• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರದಲ್ಲಿ ಶಕ್ತಿ ಪ್ರದರ್ಶಿಸಿದ ಎನ್. ಮಹೇಶ್!

|
Google Oneindia Kannada News

ಚಾಮರಾಜನಗರ, ಆಗಸ್ಟ್ 26: ಬಿಎಸ್‌ಪಿ ಪಕ್ಷವನ್ನು ಹಲವು ವರ್ಷಗಳ ಕಾಲ ಸಂಘಟಿಸಿ, ಶಾಸಕರಾಗಿ ಆಯ್ಕೆಯಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕೆಲಕಾಲ ಸಚಿವರಾಗಿದ್ದ ಎನ್. ಮಹೇಶ್ ಇದೀಗ ಕಮಲ ಪಾಳಯದತ್ತ ಮುಖ ಮಾಡಿರುವುದು ಚಾಮರಾಜನಗರ ಜಿಲ್ಲೆ ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಬಿಎಸ್‌ಪಿಯಿಂದ ಹೊರಬಂದ ಬಳಿಕ ತಟಸ್ಥರಾಗಿದ್ದ ಎನ್. ಮಹೇಶ್, ಇತ್ತೀಚೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಆ ಬಳಿಕ ಒಂದಷ್ಟು ನಾಯಕರು ಅವರ ವಿರುದ್ಧ ಜಿಲ್ಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಇದಕ್ಕೆ ಉತ್ತರ ನೀಡುವ ಸಲುವಾಗಿಯೇ ಎನ್. ಮಹೇಶ್ ಅಖಾಡಕ್ಕೆ ಇಳಿದಿದ್ದಾರೆ.

 ಯಳಂದೂರಿನಲ್ಲಿ ಎನ್. ಮಹೇಶ್ ಶಕ್ತಿ ಪ್ರದರ್ಶನ

ಯಳಂದೂರಿನಲ್ಲಿ ಎನ್. ಮಹೇಶ್ ಶಕ್ತಿ ಪ್ರದರ್ಶನ

ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ಬೈಕ್ ಮೆರವಣಿಗೆ ನಡೆಸಿರುವ ಅವರು, ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೆರವಣಿಗೆಯಲ್ಲಿ ನಾನೇಕೆ ಬಿಎಸ್‌ಪಿ ಬಿಟ್ಟು ಬಿಜೆಪಿ ಸೇರಿದೆ ಎಂಬುದರ ಬಗ್ಗೆ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆ ಮೂಲಕ ಒಂದಷ್ಟು ಮಂದಿಯನ್ನು ತಮ್ಮತ್ತ ಸೆಳೆಯುವ ತಂತ್ರ ರೂಪಿಸಿದ್ದಾರೆ.

ಇನ್ನು ಬೈಕ್ ಮೆರವಣಿಗೆಯಲ್ಲಿ ಮಾತನಾಡಿದ ಅವರು, "ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದೇ ನನ್ನ ಪಕ್ಷವಾಗಿದ್ದು, ನಾನು ಮುಂದೆಯೂ ಇಲ್ಲೇ ಇರುತ್ತೇನೆ. ಬಿಎಸ್‌ಪಿ ವರಿಷ್ಠರು ವಿನಾಕಾರಣ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಕ್ಷೇತ್ರದ ಶಾಸಕನಾಗಿ ಇಲ್ಲಿನ ಅಭಿವೃದ್ಧಿ ಹಾಗೂ ನನ್ನ ಕಾರ್ಯಕರ್ತರ ಭವಿಷ್ಯಕ್ಕೊಸ್ಕರ ನನಗೆ ರಾಷ್ಟ್ರೀಯ ಪಕ್ಷದ ಅವಶ್ಯಕತೆ ಇತ್ತು. ಹಾಗಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ," ಎಂದರು.

 ಜನಪರ ಕೆಲಸ ಮಾಡುವ ವಾಗ್ದಾನ

ಜನಪರ ಕೆಲಸ ಮಾಡುವ ವಾಗ್ದಾನ

"ಬಿಜೆಪಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕನಾಗಿ ದುಡಿಯುತ್ತೇನೆ. ಮುಂದಿನ 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತವನ್ನು ಗಳಿಸುವ ಮೂಲಕ ಅಧಿಕಾರಕ್ಕೆ ತರಲು ಶ್ರಮಪಡುತ್ತೇನೆ. ಈಗ ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದು, ಎಲ್ಲ ಸಮುದಾಯದ ಜನರ ಪರವಾಗಿ ಕೆಲಸವನ್ನು ಮಾಡುತ್ತೇನೆ," ಎಂಬ ವಾಗ್ದಾನ ಮಾಡಿದ್ದಾರೆ.

