• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೀರಪ್ಪನ್ ದಾಳಿಯ ಹುತಾತ್ಮರಿಗೆ ಸ್ಮಾರಕವಾಗಲಿದೆ ರಾಮಾಪುರ ಪೊಲೀಸ್ ಠಾಣೆ

By Coovercolly Indresh
|

ಚಾಮರಾಜನಗರ, ಆಗಸ್ಟ್ 31: ಕುಖ್ಯಾತ ದಂತಚೋರ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಜಿಲ್ಲೆಯ ಹುತಾತ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವ ಅರ್ಪಿಸಲು ರಾಮಾಪುರ ಪೊಲೀಸ್‌ ಠಾಣೆಯಲ್ಲಿ ಅವರ ಸ್ಮಾರಕ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಸ್ಮಾರಕ ನಿರ್ಮಾಣದ ಕಲ್ಪನೆ-ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್‌ ಅವರದ್ದಾಗಿದ್ದು, ಅವರು ಈ ಹಿಂದೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮುಂದೆ ಇಟ್ಟಿದ್ದ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ.

   NIAಗೆ ವರ್ಗವಾಗುತ್ತಾ ಬೆಂಗಳೂರು ಗಲಭೆ ಪ್ರಕರಣ..? | Oneindia Kannada

   ವೀರಪ್ಪನ್ ಕ್ರೌರ್ಯ ಮೆರೆದಿದ್ದ ಪೊಲೀಸ್ ಠಾಣೆ ಸ್ಮಾರಕ ಮಾಡಲು ಸಚಿವ ಪತ್ರ

   ವೀರಪ್ಪನ್ ಹಾವಳಿ ಇದ್ದ ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವರು, ಆ ಪ್ರದೇಶಗಳ ಹಿನ್ನೆಲೆಯನ್ನು ತಿಳಿದುಕೊಂಡಿದ್ದರು. ವೀರಪ್ಪನ್ ಅಟ್ಟಹಾಸದ ಬಗ್ಗೆ ಓದಿ ತಿಳಿದುಕೊಂಡಿದ್ದರು. ಹೀಗಾಗಿ ವೀರಪ್ಪನ್ ದಾಳಿಯಲ್ಲಿ ಬಲಿಯಾದ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಸಾಹಸ ಮತ್ತು ಬಲಿದಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು, ಐತಿಹಾಸಿಕ ಸ್ಥಳಗಳಾಗಿ ವಿದ್ಯಾರ್ಥಿಗಳು ವೀಕ್ಷಣೆ ಮಾಡುವ ಪ್ರಮುಖ ಸ್ಥಳವಾಗಬೇಕು ಎಂಬ ಉದ್ದೇಶದಿಂದ ಮಲೆ ಮಹದೇಶ್ವರ ಬೆಟ್ಟ ಸಮೀಪದಲ್ಲಿ ಕರ್ತವ್ಯಕ್ಕಾಗಿ ಪ್ರಾಣ ಅರ್ಪಿಸಿದ ಅರಣ್ಯ ಸಿಬ್ಬಂದಿ, ಪೊಲೀಸರ ಬಲಿದಾನವನ್ನು ಸ್ಮರಿಸಲು ಸ್ಮಾರಕ ನಿರ್ಮಿಸುವ ಚಿಂತನೆ ನಡೆಸಿದ್ದಾರೆ.

