಿ ಬೇಲಿಯನ್ನು ಕಿತ್ತು ಒಳನುಗ್ಗಿದ ಕಾಡಾನೆ ಎಲ್ಲೆಂದರಲ್ಲಿ ಓಡಾಡಿತ್ತು. ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಯಭೀತರಾಗಿದ್ದರು. ಹೀಗಾಗಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಏರ್ ಗನ್, ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ಮಾಡಿ ಕಾಡಾನೆಯನ್ನು ಶಾಲೆಯಿಂದ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕಾಡಿಗೆ ಅಟ್ಟಲಾಗಿತ್ತು.

ಕಾಡಾನೆ ಅರಣ್ಯ ದಾಟದಂತೆ ರೋಪ್ ಬ್ಯಾರಿಯರ್ ಅಳವಡಿಕೆ ಕಾಡಾನೆ ಅರಣ್ಯ ದಾಟದಂತೆ ರೋಪ್ ಬ್ಯಾರಿಯರ್ ಅಳವಡಿಕೆ

ಸಾಕಷ್ಟು ಮೃತಪಟ್ಟ ಉದಾಹರಣೆ

ಸಾಕಷ್ಟು ಮೃತಪಟ್ಟ ಉದಾಹರಣೆ

ಈ ಘಟನೆ ಬಳಿಕ ಈ ವ್ಯಾಪ್ತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನವರು ಕಾಡಂಚಿನಲ್ಲಿ ವಾಸಿಸುತ್ತಿದ್ದು, ಕಾಡಿನ ಮೂಲಕವೇ ಹಾದು ಹೋಗಬೇಕಾಗಿದೆ. ಹೀಗಾಗಿ ಕಾಡಾನೆಗಳ ದಾಳಿಗೆ ಬಹುಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇದುವರೆಗೆ ಬಹಳಷ್ಟು ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ಕಾಡಿನಿಂದ ನಾಡಿಗೆ ಬರಬಹುದಾದ ಅರಣ್ಯ ಪ್ರದೇಶದ ಅಂಚಿನಲ್ಲಿ ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ ಮಾಡಲು ಕಳೆದ ಆರು ತಿಂಗಳ ಹಿಂದೆಯೇ ತೀರ್ಮಾನ ಕೈಗೊಂಡು ಕಾಮಗಾರಿ ಆರಂಭಿಸಿತ್ತು.

ರೈಲ್ವೆ ಕಂಬಿಯ ತಡೆ ಬೇಲಿ ಕೊಂಚ ನೆಮ್ಮದಿ

ರೈಲ್ವೆ ಕಂಬಿಯ ತಡೆ ಬೇಲಿ ಕೊಂಚ ನೆಮ್ಮದಿ

ಈಗಾಗಲೇ ಬಂಡೀಪುರ, ನಾಗರಹೊಳೆ ಉದ್ಯಾನದಲ್ಲಿ ರೈಲ್ವೆ ಕಂಬಿಗಳ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ರೈಲ್ವೆ ಕಂಬಿಗಳ ಕೊರತೆಯಿದ್ದು ಅದರ ಬದಲಿಗೆ ರೋಪ್ ಬ್ಯಾರಿಯರ್ ನಿರ್ಮಿಸಲು ಮುಂದಾಗಿದ್ದು, ಸದ್ಯ ನಾಗರಹೊಳೆ ಉದ್ಯಾನದಲ್ಲಿ 4.5ಕಿ.ಮೀ. ನಷ್ಟು ರೋಪ್ ಬ್ಯಾರಿಯರ್ ಬೇಲಿಯನ್ನು ಅಳವಡಿಸಲಾಗಿದೆ. ಆದರೆ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ಕಂಬಿಯ ತಡೆ ಬೇಲಿ ನಿರ್ಮಾಣ ಮಾಡಲಾಗುತ್ತಿದೆ.

ಈ ವ್ಯಾಪ್ತಿಯ ಪ್ರದೇಶದ ಜನರು ಮೊದಲಿಗೆ ಕಾಡಾನೆಗಳು ನಾಡಿಗೆ ಬರದಂತೆ ಮಾಡಿ, ಅದಕ್ಕಾಗಿ ಏನು ಕ್ರಮ ಕೈಗೊಂಡರೂ ಅದನ್ನು ಸ್ವಾಗತಿಸುವ ಮಟ್ಟಿಗೆ ಬಂದು ತಲುಪಿದ್ದಾರೆ. ಹೀಗಾಗಿ ರೈಲ್ವೆ ಕಂಬಿಯ ಬೇಲಿಯನ್ನು ನಿರ್ಮಾಣ ಮಾಡುತ್ತಿರುವುದರಿಂದ ಕೊಂಚ ಮಟ್ಟಿಗೆ ಕಾಡಂಚಿನ ಜನರು ನೆಮ್ಮದಿಯುಸಿರು ಬಿಡುವಂತಾಗಿದೆ.