ಸಾಮಾನ್ಯವಾಗಿ ಜಿಲ್ಲಾಮಟ್ಟದಲ್ಲಿ ಬೇರೆ ಪಕ್ಷದ ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡಾಗ ಸ್ವಪಕ್ಷದಲ್ಲಿರುವ ನಾಯಕರು ಅಸಮಾಧಾನ ಪಡುವುದು ಸಹಜವಾಗಿರುತ್ತದೆ. ಆದರೆ ಚಾಮರಾಜನಗರದಲ್ಲಿ ಈಗಷ್ಟೇ ಬಿಜೆಪಿ ಅಸ್ತಿತ್ವ ಕಂಡುಕೊಳ್ಳುತ್ತಿರುವುದರಿಂದ ಪಕ್ಷಕ್ಕೆ ಹಿರಿಯ ನಾಯಕ ಮಹೇಶ್ ಸೇರ್ಪಡೆ ಒಂದು ಹಂತದಲ್ಲಿ ಶಕ್ತಿ ಬಂದಂತಾಗಿದೆ. ತನ್ನದೇ ವರ್ಚಸ್ಸು ಮತ್ತು ಒಂದಷ್ಟು ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿರುವ ಮಹೇಶ್‌ಗೆ ಬಿಜೆಪಿಯಲ್ಲಿ ಯಾವ ರೀತಿಯ ಸ್ಥಾನಮಾನಗಳು ದೊರೆಯುತ್ತವೆ. ಮತ್ತು ಕ್ಷೇತ್ರದ ಜನತೆ ಬಿಜೆಪಿ ನಾಯಕನನ್ನಾಗಿ ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ತೋರಿಸುವ ಸಲುವಾಗಿ ಮೆರವಣಿಗೆ ನಡೆಸುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

 ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್ ಹೇಳಿದ್ದೇನು?

ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್ ಹೇಳಿದ್ದೇನು?

ಇದೆಲ್ಲದರ ನಡುವೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್, "ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಪಕ್ಷಕ್ಕೆ ಸೇರ್ಪಡೆ ಗೊಂಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಅವರು ವಿಚಾರವಂತರಾಗಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸುವ ಚಾಕಚಕ್ಯತೆ ಹಾಗೂ ಕಾರ್ಯಕ್ಷಮತೆ ಅವರಲ್ಲಿದೆ. ಚಾಮರಾಜನಗರ ಜಿಲ್ಲೆಯ ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅವರ ಸಹಕಾರ ಅಗತ್ಯವಾಗಿದೆ," ಎಂದು ಹೇಳುವ ಮೂಲಕ ಪಕ್ಷಕ್ಕೆ ಅವರ ಅಗತ್ಯತೆ ಇರುವುದನ್ನು ಒಪ್ಪಿಕೊಂಡಿದ್ದಾರೆ.

 ಬಿಜೆಪಿಯಲ್ಲಿಯೇ ಇರುತ್ತೇನೆಂದ ಮಹೇಶ್

ಬಿಜೆಪಿಯಲ್ಲಿಯೇ ಇರುತ್ತೇನೆಂದ ಮಹೇಶ್

ಇದೆಲ್ಲದರ ನಡುವೆ ಎನ್. ಮಹೇಶ್ ಸದಾ ಹಿಂದುಳಿದ ಹಾಗೂ ದಲಿತರ ಪರ ಹೋರಾಡುತ್ತಾ ಬಂದವರು ಈಗ ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿಯಲ್ಲಿ ಹೇಗೆ ಮುಂದುವರೆಯುತ್ತಾರೆ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಅದಕ್ಕೆ ಇದೀಗ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಹೇಳುವ ಮೂಲಕ ಉತ್ತರ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಮುಂದೇನಾಗಬಹುದು ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

English summary
MLA N Mahesh tried to convince activists and voters about the joined BJP Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X