    ಕಳೆದ ಫೆಬ್ರುವರಿಯಲ್ಲಿ ಭೇಟಿ ನೀಡಿದ್ದ ಸಚಿವರು

   ಕಳೆದ ಫೆಬ್ರುವರಿಯಲ್ಲಿ ಭೇಟಿ ನೀಡಿದ್ದ ಸಚಿವರು

   ಕಳೆದ ಫೆಬ್ರುವರಿಯಲ್ಲಿ ಹನೂರು ತಾಲ್ಲೂಕಿನ ರಾಮಾಪುರ ಠಾಣೆಗೆ ಭೇಟಿ ನೀಡಿ ಹಳೆಯ ಕಟ್ಟಡವನ್ನು ವೀಕ್ಷಣೆ ಮಾಡಿದ ಸುರೇಶ್ ಕುಮಾರ್, ಹಳೆಯ ಕಟ್ಟಡದಲ್ಲಿ ಸ್ಮಾರಕ ನಿರ್ಮಿಸುವ ತಮ್ಮ ಪ್ರಸ್ತಾವನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ತಿಳಿಸಿ, ದಕ್ಷಿಣ ವಲಯದ ಐಜಿಪಿ ಅವರೊಂದಿಗೂ ಮಾತನಾಡಿದ್ದರು. ಚರ್ಚೆಯ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ಮಾರಕ ನಿರ್ಮಾಣದ ಕೆಲಸ ನಮ್ಮ ಇಲಾಖೆಯಿಂದ ಆಗುವ ಬದಲು ಜಿಲ್ಲಾಡಳಿತದ ಹಂತದಲ್ಲಿಯೇ ಆದರೆ ಉತ್ತಮ ಎಂಬ ಸಲಹೆಯಿತ್ತರು. ಈ ಠಾಣೆಯ ಕಟ್ಟಡ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿದ್ದು, ಬ್ರಿಟಿಷರ ಕಾಲದ ನಿರ್ಮಾಣವಾಗಿದೆ.

    ಯೋಜನಾ ಹಂತದಲ್ಲಿರುವ ಸ್ಮಾರಕ ನಿರ್ಮಾಣ ಕಾರ್ಯ

   ಯೋಜನಾ ಹಂತದಲ್ಲಿರುವ ಸ್ಮಾರಕ ನಿರ್ಮಾಣ ಕಾರ್ಯ

   ಈ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾಹಿತಿ ಹಂಚಿಕೊಂಡ ಚಾಮರಾಜನಗರ ಜಿಲ್ಲಾ ಪೋಲೀಸ್‌ ಅಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು, "ಈ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಅವರು ಹೆಚ್ಚಿನ ಆಸ್ಥೆ ವಹಿಸಿದ್ದು, ಸ್ಮಾರಕ ನಿರ್ಮಾಣ ಇನ್ನೂ ಯೋಜನಾ ಹಂತದಲ್ಲಿದೆ. ಸಚಿವರ ಮುಂದಿನ ಭೇಟಿಯ ವೇಳೆಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು" ಎಂದರು. ಎರೆಹಳ್ಳದ ಸ್ಮಾರಕ, ಮೀಣ್ಯಂ ಸ್ಮಾರಕ, ರಾಮಾಪುರ ಸ್ಮಾರಕ ಮತ್ತು ಪಾಲಾರ್ ಸೇತುವೆಯನ್ನು ಹೆರಿಟೇಜ್ ವಾಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದರು.

    ಎರೆಹಳ್ಳದಲ್ಲಿದೆ ಡಿಸಿಎಫ್ ಶ್ರೀನಿವಾಸನ್‌ ಸ್ಮಾರಕ

   ಎರೆಹಳ್ಳದಲ್ಲಿದೆ ಡಿಸಿಎಫ್ ಶ್ರೀನಿವಾಸನ್‌ ಸ್ಮಾರಕ

   "ಡಿಸಿಎಫ್ ಶ್ರೀನಿವಾಸನ್‌ ಅವರನ್ನು ಹತ್ಯೆ ಮಾಡಿದ ಸ್ಥಳಗಳಾದ ಎರೆ ಹಳ್ಳ ಮತ್ತು ಮೀಣ್ಯಂ ಬಳಿಯ ಬೂದಿಕೆರೆಹಳ್ಳದಲ್ಲಿ ಈಗಾಗಲೇ ಅವರ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು ಮಲೆ ಮಹದೇಶ್ವರ ಬೆಟ್ಟ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು. ಗೋಪಿನಾಥಂ ಬಳಿಯ ಎರೆಹಳ್ಳದಲ್ಲಿ 1991ರ ನವೆಂಬರ್‌ನಲ್ಲಿ ಶಾಂತಿ ಮಾರ್ಗದಿಂದ ವೀರಪ್ಪನ್ ‌ನನ್ನು ಮನವೊಲಿಸಲು ಹೋಗಿದ್ದ ಡಿಸಿಎಫ್ ಶ್ರೀನಿವಾಸನ್ ಅವರ ತಲೆಯನ್ನು ವೀರಪ್ಪನ್ ಕತ್ತರಿಸಿದ್ದನು.

