ಮಲೆಮಹದೇಶ್ವರ ಬೆಟ್ಟದಲ್ಲಿ 2 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ
ಚಾಮರಾಜನಗರ ನವೆಂಬರ್ 13: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟವು ರಾಜ್ಯದ ಹೆಚ್ಚು ಆದಾಯ ಹೊಂದುವ ದೇಗುಲಗಳಲ್ಲಿ ಒಂದಾಗಿದ್ದು, ಶುಕ್ರವಾರ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದೆ.
ಲಾಕ್ ಡೌನ್ ನಡುವೆಯೂ 2 ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಬೆಟ್ಟದಲ್ಲಿ 54 ದಿನಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 2,21,32,439 ಸಂಗ್ರಹವಾಗಿರುವುದಾಗಿ ತಿಳಿದುಬಂದಿದೆ. 40 ಗ್ರಾಂ ಚಿನ್ನ ಹಾಗೂ 1.667 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದೇ 25 ಹಾಗೂ 26ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಧಾರ್ಮಿಕ ಸೇವೆಗಳ ಮಹಾಪೂರ
ಕೊರೊನಾ ವೈರಸ್ ನಿಂದಾಗಿ ವಿಧಿಸಲಾಗಿದ್ದ ಲಾಕ್ ಡೌನ್ ನಿಂದ ಸುಮಾರು ಮೂರು ತಿಂಗಳ ಕಾಲ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ದಸರಾ ಸಂದರ್ಭದಲ್ಲೂ ನಿರ್ಬಂಧ ವಿಧಿಸಲಾಗಿದ್ದು, ನವೆಂಬರ್ 4ರಿಂದ ತೆರವುಗೊಳಿಸಲಾಗಿತ್ತು. ಆನಂತರ ದೇವಾಲಯದ ಎಲ್ಲಾ ಸೇವೆಗಳು ಪುನರಾರಂಭಗೊಂಡಿವೆ. ದೇವಾಲಯದಲ್ಲಿ ದಾಸೋಹ ಮತ್ತು ಜಾತ್ರೆಗಳನ್ನು ಹೊರತುಪಡಿಸಿ ದೈನಂದಿನ ಸಾಂಪ್ರದಾಯಿಕ ಸೇವೆಗಳು ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈ ಹಿಂದೆ ದೇವರ ದರ್ಶನ ವ್ಯವಸ್ಥೆ ಮಾತ್ರ ಇತ್ತು, ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವಂತಿರಲಿಲ್ಲ.
ಇದೀಗ ನಿರ್ಬಂಧ ತೆಗೆದು ಹಾಕಲಾಗಿದ್ದು, ಭಕ್ತರು ಎಂದಿನಂತೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿಸಬಹುದಾಗಿದೆ. ಆದರೆ 12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ.