ಚಿಕ್ಕಲ್ಲೂರು ಜಾತ್ರೆಗೆ ಭಕ್ತರಿಗಿಲ್ಲ ದರ್ಶನದ ಅವಕಾಶ
ಚಾಮರಾಜನಗರ, ಜನವರಿ 15: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಜಾತ್ರೆ ನಡೆಯುತ್ತದೆಯಾದರೂ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಕೋವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ.
ಪ್ರಸಕ್ತ ವರ್ಷ ಜನವರಿ 28 ರಿಂದ ಫೆಬ್ರವರಿ 1 ರವರೆಗೆ ಚಿಕ್ಕಲ್ಲೂರಲ್ಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಸಂಬಂಧ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹನೂರು ಶಾಸಕ ಆರ್.ನರೇಂದ್ರ, ಕೊಳ್ಳೇಗಾಲ ಎನ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರುವುದು ಸೇರಿದಂತೆ ಹಲವು ವಿಚಾರ ಕುರಿತಂತೆ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಬಂಡೀಪುರ ಅರಣ್ಯದಲ್ಲಿ ಜಿಂಕೆಗಳ ಬೇಟೆ: ಆರು ಜನರ ಬಂಧನ
ಜಾತ್ರಾ ಮಹೋತ್ಸವವನ್ನು ಕೋವಿಡ್-19ರ ನಿಯಮ ಪ್ರಕಾರ ಅತ್ಯಂತ ಸರಳವಾಗಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಕುರಿತ ಸಾಂಪ್ರದಾಯಿಕ ಪೂಜಾ ಕೈಂಕರ್ಯ ವಿಶೇಷ ಸೇವೆಗಳನ್ನು ಸ್ಥಳೀಯ ಸಿದ್ದಾಪ್ಪಾಜಿ ದೇವಸ್ಥಾನದ ಟ್ರಸ್ಟ್ ಹಾಗೂ ಮಠಗಳಿಗೆ ಸೇರಿದ ಗರಿಷ್ಠ 100 ಮಂದಿ ಪಾಲ್ಗೊಂಡು ನೆರವೇರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಹೈಕೋರ್ಟ್ ನಿರ್ದೇಶನದಂತೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ಕ್ರಮಗಳು ಮುಂದುವರೆಸುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಜತೆಗೆ ಕೋವಿಡ್ ಮುಂಜಾಗ್ರತಾ ಕ್ರಮಗಳ ಉದ್ದೇಶವಾಗಿ ಈ ಬಾರಿಯ ಚಿಕ್ಕಲ್ಲೂರು ಕ್ಷೇತ್ರಕ್ಕೆ ಜನವರಿ 28 ರಿಂದ ಫೆಬ್ರವರಿ 1 ರವರೆಗೆ ಯಾವುದೇ ಭಕ್ತಾಧಿಗಳು, ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸದಿರಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿಕ್ಕಲ್ಲೂರು ಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಪ್ರತೀ ವರ್ಷ ಆಗಮಿಸುವ ಸಂಪ್ರದಾಯವಿದೆ. ಆದರೆ ಈ ಬಾರಿ ಸಾರ್ವಜನಿಕರಿಗೆ ಭಕ್ತಾಧಿಗಳಿಗೆ ಕೋವಿಡ್ ಕಾರಣದಿಂದ ಚಿಕ್ಕಲ್ಲೂರು ಕ್ಷೇತ್ರಕ್ಕೆ ಪ್ರವೇಶ ನೀಡದಿರುವ ಬಗ್ಗೆ ವ್ಯಾಪಕವಾಗಿ ಆದಷ್ಟು ಮುಂಚಿತವಾಗಿಯೇ ಪ್ರಚುರ ಪಡಿಸಬೇಕು. ಕರಪತ್ರ, ಪೋಸ್ಟರ್ಗಳ ಮೂಲಕ ಮಾಹಿತಿ ನೀಡಬೇಕು. ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿಯೂ ಸಹ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳಿಗೆ ಅವಕಾಶವಿಲ್ಲದಿರುವ ಬಗ್ಗೆ ಪ್ರಚುರ ಪಡಿಸುವ ಕ್ರಮಗಳಿಗೆ ಸೂಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜಾತ್ರಾ ಪ್ರದೇಶದಲ್ಲಿ ಕುಡಿಯುವ ನೀರು, ನೈರ್ಮಲೀಕರಣ ನಂತಹ ವ್ಯವಸ್ಥೆಗಳಿಗೆ ಯಾವುದೇ ಕೊರತೆಯಾಗಬಾರದು. ಪೊಲೀಸ್ ಬಂದೋಬಸ್ತ್ ಒದಗಿಸಬೇಕು, ಸಿಹಿ ಪ್ರಸಾದ ವಿತರಣೆಗೂ ಮೊದಲು ಆರೋಗ್ಯ ಸುರಕ್ಷತಾ ಅಧಿಕಾರಿಗಳು ಪರೀಕ್ಷಿಸಬೇಕು ಎಂದು ಸೂಚನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣನವರ್, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಸಿದ್ದಾಪ್ಪಾಜಿ ದೇವಸ್ಥಾನದ ಟ್ರಸ್ಟ್ ಹೊಸಮಠ, ಸಿದ್ದಪ್ಪಾಜಿ ಮಠದ ಪ್ರತಿನಿಧಿಗಳು ಇತರೆ ಅಧಿಕಾರಿಗಳು ಇದ್ದರು.