   * ಮೀಣ್ಯಂ ಬಳಿಯ ಬೂದಿಕೆರೆ ಹಳ್ಳದಲ್ಲಿ 1992 ಆಗಸ್ಟ್ 14ರಂದು ವೀರಪ್ಪನ್ ಸೆರೆ ಕಾರ್ಯಾಚರಣೆಗೆ ಹೋದ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ ಪೆಕ್ಟರ್ ಶಕೀಲ್ ಅಹಮದ್, ಪೊಲೀಸರಾದ ವೃಷಭೇಂದ್ರಪ್ಪ, ನಾಗರಾಜ, ಅಪ್ಪಚ್ಚು, ಕಾಳಪ್ಪ, ಸುಂದರ್ ಅವರನ್ನು ಹತ್ಯೆ ಮಾಡಿದ್ದನು.

   * ರಾಮಾಪುರ ಠಾಣೆಗೆ 1992 ಮೇ 19ರಂದು ರಾತ್ರಿ ದಾಳಿ ಮಾಡಿದ ಹಂತಕ ವೀರಪ್ಪನ್ ಪಡೆ ಪೇದೆಗಳಾದ ಇಳಂಗೋವನ್, ಗೋವಿಂದರಾಜು, ಪ್ರೇಮ್ ‌ಕುಮಾರ್, ರಾಚಪ್ಪ, ಸಿದ್ದರಾಜ ಎಂಬುವರನ್ನು ಹತ್ಯೆ ಮಾಡಿ, ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದನು.

    ವಿದ್ಯಾರ್ಥಿಗಳ ಅರಿವಿಗೆ ಸ್ಮಾರಕ ನಿರ್ಮಾಣ

   ವಿದ್ಯಾರ್ಥಿಗಳ ಅರಿವಿಗೆ ಸ್ಮಾರಕ ನಿರ್ಮಾಣ

   ವೀರಪ್ಪನ್ ರಾಮಾಪುರ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದಿದ್ದು, ಎರೆಹಳ್ಳದಲ್ಲಿ ಡಿಸಿಎಫ್ ಶ್ರೀನಿವಾಸನ್ ಮತ್ತು ಎಸ್ಪಿ ಹರಿಕೃಷ್ಣ, ಎಸ್‌ಐ ಶಕೀಲ್ ಅಹಮದ್ ಅವರು ಹತ್ಯೆಯಾದ ಸ್ಥಳಗಳು ಸ್ಮಾರಕವಾಗುವುದರಿಂದ ನಮ್ಮ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ, ಈ ಹುತಾತ್ಮ ಅಧಿಕಾರಿಗಳ ಬಗ್ಗೆ ತಿಳಿಯುವಂತಾಗುತ್ತದೆ. ಈ ಉದ್ದೇಶದಿಂದ ರಾಮಾಪುರ ಠಾಣೆಗೆ ಭೇಟಿ ನೀಡಿ ಬಂದ ನಂತರ ಸ್ಮಾರಕ ಮಾಡುವ ವಿಷಯ ಪ್ರಸ್ತಾಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದೆ. ಅವರು ಒಪ್ಪಿಕೊಂಡು ಕೆಲಸ ಜಿಲ್ಲಾಡಳಿತದ ಹಂತದಲ್ಲಿಯೇ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

   English summary
   Government has come forward to build memorials at Ramapura police station to pay tribute to the martyred officers and staff of the chamarajanagar district who lost their lives in Veerappan capture operation,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X