ಕಾಡಾನೆ ದಾಳಿ ನಿಯಂತ್ರಣ

ಕಾಡಾನೆ ದಾಳಿ ನಿಯಂತ್ರಣ

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ ಟಿ) ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವನ್ಯಜೀವಿ ವಲಯದ ಕೆ.ಗುಡಿ ವಿಭಾಗದ ಬೆಲ್ಲತ್ತ ಬೀಟ್ ನಲ್ಲಿ 2.25 ಕಿ.ಮೀ ಉದ್ದದ ರೈಲ್ವೆ ಕಂಬಿ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಬೆಲ್ಲತ್ತ ಅಣೆಕಟ್ಟಿನಿಂದ ಮಗಲಿಮುಂಟಿ ಕಾಲು ದಾರಿವರೆಗೆ 1.20 ಕಿ.ಮೀ ಹಾಗೂ ಮಗಲಿಮುಂಟಿ ಕಾಲುದಾರಿಯಿಂದ ಸೋಲಾರ್ ಶೆಡ್ ವರೆಗೆ 1.25 ಕಿಮೀ ಉದ್ದಕ್ಕೆ ರೈಲ್ವೆ ಕಂಬಿಯ ತಡೆ ಬೇಲಿ ನಿರ್ಮಿಸಲಾಗಿದೆ.

ಈಗಾಗಲೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ವನ್ಯಧಾಮಗಳಲ್ಲಿ ಈಗಾಗಲೇ ರೈಲ್ವೆ ಕಂಬಿ ತಡೆ ಬೇಲಿಗಳನ್ನು ನಿರ್ಮಿಸಲಾಗಿದೆ. ಪರಿಣಾಮ ಕಾಡಾನೆಗಳು ಅರಣ್ಯ ದಾಟಿ ಬಂದು ರೈತರ ಜಮೀನಿಗೆ ನುಗ್ಗುವುದು ಮತ್ತು ಜನರ ಮೇಲೆ ದಾಳಿ ಮಾಡುವುದು ಕಡಿಮೆಯಾಗಿದೆ.

ಅಣೆಕಟ್ಟು ಇರುವುದರಿಂದ ಆನೆಗಳ ಓಡಾಟ

ಅಣೆಕಟ್ಟು ಇರುವುದರಿಂದ ಆನೆಗಳ ಓಡಾಟ

ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದುವರೆಗೆ ರೈಲ್ವೆ ಕಂಬಿ ಬೇಲಿಯ ಪ್ರಯೋಗ ನಡೆದಿರಲಿಲ್ಲ. ಕಂದಕ, ಸೌರ ಬೇಲಿ, ಕಾಂಕ್ರಿಟ್ ತಡೆ ಬೇಲಿಗಳನ್ನು ನಿರ್ಮಿಸಿ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದರಿಂದ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಾಗಿಯೇ ಈ ಹಿಂದೆ ಸೌರ ಬೇಲಿಯಿದ್ದ ಸ್ಥಳದಲ್ಲಿಯೇ ರೈಲ್ವೆ ಕಂಬಿಗಳ ಬೇಲಿಯನ್ನು ನಿರ್ಮಿಸಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಡಾ.ಜಿ.ಸಂತೋಷ್ ಕುಮಾರ್ ಅವರು, ಬೆಲ್ಲತ್ತ ಬೀಟ್ ನಲ್ಲಿ ಅಣೆಕಟ್ಟು ಇರುವುದರಿಂದ ಆನೆಗಳ ಓಡಾಟ ಅಲ್ಲಿ ಹೆಚ್ಚಾಗಿದೆ. ನೀರು ಕುಡಿಯಲು ಬರುವ ಕಾಡಾನೆಗಳು ಸ್ಥಳೀಯ ರೈತರ ಜಮೀನುಗಳಿಗೂ ದಾಳಿ ಮಾಡುತ್ತಿವೆ. ಇದರಿಂದಾಗಿ ರೈತರು ಹಾಗೂ ಅರಣ್ಯ ಇಲಾಖೆಯ ನಡುವೆ ಸಂಘರ್ಷ ನಡೆಯುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಆರು ತಿಂಗಳ ಹಿಂದೆ ರೈಲು ಕಂಬಿ ಬೇಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸದ್ಯ 2.10 ಮೀಟರ್ ಎತ್ತರದ ಸದೃಢವಾದ ಬೇಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಕಾಡಾನೆಗಳ ಭಯದಲ್ಲಿ ಜೀವನ ಸಾಗಿಸುತ್ತಿರುವ ಕಾಡಂಚಿನ ಜನರಿಗೆ ರೈಲ್ವೆ ಕಂಬಿಯ ಬೇಲಿ ನಿರ್ಮಾಣವಾದ ಬಳಿಕ ನೆಮ್ಮದಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

English summary
The Forest department has decided to build a rail fence in some areas of Biligiri Rangana hills in Chamarajanagar district control to elephants enter to farmers' land
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X